ಮರಣಪತ್ರ ಹರಿದ ಅತ್ತೆ–ಮಾವ ವಶಕ್ಕೆ

7

ಮರಣಪತ್ರ ಹರಿದ ಅತ್ತೆ–ಮಾವ ವಶಕ್ಕೆ

Published:
Updated:

ಬೆಂಗಳೂರು: ರಾಜರಾಜೇಶ್ವರಿನಗರ ಸಮೀಪದ ಐಡಿಯಲ್ ಹೋಮ್ಸ್‌ನಲ್ಲಿ ನಿರ್ಮಲಾ (25) ಎಂಬುವರು ನೇಣು ಹಾಕಿಕೊಂಡು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಯುವ ಮುನ್ನ ಅವರು ಬರೆದಿಟ್ಟಿದ್ದ ಪತ್ರವನ್ನು ಹರಿದು ಕಸದ ಬುಟ್ಟಿಗೆ ಎಸೆದ ತಪ್ಪಿಗೆ ಅತ್ತೆ ಪ್ರೇಮಾ ಹಾಗೂ ಮಾವ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರಿನ ನಿರ್ಮಲಾ, ಸಾಫ್ಟ್‌ವೇರ್ ಉದ್ಯೋಗಿ ವಿಶ್ವನಾಥ್ ಅವರನ್ನು 2016ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ಮದುವೆಯಾದ ಮೂರೇ ತಿಂಗಳಲ್ಲಿ ವಿಶ್ವನಾಥ್ ಅವರಿಗೆ ಜಪಾನ್‌ಗೆ ವರ್ಗವಾಯಿತು. ಹೀಗಾಗಿ, ನಿರ್ಮಲಾ ಅವರು ಅತ್ತೆ–ಮಾವನ ಜತೆ ಐಡಿಯಲ್ ಹೋಮ್ಸ್‌ನ ‘ಟೆಂಪಲ್‌ ಬೆಲ್‌ ಪ್ರೀಮಿಯರ್’ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನೆಲೆಸಿದ್ದರು.

ಬುಧವಾರ ರಾತ್ರಿ 7 ಗಂಟೆ ಸುಮಾರಿಗೆ ಪತಿಗೆ ಕರೆ ಮಾಡಿದ್ದ ನಿರ್ಮಲಾ, ‘ನೀವು ನನ್ನೊಬ್ಬಳನ್ನೇ ಇಲ್ಲಿ ಬಿಟ್ಟು ಹೋಗಿರುವುದು ಸರಿಯಲ್ಲ. ಅತ್ತೆ–ಮಾವ ತುಂಬ ತೊಂದರೆ ನೀಡುತ್ತಿದ್ದಾರೆ. ಇವರ ಜತೆ ಇರಲು ಆಗುತ್ತಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು.

ವಿಶ್ವನಾಥ್ ವಾಪಸ್ ಕರೆ ಮಾಡಿದರೆ, ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಗಾಬರಿಗೊಂಡು ತಕ್ಷಣ ತಂದೆಗೆ ಕರೆ ಮಾಡಿದ ಅವರು, ಪತ್ನಿ ಬೇಸರದಿಂದ ಮಾತನಾಡಿದ ವಿಚಾರ ತಿಳಿಸಿದ್ದರು. ಆಗ ನಡುಮನೆಯಲ್ಲಿ ಟಿ.ವಿ ನೋಡುತ್ತ ಕುಳಿತಿದ್ದ ಅವರು, ಕೋಣೆಗೆ ಹೋಗಿ ನೋಡುವಷ್ಟರಲ್ಲಿ ನಿರ್ಮಲಾ ನೇಣಿಗೆ ಶರಣಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‘ವರದಕ್ಷಿಣೆ ತರುವಂತೆ ಅತ್ತೆ–ಮಾವ ಕಿರುಕುಳ ನೀಡುತ್ತಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೂ ಬೈಯ್ಯುತ್ತಾರೆ ಎಂದು ನಿರ್ಮಲಾ ಹೇಳುತ್ತಲೇ ಇದ್ದಳು. ಅನುಸರಿಸಿಕೊಂಡು ಹೋಗುವಂತೆ ಆಕೆಗೆ ಬುದ್ಧಿ ಹೇಳುತ್ತಿದ್ದೆವು. ಅವರ ಕಿರುಕುಳದಿಂದಲೇ ಮಗಳು ಸಾವನ್ನಪ್ಪಿದ್ದು, ಕಠಿಣ ಕ್ರಮ ಜರುಗಿಸಬೇಕು’ ಎಂದು ಮೃತರ ತಂದೆ ಪರಮೇಶ್ವರ್ ಶೆಟ್ಟಿ ದೂರು ಕೊಟ್ಟಿದ್ದಾರೆ.

ಪತ್ರ ಹರಿದರು: ‘ಅತ್ತೆ–ಮಾವನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ನಿರ್ಮಲಾ ಒಂದು ಪುಟ ಪತ್ರ ಬರೆದಿಟ್ಟಿದ್ದರು. ಅದು ಪೊಲೀಸರಿಗೆ ಸಿಕ್ಕರೆ ತಮಗೆ ತೊಂದರೆ ಆಗುತ್ತದೆಂದು ದಂಪತಿ ಪತ್ರವನ್ನು ಹರಿದು ಕಸದ ಬುಟ್ಟಿಗೆ ಎಸೆದಿದ್ದರು. ರಾತ್ರಿ ಮನೆ ಪರಿಶೀಲನೆ ವೇಳೆ ಹರಿದ ಚೀಟಿಗಳು ಪತ್ತೆಯಾದವು’ ಎಂದು ತನಿಖಾಧಿಕಾರಿಗಳು ಹೇಳಿದರು.

***

ಚಾಲಕ ಆತ್ಮಹತ್ಯೆ‌

ಬುಧವಾರ ಸಂಜೆ ನಡೆದ ಇನ್ನೊಂದು ಪ್ರಕರಣದಲ್ಲಿ ಚುಂಚಘಟ್ಟ ಮುಖ್ಯರಸ್ತೆ ನಿವಾಸಿ ರವಿಕಿರಣ್ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕ್ಯಾಬ್ ಚಾಲಕರಾಗಿದ್ದ ರವಿಕಿರಣ್, ತಾಯಿ ವನಜಾಕ್ಷಿ ಜತೆ ನೆಲೆಸಿದ್ದರು. ಸಂಜೆ 6 ಗಂಟೆ ಸುಮಾರಿಗೆ ವನಜಾಕ್ಷಿ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ರವಿಕಿರಣ್ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. 6.45ಕ್ಕೆ ತಾಯಿ ಮನೆಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಪುಟ್ಟೇನಹಳ್ಳಿ ಪೊಲೀಸರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry