ನಿಮ್ಮ ಹೆಣಾ ಸುಡೋಕು ದುಡ್ಡು ಕೇಳ್ತಾರೆ, ಹುಷಾರ್...!

7
ಬೆಂಗಳೂರು ದಕ್ಷಿಣ ತಹಶೀಲ್ದಾರ್‌ಗೆ ಹೈಕೋರ್ಟ್ ಮಂಗಳಾರತಿ

ನಿಮ್ಮ ಹೆಣಾ ಸುಡೋಕು ದುಡ್ಡು ಕೇಳ್ತಾರೆ, ಹುಷಾರ್...!

Published:
Updated:
ನಿಮ್ಮ ಹೆಣಾ ಸುಡೋಕು ದುಡ್ಡು ಕೇಳ್ತಾರೆ, ಹುಷಾರ್...!

ಬೆಂಗಳೂರು: ‘ನೀವೆಲ್ಲ ಹೀಗೆಯೇ ಭ್ರಷ್ಟಾಚಾರ ನಡೆಸುತ್ತಿದ್ದರೆ ನಾಳೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯವರು (ಬಿಬಿಎಂಪಿ) ನಾಳೆ ನಿಮ್ಮ ಹೆಣ ಸುಡೋಕು ದುಡ್ಡು ಕೇಳುತ್ತೆ’ ಎಂದು ಹೈಕೋರ್ಟ್‌ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಎಚ್‌.ಟಿ.ಮಂಜಪ್ಪ ಅವರಿಗೆ ಬೆವರಿಳಿಸಿದೆ.

ಪೋಡಿ ಮಾಡಿಕೊಡಲು ಸತಾಯಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಅವರು ಮಂಜಪ್ಪ ವಿರುದ್ಧ ಕೆಂಡ ಕಾರಿ, ‘ನಿಮಗೆಲ್ಲ ನಾಚಿಕೆಯಾಗೋದಿಲ್ವ, ನಿಮ್ಮಂಥವರಿಂದ ಜನ ಬದುಕೋದೇ ಕಷ್ಟವಾಗಿದೆ, ಏನು ತಮಾಷೆ ಮಾಡ್ತೀರಾ, ಇಲ್ಲಿಂದಲೇ ಸೀದಾ ಒಳಗೆ (ಜೈಲಿಗೆ) ಕಳಿಸಿಬಿಡ್ತೇನೆ, ಹುಷಾರ್’ ಎಂದು ಎಚ್ಚರಿಸಿದರು.

ಪ್ರಕರಣವನ್ನು ವಿಚಾರಣೆಗೆ ಕೂಗುತ್ತಿದ್ದಂತೆಯೇ ಸರ್ಕಾರಿ ವಕೀಲ ಟಿ.ಎಲ್‌.ಕಿರಣ್‌ ಕುಮಾರ್ ಪ್ರತಿವಾದಿಗಳ ಸೀಟಿನಿಂದ ಎದ್ದು ನಿಂತು ವಿವರಣೆ ಕೊಡಲು ಮುಂದಾದರು. ಆದರೆ, ಕಿರಣ್ ಅವರನ್ನು ಅರ್ಧಕ್ಕೇ ತಡೆದ ನ್ಯಾಯಮೂರ್ತಿ

ಗಳು ಅವರ ಹಿಂದೆ ನಿಂತಿದ್ದ ತಹಶೀಲ್ದಾರ್ ಅವರನ್ನು, ‘ಮುಂದೆ ಬನ್ನಿ’ ಎಂದು ಕರೆದರು.

ಮಂಜಪ್ಪ ನ್ಯಾಯಪೀಠದ ಬಲಬದಿಗೆ ಬಂದು ನಿಲ್ಲುತ್ತಿದ್ದಂತೆಯೇ ವ್ಯಗ್ರರಾದ ಸತ್ಯನಾರಾಯಣ, ‘ಶಾಪ ಅಂತಾ ಏನಾದ್ರೂ ಇದ್ರೆ ಅದು ನಿಮ್ಮ ಕಂದಾಯ ಇಲಾಖೆಗೆ ಮಾತ್ರ. ನಾಚಿಕೆಯಾಗೋದಿಲ್ವೇನ್ರಿ ನಿಮಗೆ, 2012ರ ಪೋಡಿ ಅರ್ಜಿಯನ್ನು ಇಲ್ಲೀತನಕ ಏಕೆ ವಿಲೇವಾರಿ ಮಾಡಿಲ್ಲ’ ಎಂದು ಕೆಂಗಣ್ಣು ಬೀರಿದರು.

‘ಬೆಂಗಳೂರು ಸುತ್ತಮುತ್ತ ಇವತ್ತು ಪೋಡಿ ಮಾಡಬೇಕೆಂದರೆ ನಿಮಗೆ ₹ 1 ರಿಂದ 2 ಲಕ್ಷ ಕೊಡಬೇಕು. ಖಾತೆ ಬದಲಾಯಿಸಲು ಬಿಬಿಎಂಪಿಯವರಿಗೆ ₹ 30ರಿಂದ 40 ಸಾವಿರ ಕೊಡಬೇಕು. ಏನು ಈ ಅಕ್ರಮಗಳನ್ನೆಲ್ಲ ಕಾನೂನು ಬದ್ಧ ಮಾಡಿಬಿಟ್ಟಿದ್ದೀರಾ’ ಎಂದು ಉಗ್ರವಾಗಿ ಪ್ರಶ್ನಿಸಿದರು.

ಒಂದು ಹಂತದಲ್ಲಿ ತಾವು ಕುಳಿತಿದ್ದ ನ್ಯಾಯಪೀಠದಿಂದ ಮುಂದೆ ಬಾಗಿ, ಕೈತೋರಿಸಿ ತಮ್ಮ ಆಕ್ರೋಶ ಹೊರ ಹಾಕಿದ ನ್ಯಾಯಮೂರ್ತಿಗಳು, ‘ಸರ್ಕಾರ ನಿಮಗೆ ತಿಂಗಳಿಗೆ ಸರಿಯಾಗಿ ಸಂಬಳ ಕೊಡೋದಿಲ್ವೇನ್ರೀ, ಭತ್ಯೆಗಳನ್ನೆಲ್ಲ ಕಾಲಕಾಲಕ್ಕೆ ತಗೋಳ್ತೀರಿ ತಾನೆ. ಯಾವತ್ತಾದರೂ ಸಂಬಳ–ಭತ್ಯೆ ಲೇಟ್‌ ಆಗಿದೆಯಾ, ಏನ್ರೀ ಧಾಡಿ ನಿಮಗೆ ನಿಯತ್ತಿನಿಂದ ಕೆಲಸ ಮಾಡಲಿಕ್ಕೆ’ ಎಂದು ಕೆಂಡ ಕಾರಿದರು.

ಮಂಜಪ್ಪ, ‘ಸ್ವಾಮಿ, ನಾನು ಹೊಸದಾಗಿ ಬಂದಿದ್ದೇನೆ’ ಎಂದು ಉತ್ತರಿಸಿದರು. ಇದಕ್ಕೆ ಇನ್ನಷ್ಟು ಕೆರಳಿದ ನ್ಯಾಯಮೂರ್ತಿಗಳು, ‘ಹಾಗಿದ್ರೆ ನಿಮ್ಮ ಹಿಂದಿನವನು ಯಾರು, ಆ ಹನುಮಂತರಾಯ (ಬಾಲ) ಎಲ್ಲಿದ್ದಾನೆ ಅವನನ್ನು ಕರೀರಿ’ ಎಂದು ದಬಾಯಿಸಿದರು. ‘ರ್ರೀ, ನಾಳೆ ನಿಮ್ಮ ಹೆಣ ಸುಡೋಕು ಈ ಬಿಬಿಎಂಪಿಯವರು ದುಡ್ಡು ಕೇಳ್ತಾರೆ. ನಿಮಗೂ ಈ ಗತಿ ಬರುತ್ತೆ. ನೆನಪಿನಲ್ಲಿಡಿ’ ಎಂದು ವಿಷಾದದಿಂದ ನುಡಿದರು.

ಏನಿದು ಪ್ರಕರಣ

ಕೆಂಗೇರಿ ಹೋಬಳಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲ್‌ನಲ್ಲಿರುವ ಸರ್ವೇ ನಂ.60/2ರಲ್ಲಿ 17 ಗುಂಟೆಯನ್ನು ಅರ್ಜಿದಾರರಾದ ಕೆ.ಎಸ್‌.ಶರ್ಮಿಳಾ 2004ರ ಜುಲೈ 3ರಂದು ಖರೀದಿ ಮಾಡಿದ್ದರು. ನಂತರ ಇವರ ಹೆಸರಿಗೆ ಎಲ್ಲಾ ದಾಖಲೆ ವರ್ಗಾಣೆಯಾಗಿತ್ತು. ಇದರ ಅನುಸಾರ ಜಮೀನು ಸ್ವಾಧೀನ ಪಡೆದಿದ್ದ ಶರ್ಮಿಳಾ ಪೋಡಿ ಮತ್ತು ದುರಸ್ತು ಕೋರಿ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ‘ಈ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ’ ಎಂದು ಆಕ್ಷೇಪಿಸಿ ಶರ್ಮಿಳಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry