ಅಪಘಾತ : ಕಸ್ಟಮ್ಸ್ ಅಧೀಕ್ಷಕ ಸೆರೆ

7

ಅಪಘಾತ : ಕಸ್ಟಮ್ಸ್ ಅಧೀಕ್ಷಕ ಸೆರೆ

Published:
Updated:

ಬೆಂಗಳೂರು: ಯಲಹಂಕ ವಾಯುನೆಲೆ ಸಮೀಪದ ಸರ್ವಿಸ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಕಸ್ಟಮ್ಸ್ ಅಧಿಕಾರಿಯ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಹದೇವ್ (21) ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ಸಹದೇವ್, ಯಲಹಂಕದಲ್ಲಿರುವ ಭಾರತೀಯ ವಾಯುಪಡೆ (ಐಎಎಫ್‌) ತರಬೇತಿ ಕೇಂದ್ರದಲ್ಲಿ ಒಂದೂವರೆ ವರ್ಷದಿಂದ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದರು. ಬಾಗಲೂರು ಸಮೀಪದ ಕೊಂಡಪ್ಪ ಲೇಔಟ್‌ನಲ್ಲಿ ನೆಲೆಸಿದ್ದ ಅವರು, ಬೆಳಿಗ್ಗೆ 9 ಗಂಟೆ ಸುಮಾರಿಗೆ ಸಹೋದ್ಯೋಗಿ ಸುನೀಲ್ ಜತೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.

ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಹೆಣ್ಣೂರಿನ ತಮ್ಮ ಮನೆಗೆ ಹೊರಟಿದ್ದ ಕೆಂಪೇಗೌಡ ಅಂತರರಾಷ್ಟ್ರೀ‌ಯ ವಿಮಾನ ನಿಲ್ದಾಣದ (ಕೆಐಎಎಲ್‌) ಕಸ್ಟಮ್ಸ್ ಅಧೀಕ್ಷಕ ವೇಣುಗೋಪಾಲ್, ಬಾಗಲೂರು ಕ್ರಾಸ್ ಮಾರ್ಗವಾಗಿ ಸರ್ವಿಸ್ ರಸ್ತೆಗೆ ಬಂದಿದ್ದರು.

ವೇಗವಾಗಿ ಚಾಲನೆ ಮಾಡಿಕೊಂಡು ಬಂದ ಅವರು, ಸರ್ವಿಸ್ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಆಗ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು, ಐಎಎಫ್‌ ಎದುರೇ ಬೈಕ್‌ಗೆ ಡಿಕ್ಕಿ ಹೊಡೆದು ತಡೆಗೋಡೆಗೆ ಅಪ್ಪಳಿಸಿದೆ. ಗಾಯಗೊಂಡ ಸವಾರರಿಬ್ಬರನ್ನೂ ಸ್ಥಳೀಯರು ತಕ್ಷಣ ಯಲಹಂಕದ ಅಪೂರ್ವ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆಗೆ ಸ್ಪಂದಿಸದ ಸಹದೇವ್, 9.40ಕ್ಕೆ ಕೊನೆಯುಸಿರೆಳೆದರು. ಸುನಿಲ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಜಾಗರೂಕತೆಯಿಂದ ವಾಹನ ಚಲಾಯಿಸಿ ಜೀವಕ್ಕೆ ಕುತ್ತು ತಂದ ಆರೋಪದಡಿ (ಐಪಿಸಿ 279, 304ಎ) ಪ್ರಕರಣ ದಾಖಲಿಸಿ, ವೇಣುಗೋಪಾಲ್ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದು ಯಲಹಂಕ ಸಂಚಾರ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry