ಬೆಂಕಿ ಹಚ್ಚಿ ಚಾಲಕನ ಕೊಲೆ: ಜೀವಾವಧಿ ಶಿಕ್ಷೆ

7

ಬೆಂಕಿ ಹಚ್ಚಿ ಚಾಲಕನ ಕೊಲೆ: ಜೀವಾವಧಿ ಶಿಕ್ಷೆ

Published:
Updated:
ಬೆಂಕಿ ಹಚ್ಚಿ ಚಾಲಕನ ಕೊಲೆ: ಜೀವಾವಧಿ ಶಿಕ್ಷೆ

ಬೆಂಗಳೂರು: ಆಟೊ ಚಾಲಕ ಕೇಶವ್‌ (34) ಎಂಬುವರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಅಪರಾಧಿ ದೀನದಯಾಳ್‌ (46) ಎಂಬಾತನಿಗೆ ನಗರದ 70ನೇ ಸಿಟಿ ಸಿವಿಲ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿದೆ.

2012ರ ಆಗಸ್ಟ್‌ 21ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ, ಈ ಆದೇಶ ಹೊರಡಿಸಿದ್ದಾರೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಚ್‌.ಆರ್‌.ಸತ್ಯವತಿ ವಾದ ಮಂಡಿಸಿದ್ದರು.

ಪ್ರಕರಣದ ವಿವರ: ಎ.ಜಿ.ಎಸ್‌ ಲೇಔಟ್‌‌ನ ದೀನದಯಾಳ್‌ ಆಟೊ ಚಾಲಕ. ಬನಶಂಕರಿ 3ನೇ ಹಂತದ ನಿಲುಗಡೆ ಸ್ಥಳದಲ್ಲಿ ಆತ ತನ್ನ ಆಟೊ ನಿಲ್ಲಿಸುತ್ತಿದ್ದ. ಅದೇ ಸ್ಥಳದಲ್ಲಿ ಕೇಶವ್‌ ಸಹ ಇರುತ್ತಿದ್ದರು. ದುಡಿಮೆ ಇಲ್ಲದಿದ್ದಾಗ ಕೇಶವ್‌, ದೀನದಯಾಳ್‌ ಬಳಿ ಸಾಲ ಕೇಳುತ್ತಿದ್ದರು. ಕೊಡದಿದ್ದಾಗ ಬೆದರಿಸಿ ಹಣ ಕಿತ್ತುಕೊಳ್ಳುತ್ತಿದ್ದರು.

ಅದರಿಂದ ಬೇಸತ್ತಿದ್ದ ಅಪರಾಧಿ, ₹100 ಪೆಟ್ರೋಲ್‌ನ್ನು ಬಾಟಲಿಯಲ್ಲಿ ತುಂಬಿಸಿಕೊಂಡು ಆಟೊದಲ್ಲಿ ಇಟ್ಟುಕೊಂಡಿದ್ದ. ಕೇಶವ್‌ ಬಳಿ ಹೋಗಿ, ‘ಯಾರೋ ರಸ್ತೆಯಲ್ಲಿ ನನ್ನ ಆಟೊದ ಇಂಡಿಕೇಟರ್‌ ಒಡೆದಿದ್ದಾರೆ. ಕೊಲೆ ಮಾಡುವುದಾಗಿ ಹೇಳಿದ್ದಾರೆ. ಆತನನ್ನು ಒಂದು ಕೈ ನೋಡಿಕೊಳ್ಳೋಣ ಬಾ’ ಎಂದು ಆಟೊದಲ್ಲಿ ಸಮೀಪದ ಶ್ರೀದೇವಿ ಕಾಂಡಿಮೆಂಟ್ಸ್‌ ಅಂಗಡಿ ಬಳಿ ಕರೆದೊಯ್ದಿದ್ದ.

ಆಟೊದಿಂದ ಕೇಶವ್‌ ಇಳಿಯುತ್ತಿದ್ದಂತೆ ಅವರ ಮೇಲೆ ಹಲ್ಲೆ ಮಾಡಿದ್ದ ದೀನದಯಾಳ, ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಸ್ಥಳದಲ್ಲೇ ಬಿದ್ದು ನರಳುತ್ತಿದ್ದ ಕೇಶವ್‌ ಅವರನ್ನು ಸ್ಥಳೀಯರು, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಶಂಕರಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸೆಪ್ಟೆಂಬರ್‌ 18ರಂದು ಅಸುನೀಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry