'ಮಾಧ್ಯಮಗಳು ಕುಲಗೆಟ್ಟಿವೆ, ತಪ್ಪು ಸಮಾಜದ್ದು'

7

'ಮಾಧ್ಯಮಗಳು ಕುಲಗೆಟ್ಟಿವೆ, ತಪ್ಪು ಸಮಾಜದ್ದು'

Published:
Updated:

ಪುತ್ತೂರು: ‘ಇಂದು ಮಾಧ್ಯಮಗಳು ಸಂಪೂರ್ಣ ಕುಲಗೆಟ್ಟು ಹೋಗಿದ್ದು, ಟೀವಿಗಳು ಚಾನಲ್‌ಗಳು ರೇಟಿಂಗ್‍ನ ಹಿಂದೆ ಓಡುತ್ತಾ 'ನೈತಿಕತೆ'ಯನ್ನು ಇಲ್ಲದಂತೆ ಮಾಡುತ್ತಿವೆ. ಇಂಥ ಮಾಧ್ಯಮಗಳು ತಮ್ಮನ್ನು ತಾವು ತಿದ್ದಿಕೊಳ್ಳದಿದ್ದರೆ ಸಮಾಜ ಹಾಳಾಗುತ್ತದೆ’

ಇದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಗುರುವಾರ ನಡೆದ ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನದ `ಮಾಧ್ಯಮ ಮಂಥನ' ಗೋಷ್ಠಿಯಲ್ಲಿ ವ್ಯಕ್ತವಾದ ವಾದ-ಪ್ರತಿವಾದಗಳು.

ಸಾಹಿತಿ, ಅಂಕಣಕಾರ ಜೋಗಿ ಅವರ ಸಮನ್ವಯತೆಯಲ್ಲಿ ನಡೆದ ಈ ಗೋಷ್ಠಿ ಆಧುನಿಕ ಮಾಧ್ಯಮ ಜಗತ್ತು ಸಾಗುತ್ತಿರುವ ರೀತಿ ಹಾಗೂ ಅದರ ಪರಿಣಾಮಗಳ ಕುರಿತು ಸುದೀರ್ಘ ಚರ್ಚೆ, ಪ್ರಶ್ನೋತ್ತರಗಳ ಮೂಲಕ ವಾಸ್ತವದ ಸ್ಥಿತಿಗೆ ಕನ್ನಡಿ ಹಿಡಿಯಿತು.

ಮಾಧ್ಯಮಗಳು ಹಾಳಾಗಿದ್ದಲ್ಲ. ಇವತ್ತಿನ ಸಮಾಜವೇ ಹಾಳಾಗಿದೆ. ಅದನ್ನು ಯಥಾವತ್ತಾಗಿ ತೋರಿಸುವ ಕೆಲಸ ಮಾಧ್ಯಮಗಳು ಮಾಡುತ್ತಿವೆ. ಹೀಗಾಗಿ ಮಾಧ್ಯಮಗಳಲ್ಲಿ ತಪ್ಪಿಲ್ಲ. ತಪ್ಪು ಇರುವುದು ಸಮಾಜದಲ್ಲಿ!

‘ಸಮಾಜ ಕೆಟ್ಟೋಗಿದೆ. ಹಾಗಾಗಿ ಅದನ್ನೇ ನಾವು ತೋರಿಸುವ ಕಾರಣ ತಪ್ಪು ಸಮಾಜದ್ದೇ ಹೊರತು ಮಾಧ್ಯಮಗಳದ್ದಲ್ಲ’ ಎಂಬ ಅಭಿಪ್ರಾಯ ಮಾಧ್ಯಮ ಪ್ರತಿನಿಧಿಗಳಿಂದ ವ್ಯಕ್ತವಾದಾಗ ವಿದ್ಯಾರ್ಥಿಗಳು ಅದನ್ನು ಆಕ್ಷೇಪಿಸಿದರು. ಹಾಗಾದರೆ ‘ಮಾಧ್ಯದವರಿಗೆ ಸಾಮಾಜಿಕ ಬದ್ಧತೆ ಇಲ್ಲವೇ? ಜನರು ಏನು ಕೇಳುತ್ತಾರೋ ಅದನ್ನು ಕೊಡುವ ಬದಲು ಜನರಿಗೆ ಏನು ಬೇಕು ಎಂಬುದನ್ನು ಚಿಂತಿಸಿ ಆರೋಗ್ಯಕರವಾದುದನ್ನು ಮಾಧ್ಯಮಗಳು ನೀಡಬೇಕು’ ಎಂಬ ಸಲಹೆ-ಅಭಿಪ್ರಾಯ ವ್ಯಕ್ತವಾಯಿತು.

ದುಡ್ಡು ಹೂಡಿಕೆ ಮಾಡಿ ಲಾಭ ತೆಗೆಯುವುದೇ ಉದ್ದೇಶವಾದರೆ ಅಂಥವರು ಪತ್ರಿಕೆ, ಟಿವಿ ಮಾಡೊ ಬದಲು ಬೇರೆ ಉದ್ಯಮ ಮಾಡಬಹುದಲ್ವಾ ಎಂದು ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು. ಪತ್ರಿಕೆಗಳಿಗಿಂತ ಹೆಚ್ಚು ಟಿವಿಗಳ ಕೆಟ್ಟು ಹೋದವು ಎನ್ನುತ್ತಿದ್ದೆವು. ಈಗ ಟಿವಿಗಿಂತಲೂ ಸೋಷಿಯಲ್ ಮಿಡಿಯಾ ಹೆಚ್ಚು ಕೆಟ್ಟು ಹೋಗಿದೆ. ಆಕಾಶವಾಣಿ ಮತ್ತು ದೂರದರ್ಶನ ಮಾತ್ರ ಸದಭಿರುಚಿ ಹೊಂದಿದೆ. ಖಾಸಗಿ ಮಾಧ್ಯಮಗಳು ಇವುಗಳ ಮೌಲ್ಯವನ್ನು ತಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎಂಬ ಸಲಹೆ ಕೇಳಿ ಬಂತು.

ಪತ್ರಕರ್ತರಾದ ಬೆಂಗಳೂರಿನ ರವಿ ಹೆಗಡೆ, ಗೌರೀಶ್ ಅಕ್ಕಿ, ಎಸ್.ಕೆ. ಶ್ಯಾಮಸುಂದರ್, ಪ್ರೊ.ಬೋನಂತಾಯ ಹರಿಶ್ಚಂದ್ರ ಭಟ್, ಮಂಗಳೂರಿನ ಪಿ.ಬಿ.ಹರೀಶ್ ರೈ, ಪ್ರಸನ್ನ, ಚಲಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು, ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕಿ ಎಸ್. ಉಷಾಲತಾ, ಸಿನಿಮಾ ಛಾಯಾಗ್ರಾಹಕ ರಾಮಚಂದ್ರ, ಚಿಂತಕರಾದ ವಾದಿರಾಜ್, ಮಂಗಳೂರು ವಿವಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಿಯಾ ನಾೈಕ್ ಸಂವಾದದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು. ಕಾಲೇಜಿನ ಪತ್ರಿಕಾಗೋದ್ಯಮ ವಿಭಾಗದ ಮುಖ್ಯಸ್ಥರಾದ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry