ಎಡಿಬಿ:ಲೋಕಾಯುಕ್ತ ತನಿಖೆಗೆ ಆಗ್ರಹ

7

ಎಡಿಬಿ:ಲೋಕಾಯುಕ್ತ ತನಿಖೆಗೆ ಆಗ್ರಹ

Published:
Updated:
ಎಡಿಬಿ:ಲೋಕಾಯುಕ್ತ ತನಿಖೆಗೆ ಆಗ್ರಹ

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಡಿಬಿ ಮೊದಲ ಹಂತದ ಯೋಜನೆಯಲ್ಲಿ ಕುಡ್ಸೆಂಪ್ ಕೈಗೊಂಡ ಒಳಚರಂಡಿ, ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಕಳಪೆಯಾಗಿದ್ದು, ಬಹುತೇಕ ಕಡೆ ಉಪಯೋಗವಿಲ್ಲದಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ಹಸ್ತಾಂತರ ನಡೆಸುವ ಮೂಲಕ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಒತ್ತಾಯಿಸಿದ್ದಾರೆ.

ಸುರತ್ಕಲ್ ಮದ್ಯ ಮಾಧವ ನಗರದ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕ, ಪಡೀಲ್ ಮತ್ತು ಬಜಾಲ್‌ ರೇಚಕ ಸ್ಥಾವರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ನಗರದ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ₹ 218 ಕೋಟಿ ಅನುದಾನ ಮಂಜೂರಾಗಿತ್ತು. ಆದರೆ ಯುಜಿಡಿ ಲೈನ್ ಪೂರ್ತಿ ಮಾಡದೆ ಸಂಪರ್ಕ ಕಲ್ಪಿಸಿದ ಕಾರಣ ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಜನರಿಗೆ ತೊಂದರೆಯಾಗಿದೆ. ಒಳಚರಂಡಿಯಲ್ಲಿ ಹರಿಯಬೇಕಾದ ತ್ಯಾಜ್ಯನೀರು ಮಳೆ ನೀರಿನ ತೋಡಿನಲ್ಲಿ ಹರಿಯುತ್ತಿದೆ. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನೀರು ಶುದ್ಧೀಕರಣಗೊಳ್ಳದೆ ಖಾಸಗಿ ಸ್ಥಳದಲ್ಲಿ ಹರಿದು ನಗರದ ವಿವಿಧೆಡೆ ಜನರಿಗೆ ರೋಗಭೀತಿ ಎದುರಾಗಿದೆ. ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಡೆಸದೇ ಹಸ್ತಾಂತರ ಮಾಡಿರುವುದೇ ಇದಕ್ಕೆ ಕಾರಣ. ಈ ಅವ್ಯವಹಾರ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದರು.

ಒಳಚರಂಡಿ ಕಾಮಗಾರಿಗಳಿಗೆ ರೈಲ್ವೆ ಇಲಾಖೆಯಿಂದ ಇದ್ದ ಅಡ್ಡಿಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಕೊಡಿಪಾಡಿ ಮಾಧವ ನಗರದಲ್ಲೂ ಒಳಚರಂಡಿ ವ್ಯವಸ್ಥೆಗೆ ರೈಲ್ವೆ ಇಲಾಖೆಯಿಂದ ಅನುಮತಿ ದೊರಕಿಸಿಕೊಡಲಾಗುವುದು ಎಂದು ಅವರು ಹೇಳಿದರು.

ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ನಡೆಸದ ಕಾರಣ ಸಮಸ್ಯೆ ತಲೆದೋರಿದೆ. ಈ ವಿಷಯದಲ್ಲಿ ಪಾಲಿಕೆ ಅಧಿಕಾರಿಗಳು ಒಳಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದರು.

ಸುರತ್ಕಲ್‍ನ ಕೊಡಿಪಾಡಿ ಮಾಧವ ನಗತ್ಯಾಜ್ಯ ನೀರು ಸಂಸ್ಕರಣೆ ಮಾಡಿಯೇ ಹೊರಬಿಡುತ್ತೇವೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ತ್ಯಾಜ್ಯ ನೀರು ಸಂಸ್ಕರಣೆ ನಡೆಸಲಾಗುತ್ತಿಲ್ಲ ಎಂದು ಘಟಕದ ಎಂಜಿನಿಯರ್ ವಿಶ್ವನಾಥ ತಿಳಿಸಿದರು.

ಮಾಜಿ ಶಾಸಕರಾದ ಎನ್. ಯೋಗೀಶ್ ಭಟ್‌, ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಪಾಲಿಕೆ ಪ್ರತಿಪಕ್ಷ ಮುಖಂಡ ಗಣೇಶ ಹೊಸಬೆಟ್ಟು, ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷ ಡಾ. ವೈ. ಭರತ್ ಶೆಟ್ಟಿ, ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್, ಪಾಲಿಕೆ ಸದಸ್ಯರಾದ ರೂಪಾ ಬಂಗೇರ, ಸುಮಿತ್ರಾ ಕರಿಯ, ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ರಾಜೇಂದ್ರ, ಪೂರ್ಣಿಮಾ, ಜಯಂತಿ ಆಚಾರ್, ರಾಜೇಶ್, ಮೀರಾ ಕರ್ಕೇರಾ, ವಿಜಯಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry