ಸಾಧನೆಗಳ ಮನವರಿಕೆ; ಬಿಜೆಪಿ ವಿರುದ್ಧ ವಾಗ್ದಾಳಿ

7

ಸಾಧನೆಗಳ ಮನವರಿಕೆ; ಬಿಜೆಪಿ ವಿರುದ್ಧ ವಾಗ್ದಾಳಿ

Published:
Updated:
ಸಾಧನೆಗಳ ಮನವರಿಕೆ; ಬಿಜೆಪಿ ವಿರುದ್ಧ ವಾಗ್ದಾಳಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ತವರು ಜಿಲ್ಲೆಯಲ್ಲಿ ನಡೆದ ‘ಸಾಧನಾ ಸಂಭ್ರಮ’ ಸಮಾವೇಶವು ಕಾಂಗ್ರೆಸ್‌ ಸರ್ಕಾರದ ನಾಲ್ಕೂವರೆ ವರ್ಷಗಳ ಸಾಧನೆ ಅನಾವರಣದ ಜೊತೆಗೆ ಬಿಜೆಪಿ ವಿರುದ್ಧ ವಾಗ್ದಾಳಿಗೆ ವೇದಿಕೆಯಾಯಿತು.

ಎಚ್‌.ಡಿ.ಕೋಟೆ, ವರುಣಾ, ನಂಜನಗೂಡು, ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಗುರುವಾರ ದಿನವಿಡೀ ನಡೆದ ಸಮಾವೇಶಗಳಲ್ಲಿ ಸುಮಾರು ₹ 900 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಹೊಸ ಯೋಜನೆಗಳ ಶಂಕುಸ್ಥಾಪನೆಯನ್ನು ಸಿದ್ದರಾಮಯ್ಯ ನೆರವೇರಿಸಿದರು. ಜೊತೆಗೆ ಸರ್ಕಾರಿ ಸವಲತ್ತು ವಿತರಿಸಿದರು. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಗೂರು ಪಟ್ಟಣದಲ್ಲಿ ₹ 112.94 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

‘ಅಧಿಕಾರಕ್ಕೆ ಬಂದರೆ ಎಚ್‌.ಡಿ.ಕೋಟೆ ಕ್ಷೇತ್ರವನ್ನು ದತ್ತು ಪಡೆಯುವುದಾಗಿ ಭರವಸೆ ನೀಡಿದ್ದೆ. ಹೀಗಾಗಿ, ನಾಲ್ಕೂವರೆ ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ₹ 1,400 ಕೋಟಿ ಅನುದಾನ ನೀಡಿದೆ. ಪ್ರಚಾರಕ್ಕಾಗಿ, ರಾಜಕೀಯ ಲಾಭಕ್ಕಾಗಿ ಅನುದಾನ ನೀಡುತ್ತಿಲ್ಲ. ಯಾವ ಕ್ಷೇತ್ರಕ್ಕೂ ನಾನು ತಾರತಮ್ಯ ಮಾಡುವುದಿಲ್ಲ. ಹಿಂದೆ ಯಾವುದಾದರೂ ಸರ್ಕಾರ ಇಷ್ಟೊಂದು ಅನುದಾನ ನೀಡಿತ್ತೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪ್ರಮುಖವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಜಾರಿ ಮಾಡಿರುವ ಯೋಜನೆಗಳ ಬಗ್ಗೆ ಒತ್ತು ನೀಡಿ ಮಾತನಾಡಿದರು. ‘ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್‌ ಸರ್ಕಾರ. ಬೇರೆಲ್ಲೂ ಈ ರೀತಿಯ ಮೀಸಲಾತಿ ಇಲ್ಲ’ ಎಂದರು.

‘ಪ್ರಣಾಳಿಕೆಯಲ್ಲಿ ಭರವಸೆ ನೀಡದಿದ್ದರೂ ಸಾಲಮನ್ನಾ ಮಾಡಿದ್ದೇವೆ. ಇಂದಿರಾ ಕ್ಯಾಂಟೀನ್‌, ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಜೈಲಿಗೆ ಹೋದವರನ್ನು ಮರೆಯಬಹುದು. ಆದರೆ, ಅನ್ನಭಾಗ್ಯ ನೀಡಿದವರನ್ನು ಜನರು ಯಾವತ್ತೂ ಮರೆಯುವುದಿಲ್ಲ‌’ ಎಂದು ನುಡಿದರು.

‘ಸರ್ಕಾರವನ್ನು ಟೀಕಿಸಲು ಬೇರೆ ಯಾವುದೇ ವಿಷಯ ಇಲ್ಲದೆ ಬಿಜೆಪಿ ಮುಖಂಡರು ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು’ ಎಂದು ವಾಗ್ದಾಳಿ ನಡೆಸಿದರು. ‘ಜೆಡಿಎಸ್‌ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅವರು ಅವಕಾಶವಾದಿಗಳು. ಬೆಂಕಿ ಕಾಯಿಸಿಕೊಳ್ಳಲು ಕಾಯುತ್ತಿದ್ದಾರೆ’ ಎಂದು ಟೀಕಿಸಿದರು.

ಮತಯಾಚಿಸಿದ ಸಿದ್ದರಾಮಯ್ಯ: ‘ಚಿಕ್ಕಮಾದು ನಿಧನದಿಂದ ತೆರವಾಗಿರುವ ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವುದಿಲ್ಲ. ಮೇನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆಶೀರ್ವಾದ ನೀಡಬೇಕು. ಅಭ್ಯರ್ಥಿಯನ್ನಾಗಿ ಯಾರನ್ನೇ ನಿಲ್ಲಿಸಿದರೂ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಕೋರಿದರು.

ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ‘35 ವರ್ಷಗಳ ಹೋರಾಟದ ಫಲ ಸರಗೂರು ತಾಲ್ಲೂಕು ಘೋಷಣೆ. ಅದು ಸಿದ್ದರಾಮಯ್ಯ ಆಡಳಿತದಲ್ಲಿ ನೆರವೇರಿದೆ. ಇಲ್ಲಿನ ಜನರು ಮುಖ್ಯಮಂತ್ರಿಗೆ ಸದಾ ಚಿರಋಣಿಯಾಗಿರಬೇಕು’ ಎಂದರು.

‘ಕ್ಷೇತ್ರಕ್ಕೆ 6 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. 124 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ. ಅದರಲ್ಲಿ ಮೂರು ಯೋಜನೆಗಳು ಮುಗಿದಿವೆ. ಹಿಂದಿನ ಶಾಸಕ ಚಿಕ್ಕಮಾದು ಕೂಡ ಉತ್ತಮ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

ಮಧ್ಯದಲ್ಲಿ ಮೌನಾಚರಣೆ

ಕಾರ್ಯಕ್ರಮದ ಆರಂಭದಲ್ಲಿ ಮೌನಾಚರಣೆ ಮಾಡುವುದು ವಾಡಿಕೆ. ಆದರೆ, ಈಚೆಗೆ ನಿಧನರಾದ ಎಚ್‌.ಡಿ.ಕೋಟೆ ಶಾಸಕ ಚಿಕ್ಕಮಾದು ಅವರಿಗೆ ಸಾಧನಾ ಸಮಾವೇಶದ ಮಧ್ಯದಲ್ಲಿ ಮೌನಾಚರಣೆ ಸಲ್ಲಿಸಲಾಯಿತು.

****

ಸಿ.ಎಂ, ವಡೆ ಮತ್ತು ಮಹದೇವಪ್ಪ…

ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದ ವೇಳೆ ವೇದಿಕೆ ಮೇಲಿದ್ದ ಕ್ಯಾಟರಿಂಗ್‌ ಸಿಬ್ಬಂದಿ ಕಾಫಿ, ವಡೆ ನೀಡುತ್ತಿದ್ದರು. ಆಗ ಮುಖ್ಯಮಂತ್ರಿಯವರು, ‘ಏ, ನಡಿ ಆ ಕಡೆ. ನಾನು ಕುಳಿತಿದ್ದಾಗ ವಡೆ ತರಲಿಲ್ಲ. ಈಗ ಕುಳಿತಿರುವವರಿಗೆ ನೀಡುತ್ತಿದ್ದೀಯಾ? ಇದು ಮಹದೇವಪ್ಪನ ಸಂಚು ಇರಬೇಕು’ ಎಂದು ತಮಾಷೆ ಮಾಡಿದರು. ಆಗ ಸಭಾಂಗಣದಲ್ಲಿ ಜೋರು ನಗು.

******

ವೇದಿಕೆ ಹಿಂಬದಿ ಅಹವಾಲು

ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ದಿಢೀರನೇ ವೇದಿಕೆಯಿಂದ ಕೆಳಗಿಳಿದರು. ಮೂತ್ರವಿಸರ್ಜನೆಗಾಗಿ ವೇದಿಕೆಯ ಹಿಂಭಾಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೌಚಾಲಯ ಬಳಕೆ ಮಾಡಿ ವೇದಿಕೆಗೆ ಮರಳಿದರು. ಈ ಸಂದರ್ಭದಲ್ಲಿ ಸ್ಥಳೀಯರು ಅಹವಾಲು ಸಲ್ಲಿಸಲು ಮುಗಿಬಿದ್ದರು.

* * 

ಸಿದ್ದರಾಮಯ್ಯ ಅವರನ್ನು ಕಂಡರೆ ಕೋಮುವಾದಿಗಳಿಗೆ ಹೊಟ್ಟೆಕಿಚ್ಚು. ಅವರ ಏಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನುಂಗಲಾರದ ತುತ್ತಾಗಿ ಪರಿಣಮಿಸಿದ್ದಾರೆ‌

ಡಾ.ಎಚ್‌.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry