ಮುಖ್ಯಮಂತ್ರಿ ರೇಸ್‌ನಲ್ಲಿ ಮಹದೇವಪ್ಪ: ಸಿದ್ದರಾಮಯ್ಯ

7

ಮುಖ್ಯಮಂತ್ರಿ ರೇಸ್‌ನಲ್ಲಿ ಮಹದೇವಪ್ಪ: ಸಿದ್ದರಾಮಯ್ಯ

Published:
Updated:
ಮುಖ್ಯಮಂತ್ರಿ ರೇಸ್‌ನಲ್ಲಿ ಮಹದೇವಪ್ಪ: ಸಿದ್ದರಾಮಯ್ಯ

ಮೈಸೂರು: ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕೂಡ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ನಂಜನಗೂಡು ಕ್ಷೇತ್ರದ ಜನರು ಮುಂದಿಟ್ಟ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಮುಂದೆಯೂ ಈಡೇರಿಸಲಿದೆ ಎಂದು ಅವರು ಹೇಳಿದಾಗ ಸಭಿಕರಲ್ಲಿ ಕೆಲವರು, ‘ನೀವೇ ಮುಂದಿನ ಮುಖ್ಯಮಂತ್ರಿಯಾಗಬೇಕು’ ಎಂದು ಜೋರಾಗಿ ಕೂಗಿದರು.

‘ನೀವು ಹಾಗೆ ಹೇಳಿದರೆ ಮಹದೇವಪ್ಪಗೆ ಕೋಪ ಬರುತ್ತದೆ. ಅವರೂ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಬಹಳ ಜನ ಪೈಪೋಟಿಯಲ್ಲಿದ್ದಾರೆ’ ಎಂದರು. ಆಗ ವೇದಿಕೆಯಲ್ಲಿದ್ದ ಮಹದೇವಪ್ಪ ನಗು ಬೀರುತ್ತಾ ಜನರತ್ತ ಕೈಬೀಸಿದರು.

‘ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾನು, ಮಹದೇವಪ್ಪ, ಕಳಲೆ ಕೇಶವಮೂರ್ತಿ (ನಂಜನಗೂಡು ಶಾಸಕ), ಧ್ರುವನಾರಾಯಣ (ಚಾಮರಾಜನಗರ ಸಂಸದ) ಒಟ್ಟಿಗಿದ್ದೇವೆ’ ಎಂದರು.

ನನ್ನ ದುಡ್ಡು ಖರ್ಚು ಮಾಡಬೇಕೇ?: ‘ಸರ್ಕಾರದ ಹಣದಲ್ಲಿ ಮುಖ್ಯಮಂತ್ರಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್‌ ಟೀಕಿಸುತ್ತಿವೆ. ಈಗ ಚುನಾವಣೆ ಘೋಷಣೆ ಆಗಿದೆಯೇ? ನೀತಿ ಸಂಹಿತೆ ಜಾರಿಗೆ ಬಂದಿದೆಯೇ? ಸರ್ಕಾರದ ಕಾರ್ಯಕ್ರಮವನ್ನು ನನ್ನ ದುಡ್ಡಿನಿಂದ ಮಾಡಬೇಕೆ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ವಿದೇಶಗಳಿಗೆ, ಬೇರೆ ಬೇರೆ ರಾಜ್ಯಗಳಿಗೆ ವಿಮಾನ, ಹೆಲಿಕಾಪ್ಟರ್‌ನಲ್ಲಿ ಸುತ್ತಾಡುವುದು ಯಾರ ಖರ್ಚಿನಲ್ಲಿ? ಟೀಕೆ ಮಾಡಲು ಇತಿಮಿತಿ ಇರಬೇಕು. ಬಿಜೆಪಿ ಮುಖಂಡರಿಗೆ ಎರಡು ನಾಲಿಗೆ’ ಎಂದು ವಾಗ್ದಾಳಿ ನಡೆಸಿದರು.

ಚರ್ಚೆಗೆ ಪಂಥಾಹ್ವಾನ: ಸಾಧನೆಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡರಿಗೆ ಪಂಥಾಹ್ವಾನ ನೀಡಿದರು.‌ ‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ ಏನು ಸಾಧನೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಏನೆಲ್ಲಾ ಸಾಧನೆಗಳಾಗಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರೂವರೆ ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂಬುದನ್ನು ಒಂದೇ ವೇದಿಕೆಯಲ್ಲಿ ಬಹಿರಂಗವಾಗಿ ಚರ್ಚಿಸೋಣ’ ಎಂದು ಸವಾಲು ಹಾಕಿದರು.

‘ಲೆಕ್ಕ ಕೇಳಲು ಅಮಿತ್ ಷಾ ಯಾರು?’

‘ನಮ್ಮ ಲೆಕ್ಕ ಕೇಳಲು ಅಮಿತ್ ಷಾ ಯಾರು? ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕೇಂದ್ರಕ್ಕೆ ಗುಜರಾತ್ ಸರ್ಕಾರ ಲೆಕ್ಕ ನೀಡಿತ್ತೇ? ಹಣಕಾಸು ವ್ಯವಸ್ಥೆ ಬಗ್ಗೆ ಅವರಿಗೇನು ಗೊತ್ತು?' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

'ನಮಗೆ ಭಿಕ್ಷೆ ನೀಡಿದ್ದಾರೆಯೇ? ಕರ್ನಾಟಕದಿಂದ ಸಂಗ್ರಹವಾದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ವಾಪಸ್‌ ನೀಡಿದೆ. ಆ ಲೆಕ್ಕವನ್ನು ಶಾಸಕಾಂಗ ಹಾಗೂ ರಾಜ್ಯದ ಆರೂವರೆ ಕೋಟಿ ಜನರಿಗೆ ನೀಡುತ್ತೇನೆ' ಎಂದರು.

‘ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್‌ ಗಾತ್ರ ₹ 2.06 ಲಕ್ಷ ಕೋಟಿ ಇರಲಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಸರ್ಕಾರದ ಬೊಕ್ಕಸ ದಿವಾಳಿಯಾಗಿದೆ ಎಂದು ಬಿಜೆಪಿ ಮುಖಂಡರು ಬೊಗಳೆ ಬಿಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry