ಕಬಡ್ಡಿ ಹೆಸರಿನಲ್ಲಿ ಹರಿಯುತ್ತಿದೆ ಹಣದ ಹೊಳೆ

7

ಕಬಡ್ಡಿ ಹೆಸರಿನಲ್ಲಿ ಹರಿಯುತ್ತಿದೆ ಹಣದ ಹೊಳೆ

Published:
Updated:
ಕಬಡ್ಡಿ ಹೆಸರಿನಲ್ಲಿ ಹರಿಯುತ್ತಿದೆ ಹಣದ ಹೊಳೆ

ಮಂಡ್ಯ: ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಯುವ ಮತದಾರರನ್ನು ಸೆಳೆಯಲು ಹಣದ ಹೊಳೆಯನ್ನೇ ಹರಿಸಿ ಕಬಡ್ಡಿ ಪಂದ್ಯ ಆಯೋಜಿಸುತ್ತಿದ್ದಾರೆ. ಆ ಮೂಲಕ ಕ್ರೀಡಾಳುಗಳನ್ನು ರಾಜಕೀಯ ಕಾರ್ಯಕರ್ತರನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಟಿಕೆಟ್‌ ಆಕಾಂಕ್ಷಿಗಳು ಕಬಡ್ಡಿ ತಂಡಗಳ ಮಾಲೀಕತ್ವ ಪಡೆದಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂಪಾಯಿ ಚೆಲ್ಲಿ ಆಟಗಾರರನ್ನು ಖರೀದಿ ಮಾಡಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ, ಕಾಂಗ್ರೆಸ್‌ನಲ್ಲಿ ಒಂದು ಕಾಲಿಟ್ಟಿರುವ ಜೆಡಿಎಸ್‌ ಬಂಡಾಯ ಶಾಸಕರಾದ ಎನ್‌.ಚಲುವರಾಯಸ್ವಾಮಿ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಮಧುಚಂದನ್‌, ಲಕ್ಷ್ಮಣ್‌ ಕುಮಾರ್‌ ಸೇರಿ ವಿವಿಧ ಪಕ್ಷಗಳ ಮುಖಂಡರು ತಂಡಗಳನ್ನು ಖರೀದಿ ಮಾಡಿದ್ದಾರೆ.

ರಾಜಕೀಯ ಮುಖಂಡರ ‘ಕ್ರೀಡಾಸಕ್ತಿ’ಯನ್ನೇ ಬಂಡವಾಳ ಮಾಡಿಕೊಂಡಿರುವ ಜಿಲ್ಲೆಯ ಕೆಲ ಕ್ರೀಡಾ ಸಂಘಗಳು ಮುಖಂಡರಿಂದ ಲಕ್ಷಾಂತರ ರೂಪಾಯಿ ಪ್ರಾಯೋಜಕತ್ವ ಪಡೆದು ಟೂರ್ನಿ ಆಯೋಜನೆ ಮಾಡುತ್ತಿವೆ. ಈಗಾಗಲೇ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಪ್‌, ಕನ್ನಂಬಾಡಿ ಕಪ್‌, ಆರ್ಗ್ಯಾನಿಕ್‌ ಕಪ್‌, ಬಾಲ ಗಂಗಾಧರನಾಥ ಸ್ವಾಮೀಜಿ ಕಪ್‌ ಟೂರ್ನಿಗಳು ಜಿಲ್ಲೆಯಾದ್ಯಂತ ಸದ್ದು ಮಾಡಿವೆ. ಸಕ್ಕರೆ ಸೀಮೆ, ಮುತ್ತಿನ ಕೆರೆ, ಬೇಬಿ ಬೆಟ್ಟ, ಕನ್ನಂಬಾಡಿ, ಮೇಲುಕೋಟೆ, ಫ್ರೆಂಚ್‌ ರಾಕ್ಸ್‌, ಕುಂತಿ ಬೆಟ್ಟ ಮುಂತಾದ ತಂಡಗಳು ಕಬಡ್ಡಿ ಆಡುತ್ತಿವೆ. ಝಗಮಗಿಸುವ ವಿದ್ಯುತ್‌ ದೀಪಾಲಂಕಾರ, ಡಿಜೆ ಸೌಂಡ್‌ ಸಿಸ್ಟಂ, ಡಿಜಿಟಲ್‌ ಸ್ಕೋರ್‌ ಬೋರ್ಡ್‌, ಆಕರ್ಷಕ ಮ್ಯಾಟ್‌, ಚಿತ್ರನಟರ ನೃತ್ಯ ಮುಂತಾದವು ಕಬಡ್ಡಿಗೆ ರಂಗು ತಂದಿವೆ.

‘12ಕ್ಕೂ ಹೆಚ್ಚು ಕಬಡ್ಡಿ ಟೂರ್ನಿ ಆಯೋಜಿಸಲು ನಮ್ಮ ಇಲಾಖೆಗೆ ಈಗಾಗಲೇ ಪ್ರಸ್ತಾವ ಬಂದಿದೆ. ಜಿಲ್ಲೆಯಲ್ಲಿ ಕಬಡ್ಡಿ ಮೊದಲಿನಿಂದಲೂ ಇದೆ. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇದು ಕೇವಲ ಕ್ರೀಡೆಯಾಗಿ ಉಳಿಯದೆ ರಾಜಕೀಯ ರೂಪ ಪಡೆದಿದೆ. ಆದರೂ ನಾವು ಆಯೋಜಕರಿಗೆ ಕ್ರೀಡಾಂಗಣದಲ್ಲಿ ಸೌಲಭ್ಯ, ಮ್ಯಾಟ್‌ ಮತ್ತಿತರ ಕ್ರೀಡೋಪಕರಣ ನೀಡುತ್ತಿದ್ದೇವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್‌ ಹೇಳಿದರು.

ಮಾ. 1ರಿಂದ ಮೋದಿಜೀ ಕಪ್‌: ಮಾರ್ಚ್ 1ರಿಂದ ನಾಲ್ಕು ದಿನಗಳ ಕಾಲ ನಗರದಲ್ಲಿ ‘ಮೋದಿಜೀ ಕಪ್‌’ ಕಬಡ್ಡಿ ಟೂರ್ನಿ ನಡೆಯಲಿದ್ದು, ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳ 16 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ‘ರಾಜ್ಯ, ಅಂತರರಾಜ್ಯ ಟೂರ್ನಿಗಳಲ್ಲಿ ಆಡಿರುವ ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಡಬಲ್‌ ಮ್ಯಾಟ್‌ ಅಂಕಣದಲ್ಲಿ ಕ್ರೀಡಾಳುಗಳು ಸೆಣಸಲಿದ್ದಾರೆ. ಮುಂದೆ ಮೋದಿ ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸುವ ಯೋಚನೆಯೂ ಇದೆ’ ಎಂದು ಬಿಜೆಪಿ ಮುಖಂಡ ಪಿ.ಎನ್‌.ಸುರೇಶ್‌ ಹೇಳಿದರು.

‘ನಾನು ಬೆಂಗಳೂರಿನಲ್ಲಿ ಟೀ ಸ್ಟಾಲ್‌ ನಡೆಸುತ್ತಿದ್ದೆ. ಮದ್ದೂರು ತಾಲ್ಲೂಕಿನ ನಮ್ಮ ಹಳ್ಳಿಯಲ್ಲಿ ಮೊದಲಿನಿಂದಲೂ ಕಬಡ್ಡಿ ಆಡುತ್ತಿದ್ದೆ. ಚುನಾವಣೆ ಇರುವುದರಿಂದ ಐದು ತಿಂಗಳಿಂದ ನಿರಂತರವಾಗಿ ಕಬಡ್ಡಿ ಮ್ಯಾಚ್‌ ನಡೆಯುತ್ತಿವೆ. ಆಟ ಆಡುವುದಕ್ಕಾಗಿ ಟೀ ಸ್ಟಾಲ್‌ ಸ್ಥಗಿತಗೊಳಿಸಿ ವಾಪಸ್‌ ಬಂದಿದ್ದೇನೆ. ನಮ್ಮ ಮುಖಂಡರ ಪರವಾಗಿ ಪ್ರಚಾರ ಕಾರ್ಯದಲ್ಲೂ ಭಾಗವಹಿಸುತ್ತೇನೆ. ಚುನಾವಣೆ ಮುಗಿದ ನಂತರ ಮತ್ತೆ ಟೀ ಸ್ಟಾಲ್‌ ನಡೆಸುತ್ತೇನೆ’ ಎಂದು ಹೆಸರು ಬಹಿರಂಗಪಡಿಸದ ಆಟಗಾರರೊಬ್ಬರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry