ಉದ್ದೇಶಕ್ಕೆ ಬಳಕೆಯಾಗದ ಜನರ ತೆರಿಗೆ ಹಣ!

7

ಉದ್ದೇಶಕ್ಕೆ ಬಳಕೆಯಾಗದ ಜನರ ತೆರಿಗೆ ಹಣ!

Published:
Updated:
ಉದ್ದೇಶಕ್ಕೆ ಬಳಕೆಯಾಗದ ಜನರ ತೆರಿಗೆ ಹಣ!

ರಾಯಚೂರು: ಜಿಲ್ಲೆಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಶೇ 6 ರಷ್ಟು ಗ್ರಂಥಾಲಯ ಶುಲ್ಕವನ್ನು ಜನರಿಂದ ನಿಯಮಿತವಾಗಿ ಸಂಗ್ರಹಿಸಿದರೂ, ಗ್ರಂಥಾಲಯ ಇಲಾಖೆಗೆ ಆ ಮೊತ್ತವನ್ನು ಪಾವತಿಸದೆ ವಂಚಿಸುತ್ತಿವೆ!

ಶುಲ್ಕ ಸಂಗ್ರಹಿಸಿದ ಕಾರ್ಯಕ್ಕಾಗಿ ಗ್ರಂಥಾಲಯ ಶುಲ್ಕದ ಒಟ್ಟು ಮೊತ್ತದಲ್ಲಿ ಶೇ 10 ರಷ್ಟು ಸ್ಥಳೀಯ ಆಡಳಿತ ಸಂಸ್ಥೆಗಳು ಬಳಕೆ ಮಾಡಿಕೊಂಡು, ಇನ್ನುಳಿದ ಮೊತ್ತವನ್ನು ಕೊಡಬೇಕು. ಆದರೆ, ಸಂಗ್ರಹಿಸಿದ ಎಲ್ಲ ಮೊತ್ತವನ್ನು ಬೇರೆ ಉದ್ದೇಶಕ್ಕಾಗಿಯೆ ಬಳಕೆ ಮಾಡಿಕೊಳ್ಳುತ್ತಿವೆ. ಪ್ರತಿ ಹಣಕಾಸು ವರ್ಷದ ಕೊನೆಯಲ್ಲಿ ನಡೆಯುವ ಲೆಕ್ಕಪತ್ರ ಪರಿಶೋಧನೆ (ಆಡಿಟ್‌ ರಿಪೋರ್ಟ್‌) ವರದಿಯಲ್ಲಿ ಗ್ರಂಥಾಲಯ ಶುಲ್ಕ ಪಾವತಿಸುವುದಕ್ಕೆ ಉಲ್ಲೇಖ ಮಾಡಲಾಗುತ್ತಿದೆ. ಆದರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದೆ ಜನರು ತೆರಿಗೆ ಕಟ್ಟಿದ ಉದ್ದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ.

2015–16 ನೇ ಸಾಲಿನ ಲೆಕ್ಕಪತ್ರ ಪರಿಶೋಧನೆ ವರದಿ ಪ್ರಕಾರ ರಾಯಚೂರು ಮತ್ತು ಸಿಂಧನೂರು ನಗರಸಭೆಗಳು ಲಕ್ಷಾಂತರ ಮೊತ್ತವನ್ನು ಗ್ರಂಥಾಲಯ ಇಲಾಖೆಗೆ ಕೊಡಬೇಕಿದೆ. ಜಿಲ್ಲೆಯ ಎಲ್ಲ 11 ಸ್ಥಳೀಯ ಆಡಳಿತ ಸಂಸ್ಥೆಗಳು ಒಂದು ಕೋಟಿಗೂ ಅಧಿಕ ಗ್ರಂಥಾಲಯ ಶುಲ್ಕ ಬಾಕಿ ಉಳಿಸಿಕೊಂಡಿವೆ. ಪ್ರಸಕ್ತ ಹಣಕಾಸು ವರ್ಷದ ಲೆಕ್ಕಪತ್ರವನ್ನು ಪರಿಗಣಿಸಿದರೆ ಕೋಟ್ಯಂತರ ಮೊತ್ತವು ಗ್ರಂಥಾಲಯ ಇಲಾಖೆಗೆ ಕೊಡಬೇಕಿದೆ.

ಇಲಾಖೆಯಲ್ಲಿ ಪರದಾಟ: ‘ಪುಸ್ತಕ ಖರೀದಿ, ಹೊರಗುತ್ತಿಗೆ ಸಿಬ್ಬಂದಿ ವೇತನ ಹಾಗೂ ಗ್ರಂಥಾಲಯ ನಿರ್ವಹಣೆಗಾಗಿ ಅನುದಾನ ಬೇಕಾಗುತ್ತದೆ. ಸದ್ಯಕ್ಕೆ ಸಿಂಧನೂರು, ಮುದಗಲ್‌ ಸ್ಥಳೀಯ ಸಂಸ್ಥೆಗಳು ಸ್ವಲ್ಪ ಮೊತ್ತವನ್ನು ಕೊಡುತ್ತಿರುವುದರಿಂದ ಗ್ರಂಥಾಲಯ ಮುನ್ನಡೆಸಲು ಸಾಧ್ಯವಾಗಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳಿಗೆ ಮೇಲಿಂದ ಮೇಲೆ ಸಿಬ್ಬಂದಿ ಕಳುಹಿಸಿ ಹಣ ಪಾವತಿಗೆ ನೆನಪಿಸುತ್ತಲೆ ಇದ್ದೇವೆ. ಮುಂದೆ ಕೊಡುತ್ತೇವೆ ಎನ್ನುತ್ತಿದ್ದಾರೆ ವಿನಾ ಶುಲ್ಕ ಕೊಡುತ್ತಿಲ್ಲ’ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಎಂ.ಎಸ್‌.ರೆಬಿನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಕದ ಜಿಲ್ಲೆ ಬಾಗಲಕೋಟ, ಬೆಳಗಾವಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗ್ರಂಥಾಲಯ ಇಲಾಖೆಗೆ ಸೇರಬೇಕಾದ ಶುಲ್ಕವನ್ನು ಸ್ಥಳೀಯ ಸಂಸ್ಥೆಗಳು ಕಾಲಕಾಲಕ್ಕೆ ಪಾವತಿ ಮಾಡುತ್ತಿವೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ರಾಯಚೂರಿನ ಗ್ರಂಥಾಲಯಗಳಿಗೆ ಅತಿಹೆಚ್ಚು ಜನರು ಭೇಟಿ ನೀಡುತ್ತಾರೆ. ಅಲ್ಪಸ್ವಲ್ಪ ಬರುವ ಅನುದಾನದಲ್ಲೆ ಓದುವುದಕ್ಕೆ, ಮಾಹಿತಿ ಪರಿಶೀಲಿಸುವುದಕ್ಕೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿ ಕೊಡುತ್ತಿದ್ದೇವೆ’ ಎಂದರು.

ಏನಿದು ಶುಲ್ಕ

ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳು ಪ್ರತಿ ವರ್ಷ ಜನರಿಂದ ಸಂಗ್ರಹಿಸುವ ಕರಗಳಲ್ಲಿ ಶೇ 6 ಗ್ರಂಥಾಲಯ ಶುಲ್ಕ ಕೂಡಾ ಇದೆ. ಸಂಗ್ರಹಿಸಿದ ತೆರಿಗೆ ಮೊತ್ತದಿಂದ ಗ್ರಂಥಾಲಯ ಶುಲ್ಕವನ್ನು ಗ್ರಂಥಾಲಯ ಇಲಾಖೆಗೆ ಜಮಾಗೊಳಿಸಬೇಕು ಎನ್ನುವ ನಿಯಮವಿದೆ.

* * 

ಜಿಲ್ಲೆಯಲ್ಲಿ ಅತಿಹೆಚ್ಚು ಗ್ರಂಥಾಲಯ ಶುಲ್ಕ ಬಾಕಿ ರಾಯಚೂರು ನಗರಸಭೆ ಉಳಿಸಿಕೊಂಡಿದೆ. ನೂತನ ಆಯುಕ್ತ ದರ್ಶನ್‌ ಅವರು ಬಂದ ಬಳಿಕ ಈಚೆಗೆ ₹10 ಲಕ್ಷ ಮಾತ್ರ ಕೊಟ್ಟಿದ್ದಾರೆ.

ಎಂ.ಎಸ್‌.ರೆಬಿನಾಳ ಜಿಲ್ಲಾ ಮುಖ್ಯ ಗ್ರಂಥಪಾಲಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry