ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನಾಕಾರರ ಬಂಧನ, ಬಿಡುಗಡೆ

Last Updated 12 ಜನವರಿ 2018, 6:45 IST
ಅಕ್ಷರ ಗಾತ್ರ

ರಾಯಚೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದ ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮಿತಿಯ ಮುಖಂಡರನ್ನು ಪೊಲೀಸರು ಗುರುವಾರ ಬಂಧಿಸಿ ಆನಂತರ ಬಿಡುಗಡೆಗೊಳಿಸಿದರು.

ನಗರದ ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿನ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ಜೈಲ್‌ ಭರೋ ಚಳವಳಿ ಆರಂಭಿಸಿದ ಪ್ರತಿಭಟನಾಕಾರರು ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ವೃತ್ತದ ಮಧ್ಯದಲ್ಲಿ ಕುಳಿತು ಕೆಲಕಾಲ ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.

ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಸರ್ಕಾರ ವಿಳಂಬ ಧೋರಣೆ ಅನುಸರಿಸುವದನ್ನು ಖಂಡಿಸಿ, ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಕೂಡಲೇ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ದಶಕಗಳ ಹೋರಾಟದ ಫಲವಾಗಿ ಸದಾಶಿವ ಆಯೋಗ ರಚನೆ ಮಾಡಿ ವರದಿಯನ್ನು ಪಡೆಯಲಾಗಿದೆ. ಆದರೆ, ವರದಿ ನೀಡಿದರೂ, ಜಾರಿಗೊಳಿಸದ ಪರಿಣಾಮ ಪರಿಶಿಷ್ಟ ಜಾತಿಯವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವು ಬಾರಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಿದರೂ, ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಸದಾಶಿವ ವರದಿ ಜಾರಿ ಸಂಬಂಧ ಚರ್ಚಿಸಲು ಕರೆದ ದಲಿತ ಸಂಘಟನೆಗಳ ಸಭೆಯನ್ನು ಮುಂದೂಡಲಾಗಿದೆ. ಕೂಡಲೇ ಸಭೆಯನ್ನು ಕರೆದು ಚರ್ಚೆ ನಡೆಸಿ ತ್ವರತವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘಟನೆಗಳ ಮುಖಂಡ ರಾದ ರವೀಂದ್ರನಾಥ ಪಟ್ಟಿ, ಅಂಬಣ್ಣ ಅರೋಲಿ, ರವೀಂದ್ರ ಜಲ್ದಾರ್, ಬಾಲಸ್ವಾಮಿ ಕೊಡ್ಲಿ, ನರಸಪ್ಪ ದಂಡೋರ, ಜನಾರ್ಧನ ಹಳ್ಳಿಬೆಂಚಿ, ಕೆ.ಪಿ.ಅನಿಲಕುಮಾರ, ವಿಶ್ವನಾಥ ಪಟ್ಟಿ, ಜಿ.ಅಮರೇಶ, ಎಸ್.ರಾಜು, ಅಬ್ರಾಹಂ, ಹನುಮಂತಪ್ಪ, ಚಂದ್ರಶೇಖರ, ಈರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT