ಪೊಲೀಸ್ ಪತ್ನಿಯರ ನಳಪಾಕದ ಘಮ ಘಮ

7

ಪೊಲೀಸ್ ಪತ್ನಿಯರ ನಳಪಾಕದ ಘಮ ಘಮ

Published:
Updated:

ಶಿವಮೊಗ್ಗ: ಪೊಲೀಸರ ಪತ್ನಿಯರು ಸಿದ್ಧಪಡಿಸಿದ ತರಹೇವಾರಿ ತಿನಿಸುಗಳು ನೆರೆದ ಜನರ ಬಾಯಲ್ಲಿ ನೀರು ತರಿಸಿದವು. ನಾಗರಿಕರು ಬಗೆ ಬಗೆಯ ಖಾದ್ಯಗಳನ್ನು ಬಾಯಿ ಚಪ್ಪರಿಸುತ್ತಾ ಸವಿದರು...

ಇದು ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಅಂಗವಾಗಿ ಡಿಎಆರ್ ಸಭಾಂಗಣದಲ್ಲಿ ಗುರುವಾರದಿಂದ ಆರಂಭವಾಗಿರುವ ಆಹಾರ ಮೇಳದಲ್ಲಿ ಕಂಡು ಬಂದ ದೃಶ್ಯ. ಪೊಲೀಸರ ಕುಟುಂಬದವರು ಒಟ್ಟಾಗಿ ಸೇರಿ, ಎರಡು ದಿನ ನಡೆಯುವ ಆಹಾರ ಮೇಳದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಆಹಾರ ಮೇಳವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಹೆಚ್ಚುವರಿ ಎಸ್‌ಪಿ ಮುತ್ತುರಾಜ್ ಆಯೋಜಿಸಿದ್ದಾರೆ.

ಆವರಣಲ್ಲಿ ಒಟ್ಟು 20 ಮಳಿಗೆಗಳಿವೆ. 2 ಮಾಂಸಾಹಾರ ಮಳಿಗೆಗಳೂ ಇವೆ. ಜಿಲ್ಲಾ ಪೊಲೀಸ್‌ ಕಚೇರಿಯ 35 ಸಿಬ್ಬಂದಿ ಸೇರಿ ಮಾಡಿರುವ ಜೈ ಮಾರುತಿ ಮಿನಿ ಕಾಂಡಿಮೆಂಟ್ಸ್ ಆಹಾರ ಮಳಿಗೆಯಲ್ಲಿ ಲಭ್ಯವಿದ್ದ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಐಸ್‌ ಕ್ರೀಮ್‌, ರವೆ ಉಂಡೆ, ನಿಂಬು ಪಾನೀಯ, ಮಂಡಕ್ಕಿ ಜನರ ಬಾಯಿಯಲ್ಲಿ ನೀರೂರುವಂತೆ ಮಾಡಿದವು. ಪೊಲೀಸ್ ದೋಸೆ ಕ್ಯಾಂಪ್‌ನಲ್ಲಿ ದೋಸೆ ಮತ್ತು ಚಹಾ ರಚಿ ಜನರನ್ನು ಸೆಳೆಯಿತು.

ಅನ್ನಪೂರ್ಣೇಶ್ವರಿ ಫುಡ್ಸ್‌ ಮಳಿಗೆಯಲ್ಲಿ ಹಪ್ಪಳ, ರಾಗಿ ಜ್ಯೂಸ್, ನಿಪ್ಪಟ್ಟು, ರಾಗಿ ಕಿಲಾಸ, ಆಯುರ್ವೇದ ಕಷಾಯ ಪುಡಿ ಜನರ ರುಚಿ ತಣಿಸಿದವು.  ಚಾಮುಂಡೇಶ್ವರಿ ಮಹಿಳಾ ಸ್ವ ಸಹಾಯ ಸಂಘವು ತಯಾರಿಸಿದ್ದ ಗೋಬಿ ಮಂಚೂರಿ, ಪಾನಿಪುರಿ, ಮಸಲಾ ಮಂಡಕ್ಕಿ, ಮುದ್ದೆ, ಮಣಸಿನಕಾಯಿ ಬೋಂಡಾ, ಫ್ರೂಟ್ಸ್‌ ಸಲಾಡ್‌ ಯುವಜನರನ್ನು ಸೆಳೆದವು.

ಮಾಂಸಾಹಾರ ಮಳಿಯಲ್ಲಿ ಬಿರಿಯಾನಿ ಸೇರಿದಂತೆ ವಿವಿಧ ರೀತಿಯ ತಿನಿಸುಗಳನ್ನು ಖಾದ್ಯಪ್ರಿಯರು ಚಪ್ಪರಿಸಿದರು. ಹರಿಯಾಣದ ಜಿಲೇಬಿಯ ಮಳಿಗೆಗೆ ಮಾತ್ರ ಹೊರಗಿನವರಿಗೆ ಅವಕಾಶ ಕಲ್ಪಿಸಲಾಗಿದೆ. ಆಹಾರ ಮಳಿಗೆಗಳಲ್ಲದೆ ಟ್ಯಾಟೂ, ಬ್ಯೂಟಿ ಪಾರ್ಲರ್‌, ಬೆಂಡ್‌ ಕಟ್ಟಿಂಗ್‌ ಮಳಿಗೆಗಳೂ ಇವೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಅವರ ಅತ್ತೆ ರಜನಿವರ್ಮ ಅವರು ಸ್ವತಃ ಬಿಡಿಸಿದ ಚಿತ್ರಗಳು, ತಾವೇ ತಯಾರಿಸಿದ ಗೃಹಾಲಂಕಾರದ ವಸ್ತುಗಳು ಪ್ರದರ್ಶನದಲ್ಲಿವೆ. ಪಿಯಾನೊ ನುಡಿಸುವ ಕುರಿತು ಪುಸ್ತಕ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಬಲೂನ್ ಶೂಟಿಂಗ್, ಲೋಟ ಬೀಳಿಸುವ ಆಟ, ಜೋಡಿಸಿಟ್ಟ ವಸ್ತುಗಳಿಗೆ ರಿಂಗ್ ಹಾಕುವ ಆಟಗಳು ಇಲ್ಲಿವೆ.

‘ಮುತ್ತುರಾಜ್‌ ಫ್ಲವರ್ಸ್’ ಮಳಿಗೆಯಲ್ಲಿ ಅಲಂಕಾರಿಕ ಗಿಡಗಳು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಅವರ ಅಭಿರುಚಿಗೆ ಕನ್ನಡಿ ಹಿಡಿಯುತ್ತವೆ. ರಾಗಿ ಪಾನೀಯ ಮತ್ತು ರಾಗಿ ಕಿಲಾಸ ಎಲ್ಲರೂ ಇಷ್ಟಪಟ್ಟು ಸವಿದರು. ಈ ರೀತಿಯ ಆಹಾರ ಮೇಳ ಆಯೋಜಿಸಿರುವುದು ಸಂತಸ ತಂದಿದೆ ಎಂದು ಅನ್ನಪೂರ್ಣೇಶ್ವರಿ ಫುಡ್ಸ್‌ನ ಲಲಿತಾ ಸುರೇಶ್ ಹೇಳಿದರು.

ಮಹಿಳೆಯರು ಮನೆಯಲ್ಲಿ ಕಾಲಹರಣ ಮಾಡುವ ಬದಲು ಇಂತಹ ಮೇಳಗಳಲ್ಲಿ ಭಾಗವಹಿಸಿದರೆ ಜನ ಸಂಪರ್ಕ ಬೆಳೆಯುತ್ತದೆ ಎನ್ನುತ್ತಾರೆ ಸುಶೀಲಾ ಮತ್ತು ಸಾದಿಯಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry