ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಡ್ಯ–ಕುಕ್ಕೆ ಭಾಗದಲ್ಲಿ ಸಾಯುತ್ತಿರುವ ಮಂಗಗಳು

Last Updated 12 ಜನವರಿ 2018, 6:55 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತಾಲ್ಲೂಕಿನ ಬಾಂಡ್ಯ–ಕುಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳೆಕೊಪ್ಪ, ಗಂಟೆಜನಗಲ್ಲು, ಸಾಲೇಜನಗಲ್ಲು, ಬಾಂಡ್ಯ, ಸರುವಿನ ಮನೆ ಗ್ರಾಮಗಳಲ್ಲಿ ಮಂಗಗಳು ಸಾಯುತ್ತಿದ್ದು, ಮಂಗನ ಕಾಯಿಲೆ ಭೀತಿ ಹೆಚ್ಚಿದೆ.

ಈ ಭಾಗದ 6 ಮಂದಿಯಲ್ಲಿ ಮಂಗನ ಕಾಯಿಲೆ ರೋಗಾಣು ಇರುವುದು ಪತ್ತೆಯಾಗಿದ್ದು, ರೋಗಕ್ಕೆ ತುತ್ತಾದ ಗ್ರಾಮಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಟೆ ಜನಗಲ್ಲಿನ ಶ್ಯಾಮಲ ಡಿಸೆಂಬರ್‌ 25ರಂದು ಮಂಗನ ಕಾಯಿಲೆಯಿಂದಾಗಿ ಮೃತಪಟ್ಟಿದ್ದರು. ನಂತರ ಕಾಯಿಲೆ ತೀವ್ರವಾಗಿ ವ್ಯಾಪಿಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಜ್ಜಾಗಿದ್ದು, ಸಂಚಾರಿ ಘಟಕವನ್ನು ಆರಂಭಿಸಿದೆ. ಸಂಚಾರಿ ಆರೋಗ್ಯ ಘಟಕದ ವಾಹನ ಈ ಭಾಗದ ಹಳ್ಳಿಗಳಿಗೆ ತೆರಳಿ ಮಂಗನ ಕಾಯಿಲೆಯಿಂದ ಜೀವ ರಕ್ಷಣೆ ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದೆ.

ಲಸಿಕೆ, ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳದೇ ಇರುವವರಲ್ಲಿಯೇ ಹೆಚ್ಚು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಕೃಷಿ ಕೆಲಸಗಳಿಗೆ ಮನೆಯಿಂದ ಹೊರಗೆ ಹೋಗುವವರು ಆರೋಗ್ಯ ಇಲಾಖೆ ನೀಡಿರುವ ತೈಲ ಹಚ್ಚಿಕೊಂಡು ಹೋಗುವಂತೆ ತಿಳಿಸಲಾಗುತ್ತಿದೆ. ಮಂಗಗಳು ಸತ್ತರೆ ಆ ಸ್ಥಳದ ಸುತ್ತ ಯಾರೂ ಸುಳಿದಾಡದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಮಂಗಗಳು ಸತ್ತ ಸ್ಥಳದ ಸುತ್ತ ರೋಗ ವ್ಯಾಪಿಸದಂತೆ ಉಣ್ಣೆಗಳನ್ನು ಸಾಯಿಸಲು ರಾಸಾಯನಿಕ ಔಷಧ ಸಿಂಪಡಿಸಲಾಗುತ್ತಿದೆ. ಸಂಚಾರಿ ಘಟಕ ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಯಾರಿಗಾದರೂ ಜ್ವರ ಕಾಣಿಸಿಕೊಂಡರೆ ಅಂಥವರ ರಕ್ತದ ಮಾದರಿಯನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದೆ.

ಸಂಚಾರಿ ಘಟಕದಲ್ಲಿ ಹಿರಿಯ ಆರೋಗ್ಯ ಸಹಾಯಕರು, ಕಿರಿಯ ಆರೋಗ್ಯ ಸಹಾಯಕರನ್ನು ಒಳಗೊಂಡ 4 ಜನರ ತಂಡ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಮಂಗನ ಕಾಯಿಲೆ ನಿಯಂತ್ರಣ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದು, ರೋಗ ವ್ಯಾಪಿಸದೇ ಇರುವ ಸ್ಥಳಗಳಿಗೂ ಭೇಟಿ ನೀಡಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದೆ.

ಕಳೆದ ಬಾರಿ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ತೀವ್ರವಾಗಿತ್ತು. ಪಂಚಾಯ್ತಿ ವ್ಯಾಪ್ತಿಯ ಚಿಡುವ, ಇಂದಿರಾನಗರ, ಕೊಡಿಗಿ ಭಾಗದಲ್ಲಿನ ಅನೇಕ ಜನರು ರೋಗಕ್ಕೆ ತುತ್ತಾಗಿದ್ದರು. ಚಿಡುವ ಗ್ರಾಮದ ಶೇಷಪ್ಪನಾಯ್ಕ, ಜನಾರ್ದನ ಹಾಗೂ ಇಂದಿರಾನಗರದ ನಾರಾಯಣ ರೋಗಕ್ಕೆ ಬಲಿಯಾಗಿದ್ದರು. ಈ ಸಲ ಈ ಭಾಗದಲ್ಲಿ ಇದುವರೆಗೆ ಮಂಗನ ಕಾಯಿಲೆಯ ಯಾವುದೇ ಪ್ರಕರಣ ದಾಖಲಾಗಿಲ್ಲ. ಹೊಸ ಸ್ಥಳಗಳಿಗೆ ವಿಸ್ತರಿಸುತ್ತಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್‌ ತಿಳಿಸಿದ್ದಾರೆ.

ಸಾಲೇಜನಗಲ್ಲಿನ ರಾಮನಾಯ್ಕರು ಹಾಗೂ ಅಶೋಕಮೂರ್ತಿ ಅವರ ಮನೆ ಸಮೀಪ ಎರಡು ದಿನಗಳಿಂದ ಒಟ್ಟು 4 ಮಂಗಗಳು ಸತ್ತಿವೆ. ಸತ್ತ ಮಂಗಗಳನ್ನು ಸಾಕುನಾಯಿಗಳು ಮನೆ ಸಮೀಪ ತಂದು ಹಾಕುತ್ತಿರುವುದರಿಂದ ಭೀತಿ ಹೆಚ್ಚುತ್ತಿದೆ ಎಂದು ಸಾಲೇಜನಗಲ್ಲು ಸತ್ಯನಾರಾಯಣ ತಿಳಿಸಿದ್ದಾರೆ. ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ರೋಗ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದ್ದು, ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

ಮಂಗನ ಕಾಯಿಲೆಪೀಡಿತ ಪ್ರದೇಶಗಳಿಗೆ ಶೀಘ್ರ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ ತಿಳಿಸಿದ್ದಾರೆ.

ಆರೋಗ್ಯ ಸಹಾಯಕಿಯರ ಕೊರತೆ

ಮಂಗನ ಕಾಯಿಲೆಯ ಅಪಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಮಾಳೂರು, ಮಹಿಷಿ, ಚಿಡುವ, ಕುಡುಮಲ್ಲಿಗೆ, ತನಿಕಲ್ಲು ಭಾಗದಲ್ಲಿ ಆರೋಗ್ಯ ಸಹಾಯಕಿಯರ ಕೊರತೆ ಇದೆ. ನೇಮಕಕ್ಕೆ ತಕ್ಷಣ ಮುಂದಾಗಬೇಕು ಎಂದು ಮಂಡಗದ್ದೆ ಜಿಲ್ಲಾ ಪಂಚಾಯ್ತಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT