ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

7

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

Published:
Updated:
ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಯಾದಗಿರಿ: ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಗುರುವಾರ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ಮೈಲಾಪುರ ಅಗಸಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿವೃತ್ತ, ಕನಕ ವೃತ್ತ, ಅಂಬೇಡ್ಕರ್ ವೃತ್ತ, ಶಾಸ್ತ್ರಿ ವೃತ್ತ, ಸುಭಾಷಚಂದ್ರ ಬೋಸ್‌ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿಗೆ ತಲುಪಿತು.

ಶಾಸ್ತ್ರಿ ವೃತ್ತ, ಸುಭಾಷಚಚಂದ್ರ ಬೋಸ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಧೋರಣೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎ.ಜೆ.ಸದಾಶಿವ ಆಯೋಗ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ದೇವಿಂದ್ರನಾಥ ನಾದ ಮಾತನಾಡಿ,‘ಮಾದಿಗರಿಗೆ ಶೇ 6ರಷ್ಟು ಮೀಸಲಾತಿ, ಹೊಲೆಯರಿಗೆ ಶೇ 5ರಷ್ಟು, ಭೋವಿ, ಲಮಾಣಿ, ಕೊರಚ, ಸಮುದಾಯದವರಿಗೆ ಶೇ 3ರಷ್ಟು ಮೀಸಲಾತಿ ಮತ್ತು ಅವರಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಜನಾಂಗಕ್ಕೆ ಶೇ 1ರಷ್ಟು ಮೀಸಲಾತಿ ನೀಡಬೇಕೆಂದು ಎ.ಜೆ.ಸದಾಶಿವ ಆಯೋಗದ ವರದಿ ಶಿಫಾರಸು ಮಾಡಿರುವುದು ವೈಜ್ಞಾನಿಕವಾಗಿದೆ. ಕೂಡಲೇ ಸರ್ಕಾರ ವರದಿ ಜಾರಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಮಾತನಾಡಿ, ‘ಪರಿಶಿಷ್ಟ ಜಾತಿಯಲ್ಲಿರುವ ಸೊಷ್ಟ ಜನಾಂಗದವರು ಅಸ್ಪೃಶ್ಯರಿಗಿಂತ ಕಡಿಮೆ ಜನಸಂಖ್ಯೆ ಹೊಂದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದಾರೆ. ಅಸ್ಪೃಶ್ಯರು  ಸೌಲಭ್ಯ ದೊರೆಯದೆ ವಂಚಿತವಾರಗುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ನ್ಯಾ. ಎ.ಜೆ.ಸದಾಶಿವ ಅವರು ಪರಿಶಿಷ್ಟ ಜಾತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದ್ದರಿಂದ ವರದಿಯನ್ನು ಜಾರಿಗೊಳಿಸಿ ನ್ಯಾಯ ಒದಗಿಸಬೇಕು’ ಎಂದರು.

‘ಮಾದಿಗ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಶಿವಶರಣ ಮಾದರ ಚೆನ್ನಯ್ಯ ಅಧ್ಯಯನ ಪೀಠವನ್ನು ಕೂಡಲ ಸಂಗಮದಲ್ಲಿ ಆರಂಭಿಸಬೇಕು. ವಡ್ಡರ, ಲಂಬಾಣಿ, ಕೊರಚ, ಕೊರವ ಪರಿಶಿಷ್ಟ ಜಾತಿಯಿಂದ ತೆಗೆಯಬೇಕು. ಮಹಾಋಷಿ ಮಾತಂಗಾ ಮುನಿಯವರ ಜಯಂತಿ ಸರ್ಕಾರ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಶಿವಲಿಂಗಪ್ಪ ಪುಟಗಿ, ಮಲ್ಲಣ್ಣ ದಾಸನಕೇರಿ, ಹಣಮಂತ ಇಟಗಿ, ಚನ್ನುಯ್ಯ ಮಾಳಿಕೇರಿ, ಗೋಪಾಲ ದಾಸನಕೇರಿ, ಎ.ಕೆ. ಬಿರನೂರು, ದೇವದಾಸ ಗುರುಮಠಕಲ್, ಭೀಮರಾಯ ಬಂದಳ್ಳಿ, ಮಂಜುನಾಥ ದಾಸನಕೇರಿ, ಸಾಬಣ್ಣ ಸೈದಾಪುರ, ನಂದಕುಮಾರ, ತಾಯಪ್ಪ ಬದ್ದೇಪಲ್ಲಿ, ಶಿವು ಮುದ್ನಾಳ, ಮಲ್ಲು ಮಾಳಿಕೇರಿ, ತಿಪ್ಪಣ್ಣ ಕೋನಿಮನಿ, ಮಹಾದೇವಪ್ಪ ಚಾಮನಳ್ಳಿ, ನಿಂಗಣ್ಣ ವಡ್ನಳ್ಳಿ, ಅನೀಲ ಮುಂಡ್ರಿಕೇರಿ, ಭೀಮಶೆಪ್ಪ ಗುಡ್ಸೆ, ಮಹಾಲಿಂಗ ಮುಂಡ್ರಗಿ, ನಿನೊಂದ ಶರಗೋಳ, ಶಿವರಾಜ ದಾಸನಕೇರಿ, ಭೀಮಾಶಂಕರ ಆಲ್ದಾಳ, ಚಂದ್ರು ದಾಸನಕೇರಿ, ಚಿದಾನಂದಕ ಕಿಲ್ಲನಕೇರಿ,ಖಂಡಪ್ಪ ಬಂದಳ್ಳಿ, ಶರಣಪ್ಪ ಮೋಟ್ಳಳ್ಳಿ, ಆಶಣ್ಣ ಬುದ್ಧ, ನಂದಕುಮಾರ್, ಭೀಮಾಶಂಕರ ಬಿಲ್ಲವ, ವಾಸುದೇವ ಕಟ್ಟಿಮನಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಹಶೀಲ್ದಾರ್ ಕಚೇರಿ ಎದುರು ಧರಣಿ

ಶಹಾಪುರ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ಮಾದಿಗ ದಂಡೋರ ಸಮಿತಿ ಮುಖಂಡರು ಮತ್ತು ಸದಸ್ಯರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ದಲಿತ ಸಮುದಾಯದ ಏಳಿಗೆ ಸಹಿಸದೇ ಉಪಜಾತಿ ಹೆಸರಿನಲ್ಲಿ ಕೆಲವರುವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಸರ್ಕಾರಕ್ಕೆ ವರದಿ ಅನುಷ್ಠಾನಗೊಳಿಸಲು ಶಿಫಾರಸು ಮಾಡಬೇಕು’ ಎಂದು ಸಮಿತಿಯ ರಾಜ್ಯ ಘಟಕದ ಕಾರ್ಯದರ್ಶಿ ವೆಂಕಟೇಶ ಆಲೂರ ಹಾಗೂ ಬಸವರಾಜ ನಾಯ್ಕಲ್ ಒತ್ತಾಯಿಸಿದರು.

‘ಸರ್ಕಾರಿ ಹುದ್ದೆಗಳಲ್ಲಿ ಮಾದಿಗ ಸಮಾಜನದವರ ಸಂಖ್ಯೆ ತುಂಬಾ ಕಡಿಮೆಯಿದೆ. ಮಾದಿಗ ಸಮಾಜದವರು ಮತ್ತೊಬ್ಬರ ಹಕ್ಕುಗಳನ್ನು ಕಸಿದುಕೊಳ್ಳುತ್ತಿಲ್ಲ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡುವಂತೆ ಕೋರುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಸಮಿತಿಯ ಹಿರಿಯ ಮುಖಂಡ ಮಲ್ಲಣ್ಣ ಕಟ್ಟಿಮನಿ, ರುದ್ರಪ್ಪ ಹುಲಿಮನಿ,ಮಲ್ಲಿಕಾರ್ಜುನ ಎದುರುಮನೆ ಶಾಂತಪ್ಪ ಕಟ್ಟಿಮನಿ, ಅಯ್ಯಾಳಪ್ಪ ದೋರನಹಳ್ಳಿ, ಭೀಮರಾಯ ರಸ್ತಾಪುರ, ಸಿದ್ದಪ್ಪ ಗೋನಾಲ ಇದ್ದರು.

* * 

ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಅಧ್ಯಯನಕ್ಕೆ ಸರ್ಕಾರ ಸಾಕಷ್ಟು ಹಣ ವೆಚ್ಚಗೊಳಿಸಿದೆ. ಸದಾಶಿವ ಅವರು ಕಷ್ಟಪಟ್ಟು ವರದಿ ಸಿದ್ಧಪಡಿಸಿದ್ದಾರೆ.

ಲಿಂಗಪ್ಪ ಹತ್ತಿಮನಿ ಅಧ್ಯಕ್ಷ, ಮಾದಿಗ ಮೀಸಲಾತಿ ಹೋರಾಟ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry