ಲೈಟ್‌ ಫಿಶಿಂಗ್‌ಗೆ ಅವಕಾಶ ನೀಡಿ

7

ಲೈಟ್‌ ಫಿಶಿಂಗ್‌ಗೆ ಅವಕಾಶ ನೀಡಿ

Published:
Updated:

ಕಾರವಾರ:  ಜಿಲ್ಲೆಯಲ್ಲಿ ಲೈಟ್‌ ಫಿಶಿಂಗ್‌ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ಯಾಂತ್ರೀಕೃತ ಪರ್ಸೀನ್ ಬೋಟ್‌ ಮಾಲೀಕರ ಒಕ್ಕೂಟದ ಕರಾವಳಿ ಜಿಲ್ಲೆಗಳ ಒಕ್ಕೂಟದ 200ಕ್ಕೂ ಅಧಿಕ ಮೀನುಗಾರರು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಗುರುವಾರ ಮನವಿ ಮಾಡಿದರು.

ಬಳಿಕ ಮಾತನಾಡಿದ ಮಂಗಳೂರು ಪರ್ಸೀನ್ ಬೋಟ್‌ ಒಕ್ಕೂಟದ ಅಧ್ಯಕ್ಷ ಮೋಹನ್ ಬೇಂಗ್ರೆ, ‘ಅನೇಕ ವರ್ಷಗಳಿಂದ ದೇಶದ ಕರಾವಳಿ ಭಾಗದಲ್ಲಿ ಹಲವರು ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳ ಸುಮಾರು 600 ಮೀನುಗಾರ ಕುಟುಂಬಗಳು ಜೀವನ ಸಾಗಿಸುತ್ತಿವೆ’ ಎಂದರು.

‘ಕೆಲ ವರ್ಷಗಳ ಹಿಂದೆ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎಂಪಿಇಡಿಎ) ಬೆಳಕು ಅಳವಡಿಸಿ ಮೀನುಗಾರಿಕೆ ನಡೆಸುವ ಕ್ರಮವನ್ನು ತಿಳಿಸಿಕೊಟ್ಟಿತು. ಅದರಂತೆ, ಮೂರು ವರ್ಷಗಳಿಂದ ಲೈಟ್‌ ಫಿಶಿಂಗ್ ನಡೆಸಲಾಗುತ್ತಿದೆ.

‘2016– 17ರಲ್ಲಿ ಕೆಲವರು ಈ ರೀತಿಯ ಮೀನುಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದನ್ನು ನಿಲ್ಲಿಸುವಂತೆ ಮೀನುಗಾರಿಕೆ ಇಲಾಖೆ ತಿಳಿಸಿತ್ತು. ಈ ಬಗ್ಗೆ ಒಕ್ಕೂಟದಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ ಬಳಿಕ, ಮೀನುಗಾರಿಕೆ ಸಚಿವ ಪ್ರಮೋದ ಮಧ್ವರಾಜ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಉಪಸ್ಥಿತಿಯಲ್ಲಿ ಚರ್ಚೆ ನಡೆದಿತ್ತು.

‘ಡಿಸೆಂಬರ್ ಮೊದಲ ವಾರದಿಂದ ಮಾರ್ಚ್‌ ಕೊನೆಯ ವಾರದವರೆಗೆ ಈ ರೀತಿಯ ಮೀನುಗಾರಿಕೆಗೆ ಅನುಮತಿ ನೀಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜತೆಗೆ, ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವೊಂದರಲ್ಲಿ ಕೆಲವು ನಿಬಂಧನೆಗೊಳಪಟ್ಟು ಈ ಲೈಟ್‌ ಫಿಶಿಂಗ್‌ಗೆ ಅನುಮತಿ ನೀಡಿದೆ.

‘ಅದರಂತೆ ಷರತ್ತುಬದ್ಧವಾಗಿ ಲೈಟ್‌ ಫಿಶಿಂಗ್‌ ನಡೆಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕೆಲ ತಿಂಗಳುಗಳ ಹಿಂದೆ ಈ ರೀತಿಯ ಮೀನುಗಾರಿಕೆಗೆ ನಿಷೇಧ ಹೇರಿದ್ದರಿಂದ ಮೀನುಗಾರರು ಭಯಭೀತರಾಗಿದ್ದಾರೆ. ಈ ಬಗ್ಗೆ ಮತ್ತೆ ಮೀನುಗಾರಿಕೆ ಸಚಿವ ಮಧ್ವರಾಜ

ಅವರ ನೇತೃತ್ವದಲ್ಲಿ ಮತ್ತೆ ತಜ್ಞ ವಿಜ್ಞಾನಿಗಳು, ಅಧಿಕಾರಿಗಳ ಸಭೆ ಕರೆಯಲಾಗಿತ್ತು.

‘ಈ ವೇಳೆ ಕೇಂದ್ರ ಸರ್ಕಾರವು ರಾಜ್ಯ ಮೀನುಗಾರರ ಹಾಗೂ ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆಯಿಂದ ಅಭಿಪ್ರಾಯವನ್ನು ಪಡೆಯದೇ, ಕೇಂದ್ರ ಹಾಗೂ 

ರಾಜ್ಯ ಸರ್ಕಾರದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದೆ. ಬೆಳಕು ಅಳವಡಿಸಿ ಮೀನುಗಾರಿಕೆ ನಡೆಸುವುದನ್ನು ಏಕಪಕ್ಷೀಯವಾಗಿ ನಿಷೇಧಿಸಿದೆ ಎಂದು ತೀವ್ರ ವಿರೋಧ ವ್ಯಕ್ತವಾಯಿತು.

‘ಹೀಗಾಗಿ ನಿಷೇಧ ಆದೇಶವನ್ನು ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ರಾಜ್ಯ ಮೀನುಗಾರರ ಅಭಿಪ್ರಾಯಗಳನ್ನು ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಭೆಯೊಂದನ್ನು ನಡೆಸಬೇಕು.

‘ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ, ಕರಾವಳಿ ಕಾವಲು ಪಡೆ ಹಾಗೂ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಿಗೆ ಮೀನುಗಾರರಿಗೆ ಮನವಿ ಮಾಡಲು ಸೂಚಿಸಿತ್ತು. ಈಗಾಗಲೇ ಉಳಿದೆರಡು ಕರಾವಳಿ ಜಿಲ್ಲೆಗಳಲ್ಲಿ ಲೈಟ್‌ ಫಿಶಿಂಗ್ ನಡೆಸಲಾಗುತ್ತಿದ್ದು, ಇಲ್ಲಿಯೂ ಅವಕಾಶ ನೀಡಬೇಕು’ ಎಂದು ಅವರು ಒತ್ತಾಯಿಸಿದರು. ಬೈತ್‌ಖೋಲ್‌ ಪರ್ಸೀನ್ ಬೋಟ್‌ ಯೂನಿಯನ್ ಅಧ್ಯಕ್ಷ ರಾಜು ತಾಂಡೇಲ, ದಿನೇಶ ಕಾಂಚನ್, ಗಣಪತಿ ಬಾನಾವಳಿಕರ್ ಹಾಗೂ ಸುರೇಶ ಹರಿಕಂತ್ರ ಹಾಜರಿದ್ದರು.

* * 

ಷರತ್ತಿನಂತೆ ಬೆಳಕು ಅಳವಡಿಸಿ ಮೀನುಗಾರಿಕೆ ನಡೆಸುತ್ತಿದ್ದೇವೆ. ಷರತ್ತು ಮೀರಿದವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ಲೈಟ್‌ ಫಿಶಿಂಗ್‌ ನಿಷೇಧ ಬೇಡ

ಗಣಪತಿ ಮಾಂಗ್ರೆ, ಮೀನುಗಾರ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry