ಹಾರಂಗಿ ಉದ್ಯಾನದಲ್ಲಿ ಸಂಗೀತ ಕಾರಂಜಿ ವೈಭವ

7

ಹಾರಂಗಿ ಉದ್ಯಾನದಲ್ಲಿ ಸಂಗೀತ ಕಾರಂಜಿ ವೈಭವ

Published:
Updated:
ಹಾರಂಗಿ ಉದ್ಯಾನದಲ್ಲಿ ಸಂಗೀತ ಕಾರಂಜಿ ವೈಭವ

ಕುಶಾಲನಗರ: ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಮುಂಭಾಗದ ಉದ್ಯಾನದಲ್ಲಿ ನಿರ್ಮಾಣವಾಗಿರುವ ಸುಂದರ ಸಂಗೀತ ಕಾರಂಜಿ ಕಾರ್ಯಾರಂಭಗೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಮೈಸೂರು ಕೆಆರ್‌ಎಸ್‌ ಕಾರಂಜಿ ಮಾದರಿಯಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ಜಲಾಶಯದ ಮುಂಭಾಗದ 33 ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಇದರೊಂದಿಗೆ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಂಗೀತ ಕಾರಂಜಿ ಈ ಉದ್ಯಾನಕ್ಕೆ ಮೆರಗು ನೀಡುತ್ತಿದೆ.

‌ಸಂಗೀತ ಕಾರಂಜಿಯೊಂದಿಗೆ ಉದ್ಯಾನದಲ್ಲಿ ನಿರ್ಮಿಸಿರುವ ವಿವಿಧ ಶೈಲಿಯ 18 ಕಾರಂಜಿಗಳು ಪ್ರವಾಸಿಗರ ಪ್ರಮುಖ ಆಕರ್ಷಣೆಯವಾಗಿದೆ. ಮಡಿಕೇರಿಯಲ್ಲಿ ನಡೆದ ಸಾಧನ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಗೀತ ಕಾರಂಜಿಯನ್ನು ಉದ್ಘಾಟಿಸಿದ ಬಳಿಕ ಪ್ರತಿದಿನ ಸಂಜೆ 7ಗಂಟೆಯಿಂದ 7.30 ರವರೆಗೆ ಪ್ರಯೋಗಿಕ ಪ್ರದರ್ಶನ ನೀಡಲಾಗುತ್ತಿದೆ.

ಏಕಕಾಲದಲ್ಲಿ ಐದು ನೂರಕ್ಕೂ ಹೆಚ್ಚಿನ ಮಂದಿ ಕುಳಿತು ಕಾರಂಜಿ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ನಾಗರಾಜ್ ತಿಳಿಸಿದರು. ಹಾರಂಗಿಯಲ್ಲಿ ಸಂಗೀತ ಕಾರಂಜಿಯ ನೃತ್ಯ ವೈಭವವನ್ನು ವೀಕ್ಷಿಸಿಸಲು ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಹಾರಂಗಿ ಉದ್ಯಾನದಲ್ಲಿ ಕಾರಂಜಿ ವೃತ್ತ, ಮಕ್ಕಳ ಉದ್ಯಾನ, ವಿಶ್ರಾಂತಿ ತಾಣ, ಪ್ರಾಣಿಗಳ ಕಲಾಕೃತಿಗಳು ಪ್ರವಾಸಿಗರನ್ನು ಪ್ರಮುಖ ಆಕರ್ಷಣೆಯಾಗಿದೆ.

‘ಕೊಡಗಿನ ಕಾವೇರಿ’, ‘ಮಡಿಕೇರಿ ಸಿಪಾಯಿ’, ಕವಿ ಚನ್ನವೀರ ಕಣವಿ ಅವರ ‘ವಿಶ್ವವಿನೂತನ ವಿದ್ಯಾಚೇತನ’ ಎಂಬ ಕನ್ನಡ ಹಾಡುಗಳು ಮತ್ತು ‘ಸಾರೆ ಜಹಾನ್ ಸೇ ಅಚ್ಚಾ’ ಎಂಬ ದೇಶ ಭಕ್ತಿಗೀತೆ ಸೇರಿದಂತೆ ಒಟ್ಟು 8 ಹಾಡುಗಳಿಗೆ ಉದ್ಯಾನ ಕಾರಂಜಿ ವೃತ್ತದಲ್ಲಿ ವಿವಿಧ ಭಂಗಿಯಲ್ಲಿ ಚಿಮ್ಮಿದ ನೀರಿನ ಸಿಂಚನ ಮನಮೋಹಕವಾಗಿವೆ.

ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ಕೂಡಿದ ಈ ದೃಶ್ಯ ವೈಭವ ನೋಡುಗರ ಕಣ್ಮನ ಸೆಳೆಯುತ್ತದೆ. ಹಾರಂಗಿ ಜಲಾಶಯದ ಬೃಂದಾವನ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕರಿಯಾಗಲಿದ್ದು, ದೂರದ ಊರುಗಳಿಂದ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಬರುವ ಪ್ರವಾಸಿಗರಿಗೆ ಈ ಸಂಗೀತ ಕಾರಂಜಿ ಮನಸ್ಸಿಗೆ ಮುದನೀಡುತ್ತಿದೆ.

* * 

ಪ್ರತಿ ದಿನ ಸಂಜೆ ಸಂಗೀತ ಕಾರಂಜಿ ಪ್ರದರ್ಶನ ವ್ಯವಸ್ಥೆ ಮಾಡಲಾಗುತ್ತಿದ್ದು, ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಧರ್ಮರಾಜ್

ಸಹಾಯಕ ಕಾರ್ಯಪಾಲಕ ಎಂಜಿನಿಯರ್

ನೀರಾವರಿ ಇಲಾಖೆ ಹಾರಂಗಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry