ಜೆಡಿಎಸ್‌: ಮನೆಯೊಂದು ಮೂರು ಬಾಗಿಲು!

7

ಜೆಡಿಎಸ್‌: ಮನೆಯೊಂದು ಮೂರು ಬಾಗಿಲು!

Published:
Updated:
ಜೆಡಿಎಸ್‌: ಮನೆಯೊಂದು ಮೂರು ಬಾಗಿಲು!

ಮಡಿಕೇರಿ: ಕೊಡಗು ಜಿಲ್ಲಾ ಜೆಡಿಎಸ್‌ನಲ್ಲಿ ರಾಜೀನಾಮೆ, ಬಂಡಾಯದ ಪರ್ವ ಆರಂಭವಾಗಿದೆ. ಚುನಾವಣೆಯ ಹೊತ್ತಿನಲ್ಲಿ ಈ ಬೆಳವಣಿಗೆ ಟಿಕೆಟ್‌ ಆಕಾಂಕ್ಷಿಗಳು ಹಾಗೂ ರಾಜ್ಯ ವರಿಷ್ಠರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರತಿನಿತ್ಯ ಪಕ್ಷದಲ್ಲಿ ಒಂದೊಂದು ಬೆಳವಣಿಗೆ ನಡೆಯುತ್ತಿರುವುದು ನಾಯಕರ ಓಟಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದು ಜಿಲ್ಲಾ ಮುಖಂಡರು ಆತಂಕಕ್ಕೆ ಒಳಗಾಗಿದ್ದಾರೆ.

ಒಂದೆಡೆ ಮಾಜಿ ಸಚಿವ, ಜೆಡಿಎಸ್‌ ಹಿರಿಯ ಮುಖಂಡ ಎಂ.ಸಿ. ನಾಣಯ್ಯ ಪಕ್ಷ ತೊರೆಯುವ ಆಲೋಚನೆಯಲ್ಲಿದ್ದು, ಅವರ ಬೆಂಬಲಿಗರು ತಟಸ್ಥ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. 30ಕ್ಕೂ ಹೆಚ್ಚು ಮುಖಂಡರು ಕಳೆದ ಆರು ತಿಂಗಳಿಂದ ಪಕ್ಷದ ಯಾವುದೇ ಚಟುವಟಿಕೆಯಲ್ಲೂ ಪಾಲ್ಗೊಳ್ಳುತ್ತಿಲ್ಲ ಎಂಬ ಆರೋಪವೂ ಇದೆ. ಅವರೆಲ್ಲಾ 10 ದಿನಗಳಲ್ಲಿ ಪಕ್ಷ ತೊರೆಯುವ ಅಥವಾ ತಟಸ್ಥರಾಗಿಯೇ ಉಳಿಯುವ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ನಾಣಯ್ಯ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ, ವಕೀಲ ಚಂದ್ರಮೌಳಿ ಆರೋಗ್ಯ ವಿಚಾರಣೆ ನೆಪದಲ್ಲಿ ತೆರಳಿ ಮಾತುಕತೆ ನಡೆಸಿದ್ದಾರೆ. ಪಕ್ಷ ಸೇರ್ಪಡೆ ವಿಚಾರ ಚರ್ಚೆಯಾಗಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟರೂ ತೆರೆಮರೆಯ ಪ್ರಯತ್ನ ನಡೆಯುತ್ತಿದೆ.

ಇನ್ನೊಂದೆಡೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿರುವ ನಗರಸಭೆ ಸದಸ್ಯ ಕೆ.ಎಂ. ಗಣೇಶ್ ಅವರು ಮೂಲ ಜೆಡಿಎಸ್ ಮುಖಂಡರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಕುಶಾಲನಗರದಲ್ಲಿ ಬುಧವಾರ ನಡೆದ ಯುವ ಘಟಕದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮನೋಜ್‌ ಬೋಪಣ್ಣ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಕೆ.ಎಂ. ಗಣೇಶ್‌ ನಡುವೆ ವಾಗ್ವಾದ ನಡೆದಿದೆ. ‘ಪಕ್ಷಕ್ಕೆ ವಲಸೆ ಬಂದಿರುವ ಮುಖಂಡರಿಂದ ಪಾಠ ಕಲಿಯಬೇಕಿಲ್ಲ’ ಎಂಬ ಮಾತುಗಳು ವ್ಯಕ್ತವಾಗಿವೆ ಎನ್ನುತ್ತವೆ ಮೂಲಗಳು.

ಪಕ್ಷದ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿದ್ದ ವಿ.ಎಂ. ವಿಜಯ ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷ ಎಸ್‌.ಬಿ. ಭರತ್‌ಕುಮಾರ್‌ ರಾಜೀನಾಮೆಗೆ ಮುಂದಾಗಿದ್ದಾರೆ. ಅವರೊಂದಿಗೆ ಎನ್‌.ಆರ್‌. ಅಜೀಶ್‌, ಯೋಗೇಶ್‌ ಕುಮಾರ್‌, ರಾಮಕೃಷ್ಣ ಅವರೂ ಪಕ್ಷದಿಂದ ಹೊರ ನಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯಿಂದ ಜೆಡಿಎಸ್‌ ಪ್ರಾಬಲ್ಯವಿರುವ ಸೋಮವಾರಪೇಟೆ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.

ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕಳೆದವಾರ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ, ವೈಮನಸ್ಸು ಸರಿಪಡಿಸಲು ಮುಂದಾಗಿದ್ದರು. ಕಾರಣಾಂತರಗಳಿಂದ ಅವರಿಗೆ ಜಿಲ್ಲೆಗೆ ಬರಲು ಸಾಧ್ಯವಾಗಿರಲಿಲ್ಲ.

ಟಿಕೆಟ್‌ ಆಕಾಂಕ್ಷಿ ವಿರುದ್ಧವೇ ಆರೋಪ!: ಮಡಿಕೇರಿ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿ, ಮಾಜಿ ಸಚಿವ ಬಿ.ಎ. ಜೀವಿಯ ಅವರು. ಸಭೆ – ಸಮಾರಂಭಗಳಲ್ಲಿ ನಾನೇ ಅಭ್ಯರ್ಥಿಯೆಂದು ಹೇಳಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಜಿಲ್ಲೆಗೆ ಬಂದಿದ್ದ ರಾಜ್ಯ ಮುಖಂಡರೂ ಅದನ್ನೇ ಪುನರುಚ್ಚರಿಸುತ್ತಿದ್ದಾರೆ. ಅವರ ವಿರುದ್ಧವೇ ಪಕ್ಷದ ಮುಖಂಡರು ಈಗ ತಿರುಗಿ ಬಿದ್ದಿದ್ದಾರೆ.

‘ಬೇರೆ ಪಕ್ಷದೊಂದಿಗೆ ಶಾಮೀಲಾಗಿರುವ ಕೆಲವರು ತಟಸ್ಥರ ಹೆಸರಿನಲ್ಲಿ ಸಭೆ ನಡೆಸಿದ್ದಾರೆ. ಅವರಿಗೂ ಜೆಡಿಎಸ್‌ಗೂ ಸಂಬಂಧ ಇಲ್ಲ’ ಎಂಬುದು ಜೀವಿಜಯ ಅವರ ಅಭಿಪ್ರಾಯ. ‘ನಾವೇ ಪಕ್ಷದ ಮೂಲ ನಿವಾಸಿಗಳು. ಎಷ್ಟೋ ವರ್ಷಗಳಿಂದ ನಾಣಯ್ಯ ಬೆಂಬಲಿಗರು. ಜೀವಿಜಯ ಅವರೇ ಕಾಂಗ್ರೆಸ್‌ನಿಂದ ಬಂದವರು’ ಎಂಬುದು ನಾಣಯ್ಯ ಬೆಂಬಲಿಗರ ವಾದ.

‘ನಮಗೆ ಜವಾಬ್ದಾರಿ ನೀಡುತ್ತಿಲ್ಲ. ರಾಜ್ಯ ವರಿಷ್ಠರು ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ಆದೇಶಿಸಿದ್ದರೂ ನಮಗೇ ಗೊತ್ತಿಲ್ಲದೆ ಆ ಹುದ್ದೆಯಿಂದ ಜೀವಿಜಯ ತೆಗೆದು ಹಾಕುತ್ತಿದ್ದಾರೆ. ಒಂದು ರೀತಿಯಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂಬುದು ಸೋಮವಾರಪೇಟೆಯಲ್ಲಿ ಬಂಡಾಯವೆದ್ದಿರುವ ಗುಂಪಿನ ಸದಸ್ಯರ ಹೇಳಿಕೆ.

ವಿಜಯ, ಭರತ್‌ಕುಮಾರ್‌ ಬಿಜೆಪಿ ಸೇರ್ಪಡೆಗೆ ವಿರೋಧ

ಸೋಮವಾರಪೇಟೆ: ಮುಂದಿನ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹೊಸಬರಿಗೆ ಟಿಕೆಟ್‌ ನೀಡಬೇಕು. ಜೆಡಿಎಸ್‌ ಬಿಟ್ಟು ಪಕ್ಷಕ್ಕೆ ಆಗಮಿಸಲು ಮುಂದಾಗಿರುವ ಎಸ್.ಬಿ. ಭರತ್ ಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿಯಾಗಿದ್ದ ವಿ.ಎಂ. ವಿಜಯ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಬಾರದು ಎಂದು ಬಿಜೆಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಗುರುವಾರ ಇಲ್ಲಿನ ಮಹಿಳಾ ಸಮಾಜದಲ್ಲಿ ಬಿಜೆಪಿ ತಾಲ್ಲೂಕು ಕಾರ್ಯಾಧ್ಯಕ್ಷ ಶುಂಠಿ ಸುರೇಶ್, ಪ್ರಮುಖರಾದ ಜಿ.ಎಲ್. ನಾಗರಾಜ್, ಕೆ.ವಿ. ಮಂಜುನಾಥ್, ಡಿ.ಬಿ. ಧರ್ಮಪ್ಪ, ಸಿ.ಪಿ. ಗೋಪಾಲ್, ಎಸ್.ಪಿ. ಪೊನ್ನಪ್ಪ, ಬಿ.ಜೆ. ದೀಪಕ್, ಪೂರ್ಣಿಮಾ ಗೋಪಾಲ್, ಬಿ. ಶಿವಪ್ಪ, ಅರೆಯೂರು ಜಯಣ್ಣ, ರೂಪಾ ಸತೀಶ್, ಪಿ.ಡಿ. ಮೋಹನ್‌ದಾಸ್, ಶಂಕರನಾರಾಯಣ, ಎಚ್.ಕೆ. ಮಾದಪ್ಪ, ಮಹೇಶ್ ತಿಮ್ಮಯ್ಯ, ಜೀತೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 70ಕ್ಕೂ ಹೆಚ್ಚಿನ ಪಕ್ಷದ ಪ್ರಮುಖರು ಭಾಗವಹಿಸಿದ್ದರು. ಮೂರು ನಿರ್ಣಯಗಳನ್ನು ತೆಗೆದುಕೊಂಡು ಪಕ್ಷದ ರಾಜ್ಯಾಧ್ಯಕ್ಷರಿಗೆ ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ.

ಪಕ್ಷ ವಿರೋಧಿ ಕಾರ್ಯ ಮಾಡಿ, ಕಾರ್ಯಕರ್ತರಿಗೆ ಕಿರುಕುಳ ನೀಡಿ ಪಕ್ಷದಿಂದ ಹೊರಹೋದ ಭರತ್‌ ಕುಮಾರ್‌ ಅವರನ್ನು ಮತ್ತೊಮ್ಮೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ತಪ್ಪಿದಲ್ಲಿ ಪಕ್ಷದ ಹೆಚ್ಚಿನ ನಿಷ್ಠಾವಂತ ಕಾರ್ಯಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗುವುದಾಗಿ ಮುಖಂಡರು ಎಚ್ಚರಿಸಿದ್ದಾರೆ.

* * 

ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ರಾಷ್ಟ್ರೀಯ ಪಕ್ಷಗಳು ಜಿಲ್ಲೆಗೆ ಅನ್ಯಾಯ ಮಾಡಿದ್ದರೂ ಅವರೊಂದಿಗೆ ಕೈಜೋಡಿಸಲು ಹೊರಟಿರುವ ಮುಖಂಡರಿಗೆ ಶುಭವಾಗಲಿ.

– ಸಂಕೇತ್‌ ಪೂವಯ್ಯ, ಅಧ್ಯಕ್ಷ, ಜೆಡಿಎಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry