ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೀರು ಈಗ ಪಕ್ಷಿಗಳ ತವರು!

Last Updated 12 ಜನವರಿ 2018, 8:55 IST
ಅಕ್ಷರ ಗಾತ್ರ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಈಗ ದೇಶ–ವಿದೇಶದ ಬಾನಾಡಿಗಳ ಕಲರವ. ಕೃಷ್ಣೆಯ ಒಡಲು ಹಾಗೂ ಹಿನ್ನೀರು ಖಾಲಿಯಾಗಿ ಮೈದಳೆದ ಕೆಸರಿನಲ್ಲಿ ಸಾವಿರಾರು ಪಕ್ಷಿಗಳು ಹಿಂಡು ಹಿಂಡಾಗಿ ಧ್ಯಾನಸ್ಥವಾಗುತ್ತಿವೆ.

ಬೀಳಗಿ ತಾಲ್ಲೂಕು ಹೆರಕಲ್, ಗಲಗಲಿ, ಕದಂಪುರ, ಚಿಕ್ಕಸಂಗಮ, ಹಳೆಯ ಅನಗವಾಡಿಯಿಂದ ಕುಂದರಗಿ ರಸ್ತೆ, ಸಾಲಗುಂದಿ, ನೆಕ್ಕರಗುಂದಿ, ಸಿಂದಗಿ, ಕೊರ್ತಿ, ಕೊಲ್ಹಾರ, ಬಾಗಲಕೋಟೆ ತಾಲ್ಲೂಕು ಮಲ್ಲಾಪುರ ಗುಡ್ಡ, ಬೆನ್ನೂರು, ರಾಂಪುರ, ಅಚನೂರು, ಸೀತಿಮನಿ ಸುತ್ತಲಿನ ಹಿನ್ನೀರ ಪ್ರದೇಶ ಈಗ ಪಕ್ಷಿ ಕಾಶಿಯಾಗಿ ಬದಲಾಗಿದೆ. ಚಿಲಿಪಿಲಿ ನಿನಾದದೊಂದಿಗೆ ಭಿನ್ನ ಸ್ವರ ಹೊರಹೊಮ್ಮಿಸುತ್ತಾ ಹಿಂಡು ಹಿಂಡಾಗಿ ಹಾರುತ್ತಾ ದೇವರ ರುಜುವನ್ನು ಸಾಕ್ಷೀಕರಿಸಿವೆ.

ಮಧ್ಯ ಏಷ್ಯಾದ ಮಂಗೋಲಿಯಾ ಭಾಗದಿಂದ ಬಂದ ಪಟ್ಟೆ ತಲೆ ಹೆಬ್ಬಾತು (ಬಾರ್‌ ಹೆಡೆಡ್‌ ಗೂಸ್), ಉತ್ತರ ಭಾರತದಿಂದ ಬರುವ ಬ್ಲ್ಯಾಕ್‌ಟೇಲ್‌ ಗಾಡ್‌ವಿಟ್ಸ್‌, ಗ್ಲಾಸಿಐಬಿಸ್‌, ಸ್ಥಳೀಯ ಬಾಯ್ಕಳಕ (ಓಪನ್ ಬಿಲ್ಡ್ ಸ್ಟ್ರೋಕ್), ದಾಸ ಕೊಕ್ಕರೆ (ಪೇಯಿಂಟೆಡ್ ಸ್ಟ್ರೋಕ್), ಬಿಳಿ ಕುತ್ತಿಗೆ ನೀರು ಕಾಗೆ (ಗ್ರೇಟ್ ಇಂಡಿಯನ್ ಕಾರ್ಮೊರಾಂಟ್), ಕೊಕ್ಕರೆ (ಲಿಟಲ್ ಎಗ್ರಟ್), ಚಮಚದ ಕೊಕ್ಕಿನ ಕೊಕ್ಕರೆ (ಸ್ಪೂನ್ ಬಿಲ್), ಜಾನುವಾರು ಬೆಳ್ಳಕ್ಕಿ (ಕ್ಯಾಟಲ್ ಎಗ್ರೆಟ್), ಬೂದು ಕೊಕ್ಕರೆ (ಗ್ರೇ ಹೆರಾನ್), ಪರ್ಪಲ್‌ ಹೆರಾನ್‌, ಹಸಿರು ಹಾಗೂ ಕೆಸರುಗುಪ್ಪಿ (ಲಿಟಲ್ ಗ್ರಿನ್ ಬಿಟರೆನ್–ಚೆಸ್ಟ್‌ನಟ್ ಬಿಟರೆನ್), ನಾಮಗೋರೆ (ಬ್ಲ್ಯೂವಿಂಗ್ಡ್ ಟೀಲ್), ನೀರು ಗೊರವ (ಬ್ಲ್ಯಾಕ್‌ ವಿಂಗ್ಡ್ ಸ್ಟಿಲ್ಟ್), ಹೆಗ್ಗೊರವ (ಕರ್ಲ್ಯೂ), ಮೀನುಗುಟುರ (ಇಂಡಿಯನ್ ವಿಸ್ಕರ್ಡ್ ಟೆರೆನ್), ಮಿಂಚುಳ್ಳಿ, ನೀಲಿ ಮಿಂಚುಳ್ಳಿ (ಸ್ಮಾಲ್ ಬ್ಲ್ಯೂ ಕಿಂಗ್‌ ಫಿಶರ್), ಜೋಳಿಗೆ ಕೊಕ್ಕ (ಹೆಚ್ಚರ್ಲೆ), ಬ್ರಾಹ್ಮಿಣಿ ಡಕ್, ಪಿಂಟೆಲ್ ಡಕ್, ಕಾಮನ್‌ಕೂಟ್ ಹೀಗೆ ವೈವಿಧ್ಯಮಯ ಪಕ್ಷಿ ಬಳಗ ಕಂಡು ಸಂಭ್ರಮಿಸಬಹುದು.

ಸಂತಾನೋತ್ಪತ್ತಿ ಸಮಯ: ನವೆಂಬರ್‌ನಿಂದ ಮಾರ್ಚ್ ಬಹುತೇಕ ಪಕ್ಷಿಗಳ ಸಂತಾನೋತ್ಪತ್ತಿಯ ಸಮಯ. ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು, ಗೊದ ಮೊಟ್ಟೆಗಳು, ಕಪ್ಪೆ, ಶಂಕದ ಹುಳು, ಏಡಿ, ಚಿಕ್ಕಮೀನು, ಜಲಸಸ್ಯಗಳು, ಕೆಸರಿನಲ್ಲಿನ ಹುಳು–ಹುಪ್ಪಟೆ ಪಕ್ಷಿಗಳ ಆಹಾರದ ಅಗತ್ಯ ಪೂರೈಸುತ್ತವೆ. ಜೊತೆಗೆ ಚಳಿ–ಬಿಸಿಲಿನ ಜುಗಲ್‌ಬಂದಿ ಹೆರಿಗೆ–ಬಾಣಂತನಕ್ಕೆ ಪ್ರಶಸ್ತವಾಗುವುದರಿಂದ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಮಾರ್ಚ್‌ ನಂತರ ಬಿಸಿಲು ಹೆಚ್ಚುವುದರಿಂದ ಬಳಗದೊಂದಿಗೆ ಮತ್ತೆ ಮೂಲ ಸ್ಥಳಕ್ಕೆ ಹಾರಿಹೋಗುತ್ತವೆ.

ಹಿಮಾಲಯ ದಾಟಿ ಬರುವ ಹೆಬ್ಬಾತು!

ಮಧ್ಯ ಏಷ್ಯಾದ ಟಿಬೆಟ್‌, ಕಜಕಿಸ್ತಾನ, ಮಂಗೋಲಿಯಾ, ರಷ್ಯಾ ಭಾಗದಲ್ಲಿ ಕಾಣಸಿಗುವ ಪಟ್ಟೆತಲೆ ಹೆಬ್ಬಾತು ಹಿಮಾಲಯ ಪರ್ವತ ಶ್ರೇಣಿಯನ್ನು ದಾಟಿ ಭಾರತಕ್ಕೆ ಬರುತ್ತವೆ. ಅತಿ ಎತ್ತರದಲ್ಲಿ ಹಾರಾಟ ಮಾಡುವ ಪಕ್ಷಿಗಳಲ್ಲೊಂದಾಗಿರುವ ಪಟ್ಟೆತಲೆ ಹೆಬ್ಬಾತು, ವಿಶ್ವದ ಐದನೇ ದೊಡ್ಡ ಪರ್ವತ ಎನಿಸಿದ ಟಿಬೆಟ್‌ನ ಮೌಂಟ್‌ ಮಕಾಲು (8481 ಮೀಟರ್) ನೆತ್ತಿಯ ಮೇಲೆ ಹಾರಿದ ಶ್ರೇಯ ಹೊಂದಿದೆ. ನದಿ ದಡದ ಮಣ್ಣಿನಲ್ಲಿಯೇ ಗೂಡುಕಟ್ಟಿ ಒಮ್ಮೆಗೆ 3ರಿಂದ 8 ಮೊಟ್ಟೆ ಇಡುವ ಹೆಬ್ಬಾತು, ಸತತ ಏಳು ತಾಸು ನಿರಂತರವಾಗಿ ಹಾರಾಟ ನಡೆಸುವುದು ಜಿಪಿಎಸ್ ಹಾಗೂ ಉಪಗ್ರಹ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಪೂರ್ವ ಆಫ್ರಿಕಾದ ಓರಿಯಂಟಲ್‌ ಪ್ರೊಟಿನ್ಕೊಲ್‌ (Oriental protincole) ಕೃಷ್ಣೆಯ ಹಿನ್ನೀರಿಗೆ ಬಹು ದೂರದಿಂದ ಬರುವ ಅತಿಥಿ. ಶತ್ರುಗಳನ್ನು ಬೆದರಿಸಲು ಗರಿ ಬಿಚ್ಚಿ ದಾಳಿ ಮಾಡುವಂತೆ ಬೆದರಿಕೆ ಹಾಕುವುದನ್ನು ನೋಡುವುದೇ ವಿಶಿಷ್ಟ. ಕಳೆದ ಬಾರಿ ಪ್ರೊಟಿನ್ಕೊಲ್ ಇಲ್ಲಿಯೇ ಸಂತಾನೋತ್ಪತ್ತಿ ಮಾಡಿದೆ ಎಂದು ಬೀಳಗಿ ವಲಯ ಅರಣ್ಯಾಧಿಕಾರಿ ಹನುಮಂತ ದೋಣಿ ಹೇಳುತ್ತಾರೆ.

ಇನ್ನೂ ಬಾರದ ಫ್ಲೆಮಿಂಗೊ..

ಕೃಷ್ಣೆಯ ಹಿನ್ನೀರಿನಲ್ಲಿ ಪ್ರತಿ ವರ್ಷಾಂತ್ಯದಲ್ಲಿ ಕಾಣಸಿಗುತ್ತಿದ್ದ ಯೂರೋಪ್‌ ಖಂಡದ ಆಕರ್ಷಕ ಅತಿಥಿ ಫ್ಲೆಮಿಂಗೊ ಈ ಬಾರಿ ಜನವರಿ 10 ಮುಗಿದರೂ ಕಾಣಿಸಿಕೊಂಡಿಲ್ಲ. ಕಳೆದ ವರ್ಷ ನವೆಂಬರ್ ಅಂತ್ಯಕ್ಕೆ ಹೆರಕಲ್‌ನಲ್ಲಿ ಕಾಣಿಸಿತ್ತು.

ಅದು ಸಂತಾನೋತ್ಪತ್ತಿಗಾಗಿಯೇ ಇಲ್ಲಿಗೆ ಬರುವುದು ವಿಶೇಷ. ಕಳೆದ 10 ವರ್ಷಗಳಿಂದ ಹಿನ್ನೀರಿನಲ್ಲಿ ಫ್ಲೆಮಿಂಗೊ ನೋಡುತ್ತಿದ್ದೇನೆ. ಕೆಲವೊಮ್ಮೆ ಮೇ ಅಂತ್ಯ ಇಲ್ಲವೇ ಜೂನ್‌ವರೆಗೂ ಇಲ್ಲಿಯೇ ಇರುತ್ತವೆ. ಈ ಬಾರಿ ತಡವಾಗಿರಬಹುದು. ಇನ್ನೂ ಬರಲು ಸಮಯವಿದೆ ಎಂದು ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕರೂ ಆದ ಯಡಹಳ್ಳಿಯ ಡಾ.ಎಂ.ಆರ್.ದೇಸಾಯಿ ಹೇಳುತ್ತಾರೆ.

ಹೆರಕಲ್‌: ಕಾವಲುಗಾರರ ನೇಮಕ..

ಹಿನ್ನೀರಿಗೆ ಬರುವ ಪಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬೇಟೆ ತಡೆಯಲು ಹಾಗೂ ಮೀನುಗಾರರ ಬಲೆಯಿಂದ ರಕ್ಷಿಸಲು ಅರಣ್ಯ ಇಲಾಖೆ ಈ ಬಾರಿ ಹೆರಕಲ್‌ನಲ್ಲಿ ಇಬ್ಬರು ತಾತ್ಕಾಲಿಕ ಕಾವಲುಗಾರರನ್ನು ನೇಮಕ ಮಾಡಿದೆ. ಹಕ್ಕಿಗಳು ಬಾಣಂತನ ಮುಗಿಸಿ ಮರಳುವವರೆಗೂ ಅವರು ಹಗಲು–ರಾತ್ರಿ ಕಾಯುವ ಕೆಲಸ ಮಾಡಲಿದ್ದಾರೆ.

ಅವರಿಗೆ ಮಾಸಿಕ ₹ 5 ಸಾವಿರ ಸಂಬಳ ನಿಗದಿಪಡಿಸಲಾಗಿದೆ. ಕೃಷ್ಣೆ ಹಿನ್ನೀರಿನ ಪಕ್ಷಿಗಳ ಸಮೀಕ್ಷೆ ನಡೆಸುವಂತೆ ಹಾಗೂ ಅವುಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಡಾ.ಎಂ.ಆರ್.ದೇಸಾಯಿ ಸಲಹೆ ನೀಡಿದ್ದಾರೆ. ಅದನ್ನು ಪರಿಗಣಿಸಿ ಈಗ ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಪಕ್ಷಿಗಳ ರಕ್ಷಣೆಗೆ ಬೋಟ್‌ ವ್ಯವಸ್ಥೆ ಮಾಡುವಂತೆ ಕೂಡ ತಿಳಿಸಿದ್ದಾರೆ. ಇಲಾಖೆಗೂ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

* * 

ಹಿನ್ನೀರು ಪ್ರದೇಶ ಅರಣ್ಯ ಇಲಾಖೆಗೆ ಸೇರದ ಕಾರಣ ಪಕ್ಷಿಧಾಮ ಘೋಷಣೆ ಪ್ರಸ್ತಾವ ಕೈ ಬಿಡಲಾಗಿದೆ. ಆದರೆ ಇಲ್ಲಿಗೆ ಬರುವ ದೇಶ–ವಿದೇಶದ ಹಕ್ಕಿಗಳ ಸಂರಕ್ಷಣೆ ಕಾರ್ಯಕ್ಕೆ ಬದ್ಧವಾಗಿದ್ದೇವೆ
ಬಸವರಾಜಯ್ಯ ಡಿಎಫ್ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT