ಜಿಗಣಿ ಪುರಸಭೆ: ಕಸ ವಿಲೇವಾರಿಗೆ ಆಕ್ರೋಶ

7

ಜಿಗಣಿ ಪುರಸಭೆ: ಕಸ ವಿಲೇವಾರಿಗೆ ಆಕ್ರೋಶ

Published:
Updated:
ಜಿಗಣಿ ಪುರಸಭೆ: ಕಸ ವಿಲೇವಾರಿಗೆ ಆಕ್ರೋಶ

ಆನೇಕಲ್‌: ಜಿಗಣಿ ಪುರಸಭೆಯ ಕಸ ಹಾಗೂ ಜಿಗಣಿ ಸುತ್ತಮುತ್ತಲಿನ ಗ್ರಾನೈಟ್‌ ಕಾರ್ಖಾನೆಗಳ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಮ್ಮನದೊಡ್ಡಿ ಹಾಗೂ ಪೂಜಗನಪಾಳ್ಯದ ಬಳಿ ತಂದು ಎಸೆಯುವ ಮೂಲಕ ತಿಪ್ಪೆಗುಂಡಿಯಾಗಿ ಮಾಡಲಾಗಿದೆ ಎಂದು ಅಧ್ಯಕ್ಷ ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಮಹಂತಲಿಂಗಾಪುರದ ಬಳಿ ಕಸದ ಲಾರಿಗಳು ಹಾಗೂ ಗ್ರಾನೈಟ್ ತ್ಯಾಜ್ಯ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ಮಾತನಾಡಿದರು. ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಲಭ್ಯವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಯಾವುದೇ ಅನುಮತಿ ಪಡೆಯದೇ ಮನಸೋ ಇಚ್ಛೆ ಜಿಗಣಿಯಿಂದ ಕಸದ ಲಾರಿಗಳನ್ನು ಯಲ್ಲಮ್ಮನದೊಡ್ಡಿಯ ಸರ್ವೇ ನಂ.47, 48ರ ಗೋಮಾಳ ಜಾಗದಲ್ಲಿ ತಂದು ಹಾಕಲಾಗುತ್ತಿದೆ ಎಂದರು.

ಪ್ಲಾಸ್ಟಿಕ್‌ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಆರೋಗ್ಯದ ಸಮಸ್ಯೆಯಿಂದ ಜನರು ಸದಾ ಬಳಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಸಿ ಕಸ, ಒಣ ಕಸವನ್ನು ಪ್ರತ್ಯೇಕಗೊಳಿಸಿ ಆಧುನಿಕ ವಿಧಾನಗಳನ್ನು ಅನುಸರಿಸಿ ಕಸವನ್ನು ವಿಲೇವಾರಿ ಮಾಡಬೇಕು ಎಂದರು.

ಪುರಸಭೆಯು ಸ್ಥಳವನ್ನು ಗುರುತಿಸಿ ಸುತ್ತಲೂ ಕಾಂಪೌಂಡ್‌ ಹಾಕಿ ಹೊರಭಾಗಕ್ಕೆ ಕಸದ ಸಮಸ್ಯೆಯಾಗದಂತೆ ಹಾಗೂ ವಾತಾವರಣ ಹಾಳಾಗದಂತೆ ಕಸವನ್ನು ವಿಲೇವಾರಿ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಗಣಿ ಪುರಸಭೆಯು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಕಸದ ರಾಶಿಯನ್ನು ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತಂದು ಎಸೆಯುವ ಮೂಲಕ ತಿಪ್ಪೆಗುಂಡಿ ಮಾಡಿಕೊಂಡಿದೆ ಎಂದರು.

ಸಮೀಪದಲ್ಲಿಯೇ ಅಂತರರಾಷ್ಟ್ರೀಯ ಖ್ಯಾತಿ ಎಸ್‌–ವ್ಯಾಸ ಯೋಗ ವಿಶ್ವವಿದ್ಯಾಲಯವಿದೆ. ಈ ಹಿಂದೆ ಇಲ್ಲಿನ ಒಳ್ಳೆಯ ವಾತಾವರಣ, ಬೆಟ್ಟಗುಡ್ಡಗಳ ಸುಂದರ ಪ್ರದೇಶವಿದ್ದರಿಂದ ವಾಯುವಿಹಾರಕ್ಕಾಗಿ ನೂರಾರು ಮಂದಿ ಪ್ರಶಾಂತಿ ಕುಟೀರದ ಶಿಬಿರಾರ್ಥಿಗಳು ಬರುತ್ತಿದ್ದರು ಎಂದರು.

ಇತ್ತೀಚಿಗೆ ಕಸ ಹಾಗೂ ಗಬ್ಬುನಾರುವ ವಾತಾವರಣದಿಂದಾಗಿ ಜನರು ಪರದಾಡುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಅಸ್ತಮ, ಜ್ವರ ಮತ್ತಿತರ ರೋಗಗಳಿಂದ ನರಳುತ್ತಿದ್ದಾರೆ ಎಂದು ಆರೋಪಿಸಿದರು. ಜಿಗಣಿಯು ಗ್ರಾನೈಟ್ ನಗರಿ ಎಂದು ಪ್ರಸಿದ್ಧಿ ಪಡೆದಿದೆ. ಸುತ್ತಮುತ್ತಲು ನೂರಾರು ಗ್ರಾನೈಟ್ ಕಂಪನಿಗಳಿವೆ. ಇಲ್ಲಿಯ ತ್ಯಾಜ್ಯವನ್ನು ಸಹ ಯಲ್ಲಮ್ಮನದೊಡ್ಡಿ ಭಾಗದಲ್ಲಿ ತಂದು ಹಾಕುತ್ತಿದ್ದಾರೆ ಎಂದರು.

30–40 ಅಡಿ ಆಳದ ಗುಂಡಿಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಇದು ದ್ರವ ರೂಪದ ತ್ಯಾಜ್ಯವಾಗಿದ್ದು ಗೊತ್ತಿಲ್ಲದೇ ಹೆಜ್ಜೆ ಇಟ್ಟರೆ ಹಳ್ಳದಲ್ಲಿ ಬೀಳಬೇಕಾಗುತ್ತದೆ ಎಂದರು. ಇತ್ತೀಚಿಗೆ ಈ ಭಾಗದ ಎರಡು ಹಸುಗಳು ಗುಂಡಿಯಲ್ಲಿ ಬಿದ್ದು ಸತ್ತಿವೆ. ಲಾರಿಗಳ ನಿರಂತರ ಓಡಾಟದಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ. ರಸ್ತೆ ಹಾಳಾಗಿದೆ ಎಂದರು.

ಎಲ್ಲಾ ಸಮಸ್ಯೆಗಳ ಬಗ್ಗೆ ಸಂಬಂಧಿಸಿದವರು ಕ್ರಮ ಕೈಗೊಂಡು ಕಸ ಹಾಗೂ ಗ್ರಾನೈಟ್ ತ್ಯಾಜ್ಯ ವಿಲೇವಾರಿ ಸಂಬಂಧ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಗಣಿ ಪುರಸಭಾ ಅಧ್ಯಕ್ಷೆ ಮುನಿರತ್ನಮ್ಮ ಶಿವಶಂಕರ್ ಹಾಗೂ ಉಪಾಧ್ಯಕ್ಷ ನಾಗೇಶ್‌ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಕಸ ವಿಲೇವಾರಿಗೆ ಸ್ಥಳ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.

ಕಸ ವಿಲೇವಾರಿಗೆ ಜಿಲ್ಲಾಧಿಕಾರಿಗಳು 15 ದಿನಗಳಲ್ಲಿ ಸ್ಥಳವನ್ನು ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಮಂಜೂರಾತಿ ನಂತರ ವೈಜ್ಞಾನಿಕ ವಿಧಾನದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ಥಳೀಯರು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಜಮೀನು ಮಂಜೂರಾದ ನಂತರ ವ್ಯವಸ್ಥಿತವಾಗಿ ಕಸ ವಿಲೇವಾರಿ ಮಾಡುವಂತೆ ಒತ್ತಾಯಿಸಿದರು.

ಯಾವುದೇ ಕಾರಣಕ್ಕೂ ಕಸದ ಲಾರಿಗಳನ್ನು ಗ್ರಾಮಗಳತ್ತ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜಿಗಣಿ ಪೊಲೀಸ್ ಸರ್ಕಲ್ ಇನ್‌ ಸ್ಪೆಕ್ಟರ್‌ ಸಿದ್ದೇಗೌಡ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪಿಲ್ಲಪ್ಪ, ಶಾಮಣ್ಣ, ಅಬ್ಬಯ್ಯ, ಮಹದೇವ್, ಮುಖಂಡರಾದ ಗುರಪ್ಪ, ಗುಂಡಪ್ಪ, ನಾರಾಯಣಸ್ವಾಮಿ, ಅಶ್ವಥಪ್ಪ, ಮುನಿರಾಜು, ನರೇಂದ್ರಬಾಬು, ಜಿಗಣಿ ಪುರಸಭಾ ಸದಸ್ಯ ಬಾಬು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry