ಕನ್ನಡದ ಕಂಪು ಪಸರಿಸಿದ ಗೋಷ್ಠಿಗಳು

7

ಕನ್ನಡದ ಕಂಪು ಪಸರಿಸಿದ ಗೋಷ್ಠಿಗಳು

Published:
Updated:
ಕನ್ನಡದ ಕಂಪು ಪಸರಿಸಿದ ಗೋಷ್ಠಿಗಳು

ಖಾನಾಪುರ: ತಾಲ್ಲೂಕಿನ ದೇವಲತ್ತಿ ಗ್ರಾಮದ ಜೀವನದಿ ಮಲಪ್ರಭೆ ವೇದಿಕೆಯಲ್ಲಿ ಬುಧವಾರ ಸಂಜೆ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕವಿ ಗೋಷ್ಠಿ ಮತ್ತು ವಿಚಾರಗೋಷ್ಠಿಗಳು ಕನ್ನಡದ ಕಂಪು ಪಸರಿಸುವಲ್ಲಿ ಯಶಸ್ವಿಯಾದವು.

ಒಟ್ಟು 17 ಕವಿಗಳು ಕವನಗಳನ್ನು ಓದಿದರು. ಭಾಗವಹಿಸಿದ್ದ ವಿವಿಧ ಕ್ಷೇತ್ರಗಳ ಬಗ್ಗೆ ಪರಿಣಿತರು ದೇಹದಾನ, ಕನ್ನಡ ನೆಲ ಜಲ ಸಂರಕ್ಷಣೆ, ಕನ್ನಡ ಸಾಹಿತ್ಯ ಮತ್ತು ಮಹಿಳೆ, ಕೃಷಿ ಹಾಗೂ ಅರಣ್ಯ ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು.

ಶಬಾನಾ ಅಣ್ಣೀಗೇರಿ, ಆರ್.ಬಿ. ಹುಣಶೀಕಟ್ಟಿ ಎಸ್.ವಿ ಭಜಂತ್ರಿ, ಸರೋಜಾ ತಿಗಡೊಳ್ಳಿ, ಗಿರಿಜಾ ಬಿಳಿಮರಿ, ಶ್ರೀಧರ ಗಣಾಚಾರಿ, ಬಸವರಾಜ ಮಾದಾರ, ರಮೇಶ ಶಹಾಪುರ, ಕಿರಣ ಗಣಾಚಾರಿ, ಪ್ರಭು ಹಿರೇಮಠ, ಶಂಕರ ಗಣಾಚಾರಿ, ಶಿವಾನಂದ ಮಾವಿನಕೊಪ್ಪ, ವಿಠ್ಠಲ ಅಸೋದೆ, ಬಿ.ಕೆ. ಹೊಸೂರ ದೇವಲತ್ತಿ, ಶಿವಾನಂದ ಹಿರೇಮಠ, ಉಮಾ ಅಂಗಡಿ ಕವಿತೆ ಪ್ರಸ್ತುತಪಡಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರಾಧ್ಯಾಪಕಿ ಹೇಮಾ ಸೋನೊಳಿ, ‘ಕವಿತೆಗಳು ಗುಣಮಟ್ಟದಿಂದ ಕೂಡಿರಬೇಕು. ಅವುಗಳ ಭಾವಾರ್ಥ ಜನತೆಯನ್ನು ಮಗ್ನರನ್ನಾಗಿಸಿ ತನ್ನತ್ತ ಸೆಳೆಯುವಂತಾಗಬೇಕು’ ಎಂದರು.

ಆಶಯ ಭಾಷಣ ಮಾಡಿದ ಕ.ಸಾ.ಪ. ಗೌರವಾಧ್ಯಕ್ಷ ಈಶ್ವರ ಸಂಪಗಾವಿ, ‘ಕನ್ನಡನಾಡಿಗೆ ನಮ್ಮ ದೇಶದ ಯಾವ ರಾಜ್ಯಕ್ಕೂ ಇರದ ಇತಿಹಾಸ ಮತ್ತು ಪರಂಪರೆ ಇದೆ. ಸಂಗೀತ ಕ್ಷೇತ್ರದಲ್ಲಿ ಕನ್ನಡ ಭಾಷೆ ತನ್ನದೇ ಕೊಡುಗೆ ನೀಡಿದೆ. ನಮ್ಮ ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿ ವಿಶಿಷ್ಠವಾದುದು’ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕ ಕುಮಾರ ಕಡೇಮನಿಯವರ ಗಾನಸುಧೆಯ ನಡುವೆ ಹಿರೇಮುನವಳ್ಳಿ ಪ್ರೌಢಶಾಲೆ ಕಲಾ ಶಿಕ್ಷಕ ಡಿ.ಬಿ. ಮೆಳವಂಕಿ ಕುಂಚದಲ್ಲಿ ಮೂಡಿಬಂದ ದೃಶ್ಯಕಾವ್ಯ ವಿಶೇಷವಾಗಿತ್ತು.

ಐದು ನಿಮಿಷದ ಅವಧಿಯಲ್ಲಿ ಕಲಾವಿದ ಮೆಳವಂಕಿ ಅಣ್ಣ ಬಸವಣ್ಣನ ಚಿತ್ರ ಬಿಡಿಸುವ ಮೂಲಕ ಕಾವ್ಯಕುಂಚಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಲ್ಮೇಶ ಕಾಪೋಲಿ ಸ್ವಾಗತಿಸಿದರು. ಬಿ.ಆರ್. ಕಾಳಚರಂತಿಮಠ ಸ್ವಾಗತಿಸಿದರು. ಬಿ.ಎನ್, ಬನೋಶಿ ವಂದಿಸಿದರು.

ದೇಹದಾನದ ಬಗ್ಗೆ ಉಪನ್ಯಾಸ ನೀಡಿದ ಬೆಳಗಾವಿಯ ಬಿ.ಎಂ. ಕಂಕನವಾಡಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾಂತೇಶ ರಾಮಣ್ಣವರ, ‘ಇದ್ದಾಗ ಅಂಗಾಂಗ ಹಾಗೂ ರಕ್ತದಾನ, ಮರಣಾನಂತರ ದೇಹದಾನ ಮಾಡಿದರೆ ಸಾರ್ಥಕವಾಗುತ್ತದೆ. ದೇಹದಾನದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉಪಕಾರ ಮಾಡಿದಂತಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ರಂಜಾನ್ ದರ್ಗಾ, ‘ಹಳ್ಳಿಗಳಲ್ಲಿ ಇಂದಿಗೂ ನಮ್ಮ ಪರಂಪರೆ, ಸಂಸ್ಕೃತಿ ಕಾಣಬಹುದು. ಸಾಹಿತ್ಯ ಕ್ಷೇತ್ರದ ಬಹುತೇಕ ದಿಗ್ಗಜರು ಹಳ್ಳಿಗಳಿಂದಲೇ ಬಂದವರಾಗಿದ್ದಾರೆ. ಹಳ್ಳಿಗಳಲ್ಲಿ ಕನ್ನಡದ ಕಂಪು ಪಸರಿಸುವ ಕೆಲಸ ನಡೆಯಬೇಕು. ಹಳ್ಳಿಗಳಲ್ಲಿ ಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ಒದಗಿಸಬೇಕು’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಪಾತ್ರ ಎಂಬ ವಿಷಯ ಬಗ್ಗೆ ಶಿಕ್ಷಕಿ ಆರ್.ಸಿ. ಗುರ್ಲಹೊಸೂರ ಮಾತನಾಡಿದರು. ದೇವಲತ್ತಿ ಪಿಡಿಒ ಪ್ರಭಾಕರ ಭಟ್ ಆಶಯ ನುಡಿಗಳನ್ನಾಡಿದರು. ಎ.ಎ. ಮುನವಳ್ಳಿ ಸ್ವಾಗತಿಸಿದರು. ವಿ.ಕೆ. ಪೂಜಾರ ನಿರೂಪಿಸಿದರು. ಅಶೋಕ ಜಂಗಳಿ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry