ಚಿಂತಾಮಣಿ: ಕಮಲ ಪಡೆಯಲ್ಲಿ ಹೊಸ ‘ಚೈತನ್ಯ’

7

ಚಿಂತಾಮಣಿ: ಕಮಲ ಪಡೆಯಲ್ಲಿ ಹೊಸ ‘ಚೈತನ್ಯ’

Published:
Updated:
ಚಿಂತಾಮಣಿ: ಕಮಲ ಪಡೆಯಲ್ಲಿ ಹೊಸ ‘ಚೈತನ್ಯ’

ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿದ್ದ ಮುಖಂಡರ ನಡುವಿನ ಗುಂಪುಗಾರಿಕೆಗೆ ಇತ್ತೀಚೆಗೆ ವರಿಷ್ಠರು ತೇಪೆ ಹಾಕಿದ್ದು ಸದ್ಯ ಎಲ್ಲರೂ ಒಟ್ಟಾಗಿದ್ದಾರೆ ಎನ್ನಲಾಗಿದೆ. ಆದರೂ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಮುಖಂಡರ ನಡುವೆ ಬಿರುಸಿನ ಕಸರತ್ತು ನಡೆಯುತ್ತಿದೆ.

ಈಗಾಗಲೇ ಪಕ್ಷದ ಮುಖಂಡರಾದ ಸತ್ಯನಾರಾಯಣ ಮಹೇಶ್‌, ನಾ.ಶಂಕರ್‌ ಹಾಗೂ ಅರುಣಬಾಬು ಟಿಕೆಟ್‌ಗಾಗಿ ನಡೆಸುತ್ತಿರುವ ಪೈಪೋಟಿ ಎಲ್ಲರಿಗೂ ತಿಳಿದಿದೆ. ಎಲ್ಲರೂ ತಮ್ಮ ಬೆಂಬಲಿಗರ ಜೊತೆಗೆ ತಮ್ಮ ಪ್ರಾಬಲ್ಯ ಮತ್ತು ಸಾಮರ್ಥ್ಯ ಪ್ರದರ್ಶಿಸುವ ಪ್ರಯತ್ನ ಮಾಡಿದ್ದಾರೆ. ಟಿಕೆಟ್‌ಗಾಗಿ ತಮ್ಮದೇ ಮೂಲಗಳ ಮೂಲಕ ವರಿಷ್ಠರ ಮೇಲೆ ಪ್ರಭಾವ ಬೀರುವ ಕೆಲಸವನ್ನೂ ಮಾಡಿದ್ದಾರೆ ಎನ್ನಲಾಗಿದೆ.

ಶಿಸ್ತಿನ ಪಕ್ಷ ಎಂದೇ ಹೇಳುವ ಬಿಜೆಪಿಯಲ್ಲಿ 4 ವರ್ಷಗಳಿಂದ ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳು ಜೋರಾಗಿಯೇ ಇದ್ದವು. ಒಂದೆಡೆ ಸತ್ಯನಾರಾಯಣ ಮಹೇಶ್‌, ಇನ್ನೊಂದೆಡೆ ಬ್ಯಾಲಹಳ್ಳಿ ಆಂಜನೇಯರೆಡ್ಡಿ, ಪ್ರತಾಪ್‌, ಮಂಜುನಾಥ್‌, ಮತ್ತೊಂದೆಡೆ ಅರುಣ ಬಾಬು ಗುಂಪುಗಳು ಇದ್ದರೆ, ನಾ.ಶಂಕರ್‌, ಬಿ.ಎನ್‌.ಶ್ರೀನಿವಾಸಪ್ಪ ಸೇರಿದಂತೆ ಕೆಲ ನಾಯಕರು ತಟಸ್ಥ ನೀತಿಗೆ ಮೊರೆ ಹೋಗಿದ್ದರು.

ಈವರೆಗೆ ಪ್ರತಿ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು ಬಂದಿರುವ ಬಿಜೆಪಿಯಲ್ಲಿ ಈ ಬಾರಿ ಮೋದಿ ಅಲೆಯಿಂದಾಗಿ ಪ್ರಬಲವಾಗಿ ಸವಾಲು ಒಡ್ಡುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ. ಪಕ್ಷದಲ್ಲಿರುವ ನಾಯಕರಲ್ಲೇ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಸ್ಥಳೀಯ ಕಾರ್ಯಕರ್ತರು, ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

‘ಟಿಕೆಟ್‌ ಕುರಿತು ಇನ್ನೂ ಯಾವ ಚರ್ಚೆ, ನಿರ್ಧಾರಗಳು ಆಗಿಲ್ಲ. ಪರಿವರ್ತನಾ ಯಾತ್ರೆ ಮುಗಿದ ಬಳಿಕ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ, ಕಾರ್ಯಕರ್ತರ ಅಭಿಪ್ರಾಯ ಪಡೆದು ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಯಾರೇ ಅಭ್ಯರ್ಥಿಯಾದರೂ ಪ್ರಾಮಾಣಿಕವಾಗಿ ದುಡಿಯುತ್ತೇವೆ’ ಎನ್ನುತ್ತಾರೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯರೆಡ್ಡಿ.

ಕ್ಷೇತ್ರದ ರಾಜಕೀಯ ಇತಿಹಾಸದ ಮೆಲುಕು ಹಾಕಿದರೆ, ಇಲ್ಲಿ 2004ರಲ್ಲಿ ಜನತಾದಳದ ಕೆ.ಎಂ.ಕೃಷ್ಣಾರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಮಾತ್ರ ಕಮಲ ಪಡೆ ಇಲ್ಲಿ ಬಲಿಷ್ಠವಾಗಿತ್ತು. ನಂತರ ನಡೆದ ಯಾವ ಚುನಾವಣೆಯಲ್ಲೂ ಠೇವಣಿ ಉಳಿಸಿಕೊಂಡಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಇದ್ದಾಗಲೂ ಈ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಿಲ್ಲ. ಹೀಗಾಗಿಯೇ ಪಕ್ಷ ಇವತ್ತು ಮೂರನೇ ಸ್ಥಾನಕ್ಕೆ ಅಂಟಿಕೊಂಡಿದೆ ಎಂದು ಬಿಜೆಪಿಯ ಮುಖಂಡರು ಬೇಸರ ವ್ಯಕ್ತಪಡಿಸುತ್ತಾರೆ.

ಸ್ವಯಂಕೃತ ಅಪರಾಧ

ತಾಲ್ಲೂಕು ವ್ಯವಸಾಯ ಉತ್ಪನ್ನಗಳ ಮಾರುಕಟ್ಟೆ ಸಮಿತಿಯಲ್ಲಿ (ಟಿಎಪಿಸಿಎಂಎಸ್) ಅಧಿಕಾರ ಹಿಡಿದಿದ್ದ ಬಿಜೆಪಿಗೆ ಬೆಳೆಯಲು ಸಾಕಷ್ಟು ಅವಕಾಶಗಳು ಇದ್ದವು. ಆದರೆ ಕೆಲ ನಾಯಕರು ಮಾಡಿದ ಸ್ವಯಂಕೃತ ಅಪರಾಧಗಳಿಂದಾಗಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು. ಜತೆಗೆ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನವನ್ನು ಕಳೆದುಕೊಂಡರು. ಇದರೊಂದಿಗೆ ಬಿಜೆಪಿ ಮೇಲೆ ಜನರು ಇಟ್ಟಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು ಎಂದು ಪಕ್ಷದ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಆರ್‌ಎಸ್‌ಎಸ್‌ ಗರಡಿಯಿಂದ ಬೆಳೆದು, ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿರುವ ಸತ್ಯನಾರಾಯಣ ಮಹೇಶ್‌ ಅವರು ಟಿಕೆಟ್‌ ಆಕಾಂಕ್ಷಿಗಳಲ್ಲಿ ಪ್ರಬಲರಾಗಿದ್ದಾರೆ. ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಇವರು, ಟಿಎಪಿಸಿಎಂಎಸ್‌ನಲ್ಲಿ ಜನತೆ ನೀಡಿದ್ದ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿ ಪಕ್ಷಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎನ್ನುವುದು ಪಕ್ಷದೊಳಗೆ ಇರುವ ಇವರನ್ನು ವಿರೋಧಿಸುವವರು ಹೇಳುತ್ತಾರೆ.

ವೃತ್ತಿಯಿಂದ ವಕೀಲರಾಗಿರುವ ನಾ.ಶಂಕರ್‌ ಸಹ ಪಕ್ಷದ ಎಲ್ಲ ಹಂತಗಳಲ್ಲಿ ಕೆಲಸ ಮಾಡಿದ್ದಾರೆ. ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯಾವುದೇ ಹಗರಣಗಳಲ್ಲಿ ಸಿಲುಕಿಕೊಳ್ಳದೆ ಉತ್ತಮ ಹೆಸರನ್ನು ಹೊಂದಿದ್ದಾರೆ. ಆದರೆ ಚುನಾವಣೆಗೆ ಸಂಪನ್ಮೂಲ ಒದಗಿಸುವಷ್ಟು ಆರ್ಥಿಕವಾಗಿ ಸ್ಥಿತಿವಂತರಲ್ಲ ಎನ್ನಲಾಗಿದೆ.

ಇನ್ನು, ಸಮಾಜಸೇವೆಯ ಹೆಸರಿನಲ್ಲಿ ರಾಜಕೀಯಕ್ಕೆ ಬಂದ ಅರುಣ ಬಾಬು ಆರಂಭದಲ್ಲಿ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಜೆಡಿಎಸ್‌ ಶಾಸಕ ಎಂ.ಕೃಷ್ಣಾರೆಡ್ಡಿಯೊಂದಿಗೆ ಮುನಿಸಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಂದಿನಿಂದಲೂ ಸಕ್ರಿಯವಾಗಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ಇವರದು ಹೊಸಮುಖವಾದ್ದರಿಂದ ಸ್ವಲ್ಪಮಟ್ಟಿಗೆ ತೊಡಕಾಗಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ.

ಮೋದಿ ಹಾಗೂ ಅಮಿತ್‌ ಶಾ ಜೋಡಿಯ ಅಲೆಯಲ್ಲಿ ಗೆಲ್ಲುವ ನಿರೀಕ್ಷೆಯಿಂದ ಉತ್ಸಾಹದಿಂದ ಇರುವ ನಾಯಕರು ಈಗಾಗಲೇ ಪ್ರಚಾರ ನಡೆಸಿದ್ದಾರೆ. ಮತಗಟ್ಟೆ ಸಮಿತಿಗಳನ್ನು ರಚಿಸಿ ಮನೆ–ಮನೆ ಭೇಟಿ ಕಾರ್ಯಕ್ರಮವನ್ನು ಮುಗಿಸಲಾಗಿದೆ. ಟಿಕೆಟ್‌ ಮೇಲೆ ಕಣ್ಣಿಟ್ಟಿರುವವರ ಪೈಕಿ ಯಾರಿಗೆ ಟಿಕೆಟ್‌ ಸಿಗುತ್ತದೋ ಅಥವಾ ಹೈಕಮಾಂಡ್‌ ಹೊರಗಿನ ಅಭ್ಯರ್ಥಿಯನ್ನು ಸೂಚಿಸುತ್ತಾರಾ ಎನ್ನುವ ಗೊಂದಲ ಕಾರ್ಯಕರ್ತರಲ್ಲಿದೆ.

* * 

ಕೇಂದ್ರ ಸರ್ಕಾರದ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಮತಗಟ್ಟೆವಾರು ಸಶಕ್ತೀಕರಣ ಸಮಿತಿ ರಚಿಸಿ ಸಂಘಟನೆ ಮಾಡುತ್ತಿದ್ದೇವೆ

ನಾ.ಶಂಕರ್‌ ಬಿಜೆಪಿ ಮುಖಂಡ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry