ಭದ್ರಾದಿಂದ ನೀರು ಪೂರೈಕೆಗೆ ಕ್ರಮ

6

ಭದ್ರಾದಿಂದ ನೀರು ಪೂರೈಕೆಗೆ ಕ್ರಮ

Published:
Updated:

ಅಜ್ಜಂಪುರ: ಪಂಚಾಯಿತಿ ವ್ಯಾಪ್ತಿಯಲ್ಲಿನ ನೀರಿನ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತ್ಯಭಾಮ ನೀಡಿದ ಭರವಸೆ ಹಿನ್ನೆಲೆಯಲ್ಲಿ ಕುಡ್ಲೂರು ಗ್ರಾಮ ಪಂಚಾಯಿತಿ ಮುಂಭಾಗ ಗ್ರಾಮಸ್ಥರು ನಡೆಯುತ್ತಿದ್ದ ಪ್ರತಿಭಟನೆಯನ್ನು ಗುರುವಾರ ಹಿಂಪಡೆದರು ಹಾಗೂ ಮುಖಂಡ ಶಿವಕುಮಾರ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟರು.

ಈ ಮೊದಲು ಭದ್ರಾದಿಂದ 26 ಹಳ್ಳಿಗಳಿಗೆ ನೀರು ಪೂರೈಸಲು ಸಿದ್ಧವಾಗಿದ್ದ ಯೋಜನೆಯನ್ನು 34 ಹಳ್ಳಿಗಳಿಗೆ ವಿಸ್ತರಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಕುಡ್ಲೂರು ಗ್ರಾಮವನ್ನು ಸೇರಿಸಲಾಗಿದ್ದು, ರಾಜ್ಯಮಟ್ಟದ ಸಮಿತಿ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಕಾಮಗಾರಿ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, 11 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ ಪಂಚಾಯಿತಿ ವ್ಯಾಪ್ತಿಗೆ ಸಮರ್ಪಕ ನೀರು ನೀಡಲಾಗುವುದು ಎಂದು ಸಿಇಒ ಭರವಸೆ ನೀಡಿದರು.

ಇನ್ನು ತಾತ್ಕಾಲಿಕ ಪರಿಹಾರವಾಗಿ ಕುಡ್ಲೂರು, ಕೊರಟೀಕೆರೆ ಗ್ರಾಮಗಳಲ್ಲಿ ತಲಾ 2 ಮತ್ತು ಮುಂಡ್ರೆ ಗ್ರಾಮದಲ್ಲಿ 1 ಕೊಳವೆ ಬಾವಿ ಕೊರೆಯಲು ಅನುಮತಿ ನೀಡಿದರು. ಜತೆಗೆ ವರ್ಗ 1 ಹಾಗೂ 14 ನೇ ಹಣಕಾಸು ಯೋಜನೆಯಲ್ಲಿ ಪಂಚಾಯಿತಿಗೆ ನೀಡಲಾಗಿರುವ ₹ 14 ಲಕ್ಷ ಹಣವನ್ನು ಕುಡಿಯುವ ನೀರು ಪೂರೈಕೆಗೆ ಬಳಸಿಕೊಳ್ಳಲು ನಿರ್ದೇಶಿಸಿದರು. ಜತೆಗೆ ನೀರಿನ ಕೊರತೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಜನಪ್ರತಿನಿಧಿಗಳಿಗೆ ಸೂಚಿಸಿದರು. ನಾಗವಂಗಲ, ಕೊರಟೀಕೆರೆಗೆ ಅಗತ್ಯವಿರುವ ವಿದ್ಯುತ್ ಪರಿವರ್ತಕ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಆದೇಶಿಸಿದರು.

ಕುಡಿಯುವ ನೀರು ಪೂರೈಕೆಗೆ ಬಗ್ಗೆ ಮಾಡುವ ಮನವಿಯನ್ನು ತಾಲ್ಲೂಕು ಪಂಚಾಯಿತಿ ಇಒ ಮೂಲಕ ರವಾನಿಸುವಂತೆ ಪಿಡಿಒಗೆ ತಿಳಿಸಿದ ಅವರು, ಆಸ್ತಿ, ನೀರಿನ ತೆರಿಗೆ ವಸೂಲಾತಿಯಂತಹ ಸ್ಥಳೀಯ ಸಂಪನ್ಮೂಲ ಕ್ರೋಡೀಕರಿಸಿ, ನೀರು ಪೂರೈಕೆಗೆ ಬಳಸಲು ಸೂಚಿಸಿದರು.

ಸರ್ಕಾರ ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಿದೆ. ಪ್ರಸಕ್ತ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಎದುರಾಗುವ ಕುಡಿಯುವ ನೀರಿನ ಭವಣೆ ನೀಗಿಸಲು ₹ 23 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್.ಮಹೇಂದ್ರ, ‘ಕಳೆದ 2010 ರಿಂದ ಗ್ರಾಮಕ್ಕೆ ಶಾಶ್ವತ ನೀರು ಪೂರೈಸುವುದಾಗಿ ಭರವಸೆ ನೀಡುತ್ತಾ ಬಂದಿರುವ ಅಧಿಕಾರಿಗಳ ಬಗ್ಗೆ ಜನಸಾಮಾನ್ಯರು ನಂಬಿಕೆ ಕಳೆದುಕೊಂಡಿದ್ದಾರೆ. ಗ್ರಾಮೀಣ ಸೇರಿದಂತೆ ಎಲ್ಲಡೆ ನೀರು, ವಿದ್ಯುತ್‌ನಂತಹ ಮೂಲ ಸೌಲಭ್ಯಗಳನ್ನು ನೀಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಇವೆರಡರ ಸಮಸ್ಯೆ ಉಲ್ಭಣವಾದರೆ ಜನಸಾಮಾನ್ಯರ ಪರವಾಗಿ ನಿಂತು ಪ್ರತಿಭಟಿಸಲಾಗುವುದು’ ಎಚ್ಚರಿಸಿದರು.

‘ಸಾವಿರ ಅಡಿ ಕೊಳವೆಬಾವಿ ಕೊರೆಯಿಸಿದರೂ ನೀರು ದೊರೆಯುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಪಂಚಾಯಿತಿ ತೀರ್ಮಾನಿಸಿ, ಅನುಮತಿಗಾಗಿ ನಿಮ್ಮನ್ನು ಕೋರಿದರೂ ತಿರಸ್ಕರಿಸಿದ್ದೀರಿ. ಇದರಿಂದ ಜನಸಾಮಾನ್ಯರಿಗೆ ನೀರು ನೀಡಲಾಗುತ್ತಿಲ್ಲ. ಜನ ಆಕ್ರೋಶ ಭರಿತರಾಗಿ ನಮ್ಮನ್ನು ನಿಂದಿಸುತ್ತಾರೆ. ಗ್ರಾಮಕ್ಕೆ ನೀರು ಕೊಡಿ ,ಇಲ್ಲವಾದರೆ ನಮ್ಮ ರಾಜೀನಾಮೆ ಸ್ವೀಕರಿಸಿ’ ಎಂದು ಹಲವು ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಮೂರ್ತಿ, ಜಿಲ್ಲಾ ಪಂಚಾಯಿತಿ ಇಇ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಧ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಶಿವಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ ಹಾಗೂ ಸದಸ್ಯರು, ನೂರಾರು ಗ್ರಾಮಸ್ಥರು ಇದ್ದರು. ಬೀರೂರು ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry