ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಿಂದ ಊರಿಗೆ ಬಾರದ ಭದ್ರೆ!

Last Updated 12 ಜನವರಿ 2018, 9:32 IST
ಅಕ್ಷರ ಗಾತ್ರ

ಬೀರೂರು: ಕಡೂರು ಮತ್ತು ಬೀರೂರು ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಯ ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಿದ ದಿನವೇ ತಾಂತ್ರಿಕ ತೊಂದರೆಯಿಂದ ನಿಂತಿದ್ದು, ವಾರ ಕಳೆದರೂ ಸಮಸ್ಯೆ ಪರಿಹಾರವಾಗಿಲ್ಲ. ಇನ್ನೂ ಮೂರು-ನಾಲ್ಕು ದಿನ ಈ ಸಮಸ್ಯೆ ಮುಂದುವರೆಯುವ ಸಾಧ್ಯತೆ ಇದ್ದು, ಇದು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಯ ಮುನ್ಸೂಚನೆಯೇ? ಎನ್ನುವ ಅತಂಕ ನಾಗರಿಕರನ್ನು ಕಾಡಲಾರಂಭಿಸಿದೆ.

ನಗರ ಒಳಚರಂಡಿ ಮತ್ತು ನೀರುಸರಬರಾಜು ಮಂಡಳಿ ವತಿಯಿಂದ ₹ 49.20 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆ ಈವರೆಗೂ ಪುರಸಭೆಗಳಿಗಾಗಲೀ ಅಥವಾ ಸರ್ಕಾರದ ವತಿಯಿಂದ ಮಂಡಳಿಗಾಗಲೀ ಹಸ್ತಾಂತರವಾಗಿಲ್ಲ. ಇದು ಸಮಸ್ಯೆಯ ಮೂಲ ಕಾರಣ. ಇದರಿಂದಾಗಿ ಯೋಜನೆಯನ್ನು ನಿರ್ವಹಿಸಬೇಕಾದವರು ಯಾರು? ಎನ್ನುವ ಜಿಜ್ಞಾಸೆಗೆ ಉತ್ತರ ದೊರೆತಿಲ್ಲ. ಜತೆಗೆ ಮೂರು ವರ್ಷಗಳ ವಿದ್ಯುತ್‌ ಬಿಲ್ ಬಾಕಿ ಕೂಡಾ ₹ 5.67ಕೋಟಿ ಇತ್ತು. ಆದರೆ, ಸರ್ಕಾರ ಮಧ್ಯಪ್ರವೇಶಿಸಿ ಕಡೂರು ಪುರಸಭೆಗೆ ಬೇರೆಡೆಯಿಂದ ಹಣ ವರ್ಗಾಯಿಸಿ, ಅಲ್ಲಿಂದ ಮೆಸ್ಕಾಂಗೆ ಹಣ ಪಾವತಿಸಿದೆ. ಇದರಿಂದ ಈ ಸಮಸ್ಯೆಗೆ ಸರ್ಕಾರ ಸ್ಪಂದಿಸಿದೆ ಹಾಗೂ ಮುಂದಿನ ದಿನಗಳಲ್ಲಿಯೂ ವಿದ್ಯುತ್‌ ಮಂಡಳಿಯೂ ಬಿಲ್ ಪಾವತಿ ಬಗ್ಗೆ ಭರವಸೆ ಇಡಬಹುದು ಎನ್ನುವ ಮಟ್ಟಿಗೆ ಪರಿಹಾರ ದೊರೆತಿರುವುದು ಸಮಾಧಾನದ ಸಂಗತಿ.

ಡಿಸೆಂಬರ್‌ವರೆಗೂ ನೀರು ಸರಬರಾಜಿನಲ್ಲಿ ಅಂತಹ ವ್ಯತ್ಯಯಗಳು ಇರಲಿಲ್ಲ. ತರೀಕೆರೆ ಬಳಿಯ ನೀರು ಶುದ್ಧೀಕರಣ ಘಟಕದಲ್ಲಿ ಆಗಲೂ ಒಂದೇ ಯಂತ್ರ ಕಾರ್ಯ ನಿರ್ವಹಿಸುತ್ತಿತ್ತು. ಇರುವ ಎರಡು ಯಂತ್ರಗಳಲ್ಲಿ ಏಳೆಂಟು ತಿಂಗಳ ಹಿಂದೆಯೇ ಒಂದು ಯಂತ್ರ ಕೆಟ್ಟು ನಿಂತಿತ್ತು. ಪಂಪ್‌ ಬೇರಿಂಗ್, ಕೆಪಾಸಿಟರ್ ಬ್ಯಾಂಕ್, ರಿಯಾಕ್ಟರ್ ಹಾಳಾಗಿದ್ದು, ಕಡೂರು- ಬೀರೂರು ಪುರಸಭೆಯವರು ಜಿಲ್ಲಾಧಿಕಾರಿಯ ಆದೇಶದಂತೆ ದುರಸ್ತಿಗಾಗಿ ₹ 35 ಲಕ್ಷ ಪಾವತಿಸಿದ್ದಾರೆ. ಈ ಕುರಿತು ಟೆಂಡರ್ ಪ್ರಕ್ರಿಯೆ ಆಗಿಲ್ಲ. ತನ್ನ ಜವಾಬ್ದಾರಿ ಇಲ್ಲ ಎನ್ನುವ ನೆಪಕ್ಕಾಗಿ ಮಂಡಳಿ ಸುಮ್ಮನಿದ್ದರೆ, ಕಡೂರು-ಬೀರೂರು ಪುರಸಭೆಗಳ ನಿರ್ಲಕ್ಷ್ಯ ಯಂತ್ರದ ದುರಸ್ತಿಗೆ ಮನಸ್ಸು ಮಾಡದಿರಲು ಕಾರಣವಾಯಿತು. ಅದರ ಫಲವನ್ನು ಜನರು ಈಗ ಅನುಭವಿಸುವಂತಾಗಿದೆ ಎಂದು ಸ್ಥಳೀಯರ ಅಳಲು.

ಸರಿಯಾಗಿದ್ದ ಇನ್ನೊಂದು ಯಂತ್ರದ ಬೇರಿಂಗ್ ಸವೆದು ಹೋಗಿದ್ದು, ಬೇರೆ ಅಳವಡಿಸುವವರೆಗೂ ದುರಸ್ತಿ ಸಾಧ್ಯವಿಲ್ಲ. ದುರಸ್ತಿ ಇಲ್ಲದೆ ನೀರಿಲ್ಲ, ಅಲ್ಲದೆ ಈ ಬೇರಿಂಗ್, ಇಂಪೆಲ್ಲರ್ ಭಾಗಗಳು ಅಹಮದಾಬಾದ್ ಅಥವಾ, ಚೆನ್ನೈ, ಹೈದರಾಬಾದ್‌ಗಳಿಂದ ಬರಬೇಕಿದೆ. ಇದರ ವೆಚ್ಚ ₹ 3 ಲಕ್ಷ. ಪುರಸಭೆಗಳು ಮನಸು ಮಾಡಿದರೆ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬಹುದಿತ್ತು. ಇಲ್ಲಿ ನಿರ್ಲಕ್ಷ್ಯ ಏಕೆ ತಿಳಿಯುತ್ತಿಲ್ಲ. ಕೆಟ್ಟು ನಿಂತಿರುವ ಇನ್ನೊಂದು ಯಂತ್ರವೂ ಇದೇ ಸಮಸ್ಯೆ ಎದುರಿಸುತ್ತಿದ್ದು, ಪುರಸಭೆಗಳು ಎರಡೂ ಯಂತ್ರಗಳ ದುರಸ್ತಿ ಮತ್ತು ನಿರ್ವಹಣೆಗೆ ಪ್ರಮುಖವಾಗಿ ಆದ್ಯತೆ ನೀಡಬೇಕಿದೆ ಎಂಬುದು ನಾಗರಿಕರ ಮನವಿ.

ಈ ನಡುವೆ ನೀರು ಸರಬರಾಜು ಮಂಡಳಿ ಹಲವು ಬಾರಿ ಪುರಸಭೆಗಳಿಗೆ ಯೋಜನೆಯನ್ನು ಹಸ್ತಾಂತರಿಸಿಕೊಳ್ಳುವಂತೆ ಒತ್ತಡ ಹೇರಿದೆ. ಆದರೆ, ಶಾಸಕರ ಮಧ್ಯಪ್ರವೇಶ ಮತ್ತು ಪುರಸಭೆಗಳಿಗೆ ನಿರ್ವಹಣೆಯ ವೆಚ್ಚ ಭರಿಸುವ ಶಕ್ತಿ ಇಲ್ಲ ಎನ್ನುವುದು ಹಸ್ತಾಂತರಗೊಳ್ಳದಿರಲು ಕಾರಣವಾಗಿದೆ. ವಾಸ್ತವವಾಗಿ ಕಡೂರು-ಬೀರೂರು ಪುರಸಭೆಗಳು 60:40 ಅನುಪಾತದಲ್ಲಿ ಸಮಸ್ಯೆಗಳ ನಿರ್ವಹಣೆಗೆ ಮತ್ತು ಕೆಲವು ಮೂಲಬೇಡಿಕೆಗಳಿಗೆ ವೆಚ್ಚ ಪಾವತಿಸುತ್ತಿವೆ. ವಾಸ್ತವವಾಗಿ ಇರಬೇಕಿದ್ದ 34 ನೀರುಗಂಟಿಗಳಿಗೆ ಬದಲಾಗಿ 15 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚಿನವರೆಗೂ ಮಂಡಳಿ ಇವರಿಗೆ ಸಂಬಳ ಪಾವತಿಸುತ್ತಿತ್ತು. ಈಗ ಬೀರೂರು ಮತ್ತು ಕಡೂರು ಪುರಸಭೆಗಳು ಸಂಬಳ ನೀಡುತ್ತಿವೆ. ಕಳೆದ ವಾರ ಕಡೂರಿನಲ್ಲಿ ಮುಖ್ಯಮಂತ್ರಿ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪುರಸಭೆಗಳ ಸ್ಥಿತಿ ವಿವರಿಸಿ, ಸರ್ಕಾರವೇ ಮಂಡಳಿ ಮೂಲಕ ನಿರ್ವಹಣೆ ನಡೆಸಲಿ ಎನ್ನುವ ಒತ್ತಾಯ ಮತ್ತು ಮನವಿ ಮಾಡಲಾಗಿದೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕಂಡು ವಿದ್ಯುತ್ ಮಂಡಳಿಯ ಬಿಲ್ ಪಾವತಿಸಲು ಸುಮಾರು ₹ 505 ಕೋಟಿ ಪುರಸಭೆಗಳಿಗೆ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಶಾಸಕ ವೈ.ಎಸ್.ವಿ.ದತ್ತ.
ಸದ್ಯ ಬೇರಿಂಗ್ ಸಮಸ್ಯೆ ಜತೆಗೆ ಜಲಶುದ್ಧೀಕರಣ ಘಟಕದಲ್ಲಿ ಯಂತ್ರಗಳ ಕಪ್ಲರ್ ಹಾಳಾಗಿದೆ, ಶಾಫ್ಟ್‌ಗಳು ಸವೆದು ಯಂತ್ರಗಳ ಬ್ಯಾಲೆನ್ಸಿಂಗ್ ಮಾಡಿಸಬೇಕಾದ ಅಗತ್ಯವಿದೆ. ಈ ದುರಸ್ತಿಗಳು ನಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೊಸ ಸಮಸ್ಯೆಗಳು ಉದ್ಭವ ವಾಗುವ ಆತಂಕವೂ ಎನ್ನು ತ್ತಾರೆ ಹೆಸರು ಹೇಳಲಿಚ್ಛಿಸಿದ ಸ್ಥಳೀಯ ತಂತ್ರಜ್ಞ.

ಪುರಸಭೆಗಳು ಸದ್ಯದ ಸಮಸ್ಯೆ ಜತೆಗೆ ಈ ಬಗ್ಗೆಯೂ ಗಮನ ಹರಿಸಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅಡಚಣೆಗಳಿಗೆ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ ಎನ್ನುವುದು ಅವರ ಅಭಿಪ್ರಾಯ.

ಮಂಡಳಿ ಎಂಜಿನಿಯರ್ ಮಾರುತಿ ಮಾತನಾಡಿ, ‘ನಾವು ಶಿವಮೊಗ್ಗ ಮತ್ತು ಹರಿಹರದ ‘ಗುತ್ತಿಗೆದಾರರಿಗೆ ಯಂತ್ರದ ಬಿಡಿಭಾಗ ತರಿಸಿಕೊಡುವಂತೆ ಸೂಚಿಸಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ದೋಷ ಸರಿಪಡಿಸಲಾಗುವುದು. ಪುರಸಭೆಗಳು ಮತ್ತೊಂದು ಯಂತ್ರದ ದುರಸ್ತಿಗೂ ಮನಸು ಮಾಡಿದರೆ ಈ ಬೇಸಿಗೆಯನ್ನು ಸಮಸ್ಯೆ ಇಲ್ಲದೆ ಕಳೆಯಬಹುದು. ಯಂತ್ರಗಳು ನಿರಂತರ ಕೆಲಸ ಮಾಡಿದರೆ ಸವೆಯುವುದು ಸಹಜ. ದೋಷ ಎದುರಿಸಲು ನಾವು ಸಿದ್ಧವಾಗಿರಲೇಬೇಕು’ ಎಂದರು.

ಪುರಸಭೆಗಳು, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಹಾಗೂ ರಾಜ್ಯ ಸರ್ಕಾರ ಈ ಯೋಜನೆಯ ಫಲ ಜನರಿಗೆ ನಿರಂತರ ಸಿಗುವಂತಾಗಲು ಪರಸ್ಪರ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ. ಬೇಸಿಗೆ ಆರಂಭಕ್ಕೂ ಮುನ್ನ ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಂಡು, ಜತೆಗೆ ಯೋಜನೆಯಂತೆ 34 ಹಳ್ಳಿಗಳಿಗೂ ನೀರು ಪೂರೈಸುವಲ್ಲಿ ಕ್ರಮ ವಹಿಸಬೇಕು ಎನ್ನುವುದು ಎಲ್ಲರ ನಾಗರಿಕರ ಒತ್ತಾಯವಾಗಿದೆ.
-ಎನ್‌. ಸೋಮಶೇಖರ

ಪರಿಹಾರವೇನು ಹೊಳೆಯುತ್ತಿಲ್ಲ!

‘ಕಡೂರು ಪಟ್ಟಣದಲ್ಲಿಯೂ 10ದಿನಗಳಿಂದ ನೀರು ಪೂರೈಕೆ ಆಗಿಲ್ಲ, ಪುರಸಭೆ ವತಿಯಿಂದ ನಾಗರಿಕರಿಗೆ ಈಗಾಗಲೇ ಮಾಹಿತಿ ನೀಡಿ ನಾಗರಿಕರ ಸಹಕಾರ ಕೋರಲಾಗಿದೆ. ಬೀರೂರು ಪುರಸಭೆಗೆ ಸಮಸ್ಯೆಯ ಮಾಹಿತಿ ಇದೆಯೇ ಹೊರತು ನಾಗರಿಕರಿಗೆ ಮಾಹಿತಿ ಕೊಡಲು ಆಗಿಲ್ಲ. ಬೀರೂರು ಪಟ್ಟಣದ ಕೆಲ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ಮತ್ತು ಹಲವೆಡೆ ಕೊಳವೆಬಾವಿ ಪೈಪ್‌ಲೈನ್ ಮೂಲಕ ಮತ್ತು ಕೆಲವೆಡೆ ಕೊಳವೆಬಾವಿ ಬಳಿ ಮುಖ್ಯ ಪೈಪ್ ತೆರೆದು ಸ್ಥಳದಲ್ಲಿಯೇ ನೀರು ಪೂರೈಸಲಾಗುತ್ತಿದೆ. ನಾವು ಪದೇ ಪದೇ ದುರಸ್ತಿ ವೆಚ್ಚ ಭರಿಸುತ್ತಲೇ ಇದ್ದೇವೆ. ಆದರೆ ದೋಷ ಏಕೆ ಉಂಟಾಗುತ್ತಿದೆ ತಿಳಿಯುತ್ತಿಲ್ಲ. ಎಂಜಿನಿಯರ್ ಕೇಳಿದರೆ ಯಂತ್ರಗಳು ನಿರಂತರ ಓಡುವುದರಿಂದ ದೋಷ ಕಂಡು ಬರುತ್ತದೆ ಎನ್ನುತ್ತಾರೆ. ಈ ಬಗ್ಗೆ ಪರಿಹಾರವೇನು ಎಂದು ಹೊಳೆಯುತ್ತಿಲ್ಲ’ ಎನ್ನುತ್ತಾರೆ ಪುರಸಭಾಧ್ಯಕ್ಷೆ ಸವಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT