ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರಿನಲ್ಲಿ ಕಾಂಗ್ರೆಸ್‌ ಗೆಲ್ಲುವುದು ಗುರಿಯಾಗಬೇಕು: ಎನ್‌ವೈಜಿ

Last Updated 12 ಜನವರಿ 2018, 9:43 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವುದು ಮಾತ್ರ ಮುಖ್ಯವಾಗಬೇಕು. ಅಭ್ಯರ್ಥಿಯಾರು ಎಂಬುದು ನಂತರದ ಪ್ರಶ್ನೆ ಎಂದು ಡಾ.ನಂಜುಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್‌.ವೈ. ಗೋಪಾಲಕೃಷ್ಣ ಹೇಳಿದರು. ಇಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಚಾರ ಕಾರ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಈ ಕ್ಷೇತ್ರದ ಸೋತ ಅಭ್ಯರ್ಥಿ. ಪ್ರಸ್ತುತ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ. ಬಳ್ಳಾರಿಯಲ್ಲಿ ಉತ್ತಮ ಕೆಲಸಗಳಾಗಿರುವ ಕಾರಣ ಅಲ್ಲಿಯ ಜನರು ಮತ್ತೆ ಅಲ್ಲಿಂದ ಸ್ಪರ್ಧೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದರೆ ಮೊಳಕಾಲ್ಮುರು ನನ್ನ ತವರು ಕ್ಷೇತ್ರ. ಆದ್ದರಿಂದ ಬಳ್ಳಾರಿ ಮತದಾರರನ್ನು ಹೇಗಾದರೂ ಒಪ್ಪಿಸಿ ಇಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೇನೆ. ಆದರೆ, ಕೆಲ ಮಾಧ್ಯಮಗಳಲ್ಲಿ ಇದನ್ನು ತಿರುಚಿ ಬರೆಯಲಾಗಿದೆ’ ಎಂದು ಹೇಳಿದರು.

‘₹ 2,352 ಕೋಟಿ ವೆಚ್ಚದ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್‌ ಸರ್ಕಾರ ಅವಧಿಯಲ್ಲಿ ಆಗಿದೆ. ಇದು ಪಕ್ಷದ ಸಾಧನೆ. ಇದನ್ನು ಬಹಳಷ್ಟು ಮಂದಿ ಹೋರಾಟದಿಂದ ಆದ ಕೆಲಸ. ಇದನ್ನು ಯಾರೇ ಆಗಲಿ ನಾನು ಮಾಡಿಸಿದ್ದು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹೇಳಬಾರದು’ ಎಂದರು.

ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌ ಮಾತನಾಡಿ, ‘ನರೇಂದ್ರ ಮೋದಿ ದೊಡ್ಡ ಸುಳ್ಳುಗಾರ. ಸುಳ್ಳನ್ನೇ ಪ್ರಖರವಾಗಿ ಮಾತಾಡಿ ನಿಜ ಎಂದು ನಂಬಿಸುವ ಚಾಣಾಕ್ಷತೆ ಹೊಂದಿದ್ದಾರೆ. ಆದರೆ ಈ ಚಾಣಾಕ್ಷತೆ ರಾಹುಲ್‌ ಗಾಂಧಿಗೆ ಇಲ್ಲದಿರಬಹುದು. ಇದರಿಂದ ದೇಶಕ್ಕೆ ಆಗುತ್ತಿರುವ ಲಾಭವಾದರೂ ಏನು. ಹೋದಲ್ಲೆಲ್ಲಾ ಮೋದಿ ಹೇಳುತ್ತಿರುವ ಮೇಕ್‌ ಇನ್‌ ಇಂಡಿಯಾಕ್ಕೆ ಬೇಕಾದ ತಾಂತ್ರಿಕತೆ ಕಾಂಗ್ರೆಸ್‌ ಸರ್ಕಾರದ ಕೊಡುಗೆ ಎಂಬುದನ್ನು ಮೋದಿ ಅರಿಯಬೇಕು’ ಎಂದು ಹೇಳಿದರು.

‘ಕಾಂಗ್ರೆಸ್‌ ಸಾಧನೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಕ್ಷೇತ್ರವಾರು ಸರ್ಕಾರದಿಂದ ಆಗಿರುವ ಕೆಲಸಗಳನ್ನು ಪಟ್ಟಿ ಮಾಡಿ ಪುಸ್ತಕ ರೂಪದಲ್ಲಿ ಮುದ್ರಿಸಿ ಮನೆ, ಮನೆ ತಲುಪಿಸುವ ಕೆಲಸ ಮಾಡಬೇಕು. ಕಾಂಗ್ರೆಸ್‌ನ್ನು ದೇಶದ್ರೋಹಿ ಎಂದು ಹೇಳುವ ಮೊದಲು ಬಿಜೆಪಿಯ ಒಂದು ಸೊಳ್ಳೆಯಾದರೂ ದೇಶಕ್ಕಾಗಿ ಸತ್ತಿದೆಯೇ ಎಂಬುದನ್ನು ಸಾಬೀತು ಮಾಡಲಿ’ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಡಾ.ಬಿ.ಯೋಗೇಶ್‌ಬಾಬು, ಮುಂಡ್ರಗಿ ನಾಗರಾಜ್‌, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ. ಪ್ರಕಾಶ್‌ ಮಾತನಾಡಿದರು. ಬ್ಲಾಕ್‌ ಅಧ್ಯಕ್ಷ ಪಟೇಲ್‌ ಪಾಪನಾಯಕ, ಮುಖಂಡರಾದ ಪಿ.ಕೆ. ಕುಮಾರಸ್ವಾಮಿ, ರಾಮಾಂಜಿನೇಯಪ್ಪ, ಇಂದ್ರಮ್ಮ, ಅಶ್ವಥ್‌ ನಾರಾಯಣ್‌, ಎಸ್‌. ಖಾದರ್‌, ದಾದಾಪೀರ್, ಖಲೀಲ್‌, ಪಿ.ಎನ್. ಶ್ರೀನಿವಾಸುಲು, ಕೋನಸಾಗರ

ಗೊಂದಲ ಬೇಡ: ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಅನೇಕರು ಮುಂದಾಗಿದ್ದಾರೆ. ಆದರೆ,  ಟಿಕೆಟ್‌ ಯಾರಿಗೇ ನೀಡಲಿ ಪಕ್ಷದ ಗೆಲುವಿಗೆ ಹೋರಾಡೋಣ ಎಂದು ಪ್ರಬಲ ಆಕಾಂಕ್ಷಿಗಳಾದ ಎನ್‌ವೈಜಿ, ಯೋಗೇಶ್‌ಬಾಬು ಪ್ರಸ್ತಾಪ ಮಾಡುವ ಮೂಲಕ ಎದ್ದಿರುವ ಗೊಂದಲ ನಿವಾರಿಸಿದರು ಎಂದು ಸಭಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT