ಕುಡಿಯುವ ನೀರಿಗೆ ಜಿ.ಪಂ.ನಲ್ಲಿ ಹಣ ಇಲ್ಲ

7

ಕುಡಿಯುವ ನೀರಿಗೆ ಜಿ.ಪಂ.ನಲ್ಲಿ ಹಣ ಇಲ್ಲ

Published:
Updated:
ಕುಡಿಯುವ ನೀರಿಗೆ ಜಿ.ಪಂ.ನಲ್ಲಿ ಹಣ ಇಲ್ಲ

ದಾವಣಗೆರೆ: ಕುಡಿಯುವ ನೀರು ಪೂರೈಕೆ ತುರ್ತು ಕಾಮಗಾರಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ಹಣ ಇಲ್ಲ. ಇದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಅನುದಾನಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆ ತೀರ್ಮಾನಿಸಿತು.

ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಈ ವಿಷಯ ಪ್ರಸ್ತಾಪಿಸಿ, ‘ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಬಿಗಡಾಯಿಸಿದೆ. ಮುಂದೆ ಇನ್ನೂ ಭೀಕರ ಸ್ಥಿತಿ ಎದುರಾಗಲಿದೆ. ಇದಕ್ಕಾಗಿ ಈಗಲೇ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಒತ್ತಾಯಿಸಿದರು.

ಜಗಳೂರು, ಮಾಯಕೊಂಡ, ಚನ್ನಗಿರಿ ಕ್ಷೇತ್ರಗಳಲ್ಲಿ ಈ ಹಿಂದೆ ಖಾಸಗಿ ಅವರಿಂದ ಟ್ಯಾಂಕರ್‌ ನೀರು ಪಡೆದಿದ್ದಕ್ಕೆ ಹಣ ಪಾವತಿಯಾಗಿಲ್ಲ ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎನ್‌.ಜೆ.ನಟರಾಜ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಕೆ.ಮಂಜುನಾಥ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಾಗೇಶ್ ಸಭೆಯ ಗಮನಕ್ಕೆ ತಂದರು.

ಪ್ರತಿಕ್ರಿಯಿಸಿದ ಉಪ ಕಾರ್ಯದರ್ಶಿ ಷಡಕ್ಷರಪ್ಪ, ‘ಈ ಹಿಂದೆ ಜಿಲ್ಲೆಯನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದ್ದರಿಂದ ಜಿಲ್ಲಾಡಳಿತ ಕುಡಿಯುವ ನೀರಿನ ಹಣ ಪಾವತಿಸುತ್ತಿತ್ತು. ಈ ವರ್ಷ ಆಯಾ ಗ್ರಾಮ ಪಂಚಾಯ್ತಿಯೇ ಭರಿಸಬೇಕಾಗಿದೆ. ಆದರೆ, ಗ್ರಾಮ ಪಂಚಾಯ್ತಿಯಲ್ಲಿ ಸಾಕಷ್ಟು ಅನುದಾನ ಇಲ್ಲ’ ಎಂದರು.

‘ಜಗಳೂರಿನ ಆಸಗೋಡು ಗ್ರಾಮ ಪಂಚಾಯ್ತಿಯಲ್ಲಿ ಟ್ಯಾಂಕರ್‌ ನೀರು ಪೂರೈಸಿದ್ದಕ್ಕೆ ಖಾಸಗಿ ಅವರಿಗೆ ₹ 10 ಲಕ್ಷ ಹಣ ಪಾವತಿಸುವುದು ಬಾಕಿ ಇದೆ. ಇದೇ ರೀತಿ ಜಿಲ್ಲೆಯಲ್ಲಿ ಸಾಕಷ್ಟು ಬಾಕಿ ಹಣ ಪಾವತಿಯಾಗಬೇಕಿದೆ. ಈ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೂ ತರಲಾಗಿದೆ. ಅವರು ವಿವರವಾದ ವರದಿ ಕೇಳಿದ್ದಾರೆ. ಅದನ್ನು ಸಲ್ಲಿಸುತ್ತೇವೆ. ಬಾಕಿ ಹಣ ಬಿಡುಗಡೆಯಾಗುತ್ತಿದೆ. ಇದರಲ್ಲಿ ಅನುಮಾನ ಬೇಡ’ ಎಂದು ಷಡಕ್ಷರಪ್ಪ ಸ್ಪಷ್ಟಪಡಿಸಿದರು.

ತುರ್ತು ಕುಡಿಯುವ ನೀರು ಪೂರೈಕೆಗೆ ಜಿಲ್ಲಾ ಪಂಚಾಯ್ತಿಯಲ್ಲೂ ಅನುದಾನ ಇಲ್ಲ. ಹಾಗಾಗಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಸ್‌.ಅಶ್ವತಿ ತಿಳಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರ ಖರೀದಿಗೆ ಮಾರಾಟ ಅಂಗಡಿಯಲ್ಲಿ ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಯಂತ್ರ ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ರೈತರು ತಮ್ಮ ಆಧಾರ್‌ ಕಾರ್ಡ್‌ ನಂಬರ್‌, ಹೆಬ್ಬೆಟ್ಟು ಗುರುತು ನೀಡಿದ ನಂತರವೇ ಗೊಬ್ಬರ ಖರೀದಿ ರಸೀದಿ ಬರುವ ವ್ಯವಸ್ಥೆ ಜನವರಿ 1ರಿಂದ ಆರಂಭವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 530 ಯಂತ್ರಗಳು ಬಂದಿವೆ. ಅದರಲ್ಲಿ 520 ಯಂತ್ರಗಳು ಕೆಲಸ ಮಾಡುತ್ತಿವೆ. ಆಧಾರ್‌ ಕಾರ್ಡ್‌ ನಂಬರ್ ಜೋಡಣೆ ಮಾಡಿಕೊಂಡ ರೈತರಿಗೆ ರಸಗೊಬ್ಬರ ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ವಿ.ಸದಾಶಿವ ಹೇಳಿದರು.

ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಹೊಂಡ ತೆಗೆಸಿಕೊಂಡ ಫಲಾನುಭವಿಗಳಿಗೆ ಸಬ್ಸಿಡಿ ಹಣ ಇನ್ನೂ ಬಂದಿಲ್ಲ ಎಂಬ ದೂರುಗಳಿವೆ ಎಂದು ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕರು, ‘ಜಿಲ್ಲೆಯಲ್ಲಿ 1,835 ಕೃಷಿ ಹೊಂಡ ತೆಗೆಯಲಾಗಿದೆ. ಹಂತ–ಹಂತವಾಗಿ ಫಲಾನುಭವಿಗಳಿಗೆ ಅನು

ದಾನ ಬಿಡುಗಡೆಯಾಗುತ್ತಿದೆ’ ಎಂದರು.

ನೋಟಿಸ್‌ ಜಾರಿ: ಎಚ್ಚರಿಕೆ 

‘ಪಂಚಾಯತ್‌ ರಾಜ್ ಎಂಜಿನಿಯರ್‌ ಇಲಾಖೆ, ಹರಪನಹಳ್ಳಿ ವಿಭಾಗದಲ್ಲಿ ಕೈಗೊಂಡ ರಸ್ತೆ ಕಾಮಗಾರಿಗಳು ಬಹಳ ನಿಧಾನಗತಿಯಲ್ಲಿ ಸಾಗಿವೆ. ಭೌತಿಕ ಗುರಿ ಸಾಧಿಸುವಲ್ಲೂ ವಿಫಲರಾಗಿದ್ದೀರಿ. ಇದೇ ರೀತಿ ಮುಂದುವರಿದರೆ ನಿಮಗೆ ನೋಟಿಸ್‌ ಜಾರಿ ಮಾಡಲಾಗುವುದು’ ಎಂದು ಸಿಇಒ, ಎಂಜಿನಿಯರ್ ಶಂಕರನಾಯ್ಕ ಅವರಿಗೆ ಎಚ್ಚರಿಕೆ ನೀಡಿದರು.

‘ಶಾಲೆಗಳ ದುರಸ್ತಿಗೆ ಜಿಲ್ಲಾ ಪಂಚಾಯ್ತಿ ಅನುದಾನ ಅಲ್ಲದೇ, ವಿಶೇಷ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಿದೆ. ಯಾವ ಯಾವ ಶಾಲೆಗಳ ದುರಸ್ತಿ ಕೈಗೊಂಡಿದ್ದೀರಿ ಮಾಹಿತಿ ನೀಡಿ’ ಎಂದು ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಡಿಡಿಪಿಐ ಕೆ.ಕೋದಂಡರಾಮ ಅವರನ್ನು ಪ್ರಶ್ನಿಸಿದರು. ಮುಂದಿನ ಸಭೆಯಲ್ಲಿ ಮಾಹಿತಿ ನೀಡುವುದಾಗಿ ಡಿಡಿಪಿಐ ಉತ್ತರಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ ಉಪಸ್ಥಿತರಿದ್ದರು.

ದಿನಗೂಲಿಗಳ ಪಟ್ಟಿ ನೀಡಿ: ಅಧ್ಯಕ್ಷೆ ತಾಕೀತು

ಜಿಲ್ಲಾ ಪಂಚಾಯ್ತಿಯ ವಿವಿಧ ಇಲಾಖೆಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಕಾಲಕ್ಕೆ ಸಂಬಳ ನೀಡುತ್ತಿಲ್ಲ ಎಂಬ ಬಗ್ಗೆ ದೂರುಗಳಿವೆ. ಸಿಬ್ಬಂದಿಯ ಪಟ್ಟಿ ನೀಡಿ ಎಂದು ಅಧ್ಯಕ್ಷೆ, ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೇ, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಾಕಷ್ಟು ಸಿಬ್ಬಂದಿಗೆ ಆರು ತಿಂಗಳಿಂದ ಸಂಬಳ ಆಗಿಲ್ಲ. ಹಲವರ ಪಿಎಫ್‌, ಇಎಸ್‌ಐಯನ್ನು ಗುತ್ತಿಗೆದಾರರು ಕಟ್ಟುತ್ತಿಲ್ಲ. ಈ ಬಗ್ಗೆಯೂ ವರದಿ ಕೊಡಿ ಎಂದು ಹೇಳಿದರು.

‘ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರಿಗೆ ಕಳೆದ ಏ‍ಪ್ರಿಲ್‌ನಿಂದ ಇದುವರೆಗೂ ಸಂಬಳ ನೀಡಿಲ್ಲ. ಇದಕ್ಕೆ ನಿಮ್ಮ ನಿರ್ಲಕ್ಷ್ಯವೇ ಕಾರಣ’ ಎಂದು ಯೋಜನಾಧಿಕಾರಿ ಬಸವನಗೌಡ, ಜಗಳೂರು ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ಚಂದ್ರಶೇಖರ್ ವಿರುದ್ಧ ಆಕ್ಷೇಪಿಸಿದರು.

ಜನೌಷಧ ಅಂಗಡಿಗಳಲ್ಲಿ ಔಷಧಗಳಿಲ್ಲ!

ಜಿಲ್ಲೆಯಲ್ಲಿ ವಿವಿಧೆಡೆ ತೆರೆದಿರುವ ಜನೌಷಧಗಳಲ್ಲಿ ಸಮಪರ್ಕ ಔಷಧಗಳಿಲ್ಲ. ಸದಾ ಔಷಧಗಳ ಕೊರತೆ ಕಂಡುಬರುತ್ತಿದೆ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ ಎಂದು ಅಧ್ಯಕ್ಷೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಬ ಅವರ ಗಮನಕ್ಕೆ ತಂದರು.

‘ಜನೌಷಧ ಅಂಗಡಿಗಳನ್ನು ಎಂಎಸ್ಐಎಲ್‌ ಸಂಸ್ಥೆ ನಿರ್ವಹಿಸುತ್ತಿದ್ದು, ಆಂಟಿಬಯೊಟಿಕ್ಸ್‌ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ನಮಗೂ ಬಂದಿವೆ. ಈ ಬಗ್ಗೆ ಸಂಸ್ಥೆ ಮುಖ್ಯಸ್ಥರನ್ನು ಪ್ರಶ್ನಿಸಿದರೆ ಔಷಧ ಉತ್ಪಾದನೆ ಬೇಡಿಕೆಯಷ್ಟು ಆಗುತ್ತಿಲ್ಲ. ಹಾಗಾಗಿ ಪೂರೈಕೆಯಲ್ಲಿ ಕೊರತೆಯಾಗಿದೆ ಎಂದು ಉತ್ತರಿಸುತ್ತಾರೆ’ ಎಂದು ಡಾ.ತ್ರಿಪುಲಾಂಬ ಹೇಳಿದರು.

ಜಿಲ್ಲೆಯಲ್ಲಿ ಎಎನ್‌ಎಂ (ಕಿರಿಯ ಮಹಿಳಾ ಆರೋಗ್ಯ ಸಹಾಯಕಿ) ಹುದ್ದೆಗಳು 339 ಇದ್ದು, ಕೆಲಸ ಮಾಡುವುದು 180 ಜನ ಮಾತ್ರ. ಉಳಿದ ಹುದ್ದೆಗಳು ಭರ್ತಿಯಾಗಬೇಕಾಗಿದೆ. ಸರ್ಕಾರ ಈಚೆಗೆ ಈ ಹುದ್ದೆಗಳಿಗೆ ಭರ್ತಿ ಮಾಡಿಕೊಂಡಿದ್ದು, ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಸರ್ಕಾರ ತಾತ್ಕಾಲಿಕ ನೇಮಕಾತಿಗೆ ಅವಕಾಶ ಮಾಡಿಕೊಟ್ಟರೆ ಅನುಕೂಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry