18 ಅಕ್ರಮ ಪಂಪ್‌ಸೆಟ್‌ ತೆರವು

7

18 ಅಕ್ರಮ ಪಂಪ್‌ಸೆಟ್‌ ತೆರವು

Published:
Updated:
18 ಅಕ್ರಮ ಪಂಪ್‌ಸೆಟ್‌ ತೆರವು

ಮಲೇಬೆನ್ನೂರು: ಭದ್ರಾನಾಲೆ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ಬೆಸ್ಕಾಂ, ನೀರಾವರಿ ನಿಗಮದ ಅಧಿಕಾರಿಗಳನ್ನು ಒಳಗೊಂಡ ತಂಡವು ಗುರುವಾರವೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಅಕ್ರಮವಾಗಿ ನಾಲೆಗೆ ಅಳವಡಿಸಿದ್ದ 18 ಪಂಫ್‌ಸೆಟ್‌ಗಳನ್ನು ತೆರವುಗೊಳಿಸಿದೆ.

ಕೊಪ್ಪ, ಕೊಮಾರನಹಳ್ಳಿ, ಹಾಲಿವಾಣ ಹಾಗೂ ಮಲೇಬೆನ್ನೂರು ವ್ಯಾಪ್ತಿಯ 35ನೇ ಕಿ.ಮೀನಿಂದ 38 ಕಿ.ಮೀ.ವರೆಗೆ ಪೊಲೀಸ್‌ ರಕ್ಷಣೆಯಲ್ಲಿ ಕಾರ್ಯಾಚರಣೆ ನಡೆಯಿತು. ಕೊಮಾರನಹಳ್ಳಿ ಬಳಿ ಅಧಿಕ ಶಕ್ತಿಯ ಒಂದು ಸಬ್‌ಮರ್ಸಿಬಲ್‌ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ಮಾಲೀಕರು ಯಾರು ಎಂಬುದು ಗೊತ್ತಾಗಿಲ್ಲ.

ಮಲೇಬೆನ್ನೂರು ಶಾಖಾ ನಾಲೆ 48 ಕಿ.ಮೀ. ಉದ್ದ ಇದೆ. 38ನೇ ಕಿ.ಮೀವರೆಗೆ ಕಡಿಮೆ ಪ್ರಮಾಣದಲ್ಲಿ ಹರಿಯುತ್ತಿದೆ. ಪಂಪ್‌ ತೆರವು ಕಾರ್ಯಾಚರಣೆಗೆ ರೈತರು ಅಡ್ಡಿಪಡಿಸಿಲ್ಲ ಎಂದು ಎಇಇ ಗವಿಸಿದ್ದೇಶ್ವರ, ಉಪ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾಹಿತಿ ನೀಡಿದರು.

ಅಕ್ರಮ ಪಂಪ್ ತೆರವು ಮಾಡಿ: ಲಕ್ಕವಳ್ಳಿಯಿಂದ ನಿಯಂತ್ರಣ ಎರಡರ ತನಕ ಭದ್ರಾ ಮುಖ್ಯನಾಲೆಗೆ ಅಳವಡಿಸಿರುವ ಅಕ್ರಮ ಪಂಪ್‌ಸೆಟ್‌ಗಳನ್ನು ಪೊಲೀಸರ ಅಥವಾ ಮಿಲಿಟರಿ ರಕ್ಷಣೆಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳದ ಹೊರತು, ನಾಲೆಯ ಕೊನೆಭಾಗಕ್ಕೆ ನೀರು ತಲುಪಲು ಅಸಾಧ್ಯ ಎಂದು ಮುಸ್ಲಿಂ ಮುಖಂಡ ಗಫಾರ್ ಖಾನ್ ಅಭಿಪ್ರಾಯಪಟ್ಟರು. ಮಲೇಬೆನ್ನೂರು ಶಾಖಾ ನಾಲೆಯಲ್ಲಿ ಕಾರ್ಯಾಚರಣೆ ಮಾಡುವ ಬದಲು ಮೇಲ್ಭಾಗದಲ್ಲಿ ಪಂಪ್ ತೆರವು ಮಾಡುವುದು ಒಳಿತು ಎಂದು ಅವರು ಹೇಳಿದರು.

ಶನಿವಾರದಿಂದ ಮೂರು ದಿನ ಸರ್ಕಾರಿ ರಜೆ ಇದೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾಡಳಿತ ಕೊನೆಭಾಗಕ್ಕೆ ನೀರು ತಲುಪಿಸಲು ವಿಶೇಷ ಯೋಜನೆ ರೂಪಿಸದಿದ್ದರೆ ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದ ತೆಂಗು, ಅಡಿಕೆ ತೋಟ, ಭತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತವೆ. ಕೃಷಿ ಚಟುವಟಿಕೆ ಅಸಾಧ್ಯ, ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ಬೀದಿ ಪಾಲಾಗುತ್ತಾರೆ ಎಂದು ರೈತರು ಆತಂಕ ಪಡುತ್ತಾರೆ.

ಈಗಾಗಲೇ ಮೂರು ಬೆಳೆ ಕಳೆದುಕೊಂಡ ರೈತರು ಮುಂಬರುವ ದಿನಗಳಲ್ಲಿ ನಾಲೆ ನೀರಿಗೆ ಒತ್ತಾಯಿಸಿ ಹೋರಾಟಕ್ಕೆ ಇಳಿಯುವುದು ನಿಶ್ಚಿತ. ಪರಿಸ್ಥಿತಿ ಕೈ ಮೀರುವ ಮುನ್ನ ಕೊನೆಭಾಗದ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಮಠಾಧೀಶರು, ಭದ್ರಾ ನಾಲೆ ನೀರು ಬಳಕೆದಾರರ ಸಂಘದವರು ರೈತರ ನಡುವೆ ಕಲಹ ತಪ್ಪಿಸಿ, ಕೊನೆ ಭಾಗಕ್ಕೂ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry