‘ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ವೈಶಿಷ್ಟ್ಯಪೂರ್ಣ’

7

‘ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ವೈಶಿಷ್ಟ್ಯಪೂರ್ಣ’

Published:
Updated:
‘ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ವೈಶಿಷ್ಟ್ಯಪೂರ್ಣ’

ಅಕ್ಕಿಆಲೂರ: ‘ಸನಾತನ ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ವೈಶಿಷ್ಟ್ಯಪೂರ್ಣವಾಗಿದ್ದು, ಗುರುವಿಗೆ ಪೂಜ್ಯ ಸ್ಥಾನ ನೀಡಿರುವ ಏಕೈಕ ಸಂಸ್ಕೃತಿ ನಮ್ಮ ದೇಶದ್ದಾಗಿದೆ’ ಎಂದು ಹಾವೇರಿಯ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು.

ಸ್ಥಳೀಯ ಮುತ್ತಿನಕಂತಿಮಠದಲ್ಲಿ ಗುರುವಾರ ನಡೆದ ವೀರರಾಜೇಂದ್ರ ಸ್ವಾಮೀಜಿ ಪುಣ್ಯಸ್ಮರಣೋತ್ಸವ, ಧನುರ್ಮಾಸ ಲಿಂಗಪೂಜಾನುಷ್ಠಾನ ಸಮಾರೋಪ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಯಾಂತ್ರಿಕ ಯುಗದಲ್ಲಿ ಏಕಾಗ್ರತೆ ಹೊಂದಲು ಆಧ್ಯಾತ್ಮಿಕ ಚಿಂತನೆ ಸಹಕಾರಿಯಾಗುತ್ತದೆ. ಸಾಧಕನಿಗೆ ಯಾವುದೇ ಜಾತಿ ಭೇದವಿಲ್ಲ. ಸತತ ಪರಿಶ್ರಮದಿಂದ ಸಾಧನೆ ಸಾಧ್ಯವಾಗುತ್ತದೆ. ನಮ್ಮ ನಾಡಿನ ನೆಲದಲ್ಲಿ ಅವಿಚ್ಛಿನ್ನವಾಗಿ ಅರಳಿ, ಬೆಳೆದು ಹೆಮ್ಮರವಾದ ಧರ್ಮದ ಸಾಧನೆ ಬೆಳಕಲ್ಲಿ ಸಾಗಿದ ಮಠ, ಪೀಠ, ಸಂಸ್ಥಾನಗಳು ತಮ್ಮ ಅನನ್ಯ ಕಾಳಜಿಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ನವ ಚೈತನ್ಯ ಮೂಡಿಸಿವೆ’ ಎಂದರು.

‘ಮೊದಲಿನಿಂದಲೂ ಕೇವಲ ಧರ್ಮ ಪ್ರಸಾರ ಕಾರ್ಯಕ್ಕೆ ಸೀಮಿತವಾಗಿದ್ದ ಮಠಗಳು ಕ್ರಮೇಣ ತಮ್ಮ ಕಾರ್ಯ ಚಟುವಟಿಕೆಗಳನ್ನು ಇನ್ನಿತರ ಕ್ಷೇತ್ರಗಳಿಗೂ ವಿಸ್ತರಿಸಿ ನಾಡಿನ ಸಮಗ್ರ ಅಭ್ಯುದಯಕ್ಕೆ ಮುಂದಾಗಿರುವುದು ಸಂತಸದ ಸಂಗತಿ’ ಎಂದು ಹೇಳಿದರು.

ರಾಣೆಬೆನ್ನೂರಿನ ಹಿರೇಮಠದ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರುವ ವರ್ತನೆ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಗುಣಾತ್ಮಕ ಚಿಂತನೆಯ ಸದಾಚಾರ ಸಂಪನ್ನ ಗುಣವನ್ನು ಅಳವಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ. ಶರಣರ ಸಾಮಿಪ್ಯದಿಂದ ಬದುಕು ಹಸನಾಗಲಿದೆ’ ಎಂದು ನುಡಿದ ಅವರು, ಮಾನವೀಯ ಮೌಲ್ಯ ಅಳವಡಿಸಿಕೊಂಡು ಮನ್ನಡೆಯುವಂತೆ ಕರೆ ನೀಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸ್ಥಳೀಯ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿ, ‘ನಮ್ಮ ಬದುಕಿನ ಕಲ್ಪನೆ ಸರಿ ಇಲ್ಲದಿರುವುದರಿಂದ ನಾವಿಂದು ಹಲವಾರು ಬಗೆಯ ಸಂಕಷ್ಟಗಳಿಗೆ ಈಡಾಗುತ್ತಿದ್ದೇವೆ. ಭಗವಂತನ ಅಸ್ತಿತ್ವದ ಕುರಿತು ನಮ್ಮ ಅರಿವಿನ ಮಟ್ಟ ಸುಧಾರಣೆಗೊಳ್ಳಬೇಕಿದೆ. ಭಗವಂತ ಭಕ್ತಿ ಬಯಸುತ್ತಾನೆ ವಿನಃ ಬಲಿಯನ್ನಲ್ಲ ಎಂಬುದನ್ನು ಅರಿತು ಸಾಗಬೇಕಿದೆ’ ಎಂದರು.

ಹಾವೇರಿಯ ಗೌರಿಮಠದ ಶಿವಯೋಗಿ ಸ್ವಾಮೀಜಿ, ನೆಗಳೂರು ಹಿರೇಮಠದ ಗುರುಶಾಂತ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಸ್ವಾಮೀಜಿ, ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಚನ್ನಗಿರಿಯ ಡಾ.ಚಂದ್ರಮೋಹನ ಸ್ವಾಮೀಜಿ, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಭಾಗವಹಿಸಿದ್ದರು.

ಉದ್ಯಮಿ ಸಿ.ಸಿ.ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಎಂ.ಉದಾಸಿ, ನೇತಾಜಿ ಬ್ಯಾಂಕಿನ ಅಧ್ಯಕ್ಷ ಡಾ.ಪಿ.ಕೆ.ಹಿರೇಮಠ, ಎಚ್‌ಟಿಇಎಸ್‌ ಅಧ್ಯಕ್ಷ ಎಸ್.ಎಂ.ಸಿಂಧೂರ, ಶೇಖರಪ್ಪ ಗೌಳಿ ಇದ್ದರು. ಸೋಮಯ್ಯ ಗವಾಯಿ ಪ್ರಾರ್ಥಿಸಿದರು. ಉದಯಕುಮಾರ ವಿರಪಣ್ಣನವರ ಸ್ವಾಗತಿಸಿದರು. ರಾಜಣ್ಣ ಅಂಕಸಖಾನಿ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಂತಯ್ಯಶಾಸ್ತ್ರಿ ಹಿರೇಮಠ ನಿರೂಪಿಸಿದರು. ಬಸಯ್ಯಶಾಸ್ತ್ರಿ ವಾಚದಮಠ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry