ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಮ್ರ ರಾಜಕಾರಣಿ ನೊಗ್‌ರಾಜ್‌ನ ಕಥೆ!

Last Updated 12 ಜನವರಿ 2018, 12:38 IST
ಅಕ್ಷರ ಗಾತ್ರ

ಸಿನಿಮಾ: ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್‌

ನಿರ್ಮಾಣ: ಪುಷ್ಕರ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ, ಹೇಮಂತ್ ಎಂ. ರಾವ್

ನಿರ್ದೇಶನ: ಸಾದ್‌ ಖಾನ್

ತಾರಾಗಣ: ದಾನಿಶ್ ಸೇಠ್, ವಿಜಯ್ ಚೆಂಡೂರ್, ರೋಜರ್ ನಾರಾಯಣ್, ಶ್ರುತಿ ಹರಿಹರನ್

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿವೆ. ಮಂತ್ರಿಗಿರಿ ಅನುಭವಿಸಿರುವವರು, ಶಾಸಕರಾಗಿರುವವರು ಪಕ್ಷದ ಟಿಕೆಟ್‌ಅನ್ನು ಮತ್ತೆ ಗಿಟ್ಟಿಸಿಕೊಳ್ಳಲು ಈಗಾಗಲೇ ಕೆಲಸ ಆರಂಭಿಸಿರುತ್ತಾರೆ. ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಇರಿಸಿಕೊಂಡಿರುವ ಜಿಲ್ಲಾ ಮಟ್ಟದ ಅಥವಾ ತಾಲ್ಲೂಕು ಮಟ್ಟದ ರಾಜಕಾರಣಿಗಳೂ ಟಿಕೆಟ್ ಮೇಲೆ ಕಣ್ಣಿಟ್ಟು ಕೆಲಸ, ಕಸರತ್ತುಗಳನ್ನು ಆರಂಭಿಸಿರುತ್ತಾರೆ. ಅಂದರೆ, ಜನರ ಒಂದು ಕಣ್ಣು ರಾಜಕೀಯ ಚಟುವಟಿಕೆಗಳ ಮೇಲೆ ಇದ್ದೇ ಇರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕಬ್ಬಿಣ ಕಾದಿದ್ದಾಗಲೇ ಅದನ್ನು ಬಡಿದು ಬಗ್ಗಿಸಬೇಕು ಎಂಬ ಲೆಕ್ಕಾಚಾರದೊಂದಿಗೆ ನಿರ್ದೇಶಕ ಸಾದ್ ಖಾನ್ ಅವರು ‘ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್‌’ ಎನ್ನುವ ಸಿನಿಮಾ ಸಿದ್ಧಪಡಿಸಿ ಜನರ ಮುಂದೆ ಇಟ್ಟಿದ್ದಾರೆ. ಭಾರತದ ರಾಜಕಾರಣಿಗಳು ಚುನಾವಣೆಗೆ ಮುನ್ನ, ಚುನಾವಣೆಯ ವೇಳೆಯಲ್ಲಿ ಬಳಸಬಹುದಾದ ತಂತ್ರ– ಪ್ರತಿತಂತ್ರಗಳಿಗೆ ಸಿನಿಮಾ ಕಥೆಯ ರೂಪ ನೀಡಿದ್ದಾರೆ ನಿರ್ದೇಶಕರು. ಬಹುತೇಕ ರಾಜಕಾರಣಿಗಳು ತಾವು ಬಹಳ ವಿನಮ್ರ ವ್ಯಕ್ತಿತ್ವದವರು, ಜನರಿಗೆ ಸಹಾಯ ಮಾಡಲೆಂದೇ ಬಂದಿರುವವರು ಎಂದು ಮತ್ತೆ ಮತ್ತೆ ಹೇಳಿಕೊಳ್ಳುವ ಕಾರಣ, ನಮ್ಮ ಸುತ್ತಮುತ್ತಲಿನ ರಾಜಕಾರಣಿಗಳನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಈ ಸಿನಿಮಾ ವೀಕ್ಷಿಸಲು ಅಡ್ಡಿಯಿಲ್ಲ.

ಸಿನಿಮಾದ ಕೇಂದ್ರಬಿಂದು ನಾಗರಾಜ್ ಪಾತ್ರವನ್ನು ದಾನಿಶ್ ಸೇಠ್ ನಿಭಾಯಿಸಿದ್ದಾರೆ. ನಾಗರಾಜ್‌ಗೆ ನಾಲಿಗೆ ಸರಿಯಾಗಿ ಹೊರಳುವುದಿಲ್ಲ. ಹಾಗಾಗಿ ಆತ ತನ್ನ ಹೆಸರನ್ನು ‘ನೊಗ್‌ರಾಜ್‌’ ಎಂದು ಹೇಳಿಕೊಳ್ಳುತ್ತಾನೆ. ತನ್ನ ಆಪ್ತಸಹಾಯಕ ಮಂಜುನಾಥನನ್ನು ‘ಮೊಂಜುನಾಥ್’ ಎಂದು ಕರೆಯುತ್ತಾನೆ. ಈ ಸಿನಿಮಾ ರಾಜಕಾರಣ ಮತ್ತು ಹಾಸ್ಯದ ಕಥಾಹಂದರ ಹೊಂದಿರಬೇಕು ಎಂದು ತೀರ್ಮಾನಿಸಿಕೊಂಡೇ ನಾಗರಾಜ್‌ನ ಪಾತ್ರ ಸೃಷ್ಟಿಸಿರುವ ನಿರ್ದೇಶಕರು, ಈ ವಿನಮ್ರ ರಾಜಕಾರಣಿಯ ಮೂಲಕ ಜನರನ್ನು ನಗಿಸಲು ಸಿನಿಮಾದುದ್ದಕ್ಕೂ ಯತ್ನಿಸಿದ್ದಾರೆ. ಟಿಕೆಟ್‌ ಗಿಟ್ಟಿಸಿಕೊಳ್ಳಲು, ಜನರ ಓಟು ಪಡೆಯಲು ನಾಗರಾಜ್‌ ಸುಳ್ಳು ಹೇಳಬಲ್ಲ, ನಾಟಕ ಆಡಬಲ್ಲ, ಅಳಬಲ್ಲ, ನಗಬಲ್ಲ, ಕೈ ಕುಯ್ದುಕೊಳ್ಳಬಲ್ಲ... ಇನ್ನೂ ಏನೇನೋ ಮಾಡಬಲ್ಲ. ಹೇಳಿಕೇಳಿ ಆತ ಅತ್ಯಂತ ವಿನಮ್ರ ರಾಜಕಾರಣಿ!

ತಮ್ಮ ಕ್ಷೇತ್ರದಲ್ಲಿ ಒಂದು ಅಭಿವೃದ್ಧಿ ಕಾರ್ಯ ನಡೆಸಲು ವಿನಮ್ರ ರಾಜಕಾರಣಿಗಳು ಎಂಥೆಂಥ ವ್ಯಕ್ತಿಗಳ ಎದೆಗೆ ಗುರಿಯಿಡುತ್ತಾರೆ, ಆ ಕೆಲಸ ಪೂರ್ಣಗೊಂಡ ನಂತರ ಅದನ್ನು ಮಾಡಿಸಿದ್ದು ತಾನೇ ಎಂದು ಹೇಳಿಕೊಳ್ಳಲು ಯಾರೆಲ್ಲ ಕಾದಿರುತ್ತಾರೆ, ಒಬ್ಬ ಕಾರ್ಪೊರೇಟರ್ ಜನರಿಗಾಗಿ (ಅಥವಾ ವೋಟಿಗಾಗಿ!) ಮಾಡಿದ ಕೆಲಸವನ್ನು ಶಾಸಕನೊಬ್ಬ ತನ್ನದೆಂದು ಹೇಳಿಕೊಂಡಾಗ ಆ ಶಾಸಕನ ಸೊಂಟ ಮುರಿಯಲು ಕಾರ್ಪೊರೇಟರ್‌ ಏನೆಲ್ಲ ತಂತ್ರಗಳನ್ನು ಹೆಣೆಯುತ್ತಾನೆ ಎಂಬುದನ್ನು ಸಿನಿಪರದೆಯ ಮೇಲೆ ತೋರಿಸುವ ಯತ್ನಗಳೂ ಈ ಸಿನಿಮಾದಲ್ಲಿ ಇವೆ.

ಸಿನಿಮಾದ ನಾಯಕನಿಗೆ ‘ಅರುಣ್ ಪಾಟೀಲ್’ ಎನ್ನುವ ಪಾತ್ರದ ಮೂಲಕ ಪ್ರತಿನಾಯಕನೊಬ್ಬನನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ. ರೋಜರ್‌ ನಾರಾಯಣ್‌ ಆ ಪಾತ್ರ ನಿಭಾಯಿಸಿದ್ದಾರೆ. (ಸಿನಿಮಾದ ನಿಜ ಹೀರೊ ಯಾರು, ಖಳ ಯಾರು ಎಂಬ ಪ್ರಶ್ನೆಯೂ ವೀಕ್ಷಕರಲ್ಲಿ ಕೊನೆಯಲ್ಲಿ ಮೂಡಬಹುದು.) ಒಳ್ಳೆಯ ಕೆಲಸಗಳ ಮೂಲಕವೇ ರಾಜಕಾರಣದಲ್ಲಿ ಏನಾದರೂ ಬದಲಾವಣೆ ತರಲು ಸಾಧ್ಯ ಎಂಬ ನಂಬಿಕೆ ಇರುವ, ಅಭಿವೃದ್ಧಿ ವಿಚಾರಗಳ ಮೂಲಕವೇ ಜನರನ್ನು ಗೆಲ್ಲಲು ಸಾಧ್ಯ ಎನ್ನುವ ಸುಸಂಸ್ಕೃತ ಅರುಣ್ ಪಾಟೀಲ್. ಆದರೆ, ಅಭಿವೃದ್ಧಿ ಅಂದರೆ ಏನೆಂಬುದೂ ಗೊತ್ತಿಲ್ಲದ, ಭಾಷಣದ ನಡುವೆ ಹೀಗೇ ಸುಮ್ಮನೆ ಎಂಬಂತೆ ‘ಭಾರತವನ್ನು ಮಹಾನ್ ಆಗಿಸೋಣ’ ಎನ್ನುವ ವ್ಯಕ್ತಿತ್ವ ನಾಗರಾಜ್‌ನದು!

ಚುನಾವಣಾ ಅಭಿಯಾನದ ಸಂದರ್ಭದಲ್ಲಿ ಅರುಣ್‌ ಪಾಟೀಲ್‌, ಜನರ ಜೊತೆ ಸಂಪರ್ಕ ಸಾಧಿಸಿ ಅವರ ಬೇಕು–ಬೇಡಗಳ ಬಗ್ಗೆ ಗಮನಹರಿಸುತ್ತಾನೆ. ಆದರೆ ಬೇರೊಬ್ಬರ ಚುನಾವಣಾ ಪ್ರಣಾಳಿಕೆಯನ್ನೂ ನಕಲು ಮಾಡುವ ನಾಗರಾಜ್‌, ‘ಧರ್ಮ, ಭಾರತೀಯ ಸಂಸ್ಕೃತಿ’ ಎಂಬ ವಿಚಾರಗಳನ್ನು ಮುಂದಿಟ್ಟು ಎದುರಾಳಿಗೆ ಜನರ ಮತಗಳು ಸಿಗದಂತೆ ಮಾಡುವ ಕೆಲಸದಲ್ಲಿ ತೊಡಗುತ್ತಾನೆ. ಕೊನೆಯಲ್ಲಿ ‘ಸತ್ಯಕ್ಕೇ ಜಯ’ ಎಂಬ ಸಂದೇಶ ಸಾರುವ ಸಿನಿಮಾ ಇದಲ್ಲ, ‘ಯಾವುದಕ್ಕೆ ಜಯ ಸಿಗುತ್ತದೆಯೋ ಅದೇ ಸತ್ಯವೆ?’ ಎಂಬ ಪ್ರಶ್ನೆಯನ್ನು ಮೂಡಿಸಬಲ್ಲ ಚಿತ್ರ ಇದು. ಆದರೆ, ಸಂದೇಶವೊಂದು ಈ ಸಿನಿಮಾದುದ್ದಕ್ಕೂ ಸೂಚ್ಯವಾಗಿ ರವಾನೆಯಾಗುತ್ತಿರುತ್ತದೆ. ಅಂದಹಾಗೆ, ‘ಧರ್ಮ, ಭಾರತೀಯ ಸಂಸ್ಕೃತಿ’ಯಂತಹ ವಿಷಯಗಳನ್ನು ಚುನಾವಣಾ ಸಂದರ್ಭದಲ್ಲಿ ಬಳಸಿಕೊಳ್ಳುವ ನಾಗರಾಜ್‌ನ ಸ್ವಭಾವ ವಾಸ್ತವ ಜಗತ್ತಿನ ಯಾವುದಾದರೂ ರಾಜಕಾರಣಿಯಲ್ಲಿ ಕಾಣುವುದು ಅಚ್ಚರಿಯ ವಿಷಯವಂತೂ ಅಲ್ಲ!

‘ಮಾತನಾಡುವುದೇ ನಮ್ಮ ಕೆಲಸ, ಜನ ಎಲ್ಲವನ್ನೂ ನಂಬುತ್ತಾರೆ’ ಎನ್ನುವುದು ನಾಗರಾಜ್‌ ರಾಜಕಾರಣ ಮತ್ತು ಸಮಾಜದ ಬಗ್ಗೆ ಹೊಂದಿರುವ ನಂಬಿಕೆ. ಇಂಥ ನಂಬಿಕೆ ಇರುವವರನ್ನು ಕೂಡ ನಿಜ ಜೀವನದಲ್ಲಿ ಕಂಡುಕೊಳ್ಳುವುದು ಕಷ್ಟದ ಕೆಲಸವಲ್ಲ.

ನಾಗರಾಜ್‌ನ ಇಂಗ್ಲಿಷ್‌ ಮೋಹ ಚಿತ್ರದ ಬಹುತೇಕ ದೃಶ್ಯಗಳನ್ನು ಆವರಿಸಿಕೊಂಡಿದೆ.ಆತನ ಹಾಸ್ಯ ಕೆಲವರಲ್ಲಿ ನಗು ಉಕ್ಕಿಸಬಹುದು, ಇನ್ನು ಕೆಲವರಿಗೆ ಕಿರಿಕಿರಿ ಅನಿಸಬಹುದು, ಅತಿ ಅನ್ನಿಸಬಹುದು. ಇಡೀ ಸಿನಿಮಾದ ನಿರೂಪಣೆಯನ್ನು ಇನ್ನಷ್ಟು ಬಿಗಿಯಾಗಿ ಮಾಡಬಹುದಿತ್ತು, ಕೆಲವಷ್ಟು ದೃಶ್ಯಗಳನ್ನು ಇನ್ನಷ್ಟು ಸೌಮ್ಯವಾಗಿಸಬಹುದಿತ್ತು ಎಂಬ ಅನಿಸಿಕೆ ವ್ಯಕ್ತಪಡಿಸುವ ಅವಕಾಶವನ್ನು ನಿರ್ದೇಶಕರು ಉಳಿಸಿಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT