ಕೇಶಕ್ಕೆ ಮಾಲಿನ್ಯ ಸಂಕಟ

7

ಕೇಶಕ್ಕೆ ಮಾಲಿನ್ಯ ಸಂಕಟ

Published:
Updated:
ಕೇಶಕ್ಕೆ ಮಾಲಿನ್ಯ ಸಂಕಟ

ಉದ್ದದ ಕೂದಲು ಎಲ್ಲರ ಕನಸು. ನೀಳ ಕೇಶರಾಶಿಯ ಚೆಲುವಿನೊಂದಿಗೆ ಬಗೆ ಬಗೆ ಕೇಶವಿನ್ಯಾಸ ಮಾಡಿಕೊಳ್ಳುವ ವಿಷಯದಲ್ಲಿ ಹುಡುಗಿಯರಷ್ಟೇ ಇಂದಿನ ಹುಡುಗರೂ ನಾಜೂಕು. ದಿನಕ್ಕೊಂದು ರೀತಿಯಲ್ಲಿ ತಯಾರಾಗುತ್ತಾ ಫ್ಯಾಷನ್‌ ಜಗತ್ತಿಗೆ ತೆರೆದುಕೊಳ್ಳುವುದು ಮಾಮೂಲಿಯೂ ಹೌದೆನ್ನಿ.

ಆದರೆ ಈ ಕನಸುಗಳಿಗೆ ತಣ್ಣೀರು ಎರಚುತ್ತಿರುವುದು ಕೂದಲಿನ ಸಮಸ್ಯೆ. ಆರೈಕೆಯ ವಿಷಯದಲ್ಲಿ ಅದೆಷ್ಟೇ ಮುಂಜಾಗರೂಕತೆ ವಹಿಸಿದರೂ ಹಲವು ರೀತಿಗಳಲ್ಲಿ ಕೂದಲಿನ ಆರೋಗ್ಯಕ್ಕೆ ಪೆಟ್ಟು ಬೀಳುತ್ತಲೇ ಇರುತ್ತದೆ. ಕೂದಲಿನ ಹಲವು ಸಮಸ್ಯೆಗಳಿಗೆ ಮಾಲಿನ್ಯವೂ ಮುಖ್ಯ ಕಾರಣ. ಹಸಿರು ನಾಶವಾಗಿ ಮೇಲುಗೈ ಸಾಧಿಸಿರುವ ಶುಷ್ಕ ವಾತಾವರಣ ಹತ್ತಾರು ಸಮಸ್ಯೆಗಳನ್ನು ಹೊತ್ತು ತರುತ್ತಿದೆ.

ಮಲಿನಗೊಂಡ ಗಾಳಿ ಹಾಗೂ ವಿಪರೀತ ಉಷ್ಣ ವಾತಾವರಣ ಕೂದಲಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಮಲಿನಗೊಂಡ ಗಾಳಿಯಿಂದಾಗಿ ಹೊಟ್ಟು, ತುರಿಕೆ, ಜಿಡ್ಡು, ಕೂದಲಿನ ಬುಡದಲ್ಲಿ ನೋವು ಕಾಣಿಸಿಕೊಳ್ಳುವುದು, ಕೂದಲು ಉದುರುವುದು ಮುಂತಾದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ವಾತಾವರಣದಲ್ಲಿರುವ ದೂಳು, ಧೂಮಪಾನ, ಸತು, ಸೀಸ, ಅರ್ಸೆನಿಕ್‌ ಹಾಗೂ ಸಲ್ಫರ್‌ ಡೈಆಕ್ಸೈಡ್‌, ನೈಟ್ರೊಜನ್‌ ಡೈಆಕ್ಸೈಡ್‌, ಅಮೋನಿಯಾ, ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೊಕಾರ್ಬನ್‌ಗಳು ಹಲವು ಸಮಸ್ಯೆಗಳಿಗೆ ಕಾರಣವಾಗಿವೆ.

ಚರ್ಮರೋಗ ತಜ್ಞೆ ಪ್ರಫುಲ್ಲಾ ಜಿ.ಕೆ. ಅವರ ಪ್ರಕಾರ ‘ಮಹಾನಗರಗಳಲ್ಲಿ ಇರುವವರು ಕೂದಲು ಹಾಗೂ ಚರ್ಮದ ಸಮಸ್ಯೆಯಿಂದಾಗಿ ಸಾಕಷ್ಟು ಬಳಲುತ್ತಿದ್ದಾರೆ. ಮಾಲಿನ್ಯ ಕೂದಲಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರದಿದ್ದರೂ ಕೂದಲಿನ ಆರೋಗ್ಯಕ್ಕೆ ಮಾರಕವಂತೂ ಹೌದು. ಉಷ್ಣತೆ ಹೆಚ್ಚಿದ್ದಷ್ಟೂ ಕೂದಲು ಉದುರುವ ಸಮಸ್ಯೆ ಜಾಸ್ತಿ. ಸೂರ್ಯನ ಕಿರಣಗಳಿಗೆ ತೆರೆದುಕೊಂಡಷ್ಟೂ ಕೂದಲು ಶುಷ್ಕಗೊಳ್ಳುತ್ತವೆ. ಇದರಿಂದ ಕೂದಲು ತುಂಡಾಗುತ್ತದೆ. ವಾತಾವರಣದಲ್ಲಿನ ಹಾನಿಕಾರಕ ಅಂಶಗಳು ತ್ವಚೆ ಹಾಗೂ ಕೂದಲಿನ ಬುಡದಲ್ಲಿ ಶೇಖರಣೆಗೊಳ್ಳುವುದರಿಂದ ಆಗಾಗ, ಅಂದರೆ ವಾರಕ್ಕೆ ಕನಿಷ್ಠ ಮೂರು ಬಾರಿ ತಲೆ ಸ್ನಾನ ಮಾಡುವುದು ಒಳ್ಳೆಯದು’ ಎಂದು ಅವರು ಮಾಹಿತಿ ನೀಡುತ್ತಾರೆ.

ನಾನಾ ಕಾರಣಗಳಿಂದಾಗಿ ಮಹಾನಗರಗಳು ಹಾಗೂ ಇಲ್ಲಿಯ ಅಶುದ್ಧ ವಾತಾವರಣದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಹೀಗಾಗಿ ಕೂದಲಿನ ಬಗೆಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತ. ಹೊರಗಿನ ಮಲಿನಯುಕ್ತ ವಾತಾವರಣಕ್ಕೆ ಕೂದಲು ಹೆಚ್ಚು ತೆರೆದುಕೊಳ್ಳದಂತೆ ಕಾಳಜಿ ವಹಿಸಿ. ಹೆಣ್ಣುಮಕ್ಕಳು ಹೊರಗಡೆ ಓಡಾಡುವಾಗ ಕೂದಲನ್ನು ಆದಷ್ಟೂ ಮುಚ್ಚಿಕೊಳ್ಳುವುದು ಒಳಿತು. ಇನ್ನು ಹೆಲ್ಮೆಟ್‌ನಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ ಎಂಬ ವಾದ ಸುಳ್ಳು.

ಹೀಗಾಗಿ ಪುರುಷರು ನಿರಾತಂಕವಾಗಿ ಹೊರಗಡೆ ಓಡಾಡುವಾಗ ಹೆಲ್ಮೆಟ್‌ ಧರಿಸಿ. ಅವು ಮಲಿನ ವಾತಾವರಣದಿಂದ ನಿಮ್ಮ ಕೂದಲನ್ನು ರಕ್ಷಿಸುತ್ತವೆ. ಇನ್ನು ಕೂದಲ ರಕ್ಷಣೆಗೆಂದು ಹೇರ್‌ ಸನ್‌ಸ್ಕ್ರೀನ್‌ ಲೋಶನ್‌ಗಳು ಬಂದಿವೆ. ಹೇರ್‌ ಸಿರಂಗಳೂ ಮಾಲಿನ್ಯದಿಂದ ಕೂದಲಿಗೆ ರಕ್ಷಣೆ ನೀಡಲಿವೆ.

ತಲೆ ಬುರುಡೆಯಲ್ಲಿ ಎಣ್ಣೆಯ ಜಿಡ್ಡು ಹೆಚ್ಚಿದ್ದಷ್ಟೂ ಕೂದಲು ಸಮಸ್ಯೆ ಕಟ್ಟಿಟ್ಟ ಬುತ್ತಿ. ಹೀಗಾಗಿ ಆಗಾಗ ತಲೆಕೂದಲನ್ನು ಸ್ವಚ್ಛ ಮಾಡುವುದು ಮುಖ್ಯ. ಕನಿಷ್ಠ ವಾರಕ್ಕೆ ಮೂರು ಬಾರಿ ತಲೆ ಸ್ನಾನ ಮಾಡಿ ಕೂದಲಿನ ಬುಡ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಕೂದಲಿನ ಬುಡಕ್ಕೆ ಆಗಾಗ ಎಣ್ಣೆಯಿಂದ ಮೃದುವಾಗಿ ಮಸಾಜ್‌ ಮಾಡುವುದರಿಂದಲೂ ರಕ್ತಸಂಚಾರ ಉತ್ತಮವಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ. ಮಲಿನಯುಕ್ತ ವಾತಾವರಣದಿಂದ ಅದಾಗಲೇ ನಿಮ್ಮ ಕೂದಲು ಸಾಕಷ್ಟು ಸಮಸ್ಯೆಯನ್ನು ಎದುರಿಸಿರುತ್ತದೆ. ಹೀಗಾಗಿ ಸಾಧ್ಯವಾದಷ್ಟು ರಸಾಯನಯುಕ್ತ ಔಷಧಗಳ ಟ್ರೀಟ್‌ಮೆಂಟ್‌ನಿಂದ ದೂರವಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry