ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ

7

ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ

Published:
Updated:
ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ

ನಗರದ ನೃತ್ಯಸಂಸ್ಥೆಗಳಲ್ಲಿ ಒಂದಾದ ದೃಷ್ಟಿ ಸಂಸ್ಥೆಯು ನೃತ್ಯ ಶಿಕ್ಷಣ, ಕಾರ್ಯಾಗಾರ, ನೃತ್ಯೋತ್ಸವ, ಪ್ರಶಸ್ತಿ ಪ್ರದಾನ - ಮುಂತಾದ ಕಾರ್ಯಕ್ರಮಗಳಿಂದ ವರ್ಷವಿಡೀ ಚಟುವಟಿಕೆಯಿಂದ ಕಲಾಭಿಮಾನಿಗಳ ಪ್ರೀತಿ, ಆದರಗಳಿಗೆ ಪಾತ್ರವಾಗಿದೆ. ಶನಿವಾರದಂದು (ಜ.13) ನಡೆಯುವ ನೃತ್ಯೋತ್ಸವದಲ್ಲಿ ಪ್ರೊ.ಸಿ.ವಿ. ಚಂದ್ರಶೇಖರ್ ಮತ್ತು ಡಾ. ಸುನಿಲ್ ಕೊಠಾರಿ ಅವರಿಗೆ ‘ದೃಷ್ಟಿ ಪುರಸ್ಕಾರ’ ಪ್ರದಾನ ಮಾಡಲಿದೆ.

ವಿಜ್ಞಾನದಲ್ಲಿ ಸ್ನಾತಕೋತ್ತರ (ಎಂ.ಎಸ್ಸಿ) ಪದವೀಧರರಾದ ಪ್ರೊ.ಸಿ.ವಿ. ಚಂದ್ರಶೇಖರ್ (ಸಿ.ವಿ.ಸಿ.) ಜಗದ್ವಿಖ್ಯಾತ ಕಲಾಕ್ಷೇತ್ರದಲ್ಲಿ ನೃತ್ಯ ಅಭ್ಯಾಸ ಮಾಡಿ, ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಶಿಕ್ಷಕರಾಗಿ ಸೇರಿದರೂ, ಬರೋಡಾದ ಎಂ.ಎಸ್. ಯೂನಿವರ್ಸಿಟಿಯಲ್ಲಿ ಡೀನ್ ಆಗಿ ಬಹುಕಾಲ ಸೇವೆ ಸಲ್ಲಿಸಿ, ನೂರಾರು ಜನಗಳಿಗೆ ನೃತ್ಯ ಕಲಿಸಿ ಮನ್ನಣೆ ಗಳಿಸಿದ್ದಾರೆ.

ಚೆನ್ನೈನಲ್ಲಿ ‘ನೃತ್ಯಶ್ರೀ’ ಹೆಸರಿನಲ್ಲಿ ಶಾಲೆಯನ್ನು ತೆರೆದು ನಿರಂತರ ಮಾರ್ಗದರ್ಶನ ಮಾಡುತ್ತಿದ್ದಾರೆ. ಜಯಾ ಚಂದ್ರಶೇಖರ್ ಮತ್ತು ಸಿ.ವಿ. ಚಂದ್ರಶೇಖರ್ ದೇಶ ಕಂಡ ಅಪರೂಪದ ನೃತ್ಯ ದಂಪತಿ. ದೇಶಾದ್ಯಂತ ಅವರ ನೃತ್ಯ ಕಾರ್ಯಕ್ರಮಗಳು ನಡೆದಿವೆ. ಅಲ್ಲದೆ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಅವರು ನೃತ್ಯ ಕಾರ್ಯಾಗಾರಗಳನ್ನು ನಡೆಸಿ, ಯುವ ನರ್ತಕರ ನೃತ್ಯವನ್ನು ಪರಿಷ್ಕಾರಗೊಳಿಸುವ ಕಾಯಕದಲ್ಲಿ ನಿರಂತರ ಮಗ್ನರಾಗಿದ್ದಾರೆ.

(ಡಾ.ಸುನೀಲ್ ಕೊಠಾರಿ)

ಪೌರಾಣಿಕ, ಸಾಮಾಜಿಕ, ದೇಶಭಕ್ತಿಯ ವಸ್ತು-ಕಥೆಗಳನ್ನು ಆಧರಿಸಿ ಸಿ.ವಿ.ಸಿ. ಮಾಡಿರುವ ನೃತ್ಯ ಸಂಯೋಜನೆಗಳು ಗಣ್ಯ ಸ್ಥಾನ ಪಡೆದಿವೆ. ಅವರು ಕಾಳಿದಾಸನ ಕಾವ್ಯಗಳನ್ನು ಆಧರಿಸಿ (ಮೇಘದೂತ, ಋತು ಸಂಹಾರ) ಮಾಡಿರುವ ನೃತ್ಯ ರೂಪಕಗಳು ಬಹು ಜನಪ್ರಿಯ. ಕ್ರೀಡೆ-ಆಟಗಳನ್ನು ಕುರಿತೂ ಅವರು ನೃತ್ಯ ರೂಪಕ ಮಾಡಿರುವುದು, ಅವರ ಪ್ರತಿಭೆ, ಕ್ರಿಯಾಶೀಲತೆ, ಅನುಭವಗಳಿಗೆ ಹಿಡಿದ ಕನ್ನಡಿ.

ಸಹಜವಾಗೇ ಅವರ ಏಳು ದಶಕಗಳ ನೃತ್ಯ ಸೇವೆಯನ್ನು ಮನ್ನಿಸಿ, ಅನೇಕ ಗೌರವ-ಪ್ರಶಸ್ತಿಗಳು ಅವರ ಕೊರಳನ್ನು ಅಲಂಕರಿಸಿವೆ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ್ ಸಮ್ಮಾನ್, 'ಪದ್ಮಭೂಷಣ' - ಅವುಗಳಲ್ಲಿ ಕೆಲವು. ಇದೀಗ 'ದೃಷ್ಟಿ ಪುರಸ್ಕಾರ'ಕ್ಕೆ ಭಾಜನರಾಗಲಿರುವ ಚಂದ್ರಶೇಖರ್‍ರ ಹೆಜ್ಜೆಯ ಗೆಜ್ಜೆ, 83ರ ಇಳಿ ವಯಸ್ಸಿನಲ್ಲೂ ನಿನಾದಿಸುತ್ತಿರುವುದು, ಸಂತೋಷ-ಹೆಮ್ಮೆಯ ಸಂಗತಿ.

(ಸಿ.ವಿ.ಚಂದ್ರಶೇಖರ್)

ನೃತ್ಯ ಕ್ಷೇತ್ರದ ಗಣ್ಯ ಹೆಸರು ಡಾ.ಸುನಿಲ್ ಕೊಠಾರಿ ಕಥಕ್ ಮತ್ತು ಭರತನಾಟ್ಯಗಳೆರಡನ್ನೂ ಅಭ್ಯಸಿಸಿ, ನೃತ್ಯದಲ್ಲಿ ಪಿಎಚ್‍.ಡಿ ಮಾಡಿ ಡಾಕ್ಟರೇಟ್‌ ಗಳಿಸಿದ್ದಾರೆ. ಕೋಲ್ಕತ್ತಾದ ರವೀಂದ್ರ ಭಾರತಿಯಲ್ಲಿ ಪ್ರೊಫೆಸರ್, ಜವಹರಲಾಲ್ ನೆಹರು ಯೂನಿವರ್ಸಿಟಿಯಲ್ಲಿ ಡೀನ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ನ್ಯೂಯಾರ್ಕ್ ಯೂನಿವರ್ಸಿಟಿಯಲ್ಲಿ ಫುಲ್‍ಬ್ರೈಟ್ ಪ್ರೊಫೆಸರ್ ಹಾಗೂ ಜಾರ್ಜಿಯ ಯೂನಿವರ್ಸಿಟಿಯಲ್ಲೂ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ. 20 ಪುಸ್ತಕಗಳನ್ನು ಬರೆದು, ನೃತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಐದು ದಶಕಗಳಿಗೂ ಮೀರಿ ನೃತ್ಯ ವಿಮರ್ಶೆಗಳನ್ನು ಮಾಡುತ್ತಾ ರಾಷ್ಟ್ರದ ‘ಜಂಗಮ ವಿಮರ್ಶಕ’ರೆಂದೇ ಅವರು ಖ್ಯಾತರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ‘ರತ್ನ ಸದಸ್ಯ’ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.  ನ್ಯೂಯಾರ್ಕ್‌ನ ‘ಡಾನ್ಸ್ ಕ್ರಿಟಿಕ್ಸ್ ಅಸೋಸಿಯೇಷನ್’ನ ಜೀವಮಾನ ಸಾಧನೆಯ ಪ್ರಶಸ್ತಿ ಸಹ ಗಳಿಸಿರುವ ಅಪರೂಪದ ವಿದ್ವಾಂಸರು. ವಿಮರ್ಶಕ, ನೃತ್ಯ ಇತಿಹಾಸಕಾರ, ವಿದ್ವಾಂಸ ಹಾಗೂ ಲೇಖಕರಾಗಿ ಬೆಳಗುತ್ತಿರುವ ಡಾ.ಸುನಿಲ್ ಕೊಠಾರಿ ಅವರಿಗೆ ಈಗ ‘ದೃಷ್ಟಿ ಪುರಸ್ಕಾರ’ ಸಂದಾಯವಾಗಲಿದೆ.

ದೃಷ್ಟಿ ನೃತ್ಯೋತ್ಸವವು ಅನುರಾಧಾ ವಿಕ್ರಾಂತ್ ಅವರ ಕನಸಿನ ಕೂಸು. ನಿರುಪಮಾ ರಾಜೇಂದ್ರ, ನರ್ಮದಾ ಹಾಗೂ ಪದ್ಮಾ ಸುಬ್ರಹ್ಮಣ್ಯಂ ಅವರಲ್ಲಿ ಶಿಕ್ಷಣ ಪಡೆದಿರುವ ಅನುರಾಧಾ ತಮ್ಮ ನೃತ್ಯ ಶಾಲೆಯಲ್ಲಿ (ದೃಷ್ಟಿ ಆರ್ಟ್ ಸೆಂಟರ್) ಹಲವರಿಗೆ ಶಿಕ್ಷಣ ನೀಡುತ್ತಿದ್ದಾರೆ. ನರ್ತಕಿ, ಬೋಧಕಿ ಹಾಗೂ ವ್ಯವಸ್ಥಾಪಕಿಯಾಗಿರುವ ಅನುರಾಧಾ ವಿಕ್ರಾಂತ್ ಈ ನೃತ್ಯೋತ್ಸವವನ್ನು ಕಳೆದ 12 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಮೂವರು ಗುರುಗಳಿಗೆ - ಡಾ.ಮಾಯಾರಾವ್, ಗುರು ನರ್ಮದಾ ಮತ್ತು ಗುರು ಪದ್ಮಿನಿ ರಾಮಚಂದ್ರನ್ ನೃತ್ಯ ನಮನ ಸಲ್ಲಿಸಲಿದ್ದಾರೆ.

ದೃಷ್ಟಿ 13ನೇ ರಾಷ್ಟ್ರೀಯ ನೃತ್ಯೋತ್ಸವ

ಅತಿಥಿ–ಸಚಿವ ಕೃಷ್ಣ ಬೈರೇಗೌಡ, ಲಲಿತಾ ಶ್ರೀನಿವಾಸನ್, ಅಧ್ಯಕ್ಷತೆ–ಡಾ.ಟಿ.ಎಂ. ಮಂಜುನಾಥ, ದೃಷ್ಟಿ ಪುರಸ್ಕಾರ ಪ್ರಶಸ್ತಿ ಪ್ರದಾನ– ಪ್ರಶಸ್ತಿ ಪುರಸ್ಕೃತರು–ಪ್ರೊ.ಸಿ.ವಿ.ಚಂದ್ರಶೇಖರ್, ಡಾ.ಸುನೀಲ್ ಕೊಠಾರಿ, ಮಾಯಾ ನಮನ–ನಿರುಪಮಾ ರಾಜೇಂದ್ರ ದಂಪತಿ ಹಾಗೂ ಮಧು ನಟರಾಜ್, ‘ನರ್ಮದಾ ನಮನ’–ಸತ್ಯನಾರಾಯಣ ರಾಜು, ಸೌಂದರ್ಯಾ ಶ್ರೀವತ್ಸ, ಪ್ರವೀಣ್‌ಕುಮಾರ್ ಮತ್ತು ಅನುರಾಧಾ ವಿಕ್ರಾಂತ್, ‘ಪದ್ಮಿನಿ ನಮನ’ –ಮಿಥುನ್ ಶ್ಯಾಂ, ಕೀರ್ತನಾ ರಾವ್, ಸ್ನೇಹಾ ದೇವನಂದನ್, ಶ್ರುತಿ ಪಾರ್ಶ್ವನಾಥ್ ಉಪಾಧ್ಯೆ ಮತ್ತು ಪ್ರಿಯಾಂಕ ರಾಘವನ್, ಆಯೋಜನೆ–ದೃಷ್ಟಿ ಫೌಂಡೇಷನ್, ಸ್ಥಳ– ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿಕಾವಲ್, ಶನಿವಾರ ಸಂಜೆ 6.15

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry