ರಾಜನ್‌–ಸಾಜನ್‌ ಮಿಶ್ರಾ ಜುಗಲ್‌ಬಂದಿ ನಾಳೆ

7

ರಾಜನ್‌–ಸಾಜನ್‌ ಮಿಶ್ರಾ ಜುಗಲ್‌ಬಂದಿ ನಾಳೆ

Published:
Updated:
ರಾಜನ್‌–ಸಾಜನ್‌ ಮಿಶ್ರಾ ಜುಗಲ್‌ಬಂದಿ ನಾಳೆ

ಠುಮ್ರಿ ರಾಣಿ ಪದ್ಮವಿಭೂಷಣ ವಿದುಷಿ ಗಿರಿಜಾ ದೇವಿ ಅವರ ಸ್ಮರಣಾರ್ಥ ಸಂಗೀತ ಸಾಧನಾ ಸಂಸ್ಥೆ ‘ಬನಾರಸಿಯಾ’ ಎಂಬ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗಾಯನ ಸಮಾಜದಲ್ಲಿ ಭಾನುವಾರ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬನಾರಸ್‌ ಘರಾಣೆಯ ಖ್ಯಾತ ಗಾಯಕರಾದ ಪಂ.ರಾಜನ್ ಮಿಶ್ರಾ ಮತ್ತು ಸಾಜನ್‌ ಮಿಶ್ರಾ ಹಾಡಲಿದ್ದಾರೆ.

ಪಂ.ರಾಜನ್‌–ಸಾಜನ್‌ ಮಿಶ್ರಾ ಸಹೋದರರು ಬನಾರಸ್‌ ಘರಾಣೆಯ ವಿಶಿಷ್ಟ ಶೈಲಿಗೆ ಹೆಸರುವಾಸಿ. ಪ್ರತಿ ಕಛೇರಿಯನ್ನೂ ಆರಂಭಿಸುವ ಮುನ್ನ ‘ಮ್ಯೂಸಿಕ್‌ ಈಸ್‌ ವರ್ಶಿಪ್‌ ಫಾರ್‌ ಅಸ್‌’ (ಸಂಗೀತವೇ ನಮಗೆ ಪೂಜೆ) ಎಂದು ಹೇಳಿಯೇ ಕಛೇರಿ ಆರಂಭಿಸುತ್ತಾರೆ.

ವಾರಣಾಸಿ ಮೂಲದ ರಾಜನ್‌ ಮಿಶ್ರಾ (ಜನನ: 1951), ಸಾಜನ್‌ಮಿಶ್ರಾ (ಜನನ: 1956) ಸೋದರರು ತಮ್ಮ ತಾತ ಬಡೆ ರಾಮ್‌ ದಾಸ್‌ಜಿ ಮಿಶ್ರಾ ಅವರಿಂದ ಸಂಗೀತ ದೀಕ್ಷೆ ಪಡೆದರು. ತಂದೆ ಹನುಮಾನ್‌ ಪ್ರಸಾದ್‌ ಮಿಶ್ರಾ ಮತ್ತು ಮಾವ ಸಾರಂಗಿ ವಾದಕ ಗೋಪಾಲ್‌ ಪ್ರಸಾದ್‌ ಮಿಶ್ರಾ ಅವರಲ್ಲಿ ಸಂಗೀತದ ಭದ್ರ ಬುನಾದಿ ಹಾಕಿಸಿಕೊಂಡರು.

ಹದಿ ವಯಸ್ಸಿನಲ್ಲೇ ಸಂಗೀತ ಕಛೇರಿ ನೀಡಲಾರಂಭಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಖಯಾಲ್‌ ಪದ್ದತಿಯಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಈ ಸಹೋದರರು ಸಂಗೀತದ ಟಪ್ಪ, ತರಾನ ಮತ್ತು ಭಜನ್‌ ಪ್ರಕಾರಗಳಲ್ಲೂ ನಿಸ್ಸೀಮರು.

ದೇಶವಿದೇಶಗಳಲ್ಲಿ ಸಾವಿರಾರು ಕಛೇರಿಗಳನ್ನು ನೀಡಿದ್ದಾರೆ. ಇಂದಿನ ಜುಗಲ್‌ಬಂದಿ ಗಾಯಕರಲ್ಲಿ ವಿಶ್ವಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕೆಲವೇ ಕೆಲವು ಗಾಯಕರಲ್ಲಿ ಪಂ.ರಾಜನ್‌–ಸಾಜನ್‌ ಮಿಶ್ರಾ ಪ್ರಮುಖರು.

ಸಂಗೀತ ಸಾಧನಾ: ಕೋರಮಂಗಲದಲ್ಲಿರುವ ‘ಸಂಗೀತ ಸಾಧನಾ’ ಸಂಸ್ಥೆ ಗುರು–ಶಿಷ್ಯ ಪರಂಪರೆಯಲ್ಲಿ ಸಾಂಪ್ರದಾಯಿಕ ಸಂಗೀತವನ್ನು ಕಲಿಸುತ್ತಾ ಬಂದಿದೆ. 2009ರಲ್ಲಿ ಆರಂಭವಾದ ಈ ಸಂಸ್ಥೆ, ಸಂಗೀತ ಗುರು ಅನಿಂದಿತಾ ಮುಖರ್ಜಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಅನಿಂದಿತಾ ಮುಖರ್ಜಿ ಸ್ವತಃ ಗಾಯಕಿ. ಆಗ್ರಾ–ಅತ್ರೌಲಿ ಘರಾಣ ಶೈಲಿಯಲ್ಲಿ ಹಾಡುವ ಇವರು, ಹಲವಾರು ಶಿಷ್ಯರನ್ನು ಹೊಂದಿದ್ದಾರೆ.

ಹಿಂದೂಸ್ತಾನಿ ಸಂಗೀತ, ಲಘು ಸಂಗೀತ, ತಬಲಾ, ಸಿತಾರ್‌ ಮುಂತಾದ ಗಾಯನ–ವಾದನ ಪ್ರಕಾರಗಳನ್ನು ಸಂಗೀತ ಸಾಧನಾ ಮಕ್ಕಳಿಗೆ ಕಲಿಸುತ್ತಿದೆ. ಜ.14ರಂದು ಮಧ್ಯಾಹ್ನ 3 ಗಂಟೆಯಿಂದ ‘ಸಂಗೀತ ಸಾಧನಾ’ ಸಂಸ್ಥೆಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಜತೆಗೆ ಸಂಗೀತ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಇದೆ.

**

‘ಬೆನಾರಸಿಯಾ’– ರಾಜನ್ ಮತ್ತು ಸಾಜನ್ ಮಿಶ್ರಾ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ: ಸ್ಥಳ– ಗಾಯನ ಸಮಾಜ,

ಕೆ.ಆರ್‌. ರಸ್ತೆ. ಭಾನುವಾರ ಸಂಜೆ 6.

ಮಧ್ಯಾಹ್ನ 3 ಗಂಟೆಯಿಂದ ವಿದ್ಯಾರ್ಥಿಗಳ ಗಾಯನ. ಮೊ– 96204 01420

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry