ಒಂದಿಷ್ಟು ಓದು, ಮಾತು...

7

ಒಂದಿಷ್ಟು ಓದು, ಮಾತು...

Published:
Updated:
ಒಂದಿಷ್ಟು ಓದು, ಮಾತು...

ಸಾಂಚಿಮುದ್ರೆ ಪ್ರಕಾಶನ ಜ.14ರಂದು (ಭಾನುವಾರ) ಬೆಳಿಗ್ಗೆ 10.30ಕ್ಕೆ ನಗರದ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್‌ ಕಲ್ಚರ್‌ನ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನಾಗರಾಜ ವಸ್ತಾರೆಯವರ 8 ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ‘ಒಂದಿಷ್ಟು ಓದು ಕೆಲವು ಮಾತು’ ಎಂಬ ಕಾರ್ಯಕ್ರಮದ ಶೀರ್ಷಿಕೆಯೇ ಹೇಳುವಂತೆ ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು ಕಲಾವಿದರು ಭಾಗವಹಿಸಿ ಪುಸ್ತಕಗಳ ಕುರಿತು ಚರ್ಚಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿರುವ ‘ಸಾಂಚಿಮುದ್ರೆ’ ಪ್ರಬಂಧ ಸಂಕಲನ. ಇದನ್ನು ಲೇಖಕರು ಅಭಿವೃದ್ಧಿಯ ಕಥನಗಳೆಂದು ಕರೆದಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಬರಿದಾಗುತ್ತಿರುವ ನೈಸರ್ಗಿಕ ಸಂಪತ್ತು, ಹೆಚ್ಚುತ್ತಿರುವ ಮಾನವ ಲೋಲುಪತೆಯನ್ನು ಈ ಸಂಕಲನ ಸೂಕ್ಷ್ಮವಾಗಿ ಟೀಕಿಸುತ್ತದೆ. ಲೇಖಕರ ಚೀನಾ ಪ್ರವಾಸದ ಅನುಭವಗಳ ಕುರಿತಾದ ‘ಆಹಾಹ ಚೀನಾ’, ಅಭಿವೃದ್ಧಿಯನ್ನು ವಿಡಂಬಿಸುವ ‘ಅಮೂರ್ತಸಿಟಿ’, ‘ಬೆಂಗಳೂರಿನ ಬದಲಿದ ಬದಿಯೂ ಬದುವೂ’, ‘ಆಧುನಿಕತೆಯ ಮೀಮಾಂಸೆ’, ‘ಈ ನಾಡಿಗೊಂದು ನಾಡಿಯಿದೆಯೆ?’, ‘ಸತ್ಯದ ಸಾವಿಗೆ ಸಾಕ್ಷಿಯಾಗಿದ್ದೇನೆ’ ಎಂಬ ಆರು ಪ್ರಬಂಧಗಳ ಸಂಗ್ರಹ ಈ ಹೊತ್ತಿಗೆಯಲ್ಲಿದೆ.

‘ಕಮಾನು ಕಟ್ಟುಕತೆ ಕಟ್ಟುಪಾಡು’ ಸಮಾರಂಭದಲ್ಲಿ ಅನಾವರಣಗೊಳ್ಳಲಿರುವ ಮತ್ತೊಂದು ಕೃತಿ. ಇದರಲ್ಲಿ ನೀರತೆಕ್ಕೆಯಲ್ಲಿ ಊರು ಮುಪ್ಪಾದ ವಿಸ್ಮಯ, ಬಾವಿಯೊಳಗಿಣುಕುವ ವಾವ್‌ ವಾವ್ ಉದ್ಗಾರ, ದೇವಾನುದೇವರುಗಳ ಪೇಗನ್ ಪಡೆ, ಗುಡಿಯ ನೋಡಿರಣ್ಣ, ನೆಲಮುಗಿಲುಗಳ ನಡುವೆ ಕಟ್ಟುವ ಮಹಾತ್ಮೆ, ನೆಲವು ನೆಲೆಯಾಗುವ ಬೆರಗು ಸೇರಿದಂತೆ ವಿವಿಧ 25 ಕತೆಗಳ ಸಂಗ್ರಹವಿದೆ.

ಲಲಿತ ಪ್ರಬಂಧಗಳ ಸಂಕಲನ ‘ಪಟ್ಟಣಪುರಾಣ’, ಕಥಾಸಂಕಲನಗಳಾದ ‘180 ಡಿಗ್ರಿ’, ‘90ನೇ ಡಿಗ್ರಿ’ ಗೂಗಲ್‌ನಿಂದ ಹೆಕ್ಕಿದ ಬರಹಗಳಾದ ‘ಬಿಯಾಂಡ್ ಝೀ’, ‘360 ಡಿಗ್ರಿ’ ಹಾಗೂ ನೀಳ್ಗತೆ ‘ಅರ್ಬನ್ ಪ್ಯಾಂಥರ್‌’ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿರುವ ಕೃತಿಗಳಾಗಿವೆ.

ಇದೇ ಸಂದರ್ಭ ಲೇಖಕ ವಸುಧೇಂದ್ರ ಅವರು ವಸ್ತಾರೆ ಕುರಿತು ಮಾತನಾಡಲಿದ್ದಾರೆ. ಕವಿ ಹಾಗೂ ಕತೆಗಾರ ಜಯಂತ್ ಕಾಯ್ಕಿಣಿ ಅವರು ವಸ್ತಾರೆ ಅವರ ವಿವಿಧ ಪುಸ್ತಕಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ. ಲೇಖಕ ಎಂ.ಎಸ್. ಶ್ರೀರಾಮ್, ಸಂಧ್ಯಾರಾಣಿ ಮತ್ತು ಕಲಾವಿದರಾದ ಮಂಡ್ಯ ರಮೇಶ್ ಮತ್ತು ಸುಷ್ಮಾ ಭಾರದ್ವಾಜ್ ಬಿಡುಗಡೆಗೊಂಡ ಪುಸ್ತಕಗಳಿಂದ ಆಯ್ದ ಭಾಗಗಳನ್ನು ಓದುತ್ತಾರೆ.

ವಾಸ್ತುಶಿಲ್ಪಿ (ಆರ್ಕಿಟೆಕ್ಟ್‌) ದೇವ್‌ ಬಿಲ್ದೀಕರ್‌ ಅವರು ವಸ್ತಾರೆ ಅವರನ್ನು ವಾಸ್ತುಶಿಲ್ಪಿಯಾಗಿ ಪರಿಚಯಿಸಿ, ಸಾಹಿತ್ಯ ಮತ್ತು ವಾಸ್ತುಶಿಲ್ಪದ ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳ ಕುರಿತು ಚರ್ಚಿಸಲಿದ್ದಾರೆ. ಸಾಹಿತಿ ಎಚ್‌.ಎಸ್‌. ವೆಂಕಟೇಶ್‌ಮೂರ್ತಿ, ನಿರ್ದೇಶಕ ಬಿ.ಸುರೇಶ್‌ ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry