ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿಗಳ ಸಂರಕ್ಷಣೆಯ ಜಾಡಿನಲ್ಲಿ ‘ಸೆಕಂಡ್‌ ನೇಚರ್‌’

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ವನ್ಯಜೀವಿ ಸಂರಕ್ಷಣೆಯ ಬಗ್ಗೆ, ವಿಶೇಷವಾಗಿ ಹುಲಿಗಳ ಸಂರಕ್ಷಣೆಯ ಕುರಿತು ಅನೇಕ ಪುಸ್ತಕಗಳು ಹಲವಾರು ಭಾಷೆಗಳಲ್ಲಿ ಪ್ರಕಟವಾಗಿವೆ. ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಸಂಜಯ್‌ ಗುಬ್ಬಿ ಅವರ ಹೊಸ ಪುಸ್ತಕ ‘ಸೆಕಂಡ್‌ ನೇಚರ್‌’ ಇದಕ್ಕೆ ಹೊಸ ಸೇರ್ಪಡೆ. ಜನವರಿ 14ರ ಭಾನುವಾರ ಪುಸ್ತಕ ಬಿಡುಗಡೆಯಾಗಲಿದೆ. ಅಂತರರಾಷ್ಟ್ರೀಯ ಓದುಗ ಮತ್ತು ವನ್ಯಜೀವಿ ಸಂರಕ್ಷಣಾ ಸಮುದಾಯವನ್ನು ತಲುಪುವ ಆಶಯದೊಂದಿಗೆ ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಪುಸ್ತಕದ ಬಗ್ಗೆ ಅವರು ವಿವರಿಸುವುದು ಹೀಗೆ...

‘ಸೆಕಂಡ್‌ ನೇಚರ್‌’ ಬಗ್ಗೆ...

ವನ್ಯಜೀವಿ ಸಂರಕ್ಷಣೆಯಲ್ಲಿ ಸಾಕಷ್ಟು ನಕಾರಾತ್ಮಕ ವಿಚಾರಗಳು ಕೇಳಿಬರುತ್ತವೆ. ಎಲ್ಲಾ ಕಡೆ ಕಾಡು ಹಾಳಾಗ್ತಿದೆ, ವನ್ಯಜೀವಿಗಳು ಹೋಗ್ತಿವೆ ಎಂಬುದು ಸಾಮಾನ್ಯ ದೂರು. ಇದು ನೈಜ ಪರಿಸ್ಥಿತಿ ಹೌದಾದರೂ ಬರಿಯ ಟೀಕೆ, ದೂರಿ ಸುಮ್ಮನಾಗಬೇಕಾ? ಅಥವಾ ಕೆಲಸ ಮಾಡಿ ತೋರಿಸಬೇಕಾ ಎಂಬುದು ನನ್ನನ್ನು ಕಾಡುವ ಪ್ರಶ್ನೆ. ವನ್ಯಜೀವಿಗಳನ್ನು ವಿಜ್ಞಾನದ ಮೂಲಕ ಅರಿತುಕೊಳ್ಳುವುದು, ಅರಿತುಕೊಂಡಿದ್ದನ್ನು ಸಮಾಜಕ್ಕೆ ತಲುಪಿಸುವುದು. ನಾನು ಹೇಳುವ ‘ಸಮಾಜ’ವೆಂದರೆ, ನಿರ್ಧಾರ ತೆಗೆದುಕೊಳ್ಳುವ ರಾಜಕಾರಣಿಗಳು, ಅವರಿಗೆ ಸಲಹೆ ಕೊಡುವ ಅಧಿಕಾರಿಗಳು, ಕೋಟ್ಯಂತರ ಜನರಿಗೆ ತಲುಪಿಸುವ ಜನರು ಮತ್ತು ವನ್ಯಜೀವಿಗಳಿಗೆ ನಿಜವಾದ ರಕ್ಷಣೆ ಕೊಡಬೇಕಾದ ಕಾಡಿನ ಸುತ್ತಮುತ್ತ ಇರುವ ನಾಗರಿಕರು. ಹೀಗೆ, ಈ ಸಮಾಜ ಒಟ್ಟು ಸೇರಿ ಸಂಘಟಿತ ಯತ್ನವಾಗಿ ಕಾರ್ಯರೂಪಕ್ಕೆ ಬಂದರೆ ಮಾತ್ರ ವನ್ಯಜೀವಿಗಳ ಸಂರಕ್ಷಣೆ ಸಾಧ್ಯ. ಇದು ‘ಸೆಕಂಡ್‌ ನೇಚರ್‌’ನ ತಿರುಳು.

ಪ್ರಜಾತಂತ್ರದ ಟೂಲ್‌ಗಳು...

ನಾನು ಮೇಲೆ ಪ್ರಸ್ತಾಪಿಸಿದ ನಾಲ್ಕು ಹಂತಗಳೂ ಅತ್ಯಂತ ಪ್ರಮುಖ ಮತ್ತು ಪರಿಣಾಮಕಾರಿ ಹಂತಗಳು. ಅಂದರೆ ಪ್ರಜಾತಂತ್ರದ ಎಲ್ಲಾ ಟೂಲ್‌ಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮ ಮತ್ತು ನಾಗರಿಕರೂ ಬಹುಮುಖ್ಯ ಅಂಗ. ಮಾಧ್ಯಮದೊಂದಿಗೆ ಯಾವಾಗ, ಯಾವ ಆಯಾಮದಲ್ಲಿ ಮಾತನಾಡಬೇಕು ಎಂಬುದೂ ಕಾರ್ಯತಂತ್ರದ ಒಂದು ಭಾಗ. ಹಾಗಾಗಿ ಯಾರಿಗೆ ಸಂದೇಶ ಕೊಡಬೇಕೆಂದರೆ ಯಾರ ಜೊತೆ ಕೆಲಸ ಮಾಡಬೇಕು ಹೇಗೆ ಮಾಡಬೇಕು ಎಂಬುದನ್ನು ಈ ಪುಸ್ತಕದಲ್ಲಿ ಚರ್ಚಿಸಿದ್ದೇನೆ.

ಅಭಿಯಾನ ಮತ್ತು ಆಶಾಭಾವನೆ

ವನ್ಯಜೀವಿ ಸಂರಕ್ಷಣೆ ಎಂಬ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅಭಿಯಾನದಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಆಶಾಭಾವನೆ ಮೂಡಿಸುವುದೂ ಈ ಪುಸ್ತಕದ ಆಶಯ. ವನ್ಯಜೀವಿಗಳಿಗೆ ಇರುವ ತೊಂದರೆ, ನ್ಯಾಚುರಲ್‌ ಹಿಸ್ಟರಿ, ರಾಜಕೀಯ, ತೆರೆಮರೆಯ ಸಂಗತಿಗಳು, ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳ ನಡೆ, ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯನೂ ಆಗಿರುವ ಕಾರಣ ಅದರ ಸಭೆಯಲ್ಲಿ ನಡೆಯುವ ಚರ್ಚೆಗಳು, ತೊಡಕುಗಳು ಮತ್ತು ನಿವಾರಣೆಯ ಮಾರ್ಗಗಳು, ಕಾಡು ಛಿದ್ರಗೊಳ್ಳುತ್ತಿದೆ, ವನ್ಯಜೀವಿಗಳ ಆವಾಸಸ್ಥಾನಗಳ ಅಳಿವು.. ಹೀಗೆ ಅನೇಕ ಚರ್ಚಿತ ವಿಚಾರಗಳಿಗೆ ಸಂವಾದಿಯಾಗುವ ಸಂಭವನೀಯ ಮಾರ್ಗಗಳನ್ನು ಚರ್ಚಿಸಿದ್ದೇನೆ. ಇವೆಲ್ಲವೂ ಯುವಜನರಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತು ಆಶಾಭಾವನೆ ಮೂಡಿಸುವ ಅಂಶಗಳು.

ಬೆಲೆ ₹ 499; ಬಿಡುಗಡೆ ದಿನ ರಿಯಾಯಿತಿ ಬೆಲೆಯಲ್ಲಿ ಲಭ್ಯ.

**

ಸೆಕಂಡ್ ನೇಚರ್‌– ಸೇವಿಂಗ್‌ ಟೈಗರ್‌ ಲ್ಯಾಂಡ್‌ಸ್ಕೇಪ್‌ ಇನ್‌ ದಿ 21 ಸೆಂಚುರಿ’ ಪುಸ್ತಕ ಬಿಡುಗಡೆ: ನಟ, ಹುಲಿ ಸಂರಕ್ಷಣಾ ಕಾರ್ಯಕರ್ತ ಪ್ರಕಾಶ್‌ರಾಜ್‌. ಲೇಖಕರೊಂದಿಗೆ ಮಾತುಕತೆ– ವಿಜ್ಞಾನಿ, ಲೇಖಕಿ ಡಾ.ಹರಿಣಿ ನಾಗೇಂದ್ರ. ಸ್ಥಳ– ಆರ್ಟ್ಸ್‌ ವಿಲೇಜ್‌, ನಂ. 57, ಸೇಂಟ್‌ ಮಾರ್ಕ್ಸ್‌ ರಸ್ತೆ, ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಮುಖ್ಯದ್ವಾರದ ಎದುರು. ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT