ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣ ರಾಜಕೀಯದ ರಂಗಪ್ರಯೋಗ

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

‘ರಾಜಕಾರಣಕ್ಕಾಗಿ ಹತ್ಯೆಯೋ? ಹತ್ಯೆಯಿಂದ ರಾಜಕಾರಣವೋ’ ಈ ಪ್ರಶ್ನೆ ಈಗಿನ ಸಮಾಜದಲ್ಲಿ ಬಹಳ ಪ್ರಸ್ತುತ. ಅಧಿಕಾರ ಲೋಲುಪತೆ, ಸ್ವಾರ್ಥ ರಾಜಕಾರಣ, ಹತ್ಯೆ.. ಇವೆಲ್ಲವೂ ಇಂದಿನ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಂಗತಿಗಳಲ್ಲವೇ?

ಸಂಸರು ‘ವಿಗಡ ವಿಕ್ರಮರಾಯ’ ನಾಟಕದ ಮೂಲಕ ಹೇಳಹೊರಟಿರುವುದು ಇದೇ ಸಂಗತಿಗಳನ್ನೇ. ಈ ಪ್ರಸಿದ್ಧ ನಾಟಕವನ್ನು ಪ್ರಸ್ತುತಪಡಿಸಲು ಹೊರಟಿದೆ ‘ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರ. ಈ ಬಾರಿಯ ‘ನಾಟಕ ಬೆಂಗ್ಳೂರು’ ದಶಮಾನೋತ್ಸವ ಸಂಭ್ರಮದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ರಾಜನನ್ನೇ ಕೈಗೊಂಬೆ ಮಾಡಿಕೊಂಡು ತನ್ನ ಸ್ವಾರ್ಥಕ್ಕೆ ರಾಜಕೀಯ ನಡೆಸುವ ದಳವಾಯಿ ವಿಗಡವಿಕ್ರಮರಾಯನ ಸುತ್ತ ಹೆಣೆದಿರುವ ಕಥೆ ಇದು. ದುರಾಸೆಯಿಂದ ಅವನು ಎಸಗುವ ಕೃತ್ಯಗಳು, ಕುತಂತ್ರಗಳು, ತನ್ನ ಸಾವನ್ನು ತನ್ನವರಿಂದಲೇ ತಂದುಕೊಳ್ಳುವ ಸ್ಥಿತಿ... ಇವೆಲ್ಲವನ್ನೂ ನಾಟಕದ ಮೂಲಕ ದಾಟಿಸುವ ಪ್ರಯತ್ನ ಈ ತಂಡದ್ದು.

ಈ ನಾಟಕವನ್ನು ನಿರ್ದೇಶಿಸಿರುವವರು ನಟ, ನಿರ್ದೇಶಕ ಡಾ.ಎಸ್‌.ವಿ. ಕಶ್ಯಪ್. ತಂತ್ರಜ್ಞರೂ ಸೇರಿ ಇಪ್ಪತ್ತರಿಂದ ಇಪ್ಪತ್ತೈದು ಮಂದಿ ಈ ತಂಡದಲ್ಲಿದ್ದಾರೆ.

‘ಇದು ಐತಿಹಾಸಕ ನಾಟಕ. ಹಾಗೆಯೇ ಬಹು ಸಮಕಾಲೀನವೂ ಹೌದು. ಇಂದಿಗೂ ರಾಜಕೀಯ, ಕುತಂತ್ರಗಳು, ಹತ್ಯೆಗಳು, ಇವೆಲ್ಲವೂ ಇದ್ದೇ ಇವೆ. ಆದ್ದರಿಂದಲೇ ಈ ನಾಟಕವನ್ನು ಆರಿಸಿಕೊಂಡೆವು. ಇದು ಸಮಾಜಮುಖಿ ನಾಟಕ’ ಎಂದು ಹೇಳುತ್ತಾರೆ ಕಶ್ಯಪ್.

ಯಾವ ಹತ್ಯೆಯಾದರೂ ಅದು ಖಂಡನೀಯ. ಬಲ, ಎಡಪಂಥೀಯಗಳ ಗೋಜಲು ಬೇಡ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ ಎಂಬ ನಿಲುವು ಈ ನಾಟಕದ ಹಿಂದಿದೆಯಂತೆ. ತನ್ನ ಕುತಂತ್ರದಿಂದ ಸ್ವಾರ್ಥ ಸಾಧಿಸುವವ ವಿಕ್ರಮರಾಯ. ಒಮ್ಮೆ ಈತನ ಎಲ್ಲಾ ದುರ್ಬುದ್ಧಿಗಳು ರಾಜನ ಗಮನಕ್ಕೆ ಬಂದದ್ದು ತಿಳಿಯುತ್ತಲೇ, ರಾಜನ ತಾಯಿಯಿಂದಲೇ ರಾಜನನ್ನು ಸಾಯುವಂತೆ ಮಾಡುತ್ತಾನೆ. ನಂತರ ಬಂದ ರಣಧೀರ ಕಂಠೀರವನನ್ನೂ ತನ್ನ ಕೈವಶ ಮಾಡಿಕೊಳ್ಳಲು ನೋಡಿ, ಆ ಪ್ರಯತ್ನದಲ್ಲಿ ಸೋಲು ಕಾಣುತ್ತಾನೆ. ಅಷ್ಟೊತ್ತಿಗಾಗಲೇ ಈ ದಳಪತಿಯ ಒಂದೊಂದೇ ಗುಣಗಳು ಜನರಿಗೂ ತಿಳಿಯುತ್ತಿರುತ್ತದೆ. ರಣಧೀರ ಕಂಠೀರವನ ಗೆಳೆಯರು ಈ ಬಗ್ಗೆ ಪ್ರಜೆಗಳಿಗೆ ಅರಿವು ಮೂಡಿಸುತ್ತಾರೆ. ಜನರು ಇವನ ವಿರುದ್ಧ ದಂಗೆ ಏಳುತ್ತಾರೆ. ಕೊನೆಗೆ ತನ್ನವರಿಂದಲೇ ವಿಕ್ರಮರಾಯ ಸಾವು ತಂದುಕೊಳ್ಳುತ್ತಾನೆ. ಇವಿಷ್ಟೂ ಕಥೆಯ ಸಾರ. ಈ ಒಂದೊಂದು ಎಳೆಯೂ ನಾಟಕದಲ್ಲಿ ಗಟ್ಟಿ ನಿರೂಪಣೆಗಳ ಮೂಲಕ ಸಾಗಿವೆ.

ನಾಟಕಕ್ಕಾಗಿ ತಂಡವು ಒಂದು ತಿಂಗಳು ತಾಲೀಮು ನಡೆಸಿದೆ. ಕಥೆಗೆ ತಕ್ಕಂತೆ ವಸ್ತ್ರ, ಆಭರಣ ವಿನ್ಯಾಸದಲ್ಲೂ ಐತಿಹಾಸಿಕ ಛಾಪನ್ನು ತರಲಾಗಿದೆ. 22 ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ‘ವಿಜಯನಗರ ಬಿಂಬ’ ಇದೀಗ ಹಿರಿಯರ ವಿಭಾಗದಲ್ಲಿ 5 ವರ್ಷ ಪೂರೈಸಿದ ಸಂಭ್ರಮಕ್ಕೂ ಸಾಕ್ಷಿಯಾಗಿದೆ.

**

ನಾಟಕ– ವಿಗಡ ವಿಕ್ರಮರಾಯ

ತಂಡ– ವಿಜಯನಗರ ಬಿಂಬ

ರಚನೆ– ಸಂಸ

ನಿರ್ದೇಶನ– ಡಾ.ಎಸ್‌.ವಿ. ಕಶ್ಯಪ್

ದಿನಾಂಕ– ಜ.13, ಸಂಜೆ 7

ಸ್ಥಳ– ಕಲಾಗ್ರಾಮ ಸಮುಚ್ಚಯ, ಮಲ್ಲತ್ತಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT