ಪ್ರೀತಿ–ಪ್ರೇಮದ ಆಚೆ ‘ಬ್ಲಡ್‌ ವೆಡ್ಡಿಂಗ್‌’

7

ಪ್ರೀತಿ–ಪ್ರೇಮದ ಆಚೆ ‘ಬ್ಲಡ್‌ ವೆಡ್ಡಿಂಗ್‌’

Published:
Updated:
ಪ್ರೀತಿ–ಪ್ರೇಮದ ಆಚೆ ‘ಬ್ಲಡ್‌ ವೆಡ್ಡಿಂಗ್‌’

ಪ್ರೀತಿ ಪ್ರೇಮ ಹಾಗೂ ವಿವಾಹ ಬಂಧನದ ನಡುವಿನ ಕಥಾಹಂದರ ಹೊಂದಿರುವ ವಿಶಿಷ್ಟ ರಂಗರೂಪಕ ‘ಬ್ಲಡ್‌ ವೆಡ್ಡಿಂಗ್‌’ ಇದೇ ಭಾನುವಾರ (ಜ.14) ‘ನಾಟಕ ಬೆಂಗ್ಳೂರು’ ದಶಮಾನೋತ್ಸವ ಸಂಭ್ರಮದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸ್ಪಾನಿಶ್‌ ನಾಟಕಕಾರ ‘ಫೆರ್ಡಿಕೋ ಗಾರ್ಸಿಯಾ ಲೋರ್ಕಾ’ ಅವರ ಸತ್ಯಕಥೆ ಆಧಾರಿತ ‘ಬ್ಲಡ್‌ ವೆಡ್ಡಿಂಗ್‌’ ಅನ್ನು ಕನ್ನಡಕ್ಕೆ ರೂಪಾಂತರಿಸಿದವರು ಕೆ.ಎನ್.ವಿಜಯಲಕ್ಷ್ಮಿ. ಕನ್ನಡದ ನೆಲಕ್ಕೆ ತಕ್ಕಂತೆ ನಾಟಕದ ನಿರ್ದೇಶನದ ಹೊಣೆ ಹೊತ್ತವರು ನಾಗೇಶ್ ವಿ. ಬೆಟ್ಟಕೋಟೆ.

ಸ್ಪೇನ್‌ ದೇಶದಲ್ಲಿ ನಡೆದ ಸತ್ಯಕಥೆಯೊಂದನ್ನು ಕನ್ನಡಕ್ಕೆ ಹೊಂದಿಸುವುದೇ ಒಂದು ಸವಾಲು. ನಟ, ನಿರ್ದೇಶಕ, ಸಂಘಟಕ ಹಾಗೂ ನಾಟಕಕಾರರಾಗಿ ಸೇವೆ ಸಲ್ಲಿಸುತ್ತ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ 22 ವರ್ಷಗಳಿಂದ ಕೆಲಸ ಮಾಡುತ್ತಿರುವ ವಿ.ನಾಗೇಶ್ ಬೆಟ್ಟಕೋಟೆ ಅವರಿಗೆ ಇದೊಂದು ಹೊಸ ಪ್ರಯೋಗ.

ಸ್ಪ್ಯಾನಿಶ್‌ನ ಪ್ರೇಮಿಗಳಿಬ್ಬರು ಮೂರು ವರ್ಷಗಳಿಂದ ಪ್ರೀತಿಸುತ್ತಿರುತ್ತಾರೆ. ಸುಖದ ಮೆಟ್ಟಿಲುಗಳನ್ನೇರಿ, ಪ್ರೇಮದ ಉತ್ತುಂಗ ತಲುಪಿ ನಿಂತಿರುತ್ತಾರೆ. ಆದರೆ ಅನಂತರ ಈ ಪ್ರೇಮಿಗೆ ಪ್ರೇಯಸಿಯಿಂದ, ಮಾನಸಿಕ ಪ್ರೀತಿಯಿಂದ ಮುಕ್ತಿ ಬೇಕಾಗುತ್ತದೆ. ಬೇರೊಬ್ಬಳೊಂದಿಗೆ ಮದುವೆಯಾಗುತ್ತಾನೆ. ಇತ್ತ ಪ್ರೇಯಸಿಗೆ ಮನೆಯಲ್ಲಿ ಗಂಡು ಗೊತ್ತು ಮಾಡುತ್ತಾರೆ. ಒಂದು ಕಡೆ ಮನಸ್ಸಿಲ್ಲದ ಮದುವೆ, ಮತ್ತೊಂದೆಡೆ ದೈಹಿಕ ಸುಖವನ್ನು ಮಾತ್ರ ಬಯಸುವ ಮಾಜಿ ಪ್ರೇಮಿ. ಇವರಿಬ್ಬರ ನಡುವೆ ಹೆಂಡತಿಯಾಗಿ ಬರಲಿರುವವಳ ಬಗ್ಗೆ ನೂರು ಕನಸು ಹೊತ್ತು ಕಾಯುವ ಮದುವೆ ಗಂಡು. ಇಂತಹ ಸಂದರ್ಭದಲ್ಲಿ ಹೆಣ್ಣಿನ ಆಯ್ಕೆ ಏನು? ಎನ್ನುವುದರ ಸುತ್ತ ನಾಟಕ ಸುತ್ತುತ್ತದೆ.

‘ಇಂತಹ ಸಂದರ್ಭಗಳಲ್ಲಿ ನಾವು ಹೆಣ್ಣನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಯೋಚಿಸುತ್ತೇವೆ. ಆದರೆ ಇದು ನ್ಯಾವವೇ? ಎನ್ನುವ ನೈತಿಕ ಪ್ರಶ್ನೆಯನ್ನು ನಮ್ಮ ಮುಂದಿಡುವ ಕಥೆ ಇದು. ಸ್ಪೇನ್‌ ನೆಲದ ಪ್ರೀತಿಯ ಎಳೆಯನ್ನು ನಮ್ಮೂರಿನ ಸಂಸ್ಕೃತಿಗೆ ಹೋಲಿಸಿ ನೋಡುವ ಪ್ರಯತ್ನವಿದು’ ಎನ್ನುತ್ತಾರೆ ವಿ.ನಾಗೇಶ್.

ಅಂತಿಗೊನೆ, ಅಂಬೇಡ್ಕರ್ ಮತ್ತು ಗಾಂಧಿ, ಚಾಂಡಾಲಿಕ, ದಫನ್, ಸಂಕ್ರಾಂತಿ, ಕಾಲಜ್ಞಾನಿ ಕನಕ, ಅಪ್ಪ, ಕುಂಟ ಕುಂಟ ಕುರವತ್ತಿ, ಹೆಜ್ಜೆಗಳು, ವಿಮುಕ್ತಿ, ಗುಣಮುಖ, ಸಾಕ್ರೆಟಿಸ್, ಕತ್ತಲೆ ಬೆಳಕು, ಮ್ಯಾಕ್‌ಬೆತ್, ಹಿಟ್ಟಿನ ಹುಂಜ, ಟಿಪ್ಪು ಕಂಡ ಕನಸು, ಜೇತವನ ಹಾಗೂ ಅನೇಕ ಬೀದಿ ನಾಟಕಗಳನ್ನು ನಿರ್ದೇಶಿಸಿರುವ ನಾಗೇಶ್‌, ಲೋರ್ಕಾನ ‘ಬ್ಲಡ್ ವೆಡ್ಡಿಂಗ್’ನ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಕಳೆದ 25 ವರ್ಷಗಳಿಂದ ದೇಶದ ವಿವಿಧ ಭಾಗಗಲ್ಲಿ ವಿಭಿನ್ನ ನಾಟಕ ಪ್ರರರ್ಶಿಸುತ್ತಾ ಬಂದಿರುವ ‘ಪ್ರಯೋಗರಂಗ’ ನಾಟಕ ತಂಡ ‘ಬ್ಲಡ್‌ ವೆಡ್ಡಿಂಗ್‌’ಗಾಗಿ ಶ್ರಮಿಸಿದೆ.

ಮಂಟೆಸ್ವಾಮಿ ಕಥಾಪ್ರಸಂಗ, ಮನಿ, ಪ್ರೇತದ್ವೀಪ, ಮಲ್ಲಮ್ಮನ ಮನೆ ಹೋಟ್ಲು, ಬ್ರಹ್ಮಚಾರಿ ಶರಣಾದ, ಜುಮ್ನಾಳ ದುಳ್ಯನ ಪ್ರಸಂಗ, ರಾಜಬೇಟೆ, ಸಂತೆಯಲ್ಲಿ ನಿಂತ ಕಬೀರ, ಪರಿಹಾರ, ಜುಗಾರಿ ಕೂಟ, ಸಿರಿ ಪುರಂದರ, ನಮ್ಮ ನಿಮ್ಮಳೊಗೊಬ್ಬ, ಹಳ್ಳಿಪ್ರೀತಿ, ನೀನ್ನೊಳು ನಾ ನಾನ್ನೊಳು ನೀ, ಸೇರಿದಂತೆ ಹಲವಾರು ನಾಟಕಗಳನ್ನು ಪ್ರಯೋಗಿಸಿ ಸೈ ಎನಿಸಿಕೊಂಡಿದೆ ಪ್ರಯೋಗರಂಗ. ಯುವ ರಂಗಾಸಕ್ತರನ್ನು ರಂಗಭೂಮಿಗೆ ತರುವಲ್ಲಿ ಅನೇಕ ರಂಗ ತರಬೇತಿ ಶಿಬಿರಗಳನ್ನು ನಡೆಸಿದೆ. ಸಾಮಾನ್ಯ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲು ಬೀದಿ ನಾಟಕಗಳನ್ನು ಸಹ ಪ್ರರ್ದಶಿಸಿದೆ.

**

ಫೆಡ್ರಿಕೋ ಗಾರ್ಸಿಯಾ ಲೋರ್ಕ

ಫೆಡ್ರಿಕೋ ಗಾರ್ಸಿಯಾ ಲೋರ್ಕ ಸ್ಪೈನ್ ದೇಶದ ಕವಿ ಹಾಗೂ ನಾಟಕಕಾರ. ಗ್ರನಾಡ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಗಾರ್ಸಿಯಾ, ತತ್ವಶಾಸ್ತ್ರದಲ್ಲೂ ಪಾಂಡಿತ್ಯ ಪಡೆದ ನಾಟಕಕಾರ. ಈತನ ಕೃತಿಗಳ ಮೇಲೆ ಸ್ಪೈನ್‌ನ ಅಂತರ್ ಯುದ್ಧದ ಗಾಢ ಪ್ರಭಾವವಿರುವುದನ್ನು ಕಾಣಬಹುದು.

ತಾಯ್ನಾಡಿನ ಬಗ್ಗೆ ಅಪಾರ ಅಭಿಮಾನವಿದ್ದ ಲೋರ್ಕ, ನಾಡು ನುಡಿಗಳ ಬಗ್ಗೆ ಅನೇಕ ಕವಿತೆಗಳನ್ನು ರಚಿಸಿದ್ದೂ ಉಂಟು. ಸುಂದರ ಪ್ರಕೃತಿಯ ನಡುವೆ ಸಾವೆಂಬ ದುರಂತ ಅಡಗಿರುವುದನ್ನು ಆತ ‘ದಿ ಕಿಂಗ್ ಹಾರ್ಲೈಮ್’ ಎಂಬ ಕವಿತೆಯಲ್ಲಿ ವರ್ಣಿಸಿದ್ದಾನೆ. ಲೋರ್ಕನ ನಾಟಕಗಳು ಸ್ಪೈನ್ ದೇಶದಲ್ಲಿ ಅಪಾರ ಜನಮನ್ನಣೆ ಗಳಿಸಿವೆ.

**

‌ನಾಟಕ ಬೆಂಗ್ಳೂರು

ನಾಟಕ: ಬ್ಲಡ್ ವೆಡ್ಡಿಂಗ್

ತಂಡ: ಪ್ರಯೋಗರಂಗ

ನಿರ್ದೇಶನ: ಡಾ.ನಾಗೇಶ್ ವಿ. ಬೆಟ್ಟಕೋಟೆ

ರಚನೆ: ಫೆಡ್ರಿಕೊ ಗಾರ್ಸಿಯ ಲೋರ್ಕಾ

ಕನ್ನಡಕ್ಕೆ: ಕೆ.ಎನ್.ವಿಜಯಲಕ್ಷ್ಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry