’ನಮಗೆ ಕಾವೇರಿ ನೀರೇ ಬೇಡ! ’

7
ರಜನಿ ಜತೆ ಒಂದು ವಾಟ್ಸ್‌ಆ್ಯಪ್ ಸಂದರ್ಶನ

’ನಮಗೆ ಕಾವೇರಿ ನೀರೇ ಬೇಡ! ’

Published:
Updated:
’ನಮಗೆ ಕಾವೇರಿ ನೀರೇ ಬೇಡ! ’

* ನಿಮ್ಮ 2.0 ವರ್ಶನ್ ಬಿಡುಗಡೆಗಾಗಿ ಇನ್ನೂ ಮೂರು ವರ್ಷ ಕಾಯಬೇಕು, ಅಲ್ಲವೇ?

    ಯಾಕೆ? ಅಷ್ಟು ಸಮಯ ಕಾಯಬೇಕಾಗಿಲ್ಲ. ಈಗಾಗಲೇ ದುಬೈಯಲ್ಲಿ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಇನ್ನೇನು ಕ್ಯಾಸೆಟ್ ಬಿಡುಗಡೆ ಮಾಡುತ್ತೇವೆ. ಆನಂತರ ಕೆಲ ದಿವಸಗಳಲ್ಲೇ ಚಿತ್ರ ತೆರೆಕಾಣಲಿದೆ.

* ರಜನಿ ಸಾರ್! ನಾನು ಕೇಳಿದ್ದು ನಿಮ್ಮ ಹೊಸ ಚಿತ್ರ ‘ರೋಬೊ 2.0 ವರ್ಶನ್’ ಬಗ್ಗೆ ಅಲ್ಲ... ನಿಮ್ಮ ರಾಜಕೀಯ ಪರಕಾಯ ಪ್ರವೇಶದ ಚಟುವಟಿಕೆ ನಿಜವಾಗ್ಲೂ ಯಾವಾಗ ಶುರುವಾಗುತ್ತೆ ಎಂದು...

ಹ-ಹ-ಹಾ! 2019ರ ಲೋಕಸಭೆಗೆ ಹೋಗುವುದಕ್ಕೆ ಸುಸಜ್ಜಿತ ಬಸ್ಸು ಇನ್ನೇನು ಬರಲಿದೆ. ಬಹಳ ವರ್ಷಗಳ ನಂತರ ತಮಿಳುನಾಡಿನಾದ್ಯಂತ ಬಸ್ಸಿನಲ್ಲಿ ಮತ್ತೆ ‘ರೈಟ್ ರೈಟ್’ ಅನ್ನುತ್ತಾ ಸುತ್ತಾಡಬೇಕಂತಿದ್ದೀನಿ.

* ನಿಮ್ಮ ಈ ಬಸ್ ಪ್ರಯಾಣದ ಟಿಕೆಟ್‌ಗಾಗಿ ಮನೆ ಮುಂದೆ ಹಗಲು ರಾತ್ರಿ ಕ್ಯೂ ನಿಂತಿರುತ್ತಾರಂತಲ್ಲ?

ಹೌದು, ಜೋಕ್ ಸಭೆ ಮತ್ತು ನಿಧಾನ ಸಭೆ ಚುನಾವಣೆ ಟಿಕೆಟ್‌ಗಾಗಿ ವಿಪರೀತ ಡಿಮಾಂಡ್ ಇದೆ.

* ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟ ತಪ್ಪಿಸುವುದಕ್ಕೆ ಏನು ಮಾಡಬೇಕಂತಿದ್ದೀರಾ?

ಈ ಕ್ಯೂ, ಬ್ಲ್ಯಾಕ್ ಮಾರುಕಟ್ಟೆ ತಪ್ಪಿಸಲು ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್ ಸಿಗುವ ವ್ಯವಸ್ಥೆ ಮಾಡಲಿದ್ದೇವೆ.

* ನೀವು ರಾಜಕೀಯಕ್ಕೆ ಧುಮುಕುವುದನ್ನು ನಿಮ್ಮ ಜಪಾನಿ ಅಭಿಮಾನಿಗಳು 22 ವರ್ಷಗಳಿಂದ ತಡೆಯುತ್ತಿದ್ದಾರೆ ಅನ್ನುವುದು ನಿಜವೇ ಸಾರ್?

ಹೂಂ...ರೀ! ಅವರು ಇನ್ನೂ ನನ್ನನ್ನು ಪೂರ್ತಿ ಬಿಟ್ಟುಕೊಟ್ಟಿಲ್ಲ. ಅದಕ್ಕೆ ಸದ್ಯ ಇನ್ನೂ ಹೆಸರಿಡದ ಚಿತ್ರದಂತೆ ಪಾರ್ಟಿಗೆ ಹೆಸರಿಡದೆ ಚಟುವಟಿಕೆಯಲ್ಲಿರುತ್ತೇನೆ.

* ನಿಮ್ಮದು ‘ಆಧ್ಯಾತ್ಮಿಕ ರಾಜಕೀಯ’ ಅಂತೀರಲ್ಲಾ...

ಆಂಡವನ್ ಸೊಲ್ರಾನ್... ರಜನಿಕಾಂತ್ ಸೆಯಿರಾನ್‌! ಅಂದರೆ ಗೊತ್ತಾಯಿತಲ್ಲ... ದೇವರು ಹೇಳುತ್ತಾರೆ, ನಾನು ಪಾಲಿಸುತ್ತೇನೆ. ಇದು ನಮ್ಮ ಪಕ್ಷದ ತತ್ವ. ನಮ್ಮ ಪಕ್ಷದ ಮುಖ್ಯ ಕಚೇರಿ ಹಿಮಾಲಯದ ತಪ್ಪಲಲ್ಲಿ ಆರಂಭಿಸಲಿದ್ದೇವೆ! ನಾವು ಗೆದ್ದರೆ ಸಿ.ಎಂ ಕಚೇರಿ ಕೂಡಾ ಅಲ್ಲೇ ಇರುತ್ತೆ.

* ಆದರೆ ತಲೈವರ್, ಈ ಅಧ್ಯಾತ್ಮ-ಗಿದ್ಯಾತ್ಮ ನಿಮ್ಮ ಸಿನಿಮಾ ಅಭಿಮಾನಿಗಳಿಗೆ ಇಷ್ಟವಾಗುತ್ತಾ?

ಛೆ ಛೇ! ಅವರನ್ನು ಅಭಿಮಾನಿಗಳೆಂದು ಹೇಳಬೇಡಿ... ಇನ್ನು ಮುಂದೆ ಅವರು ನನ್ನ ಭಕ್ತರು!

* ಸರಿ, ನಿಮ್ಮ ಬೆಂಬಲಕ್ಕೆ ಬರೀ ಭಕ್ತಾದಿವೃಂದಗಳಿದ್ದರೆ ಸಾಕೇ? ಬೇರೆ ಖ್ಯಾತ ನಟರಾದ ವಿಜಯ್, ಸೂರ್ಯ ಅವರ ಯುವ ಅಭಿಮಾನಿಗಳನ್ನೂ ಸೆಳೆಯುವ ಯೋಚನೆಯನ್ನೂ ಹಾಕಬಾರದೇಕೆ?

ಅದೂ ನಿಜ. ನಾನು ಈಗಾಗಲೇ ಬಿಡುಗಡೆ ಮಾಡಿರುವ ಎರಡು ಬೆರಳು ತೋರಿಸುವ ಹಸ್ತದ ಚಿಹ್ನೆಗೆ ಬರೀ ಆಧ್ಯಾತ್ಮಿಕ ಅರ್ಥ ಇಲ್ಲ. ಹಿಪ್ ಹಾಪ್ ಯುವ ಜನಾಂಗದ ‘ಯೊ!’ದ ಚಿಹ್ನೆಯೂ ಅದೇ ಅಲ್ಲವೇನ್ರೀ!

ಹೌದೌದು... ‘ಅಣ್ಣಾಮಲೈ’ ಚಿತ್ರದ ನಿಮ್ಮ ಡೈಲಾಗ್ ನೆನಪಾಗುತ್ತೆ. ‘ನಾನು ಹೇಳಿದ್ದನ್ನು ಮಾಡ್ತೀನಿ, ಹೇಳದ್ದನ್ನೂ ಮಾಡ್ತೀನಿ!’

* ಅಂದ ಹಾಗೆ, ರಜನಿ ಅವರೇ, ನೀವು ಅಧಿಕಾರಕ್ಕೆ ಬಂದರೆ ನಿಮ್ಮ ಸರ್ಕಾರ ಏನೇನೆಲ್ಲಾ ಮಾಡುತ್ತೆ ಎಂದು ಹೇಳಬಹುದೇ?

ನಮ್ಮ ಸರ್ಕಾರದಲ್ಲಿ ಎಲ್ಲವೂ ಇರುತ್ತೆ. ಫುಲ್ ಮಸಾಲ! ಕಾಮಿಡಿ, ಎಮೋಷನ್, ಫೈಟಿಂಗ್, ಡ್ಯಾನ್ಸ್, ಚೇಸಿಂಗ್, ರೊಮಾನ್ಸ್ , ಫ್ಯಾಂಟಸಿ, ಹಾಡುಗಳು... ಒಟ್ಟಾರೆ ನನ್ನ ಭಕ್ತರಿಗೆ ಈ ಎಲ್ಲವನ್ನೂ ದಯಪಾಲಿಸುತ್ತೇನೆ. ಇಷ್ಟೆಲ್ಲ ಕೊಟ್ಟ ಮೇಲೂ ಸರ್ಕಾರ ಫ್ಲಾಪಾದರೆ ನಾನು ಹಿಮಾಲಯದಲ್ಲಿ ‘ಔಟ್ ಆಫ್ ರೀಚ್’ ಆಗಿರುತ್ತೇನೆ.

* ವ್ಹಾವ್! ಇಲ್ಲೂ ರಜನಿ ಸ್ಟೈಲು! ಹಾಗಾದರೆ ನಿಮ್ಮ ಸರ್ಕಾರಕ್ಕೆ ವಾರಂಟಿ ಪೀರಿಯಡ್ ಇದೆ ಅನ್ನಿ!

ನಿಜ, ಮೂರು ವರ್ಷ ವಾರಂಟಿ ಪೀರಿಯಡ್. ಈ ಗಡುವಿನಲ್ಲಿ ನಾವು ಕೆಲಸಕ್ಕೆ ಬಾರದವರೆಂದು ಅನಿಸಿದರೆ ಜನರು ಹೊಸ ಸರ್ಕಾರಕ್ಕೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

* ನೀವು ಹಿಮಾಲಯದಲ್ಲಿದ್ದುಕೊಂಡೇ ಸರ್ಕಾರ ನಡೆಸುತ್ತೀರಿ ಅಂದಿರಲ್ಲಾ... ಪ್ರಜೆಗಳು ನಿಮ್ಮನ್ನು ಭೇಟಿಯಾಗುವುದು ತುಂಬಾ ಕಷ್ಟ ಅಲ್ಲವೇ?

ಯಾರೂ ನನ್ನನ್ನು ನೇರ ಭೇಟಿಯಾಗಬೇಕಿಲ್ಲ. ನಾನೇ ಖುದ್ದಾಗಿ ಆಗೊಮ್ಮೆ ಈಗೊಮ್ಮೆ ರಾಜ್ಯಕ್ಕೆ ಮಾರುವೇಷದಲ್ಲಿ ಬಂದು ‘ಪ್ರಜಾದರ್ಶನ’ ಮಾಡಿ, ಅವರ ಕಷ್ಟ ಸುಖಗಳನ್ನು ಕೇಳಿ ತಿಳಿದುಕೊಳ್ಳುತ್ತೇನೆ. ನಾನ್ ಎಪ್ಪೊ ವರುವೆನ್, ಎಪ್ಡಿ ವರುವೆನ್ ಯಾರುಕ್ಕುಮ್ ತೆರಿಯಾದ್!

* ತಲೈವರ್ ಸರ್ಕಾರ ಅಮ್ಮ ಕ್ಯಾಂಟೀನ್ ಮುಚ್ಚುತ್ತಾ ಹೇಗೆ?

ನೊ ನೋ... ಅದು ಖಂಡಿತ ಮುಂದುವರಿಯುತ್ತೆ. ಆದರೆ ಅಲ್ಲಿ ಸಿಗುವ ಎಲ್ಲಾ ತಿಂಡಿ ತಿನಿಸುಗಳಿಗೂ ನನ್ನ ಸಿನಿಮಾಗಳ ಹೆಸರಿರುತ್ತದೆ. ಕಬಾಲಿ ಇಡ್ಲಿ, ಪಡೆಯಪ್ಪ ವಡಾ, ಬಾಬಾ ಪೊಂಗಲ್‌, ಬಾಷಾ ದೋಸಾ, ಮುತ್ತು ಮೀಲ್ಸ್...ಅದಲ್ಲದೆ ಜನರನ್ನು ಖುಷಿಯಲ್ಲಿಡಲು ಬೇರೆ ಏನು ಕೊಡ್ತೀರಿ? ಬೇರೆ... ಹಾಂ! ದಿನಕ್ಕೊಂದು ರಜನಿ ಜೋಕ್! ಮೋದೀಜಿಯ ‘ಮನ್ ಕೀ ಬಾತ್’ ತರಾನೇ ಇದು ರೇಡಿಯೊ ಮತ್ತು ಟಿ.ವಿ.ಗಳಲ್ಲಿ ಪ್ರಸಾರವಾಗುತ್ತದೆ. ಅದಕ್ಕಾಗಿಯೇ ‘ಆಸ್ಥಾನ ಹಾಸ್ಯಗಾರ’ನೊಬ್ಬನನ್ನು ನೇಮಿಸುತ್ತೇವೆ. ಇದು ನಮ್ಮ ಆರೋಗ್ಯ ಭಾಗ್ಯ ಯೋಜನೆಯೂ ಆಗಿರುತ್ತದೆ. ಯಾಕೆಂದರೆ ‘ರಜನಿ ಜೋಕ್ ಎ ಡೇ, ಕೀಪ್ಸ್ ಡಾಕ್ಟರ್ ಅವೇ!’

* ನೀವೊಬ್ಬ ಬಿಎಂಟಿಸಿಯ ಮಾಜಿ ಕಂಡಕ್ಟರ್. ಕೆಲವು ದಿವಸಗಳಿಂದ ನಡೆಯುತ್ತಿದ್ದ ತಮಿಳುನಾಡು ಸರ್ಕಾರಿ ಸಾರಿಗೆ ನೌಕರರ ಮುಷ್ಕರದಲ್ಲಿ ನೀವು ಭಾಗವಹಿಸುತ್ತೀರಿ ಎಂದು ಎಲ್ಲರೂ ನಿರೀಕ್ಷಿಸಿದ್ದರು.

ನನಗೂ ಅವರ ಜತೆ ಸೇರಿಕೊಂಡು ಕೂಗಾಡಬೇಕೆಂದು ಬಹಳ ಆಸೆಯಿತ್ತು. ಆದರೆ ನಾನು ಅಲ್ಲಿ ಹೋದರೆ ಮುಷ್ಕರ ಮರೆತು ನನ್ನ ಜತೆ ಸೆಲ್ಫಿಗೆ ಕ್ಯೂ ನಿಂತುಬಿಡುತ್ತಾರೆ ಎಂದು ಹೋಗಲಿಲ್ಲ.

* ಬೆಂಗಳೂರಿನಲ್ಲಿದ್ದಾಗ ಸಾಕಷ್ಟು ಕಾವೇರಿ ನೀರು ಕುಡಿದ ನೀವು ಅಧಿಕಾರಕ್ಕೆ ಬಂದರೆ ಕಾವೇರಿ ನೀರಿನ ಹಂಚಿಕೆ ಸಮಸ್ಯೆಯನ್ನು ಹೇಗೆ ಎದುರಿಸುತ್ತೀರಿ ?

ಮೈಂಡ್ ಇಟ್! ನಮಗೆ ಕಾವೇರಿ ನೀರೇ ಬೇಡ! ಒಟ್ಟಾರೆ ನಮ್ಮ ಕೃಷಿಕರಿಗೆ ಯಾವುದೇ ತೊಂದರೆಯಾಗಬಾರದು ತಾನೇ? ಅವರಿಗೆ ಬೇಕಾದಷ್ಟು ಮಳೆಯನ್ನು ದಯಪಾಲಿಸುವಂತೆ ಹಿಮಾಲಯದಲ್ಲಿ ವರುಣ ದೇವನಿಗಾಗಿ ಕಠಿಣ ತಪಸ್ಸು ಮಾಡುತ್ತೇನೆ.

* ವಾರೆವ್ಹಾ!! ನಿಜವಾಗ್ಲೂ ಕಾವೇರಿ ನೀರು ಬೇಡವೇ? ಇದನ್ನು ನಮ್ಮ ಮಂಡ್ಯದ ರೈತರಂತೂ ನಂಬಲಿಕ್ಕಿಲ್ಲ!

ನಾನ್ ಒರು ದಡವೈ ಸೊನ್ನ, ನೂರು ದಡವೈ ಸೊನ್ನ ಮಾದ್ರಿ! ಗೊತ್ತಾಯಿತೇನ್ರಿ?

* ಅಂದಹಾಗೆ ಸಿನಿಮಾಗಳಲ್ಲಿ ಇಂತಹ ಜಬರದಸ್ತ್ ಪಂಚಿಂಗ್ ಡೈಲಾಗ್ ಬಿಡುವ ನೀವು ಈವರೆಗೆ ನೀವು ಯಾವುದೇ ರಾಜಕೀಯ ಹೇಳಿಕೆ ನೀಡಿಲ್ಲವಲ್ಲ!

ಹುಡುಕುತ್ತಿದ್ದೇನೆ. ಸ್ವಲ್ಪ ಕಾಯಿರಿ ಸಾರ್.

* ಏನು? ಡೈಲಾಗುಗಳನ್ನು ಹುಡುಕುತ್ತಿದ್ದೀರಾ ತಲೈವರ್?

ಒಳ್ಳೆಯ ಪಂಚಿಂಗ್ ರಾಜಕೀಯ ಡೈಲಾಗ್ ಬರೆದುಕೊಡಬಲ್ಲವರನ್ನು ಹುಡುಕುತ್ತಿದ್ದೇನೆ.

* ಕೊನೆಯ ಪ್ರಶ್ನೆ... ನೀವು ಗದ್ದುಗೆಗೇರಿದರೆ ನಟಿಸುವುದನ್ನು ಬಿಡುತ್ತೀರಾ?

ನಟನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ... ಆದರೆ ಸಿನಿಮಾದಲ್ಲಿ ನಟಿಸೊಲ್ಲ ಅಷ್ಟೆ!

* ಗುಡ್‌ನೈಟ್, ತಲೈವರ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry