ಸೂರ್ಯ: ಜಗತ್ತಿನ ಕಣ್ಣು

7

ಸೂರ್ಯ: ಜಗತ್ತಿನ ಕಣ್ಣು

Published:
Updated:

ಸಂಕ್ರಾಂತಿಗೂ ಸೂರ್ಯನಿಗೂ ಸಂಬಂಧವುಂಟು. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದನ್ನೇ ‘ಸಂಕ್ರಾಂತಿ’ ಎನ್ನುವುದು. ಹೀಗೆ ಅವನು ಮಕರರಾಶಿಗೆ ಪ್ರವೇಶಿಸುವ ದಿನವನ್ನೇ ನಾವಿಂದು ‘ಮಕರಸಂಕ್ರಾಂತಿ’ ಎಂದು ಆಚರಿಸುತ್ತಿರುವುದು. ವರ್ಷದ ಎಣಿಕೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ; ಉತ್ತರಾಯಣ ಮತ್ತು ದಕ್ಷಿಣಾಯನ. ಮಕರಸಂಕ್ರಾಂತಿಯು ಉತ್ತರಾಯಣಕಾಲದ ಆರಂಭ ದಿನವಾದುದರಿಂದ ಆ ದಿನವನ್ನು ವಿಶೇಷ ಪುಣ್ಯಕಾಲವಾಗಿ ಆಚರಿಸುವ ರೂಢಿ ನಡೆದುಬಂದಿದೆ. ಉತ್ತರಾಯಣವು ದೇವತೆಗಳಿಗೆ ಪ್ರಿಯವಾದುದು ಎಂಬ ನಂಬಿಕೆಯಿದೆ. ‘ಅಯನ’ ಎಂದರೆ ‘ಮಾರ್ಗ’ ಎಂದು. ಉತ್ತರ ದಿಕ್ಕಿನಲ್ಲಿ ಸೂರ್ಯನು ಸಂಚರಿಸುವ ಕಾಲವಾದುದ್ದರಿಂದ ‘ಉತ್ತರಾಯಣ’ ಎಂಬ ಒಕ್ಕಣೆ.

ಜಗತ್ತಿನ ಪ್ರಾಚೀನ ಸಂಸ್ಕೃತಿಗಳಲ್ಲಿ ‘ಸೂರ್ಯ’ನ ಹಿರಿಮೆ ಗಣನೀಯವಾಗಿದೆ. ವೇದದಲ್ಲಿ ವರ್ಣಿತವಾಗಿರುವ ಪ್ರಧಾನ ದೇವತೆಗಳಲ್ಲಿ ಸೂರ್ಯನೂ ಒಬ್ಬ. ‘ಸೂರ್ಯ’ ಎಂಬ ಶಬ್ದಕ್ಕೆ ಹಲವು ಅರ್ಥಗಳನ್ನು ಕೊಡಲಾಗಿದೆ. ‘ಸಂಚರಿಸುವವನು’, ‘ಸೃಷ್ಟಿಸುವವನು’, ‘ಪ್ರೇರಿಸುವವನು’, ‘ಶ್ರೇಷ್ಠನಾದ ಒಡೆಯ’, ‘ಸರ್ವಾಂತರ್ಯಾಮಿ’ – ಹೀಗೆಲ್ಲ ಅರ್ಥಗಳಿವೆ. ಅವನು ಜಗತ್ತಿನ ಕಣ್ಣು ಎಂದು ಆರಾಧಿಸಲಾಗಿದೆ; ಜ್ಞಾನಸ್ವರೂಪಕ್ಕೆ

ಪ್ರತೀಕ ಎಂದು ಕೊಂಡಾಡಿದ್ದಾರೆ.

‘ತರಣಿರ್ವಿಶ್ವದರ್ಶತೋ ಜ್ಯೋತಿಷ್ಕೃದಸಿ ಸೂರ್ಯ |

ವಿಶ್ವಮಾಭಾಸಿ ರೋಚನಮ್‌ ||

‘ವಿಶ್ವದ ಸಮಸ್ತವನ್ನೂ ಕಾಣಬಲ್ಲವನು, ಬೆಳಕು ಮಾಡುವವನೂ ಆದ ಸೂರ್ಯನು ಇಡಿಯ ವಿಶ್ವವನ್ನು ಅವನ ಪ್ರಕಾಶದಿಂದ ಬೆಳಗುತ್ತಾನೆ’. ಇದು ಋಗ್ವೇದದ ಮಾತು. ಈ ಮಂತ್ರದ ಧ್ವನಿಯಲ್ಲಿಯೇ ಸಮಗ್ರ ಸೂರ್ಯತತ್ತ್ವ ಅರಳಿದೆ ಎಂದು ಹೇಳಬಹುದು.

ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ; ಎಲ್ಲರ ಕಣ್ಣಿಗೂ ಕಾಣುವಂಥವನು ಅವನು; ಅವನ ಹುಟ್ಟಿಗೂ ಜಗತ್ತಿನ ಆಗುಹೋಗುಗಳಿಗೂ ನೇರ ಸಂಬಂಧವಿದೆ.

ಇವೆಲ್ಲವೂ ಸೂರ್ಯನ ಭೌತಿಕ ವಿವರಗಳು. ಈ ಒಂದೊಂದು ವಿವರದ ಧ್ವನಿಯನ್ನು ಹಿಡಿದು ಸೂರ್ಯತತ್ತ್ವವನ್ನು ಆದಿದೈವಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ವಿವರಿಸಿರುವುದನ್ನು ಭಾರತೀಯ ಸಂಸ್ಕೃತಿಯ ಉದ್ದಕ್ಕೂ ಕಾಣಬಹುದು.

ಚಿತ್ರಂ ದೇವಾನಾಮುದಗಾದನೀಕಂ ಚಕ್ಷುರ್‌–ಮಿತ್ರಸ್ಯ ವರುಣಸ್ಯಾಗ್ನೇ |

ಆಪ್ರಾ ದ್ಯಾವಾಪೃಥಿವೀ ಅಂತರಿಕ್ಷಮ್‌ ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ ||

‘ಅಬ್ಬ! ಜಗತ್ತಿನ ಎಲ್ಲ ಸ್ಥಾವರಾತ್ಮಕ ಜಂಗಮಾತ್ಮಕ ವಿವರಗಳಿಗೂ ಆತ್ಮ ಎಂದರೆ ಸೂರ್ಯನೇ; ಕಿರಣಗಳ ಸಮೂಹ ಅವನು; ಮಿತ್ರಾ–ವರುಣರ ಕಣ್ಣು; ಭೂಲೋಕ, ದ್ಯುಲೋಕ ಮತ್ತು ಅಂತರಿಕ್ಷಲೋಕವನ್ನು ಉದ್ಧರಿಸುತ್ತ ಉದಯಿಸುತ್ತಿದ್ದಾನೆ!’

ಹೀಗೆ ಅವನು ಎಲ್ಲ ಲೋಕಗಳನ್ನೂ ಜೀವಿಗಳನ್ನೂ ಕಾಪಾಡಬಲ್ಲ ಪ್ರತ್ಯಕ್ಷ ದೇವತೆಯಾಗಿದ್ದಾನೆ.

ಸೂರ್ಯನಿಗೆ ಮಿತ್ರ, ಸವಿತೃ ಮುಂತಾದ ಪರ್ಯಾಯನಾಮಗಳೂ ಉಂಟು. ಉಷಸ್ಸಿಗೂ ಸೂರ್ಯತತ್ತ್ವಕ್ಕೂ ನಂಟಿದೆ. ಋಗ್ವೇದದಲ್ಲಿ ಈ ವಿವರಗಳನ್ನು ಸುಂದರವಾಗಿ, ಕಾವ್ಯಮಯವಾಗಿ ವರ್ಣಿಸಲಾಗಿದೆ.

ಉದ್ವೇತಿ ಸುಭಗೋ ವಿಶ್ವಚಕ್ಷಾಃ | ಸಾಧಾರಣಃ ಸೂರ್ಯೋ ಮಾನುಷಾಣಾಂ |

ಚಕ್ಷುರ್ಮಿತ್ರಸ್ಯ ವರುಣಸ್ಯ ದೇವ | ಶ್ಚರ್ಮೇವ ಯಃ ಸಮವಿವ್ಯಕ್ತಮಾಂಸಿ ||

‘ಎಲ್ಲರಿಗೂ ಹಿತನಾದ, ಎಲ್ಲವನ್ನೂ ನೋಡಬಲ್ಲ, ಮಿತ್ರಾವರುಣರ ಕಣ್ಣಾದ, ಚರ್ಮ (ಕೃಷ್ಣಾಜಿನ)ವನ್ನು ಸುತ್ತುವಂತೆ ಕತ್ತಲೆಯನ್ನು ಸುರುಳಿ ಸುತ್ತಿದ ಸೂರ್ಯನು ಉದಯಿಸುತ್ತಿದ್ದಾನೆ’.

ವಿಭ್ರಾಜಮಾನ ಉಷಸಾಮುಷಸ್ಥಾದ್‌ | ರೇಭೈರುದೇತ್ಯನುಮದ್ಯಮಾನಃ |

ಏಷ ಮೇ ದೇವಃ ಸವಿತಾ ಚಚ್ಛಂದ | ಯಃ ಸಮಾನಂ ನ ಪ್ರಮಿನಾತಿ ಧಾಮಃ ||

‘ಹರ್ಷದಿಂದ ಹಾಡುಗಾರರು ಎದುರುಗೊಳ್ಳುತ್ತಿರಲು (ಅವನು) ಉಷೆಯ ಮಡಿಲಿನಿಂದ ಪ್ರಕಾಶಮಾನವಾಗಿ ಉದಯಿಸುತ್ತಿದ್ದಾನೆ. ಸಣ್ಣ ನಿಯಮವನ್ನೂ ಉಲ್ಲಂಘಿಸದವನು ಈ ಸವಿತೃದೇವ’.

ಭಾರತೀಯ ಸಾಹಿತ್ಯವನ್ನೂ ವೈಚಾರಿಕತೆಯನ್ನೂ ಕಲಾಲೋಕವನ್ನೂ, ಒಟ್ಟು ಜೀವನವನ್ನೂ, ಶ್ರೀಮಂತಗೊಳಿಸಿರುವ ಮಹಾತತ್ತ್ವಗಳಲ್ಲಿ ಪ್ರಧಾನವಾದುದು ಸೂರ್ಯತತ್ತ್ವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry