ಕಲೆಗಾಗಿ ಕಲೆ ಅಲ್ಲ!

7

ಕಲೆಗಾಗಿ ಕಲೆ ಅಲ್ಲ!

Published:
Updated:
ಕಲೆಗಾಗಿ ಕಲೆ ಅಲ್ಲ!

ಕಾವ್ಯಕ್ಕೆ ಉದ್ದೇಶ ಇರಬೇಕೆ? ಬೇಡವೆ? ಈ ಪ್ರಶ್ನೆ ಕೇವಲ ಭಾರತಕ್ಕಷ್ಟೆ ಸೀಮಿತವಾಗಿಲ್ಲ; ಪ್ರಾಚೀನ ಗ್ರೀಸ್‌ನಲ್ಲಿಯೂ ಕಾವ್ಯೋದ್ದೇಶದ ಬಗ್ಗೆ ಚಿಂತನೆ ನಡೆದಿದೆ. ಪ್ಲೇಟೋವಿನ ಸಂವಾದಗಳ ಉದ್ದಕ್ಕೂ ಕಾವ್ಯ-ಕಲೆಯ ಮೀಮಾಂಸೆಯನ್ನು ನೋಡಬಹುದು. ಅದರಲ್ಲಿಯೂ ಅವನ ‘ರಿಪಬ್ಲಿಕ್‌’ನಲ್ಲಿ ತುಂಬ ಮುಖ್ಯವಾದ ನಿಲುವುಗಳನ್ನು ಪ್ರಕಟಿಸಿದ್ದಾನೆ. ನಾಡಿನ ಹಿತದೃಷ್ಟಿಯಿಂದ ಕಾವ್ಯದ ನೆಲೆ–ಬೆಲೆಗಳನ್ನು ಅವನು ಚರ್ಚಿಸಿರುವುದು ಗಮನಾರ್ಹ. ಕವಿಗಳನ್ನು ಆದರ್ಶ ರಾಜ್ಯದಿಂದ ಹೊರಗಿಡಬೇಕು ಎಂದು ಅವನು ಪ್ರತಿಪಾದಿಸಿದ್ದಾನೆ. ಈ ನಿಲುವಿಗೆ ಅವನು ಕೊಡುವ ಕಾರಣಗಳನ್ನು ಹೀಗೆ ಸಂಗ್ರಹಿಸಬಹುದು:

‘ಕವಿಗಳು ತಮ್ಮ ಕೃತಿಗಳನ್ನು ಭಾವೋನ್ಮಾದದ, ಆವೇಶದ ಸ್ಥಿತಿಯಲ್ಲಿ ರಚಿಸುತ್ತಾರೆ; ಆಗ ಅವರ ಜ್ಞಾನೇಂದ್ರಿಯಗಳು ಸುಪ್ತವಾಗಿರುತ್ತವೆ; ಅಂತಹ ಸ್ಥಿತಿಯಲ್ಲಿ ಉತ್ಪನ್ನವಾದ ಕೃತಿಗಳು ಅವರ ಅಜ್ಞಾನ ಅವಸ್ಥೆಯ ಫಲಗಳಾದುದರಿಂದ, ಅವುಗಳಲ್ಲಿ ಅಭಿವ್ಯಕ್ತವಾಗುವುದು ಕೇವಲ ಮಿಥ್ಯೆ, ಭ್ರಾಂತಿ. ಆದ್ದರಿಂದ ಅವು ತ್ಯಾಜ್ಯ’.

(ಅರಿಸ್ಟಾಟಲನ ಕಾವ್ಯಮೀಮಾಂಸೆ; ಪುಟ 32. ಎನ್‌. ಬಾಲಸುಬ್ರಹ್ಮಣ್ಯ)

ಕವಿಕುಲವನ್ನೇ ಆದರ್ಶರಾಜ್ಯದಿಂದ ಓಡಿಸಲು ಉತ್ಸಾಹಿಸುತ್ತಿಲ್ಲ; ಮಾರ್ಗದರ್ಶಕ–ಕವಿಗಳು ಬೇಕು, ಭಾವೋದ್ರೇಕ–ಕವಿಗಳು ಬೇಡ – ಎನ್ನುವುದು ಅವನ ಸಿದ್ಧಾಂತ. ‘... (W)e must remain firm in our conviction that hymns to the gods and praises of famous men are the only poetry which ought to admitted into our State’ (ಇಂಗ್ಲಿಷ್‌ ಅನುವಾದ: B. Jowett) (ದೇವತಾಪ್ರಾರ್ಥನೆ ಹಾಗೂ ಪ್ರಸಿದ್ಧ ಮಹಾಪುರುಷರ ಹೆಗ್ಗಳಿಕೆಗಳಷ್ಟೆ ನಮ್ಮ ರಾಜ್ಯದಲ್ಲಿ ಅನುಮತಿಸಬೇಕಾದ ಕಾವ್ಯ ಎಂಬ ಶ್ರದ್ಧೆಯಲ್ಲಿ ನಾವು ದೃಢವಾಗಿರತಕ್ಕದ್ದು). ಇದು ‘ರಿಪಬ್ಲಿಕ್‌’ನಲ್ಲಿರುವ ಮಾತು. ನಮ್ಮ ವ್ಯಷ್ಟಿಜೀವನಕ್ಕೆ ನೆಮ್ಮದಿಯನ್ನೂ ಸಮಷ್ಟಿಜೀವನಕ್ಕೆ ಬೆಳಕನ್ನೂ ಒದಗಿಸಬಲ್ಲದ್ದೇ ದಿಟವಾದ ಕಾವ್ಯ – ಎಂಬುದು ಪ್ಲೇಟೋವಿನ ಆದರ್ಶ. ಕಾವ್ಯ ಎಂದರೇನು? ಕಾವ್ಯಕ್ಕೂ ನಮಗೂ ಇರಬೇಕಾದ ಸಂಬಂಧ ಎಂಥದ್ದು? ಇಂಥ ಕಾವ್ಯಮೀಮಾಂಸೆಯ ಮೂಲಭೂತ ಪ್ರಶ್ನೆಗಳು ಪ್ಲೇಟೋವಿನ ಕಾಲಕ್ಕಿಂತಲೂ ಮೊದಲೇ ಇದ್ದದ್ದು ಸ್ಪಷ್ಟ. ಇದನ್ನೇ ಅವನು ‘ತತ್ತ್ವಶಾಸ್ತ್ರಕ್ಕೂ ಕಾವ್ಯಕ್ಕೂ ನಡೆದಿರುವ ಹಳೆಯ ಜಗಳ’ (An ancient quarrel between philosophy and poetry) - ಎಂಬ ವಾಕ್ಯದಲ್ಲಿ ಧ್ವನಿಸಿದ್ದಾನೆ. ಆದರೆ ಈ ಜಗಳ ಅವನ ಕಾಲಕ್ಕೆ ಮುಕ್ತಾಯವಾಯಿತು ಎನ್ನುವಂತಿಲ್ಲ.

ಇಲ್ಲಿ ಸದ್ಯಕ್ಕೆ ನಾವು ಗಮನಿಸಬೇಕಾದ್ದು ಎಂದರೆ ‘ಕಾವ್ಯಕ್ಕೆ ಆದರ್ಶ ಇರಬೇಕೇ ಬೇಡವೇ’ – ಎಂಬ ಜಿಜ್ಞಾಸೆ ಪ್ರಾಚೀನವಾದುದು. ಬೇಕು ಎಂದು ಕೆಲವರೂ ಬೇಡ ಎಂದು ಕೆಲವರೂ ಭಿನ್ನ ಪಕ್ಷಗಳನ್ನು ಹಿಡಿದಿರುವುದಂತೂ ದಿಟವೇ. ಕಾವ್ಯಕ್ಕಾಗಲೀ ಕಲೆಗಾಗಲೀ ಅದರ ಹೊರತಾಗಿ ಬೇರೊಂದು ಪ್ರಯೋಜನವಾಗಲೀ ಆದರ್ಶವಾಗಲೀ ಬೇಕಾಗಿಲ್ಲ – ಎಂದು ಸಾಧಿಸುವ ಪಕ್ಷದ ಪ್ರಣಾಳಿಕೆಯ ಸಾರವನ್ನು ‘ಕಲೆಗಾಗಿ ಕಲೆ’ (Art for art's sake) ಎನ್ನುವ ಸೂತ್ರದಲ್ಲಿ ನೋಡಬಹುದು. ಆದರೆ ಪ್ರಾಚೀನ ಸಂಸ್ಕೃತಿಗಳು ಈ ಸೂತ್ರವನ್ನು ಆದರಿಸಿದ್ದಕ್ಕಿಂತಲೂ ಅನುಮಾನಿಸಿ, ತಿರಸ್ಕರಿಸಿದ್ದೇ ಹೆಚ್ಚು ಎನ್ನುವುದನ್ನಂತೂ ಹೇಳಬಹುದಾಗಿದೆ. ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಂತೂ ಈ ನಿಲುವು ಎದ್ದುಕಾಣುವಂತಿದೆ. ಕಲಾಮೀಮಾಂಸೆಯನ್ನೂ ಕಾವ್ಯಮೀಮಾಂಸೆಯನ್ನೂ ಒಳಗೊಂಡ ಶಾಸ್ತ್ರಭಾಗವಾಗಿ ‘ಸೌಂದರ್ಯಮೀಮಾಂಸೆ’ಯನ್ನು ನೋಡಬಹುದು. ಇದನ್ನೇ ‘Aesthetic’ (ಎಸ್ತೆಟಿಕ್‌) ಎಂದು ಒಕ್ಕಣಿಸಿರುವುದು. ಈ ಶಬ್ದದ ಅರ್ಥವನ್ನು ಆನಂದ ಕುಮಾರಸ್ವಾಮಿ ಹೀಗೆ ನಿರೂಪಿಸಿದ್ದಾರೆ:

‘ಗ್ರೀಕ್‌ ಮೂಲದ ‘ಎಸ್ತೆಟಿಕ್‌’ ಶಬ್ದದ ಅರ್ಥ ಇಂದ್ರಿಯಗಳಿಂದ ಒದಗುವ ಸಂವೇದನೆ. ಇಂಥದೊಂದು ಸಂವೇದನಶೀಲತೆ ನಮಗೂ ಪ್ರಾಣಿ–ಸಸ್ಯಗಳಿಗೂ ಸಮಾನವಾಗಿರುತ್ತದೆ. ಇಂಥ ‘ಸಂವೇದನಶೀಲ ಆತ್ಮ’ವು ನಮ್ಮ ಮನಸ್ಸಿನ ಸಂರಚನೆಯ ಭಾಗವಾಗಿಯೇ ಇದ್ದುಕೊಂಡು, ವಸ್ತುಗಳಿಗೆ ಪ್ರತಿಕ್ರಿಯಿಸುತ್ತಿರುತ್ತದೆ. ಎಂದರೆ ಇದು ವಿವೇಚನಶೀಲತೆಯಿರದ, ಕೇವಲ ನಮ್ಮ ವೈಯಕ್ತಿಕವಾದ ರಾಗ–ದ್ವೇಷಭಾವನೆಗಳ ಭಾಗವಾಗಿದೆ. ಇಂಥ ಮನೋಧರ್ಮದೊಂದಿಗೆ ನಾವು ಕಲಾನುಸಂಧಾನದಲ್ಲಿ ತೊಡಗುವುದು ಎಂದರೆ ಅದು ಕ್ರಿಯಾಶೀಲವೂ ಧ್ಯಾನಸ್ಥವೂ ಆದ ಜೀವನವಿಧಾನಕ್ಕೆ ವಿಮುಖವಾಗಿ ಕೇವಲ ಸುಖಜೀವನಕ್ಕಷ್ಟೆ ಅನ್ವಯಿಸಿದಂತಾಗುತ್ತದೆ’

ಆದುದರಿಂದ ಸೌಂದರ್ಯತತ್ತ್ವಕ್ಕೆ ‘Aesthetic’ ಪದದ ಬದಲಿಗೆ ‘Rhetoric’ ಪದವನ್ನು ಬಳಸುವುದು ಸರಿಯೆನ್ನುತ್ತಾರೆ ಕುಮಾರಸ್ವಾಮಿ. ‘Rhetoric’ ಎಂದರೆ ವಾಗ್ಮಿತೆ, ಭಾಷಣಕಲೆ, ‘ನುಡಿನಡೆ’. ನಾವು ಪ್ರತಿಪಾದಿಸುವ ವಿಷಯವನ್ನು ಆಕರ್ಷಕವಾಗಿಯೂ ಪರಿಣಾಮಕಾರಿಯಾಗಿಯೂ ನಿರೂಪಿಸುವ ಕುಶಲತೆಯೇ ‘Rhetoric’. ಅದು ಸರಿ; ಆದರೆ ಇದಕ್ಕೂ ಕಾವ್ಯಮರ್ಮಕ್ಕೂ ಏನು ಸಂಬಂಧ? ‘Rhetoric’ ಎಂದರೆ ಏನು ಎನ್ನುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ: By ‘Rhetoric’ we mean, with Plato and Aristotle, ‘the art of giving effectiveness to truth’ (‘ರೆಟರಿಕ್‌’ ಎಂದರೆ, ನಮ್ಮ ಪ್ರಕಾರ, ಪ್ಲೇಟೋ ಮತ್ತು ಅರಿಸ್ಟಾಟಲ್‌ ಹೇಳಿದಂತೆ, ಸತ್ಯಕ್ಕೆ ಹೊಳಪನ್ನು ನೀಡುವ ಕಲೆ). ಕವಿ ಹೋಮರ್ ತನಗೆ  ಎಷ್ಟೇ ಪ್ರಿಯನಾಗಿದ್ದರೂ ಕಾವ್ಯಧರ್ಮವನ್ನು ಕುರಿತು ಪ್ಲೇಟೋ ತೀಕ್ಷ್ಣವಾಗಿಯೇ ಟೀಕಿಸಿದ್ದಾನಷ್ಟೆ. ಈ ವಿಮರ್ಶೆಯ ಬಗ್ಗೆ ಅವನೇ ಕೊಡುವ ಸಮಾಧಾನ: ‘(A) man is not to be reverenced more than the truth’ (ಸತ್ಯಕ್ಕಿಂತಲೂ ಮಿಗಿಲಾಗಿ ವ್ಯಕ್ತಿಯನ್ನು ಗೌರವಿಸಲಾಗದು). ಹೀಗಾಗಿ ಕಾವ್ಯ ಎಂದರೆ ಸತ್ಯದ ‘ಪಾತ್ರ’ಕ್ಕೆ ನೀಡಿದ ಸತ್ಯದ ಹೊಳಪು ಎಂದು ಹೇಳಬಹುದು. ಇಲ್ಲಿ ‘ಸತ್ಯ’ ಎಂದರೆ ಅದು ಧರ್ಮವೇ ಹೌದು. (ಆದರೆ Religion ಅಲ್ಲ!) ಈ ಹಿನ್ನೆಲೆಯಲ್ಲಿ, ರಾಮಾಯಣದ ವಸ್ತು ‘ಧರ್ಮ’; ನಾಯಕ ಶ್ರೀರಾಮ – ಅವನು ‘ಧರ್ಮದ ವಿಗ್ರಹರೂಪ’. ಎಂದರೆ ಅಮೂರ್ತವಾಗಿರುವ ಧರ್ಮಕ್ಕೆ ಆಕಾರವೊಂದು ಒದಗಿದರೆ ಅದು ಶ್ರೀರಾಮನ ರೂಪವನ್ನು ಪಡೆಯುವುದಂತೆ!

ರಾಮೋ ವಿಗ್ರಹವಾನ್‌ ಧರ್ಮಃ ಸಾಧುಃ ಸತ್ಯಪರಾಕ್ರಮಃ|
ರಾಜಾ ಸರ್ವಸ್ಯ ಲೋಕಸ್ಯ ದೇವಾನಾಂ ಮಘವಾನಿವ ||

(ಧರ್ಮದ ಶರೀರವೇ ರಾಮ; ಅವನು ಸತ್ಯವನ್ನೇ ಬಲವನ್ನಾಗಿಸಿಕೊಂಡವನು; ಸಜ್ಜನ. ದೇವಲೋಕಕ್ಕೆ ಇಂದ್ರನಿದ್ದಂತೆ; ಎಲ್ಲ ಲೋಕಕ್ಕೂ ಸುಖವನ್ನು ಒದಗಿಸಬಲ್ಲ ಒಡೆಯನಂತಿರುವವನು.)

ಈ ಮಾತುಗಳು ಕವಿ ವಾಲ್ಮೀಕಿಯವು. ಧರ್ಮದ ಪುರುಷರೂಪ ರಾಮನಾದರೆ, ಅದರ ಕಾವ್ಯಶರೀರವೇ ರಾಮಾಯಣ. ಯಾವುದೋ ಒಂದು ಘಟನೆಗೆ ವಾಲ್ಮೀಕಿಯ ಪ್ರತಿಕ್ರಿಯೆಯಾಗಿ ಹುಟ್ಟಿದ ಕಾವ್ಯವಲ್ಲ ಅದು. ಪ್ರತಿಕ್ರಿಯೆಯಲ್ಲಿ
ನಮ್ಮ ರಾಗ–ದ್ವೇಷಗಳದ್ದೇ ಅಬ್ಬರವಿರುತ್ತದೆ. ಆದರೆ ಲೌಕಿಕವನ್ನೂ ಅಲೌಕಿಕವನ್ನೂ ಸಂಧಿಸಬಲ್ಲ ರಸದಿಗಂತವೇ ಕಾವ್ಯ. ಈ ತಾದಾತ್ಮ್ಯವಾದರೋ ಶರೀರ ಮತ್ತು ಆತ್ಮದ ಸಂಬಂಧದಂತೆ. ಆನಂದ ಕುಮಾರಸ್ವಾಮಿ ಮಾತುಗಳೇ ಇಲ್ಲಿ ಉಲ್ಲೇಖಾರ್ಹವಾಗಿವೆ:

‘ಪ್ರತಿಕ್ರಿಯೆ ಎನ್ನುವುದು ‘ರಾಗ’ವೇ ಹೌದು ಎನ್ನುವುದನ್ನು ಮರೆಯುವಂತಿಲ್ಲ. ಪ್ರತಿ ರಾಗವೂ ಭಾವೋದ್ರೇಕವೇ ಆಗಿರುತ್ತದೆ; ಮಾತ್ರವಲ್ಲ, ಅದು ನಿಷ್ಕ್ರಿಯತೆಯೂ ಹೌದು. ಈ ಸ್ಥಿತಿಯಲ್ಲಿ ನಮ್ಮ ಕ್ರಿಯಾಶೀಲತೆಯಾಗಲೀ ಮೌಲ್ಯನಿರ್ಣಯ ಸಾಮರ್ಥ್ಯವಾಗಲೀ ಇರದು. ಇಂದ್ರಿಯಜನ್ಯ ಪ್ರತಿಕ್ರಿಯಾತ್ಮಕ ಭಾವಸುಖವನ್ನೇ ನಾವು ಕಲಾಪ್ರೀತಿ ಎಂದು ಮುಂದುವರೆದರೆ ಆಗ ಕಲೆಯು ಕೇವಲ ಕಾಮೋದ್ದೀಪಕವಾದ ವಾಜೀಕರಣವಾದೀತಷ್ಟೆ (aphrodisiac)’.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry