ಬಿಜೆಪಿ ಜೈಲ್‌ ಭರೋ: ಕಾಂಗ್ರೆಸ್‌ ಕಚೇರಿ ಮುತ್ತಿಗೆ ಯತ್ನ

7

ಬಿಜೆಪಿ ಜೈಲ್‌ ಭರೋ: ಕಾಂಗ್ರೆಸ್‌ ಕಚೇರಿ ಮುತ್ತಿಗೆ ಯತ್ನ

Published:
Updated:
ಬಿಜೆಪಿ ಜೈಲ್‌ ಭರೋ: ಕಾಂಗ್ರೆಸ್‌ ಕಚೇರಿ ಮುತ್ತಿಗೆ ಯತ್ನ

ಬೆಂಗಳೂರು: ‘ಆರ್‌ಎಸ್‌ಎಸ್‌, ಬಿಜೆಪಿಯಲ್ಲಿ ಉಗ್ರವಾದಿಗಳಿದ್ದಾರೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಶುಕ್ರವಾರ ಜೈಲ್‌ ಭರೋ ಚಳವಳಿ ನಡೆಸಿದರು.

‘ನಾನೂ ಉಗ್ರ–ನನ್ನ ಬಂಧಿಸಿ’ ಎಂದು ಘೋಷಣೆ ಕೂಗಿದ ಕಾರ್ಯಕರ್ತರು ಕೆಲವು ಕಡೆಗಳಲ್ಲಿ ಕಾಂಗ್ರೆಸ್‌ ಜಿಲ್ಲಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು. ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಶಾಸಕರಾದ ಸುರೇಶಗೌಡ, ದತ್ತಾತ್ರೇಯ ಪಾಟೀಲ ರೇವೂರ, ತಿಪ್ಪರಾಜು ಹವಾಲ್ದಾರ, ಬಿ.ಜಿ. ಪಾಟೀಲ, ರಘುನಾಥರಾವ್‌ ಮಲ್ಕಾಪುರೆ, ಜಿಲ್ಲಾ ಘಟಕದ ಅಧ್ಯಕ್ಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೆಲವು ಕಡೆಗಳಲ್ಲಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕೃತಿಗಳನ್ನು ಕಾರ್ಯಕರ್ತರು ದಹಿಸಿ, ಕಪ್ಪು ಬಾವುಟ ಪ್ರದರ್ಶಿಸಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶ ಇದ್ದುದರಿಂದ ಜೈಲ್ ಭರೋ ನಡೆಯಲಿಲ್ಲ. ದಾವಣಗೆರೆಯಲ್ಲಿ ಸ್ವಾಮಿ ವಿವೇಕಾನಂದ ಜನ್ಮಜಯಂತಿ ಪ್ರಯುಕ್ತ ಪ್ರತಿಭಟನೆ ನಡೆಯಲಿಲ್ಲ ಎಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ. ಶಿವಮೊಗ್ಗ ಮತ್ತು ಉಡುಪಿಯಲ್ಲಿ  ಪ್ರತಿಭಟನೆ ನಡೆದಿಲ್ಲ.

ಕಚೇರಿಗೆ ನುಗ್ಗಲು ಯತ್ನ:

ಚಿಕ್ಕಮಗಳೂರು ಮತ್ತು ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಅದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಕಲಬುರ್ಗಿಯಲ್ಲಿ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಿಡುಗಡೆ ಮಾಡಿದರು.

‘ಬಿಜೆಪಿ ಮತ್ತು ಆರ್‌ಎಸ್ಎಸ್‌ನವರು ಉಗ್ರಗಾಮಿಗಳು’ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದು ಬಿಜೆಪಿಯವರು ಆಪಾದಿಸಿದ್ದರು. ‘ಉಗ್ರಗಾಮಿಗಳು ಎಂದು ಹೇಳಿಲ್ಲ, ಉಗ್ರವಾದಿಗಳು ಎಂದಷ್ಟೇ ಹೇಳಿದ್ದೆ’ ಎಂದು ಅವರು ಮರು ದಿನ  ಸ್ಪಷ್ಟನೆ ನೀಡಿದ್ದರು.

‘ಬಿಜೆಪಿ, ಆರ್‌ಎಸ್‌ಎಸ್‌, ಬಜರಂಗದಳವರು ಉಗ್ರಗಾಮಿಗಳು, ಜಿಹಾದಿಗಳು. ಆ ಸಂಘಟನೆಗಳನ್ನೂ ನಿಷೇಧಿಸಬೇಕಾತ್ತದೆ’ ಎಂದು ದಿನೇಶ್ ಗುಂಡೂರಾವ್ ಪ್ರತಿಪಾದಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry