ಕೆಲವರ ಚಡ್ಡಿಗೆ ಬೆಂಕಿ ಬಿದ್ದಿದೆ

7

ಕೆಲವರ ಚಡ್ಡಿಗೆ ಬೆಂಕಿ ಬಿದ್ದಿದೆ

Published:
Updated:
ಕೆಲವರ ಚಡ್ಡಿಗೆ ಬೆಂಕಿ ಬಿದ್ದಿದೆ

ಸಾಗರ: ‘ಜಾತ್ಯತೀತ ಕುರಿತು ನಾನು ಈಚೆಗೆ ನೀಡಿದ ಹೇಳಿಕೆಯಿಂದ ಕೆಲವರ ಚಡ್ಡಿಗೆ ಬೆಂಕಿ ಬಿದ್ದಿದೆ. ಏನು ಮಾಡುವುದು, ಪೆಟ್ರೋಲ್‌ ಹಾಕ್ಕೊಂಡು ತಿರುಗದೆ ಇದ್ದರೆ ಬೆಂಕಿ ಹತ್ತೋದಿಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದರು.

ಬಿಜೆಪಿ ಶುಕ್ರವಾರ ಇಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಾತ್ಯತೀತ ಹೆಸರಿನಲ್ಲಿ ನಮ್ಮತನ ಮರೆಯುತ್ತಿದ್ದೇವೆ. ಜಾತ್ಯತೀತ ಎಂಬುದು ಯಾರೋ ಫ್ಯಾಷನ್‌ಗೆ ಹೇಳಿಕೊಟ್ಟಿರುವ ವಿಷಯ’ ಎಂದು ಅಭಿಪ್ರಾಯಪಟ್ಟರು.

‘ಇತ್ತೀಚೆಗೆ ತಾವು ಬರೆದಿದ್ದೇ ಸಾಹಿತ್ಯ ಎಂದು ಪ್ರತಿಪಾದಿಸುವ ಮೂರ್ಖರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ಬುದ್ಧಿಜೀವಿಗಳು ರಾಮನ ಅಪ್ಪ–ಅಮ್ಮ ಯಾರು ಎಂದು ಕೇಳುತ್ತಾರೆ. ಇಂಥವರಿಗೆ ಅವರ ಅಪ್ಪ–ಅಮ್ಮ ಯಾರು ಎಂಬುದೇ ಗೊತ್ತಿರುವುದಿಲ್ಲ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ನರಹಂತಕ’ ಎಂದು ಟೀಕಿಸುತ್ತಾರೆ. ಇಂತಹ ನಾಲಿಗೆಗೆ ಉತ್ತರ ಕೊಡುವಾಗ ಸಭ್ಯತೆಯನ್ನು ಬುಟ್ಟಿಗೆ ಹಾಕಬೇಕು. ಮುಳ್ಳಿಗೆ ಮುಳ್ಳಿನಿಂದಲೇ ಉತ್ತರ ಕೊಡಬೇಕು’ ಎಂದು ವಾಗ್ದಾಳಿ ನಡೆಸಿದರು.

‘ಹಿಂದೂ ದೇವತೆಗಳನ್ನು ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಕೈಯಲ್ಲಿ ಕತ್ತಿ, ಕೊಡಲಿ ಹಿಡಿದು ನಿಲ್ಲಬೇಕಿತ್ತು. ಏಕೆಂದರೆ, ರಾಮ, ಗಣಪತಿ, ಕಾಳಿ ಮೊದಲಾದ ಹಿಂದೂ ದೇವರು ಸೌಮ್ಯ ದೇವತೆಗಳಲ್ಲ, ಬದಲಾಗಿ ಶಕ್ತಿ ದೇವತೆಗಳು. ಅನ್ಯಾಯದ ವಿರುದ್ಧ ಶಸ್ತ್ರ ಹಿಡಿದು ಸೆಟೆದು ನಿಂತವರು. ಹೀಗಾಗಿ ಸೋಗಲಾಡಿತನದ ಸಭ್ಯತೆ ಇದ್ದವರು ರಾಮ, ಗಣಪತಿ, ಕಾಳಿ ಮೊದಲಾದ ಶಕ್ತಿ ದೇವತೆಗಳಿಗೆ ನಮಸ್ಕಾರ ಮಾಡುವ ಅಗತ್ಯವಿಲ್ಲ’ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವರಿಗೆ ಕಪ್ಪುಬಾವುಟ ಪ್ರದರ್ಶನ: ಬಂಧನ

ಶಿವಮೊಗ್ಗ: ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ನಗರದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ ಜಿಲ್ಲಾ ಯುವ ಕಾಂಗ್ರೆಸ್‌ನ 57 ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ಬಂಧಿಸಿದರು.

ಸಾಗರ ರಸ್ತೆಯ ಫೆಸಿಟ್ ಕಾಲೇಜಿನಲ್ಲಿ ಆಯೋಜಿಸಿದ್ದ ‘ಸ್ಕಿಲ್ ವ್ಹೀಲ್ಸ್’ ಕಾರ್ಯಕ್ರಮ ಉದ್ಘಾಟನೆಗೆ ಬಂದ ಸಚಿವರನ್ನು ಕಾಲೇಜು ಮುಂಭಾಗ ತಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಸಚಿವರು ಸಂವಿಧಾನ ಬದಲಾಯಿಸುವ ಕುರಿತು ಹೇಳಿಕೆ ನೀಡಿದ್ದಾರೆ. ಪ್ರಗತಿಪರರ ನಿಂದಿಸುವ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಚೋದನಾಕಾರಿ ಹೇಳಿಕೆ ನೀಡಿರುವ ಹೆಗಡೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಮಧುಸೂದನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಿರಂಜೀವಿ ಬಾಬು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ತಾಂಡ್ಲೆ, ಚಂದ್ರಶೇಖರ್, ಅಕ್ಬರ್, ಸುರೇಶ್, ಖಾದರ್, ಶಿವಕುಮಾರ್, ಗಿರೀಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry