ಪ್ರಶಸ್ತಿಗೆ ಪಣ: ಯುವಶಕ್ತಿ ದರ್ಶನ

7
19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಇಂದು ಅಧಿಕೃತ ಚಾಲನೆ

ಪ್ರಶಸ್ತಿಗೆ ಪಣ: ಯುವಶಕ್ತಿ ದರ್ಶನ

Published:
Updated:
ಪ್ರಶಸ್ತಿಗೆ ಪಣ: ಯುವಶಕ್ತಿ ದರ್ಶನ

ಕ್ರೈಸ್ಟ್ ಚರ್ಚ್‌, ನ್ಯೂಜಿಲೆಂಡ್‌ : ಭವಿಷ್ಯದ ತಾರೆಗಳ ಉದಯಕ್ಕೆ ಕಾರಣವಾಗುವ ಟೂರ್ನಿ ಎಂದೇ ಹೇಳಲಾಗುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ಗೆ ಶನಿವಾರ ಚಾಲನೆ ದೊರೆಯಲಿದೆ. ಮೂರು ಬಾರಿಯ ಚಾಂಪಿಯನ್ ಭಾರತ ಸೇರಿದಂತೆ ಒಟ್ಟು 16 ತಂಡಗಳು ಪಾಲ್ಗೊಳ್ಳುವ ಟೂರ್ನಿಗೆ ಏಳು ಕ್ರೀಡಾಂಗಣಗಳು ವೇದಿಕೆಯಾಗಲಿವೆ.

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಮುಂತಾದವರನ್ನು ಕಾಣಿಕೆಯಾಗಿ ನೀಡಿದ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಈ ಬಾರಿಯೂ ಶ್ರೇಷ್ಠ ಪ್ರತಿಭೆಗಳು ಉದಯಿಸುವ ಭರವಸೆಯಲ್ಲಿದೆ ಕ್ರಿಕೆಟ್ ಜಗತ್ತು.

ಸ್ಥಳೀಯ ಕಾಲಮಾನ ಬೆಳಿಗ್ಗೆ 10.30ಕ್ಕೆ ಮೂರು ಪಂದ್ಯಗಳು ಆರಂಭಗೊಳ್ಳಲಿವೆ. ಕೊಬಾಮ್ ಓವಲ್‌, ಲಿಂಕನ್‌ ನಂ–3 ಮತ್ತು ಬೆರ್ಟ್ ಸುಕ್ಲಿಪ್ ಓವಲ್‌ನಲ್ಲಿ ಈ ಪಂದ್ಯಗಳು ನಡೆಯಲಿವೆ. ಆರಂಭಿಕ ಪಂದ್ಯಗಳಲ್ಲಿ ಆಫ್ಗಾನಿಸ್ತಾನ ಮತ್ತು ಪಾಕಿಸ್ತಾನ, ಪಪುವಾ ನ್ಯೂಗಿನಿ ಮತ್ತು ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ನಮೀಬಿಯಾ ತಂಡಗಳು ಸೆಣಸಲಿವೆ.

ಮೌಂಟ್ ಮೌಂಗಾನಿಯಲ್ಲಿ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಭಾರತ ತಂಡದ ಮೊದಲ ಪಂದ್ಯ ಭಾನುವಾರ ನಡೆಯಲಿದೆ.  ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಭಾರತ ಯುವಪಡೆ ಪಳಗಿದೆ. ಕಳೆದ ಬಾರಿಯ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು.

ಆಗ ತಂಡದಲ್ಲಿ ಮಿಂಚಿದ್ದ  ರಿಷಭ್ ಪಂತ್‌ ಮತ್ತು ಅಲ್ಜರಿ ಜೋಸೆಫ್‌ ಭಾರತ ತಂಡದ ಕದ ತಟ್ಟಿದ್ದರು.  ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಪ್ರತಿಭೆಗಳ ಮೇಲೆ ಈ ಬಾರಿಯೂ ನಿರೀಕ್ಷೆಯ ಭಾರ ಇದೆ.

ಭಾರತ ತಂಡದ ನಾಯಕ ಪೃಥ್ವಿ ಶಾ, ಶುಭಂ ಗಿಲ್‌, ಆಸ್ಟ್ರೇಲಿಯಾ ತಂಡದ ನಾಯಕ ಜೇಸನ್ ಸಂಗಾ, ಪಾಕಿಸ್ತಾನದ ವೇಗಿ ಶಾಹಿನ್ ಅಫ್ರಿದಿ, ಆಫ್ಘಾನಿಸ್ತಾನದ ಬ್ಯಾಟಿಂಗ್‌ ಪ್ರತಿಭೆ ಬಹೀರ್‌ ಶಾ ಮುಂತಾದವರ ಮೇಲೆ ಈ ಬಾರಿ ಎಲ್ಲರ ದೃಷ್ಟಿ ಇದೆ. ಪೃಥ್ವಿ, ಗಿಲ್‌, ಸಂಘ ಮತ್ತು ಶಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶತಕ ಗಳಿಸಿ ಮಿಂಚಿದ್ದರೆ ಕ್ವಾದ್ ಎ ಆಜಮ್ ಟ್ರೋಫಿ ಟೂರ್ನಿಯಲ್ಲಿ ಅಫ್ರಿದಿ 39ಕ್ಕೆ8 ವಿಕೆಟ್‌ ಕಬಳಿಸಿದ್ದಾರೆ.

***

1988ರ ನಂತರ ಒಂದು ದಶಕ ಈ ಟೂರ್ನಿ ನಡೆಯಲಿಲ್ಲ. ಹೀಗಾಗಿ ನನಗೆ ಈ ಟೂರ್ನಿಯಲ್ಲಿ ಆಡಲು ಅವಕಾಶ ಇರಲಿಲ್ಲ. ಯುವ ಆಟಗಾರರಿಗೆ ಇದು ಅಪೂರ್ವ ಅವಕಾಶ.

      –ರಾಹುಲ್ ದ್ರಾವಿಡ್‌, ಭಾರತ ಕೋಚ್‌

***

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry