ದಾಖಲೆ ಕನಸು ನನಸಿಗೆ ಜಯ ಅನಿವಾರ್ಯ

7
ಭಾರತ– ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯ ಇಂದು ಆರಂಭ: ರಾಹುಲ್‌ಗೆ ಅವಕಾಶದ ಸಾಧ್ಯತೆ

ದಾಖಲೆ ಕನಸು ನನಸಿಗೆ ಜಯ ಅನಿವಾರ್ಯ

Published:
Updated:
ದಾಖಲೆ ಕನಸು ನನಸಿಗೆ ಜಯ ಅನಿವಾರ್ಯ

ಸೆಂಚೂರಿಯನ್‌, ದಕ್ಷಿಣ ಆಫ್ರಿಕಾ: ಮೊದಲ ಪಂದ್ಯದಲ್ಲಿ ನೀರಸ ಆಟವಾಡಿ ಸೋಲಿನ ಸುಳಿಯಲ್ಲಿ ಸಿಲುಕಿದ ಭಾರತ ತಂಡವು ಶನಿವಾರ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳುವ ಭರವಸೆಯಲ್ಲಿದೆ.

ಕೇಪ್‌ಟೌನ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 72 ರನ್‌ಗಳ ಜಯ ಸಾಧಿಸಿದ ಆತಿಥೇಯರು ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದ್ದಾರೆ. ಸರಣಿ ಗೆಲುವಿನ ಆಸೆಯನ್ನು ಜೀವಂತ ಇರಿಸಬೇಕಾದರೆ ಭಾರತ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕು. ನಿರಂತರ ಒಂಬತ್ತು ಸರಣಿ ಗೆದ್ದು ದಾಖಲೆಯ ಹೊಸ್ತಿಲಿನಲ್ಲಿರುವುದರಿಂದಲೂ ಭಾರತಕ್ಕೆ ಇಲ್ಲಿ ಜಯ ಅನಿವಾರ್ಯ.

ಈ ಋತುವಿನಲ್ಲಿ ಭಾರತ ಒಟ್ಟು 12 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು ಇದಕ್ಕೆ ಆರಂಭದಲ್ಲೇ ವಿಘ್ನ ಕಾಡಿದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ವಿರಾಟ್ ಕೊಹ್ಲಿ ಬಳಗ ಶ್ರಮಿಸಲಿದೆ. ಗುರುವಾರ ಇಲ್ಲಿನ ಸೂಪರ್‌ ಸ್ಪೋರ್ಟ್ ಪಾರ್ಕ್‌ನಲ್ಲಿ ಭಾರತ ನಾಲ್ಕು ತಾಸು ಕಠಿಣ ಅಭ್ಯಾಸ ನಡೆಸಿದೆ.

ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ನೆಟ್ಸ್‌ನಲ್ಲಿ ಹೆಚ್ಚು ಕಾಲ ಬ್ಯಾಟಿಂಗ್ ಮಾಡಿದರು. ಅಜಿಂಕ್ಯ ರಹಾನೆ ಮತ್ತು ಶಿಖರ್ ಧವನ್‌ ಅವರು ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್  ಅವರು ಮಾಡಿದ ಥ್ರೋಡೌನ್ ಎಸೆತಗಳನ್ನು ಎದುರಿಸಿದರು. ಕೆ.ಎಲ್‌.ರಾಹುಲ್‌, ಮುರಳಿ ವಿಜಯ್‌ ಮತ್ತು ಪೂಜಾರ ಕೂಡ ಬ್ಯಾಟಿಂಗ್ ಕಡೆಗೆ ಗಮನ ನೀಡಿದರು. ಚೇತೇಶ್ವರ ಪೂಜಾರ ಸ್ಪಿಪ್‌ನಲ್ಲಿ ಕ್ಯಾಚ್ ಪಡೆಯುವ ಅಭ್ಯಾಸ ಮಾಡಿದರು.

ಧವನ್ ಬದಲಿಗೆ ರಾಹುಲ್?

ಮೊದಲ ಪಂದ್ಯದಲ್ಲಿ ಕಳಪೆ ಆಟ ಆಡಿದ ಶಿಖರ್ ಧವನ್‌ ಬದಲಿಗೆ ಎರಡನೇ ಟೆಸ್ಟ್‌ನಲ್ಲಿ ಕೆ.ಎಲ್‌.ರಾಹುಲ್‌ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾದಲ್ಲಿ ಧವನ್‌ಗೆ ಹೆಚ್ಚು ಮಿಂಚಲು ಆಗಲಿಲ್ಲ. ಇಲ್ಲಿವರೆಗೆ ಮೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಒಂದು ಅರ್ಧಶತಕವನ್ನೂ ಗಳಿಸಲಿಲ್ಲ. 2013–14ರ ಪ್ರವಾಸದಲ್ಲಿ ಗಳಿಸಿದ 29 ರನ್‌ ಈ ನೆಲದಲ್ಲಿ ಅವರು ಗಳಿಸಿದ ಗರಿಷ್ಠ ಮೊತ್ತ.

ರೋಹಿತ್ ಶರ್ಮಾ ಬದಲಿಗೆ ಅಜಿಂಕ್ಯ ರಹಾನೆ ಅವರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಕೇಪ್‌ಟೌನ್‌ನಲ್ಲಿ ಎರಡು ಇನಿಂಗ್ಸ್‌ಗಳಲ್ಲಿ ರೋಹಿತ್‌ ಕ್ರಮವಾಗಿ 11 ಮತ್ತು 10 ರನ್‌ ಗಳಿಸಿದ್ದರು. ಬ್ಯಾಟಿಂಗ್‌ನಲ್ಲಿ ಬದಲಾವಣೆ ಮಾಡಿದರೆ ಬೌಲಿಂಗ್‌ ದಾಳಿಯ ಬಗ್ಗೆಯೂ ಕೊಹ್ಲಿ ಚಿಂತನೆ ನಡೆಸಬೇಕಾದೀತು. ಅನಾರೋಗ್ಯದಿಂದ ಬಳಲುತ್ತಿದ್ದ ಇಶಾಂತ್ ಶರ್ಮಾ ಆಡಲು ಸಜ್ಜಾಗಿದ್ದು ವೇಗದ ಬೌಲಿಂಗ್ ವಿಭಾಗಕ್ಕೆ ಅವರು ಮೊನಚು ತುಂಬಲಿದ್ದಾರೆ.

ಅತ್ತ ದಕ್ಷಿಣ ಆಫ್ರಿಕಾ ತಂಡ ನಿರಾಳವಾಗಿದ್ದು ಗಾಯಗೊಂಡಿರುವ ಡೇಲ್ ಸ್ಟೇನ್‌ ಬದಲಿಗೆ ಯುವ ಆಟಗಾರ ಲುಂಗಿ ಜಿಡಿ ಅಥವಾ ಆಲ್‌ರೌಂಡರ್‌ ಕ್ರಿಸ್ ಮಾರಿಸ್ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ಮುರಳಿ ವಿಜಯ್‌, ಕೆ.ಎಲ್‌.ರಾಹುಲ್‌, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ಆರ್‌.ಅಶ್ವಿನ್‌, ರವೀಂದ್ರ ಜಡೇಜ, ಭುವನೇಶ್ವರ್‌ ಕುಮಾರ್‌, ಇಶಾಂತ್ ಶರ್ಮಾ, ಉಮೇಶ್‌ ಯಾದವ್, ಮಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಪಾರ್ಥಿವ್ ಪಟೇಲ್‌.

ದಕ್ಷಿಣ ಆಫ್ರಿಕಾ: ಫಾಫ್‌ ಡು ಪ್ಲೆಸಿ (ನಾಯಕ), ಡೀನ್ ಎಲ್ಗರ್‌, ಏಡನ್‌ ಮರ್ಕರಮ್‌, ಹಾಶೀಂ ಆಮ್ಲಾ, ತೆಂಬಾ ಬವುಮಾ, ಥೇನಿಸ್ ಡಿ ಬ್ರೂನಿ, ಕ್ವಿಂಟನ್ ಡಿ ಕಾಕ್‌ (ವಿಕೆಟ್ ಕೀಪರ್‌), ಕೇಶವ್ ಮಹಾರಾಜ್‌, ಮಾರ್ನೆ ಮಾರ್ಕೆಲ್‌, ಕ್ರಿಸ್‌ ಮಾರಿಸ್‌, ವೆರ್ನಾನ್ ಫಿಲ್ಯಾಂಡರ್‌, ಕಗಿಸೊ ರಬಾಡ, ಆ್ಯಂಡಿಲ್ ಫೆಹ್ಲುಕ್ವಾಯೊ, ಲುಂಗಿ ಜಿಡಿ, ದ್ವಾನೆ ಒಲಿವರ್‌.

ಪಂದ್ಯ ಆರಂಭ: ಮಧ್ಯಾಹ್ನ 1.30 (ಭಾರತೀಯ ಕಾಲಮಾನ).

***

ಪಿಚ್‌ ದಕ್ಷಿಣ ಆಫ್ರಿಕಾ ತಂಡಕ್ಕೆ ಪೂರಕ

ಸೂಪರ್‌ ಸ್ಪೋರ್ಟ್‌ ಪಾರ್ಕ್‌ನದ್ದು ಆತಿಥೇಯರಿಗೆ ಅದೃಷ್ಟದ ಪಿಚ್‌. ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿರುವ ಈ ಪಿಚ್‌ನಲ್ಲಿ ಚೆಂಡು ಹೆಚ್ಚು ಸ್ವಿಂಗ್ ಮತ್ತು ಬೌನ್ಸ್ ಆಗುತ್ತದೆ. ಇಲ್ಲಿ ಉರಿ ಸೆಕೆ ಕಾಡುತ್ತಿದ್ದು ಮಳೆಯಾಗುವ ಯಾವ ಲಕ್ಷಣವೂ ಇಲ್ಲ.

ಸೂಪರ್‌ಸ್ಪೋರ್ಟ್‌ನಲ್ಲಿ ಆಡಿದ ಒಟ್ಟು 22 ಪಂದ್ಯಗಳ ಪೈಕಿ 17ರಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಕಂಡಿದೆ. 2000ನೇ ಇಸವಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಮತ್ತು 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ತಂಡ ಇಲ್ಲಿ ಸೋತಿತ್ತು.

***

ಮೊದಲ ಪಂದ್ಯದಲ್ಲಿ ನೀರಸ ಆಟ ಆಡಿದ್ದರಿಂದ ತಂಡ ಆತಂಕಕ್ಕೆ ಒಳಗಾಗಿದೆ. ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ತಂಡದ ಗೆಲುವು ಖಚಿತವಾಗಲಿದೆ. ಐದು ಅಥವಾ ಆರು ಬ್ಯಾಟ್ಸ್‌ಮನ್‌ಗಳನ್ನು ಕಣಕ್ಕೆ ಇಳಿಸುವ ಬಗ್ಗೆ ಇನ್ನೂ ನಿರ್ಧಾರ ಆಗಲಿಲ್ಲ.

ವಿರಾಟ್ ಕೊಹ್ಲಿ

ಭಾರತ ತಂಡದ ನಾಯಕ

**

ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕು ಎಂಬ ಉದ್ದೇಶದಿಂದಲೇ ವೇಗಿಗಳಿಗೆ ನೆರವಾಗುವ ಪಿಚ್‌ಗಳನ್ನು ಸಿದ್ಧಗೊಳಿಸಲಾಗಿದೆ. ‍ಪಂದ್ಯಗಳನ್ನು ಒಂದೊಂದಾಗಿ ಗೆಲ್ಲುವುದೇ ತಂಡದ ಮೊದಲ ಆದ್ಯತೆ.

ಫಾಫ್‌ ಡು ಪ್ಲೆಸಿ

ದಕ್ಷಿಣ ಆಫ್ರಿಕಾ ನಾಯಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry