ಅಸಮಾಧಾನಕ್ಕೆ ಹಲವು ಕಾರಣಗಳು

7

ಅಸಮಾಧಾನಕ್ಕೆ ಹಲವು ಕಾರಣಗಳು

Published:
Updated:

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರು ಪ್ರಕರಣಗಳನ್ನು ವಿಚಾರಣೆಗೆ ‘ಮನಸೋ ಇಚ್ಛೆ’ ಹಂಚಿಕೆ ಮಾಡುತ್ತಿದ್ದಾರೆ. ಇದು ದೂರಗಾಮಿ ಪರಿಣಾಮಗಳನ್ನು ಬೀರಲಿದೆ ಎಂದು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಆರೋಪ ಮಾಡಿದ್ದಾರೆ. ಇದೇ ಪ್ರಶ್ನೆಗಳನ್ನು ಹಿಂದೆ, ಕೆಲವು ವಕೀಲರೂ ಕೇಳಿದ್ದರು.

ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌. ಲೋಯ ಅವರ ಸಾವಿನ ಪ್ರಕರಣವೂ ಇದರಲ್ಲಿ ಸೇರಿದೆ ಎಂದು ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಸ್ಪಷ್ಟಪಡಿಸಿದ್ದಾರೆ. 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಕೂಡ ನ್ಯಾಯಮೂರ್ತಿ ಚಲಮೇಶ್ವರ್‌ ನೇತೃತ್ವದ ಪೀಠದಿಂದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠಕ್ಕೆ ವರ್ಗಾಯಿಸಲಾಗಿತ್ತು.

ವೈದ್ಯಕೀಯ ಕಾಲೇಜು ಹಗರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿಗಳ ಹೆಸರಿನಲ್ಲಿ ಲಂಚ ಪಡೆಯಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ, ಕ್ಯಾಂಪೇನ್‌ ಫಾರ್‌ ಜುಡಿಶಿಯಲ್‌ ಅಕೌಂಟೆಬಿಲಿಟಿ ಎಂಡ್‌ ರಿಫಾರ್ಮ್ಸ್‌ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಯೊಂದನ್ನು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರ ಪೀಠಕ್ಕೆ ಹಂಚಿಕೆ ಮಾಡಲಾಗಿತ್ತು. ಸಿಜೆಐ ಅವರ ಈ ನಡೆಯೂ ಪ್ರಶ್ನೆಗೆ ಒಳಗಾಗಿತ್ತು.

ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಚಲಮೇಶ್ವರ್‌ ಅವರು ಈ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ದುಷ್ಯಂತ ದವೆ ಒತ್ತಾಯಿಸಿದ್ದರು. ವಕೀಲರಾದ ಕಾಮಿನಿ ಜೈಸ್ವಾಲ್‌ ಅವರೂ ಇಂತಹುದೇ ದೂರೊಂದನ್ನು ದಾಖಲಿಸಿದ್ದರು. ಈ ಎಲ್ಲದರ ವಿಚಾರಣೆಗೆ ಸಂವಿಧಾನ ಪೀಠ ರಚಿಸಲು ಚಲಮೇಶ್ವರ್‌ ನಿರ್ಧರಿಸಿದ್ದರು.

ಸಂವಿಧಾನ ಪೀಠ ರಚಿಸುವ ಚಲಮೇಶ್ವರ್‌ ನಿರ್ಧಾರವನ್ನು ಸಿಜೆಐ ನೇತೃತ್ವದ ಸಂವಿಧಾನ ಪೀಠ ನಂತರ ರದ್ದು ಮಾಡಿತು. ಈ ಪ್ರಕರಣದ ಎಲ್ಲ ದೂರುಗಳನ್ನು ವಜಾ ಮಾಡಲಾಯಿತು. ಅಷ್ಟೇ ಅಲ್ಲದೆ, ದೂರು ದಾಖಲಿಸಿದ್ದ ಎನ್‌ಜಿಒಗೆ ₹25 ಲಕ್ಷ ದಂಡವನ್ನೂ ವಿಧಿಸಲಾಯಿತು.

ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ರಾಕೇಶ್‌ ಅಸ್ತಾನಾ ಅವರನ್ನು ಸಿಬಿಐಯ ವಿಶೇಷ ನಿರ್ದೇಶಕರಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌.ಕೆ. ಅಗರ್‌ವಾಲ್ ನೇತೃತ್ವದ ಪೀಠಕ್ಕೆ ಹಂಚಿಕೆ ಮಾಡಲಾಗಿತ್ತು. ಈ ಅರ್ಜಿಯನ್ನು ಬಳಿಕ ವಜಾ ಮಾಡಲಾಗಿತ್ತು.

ಆಧಾರ್‌ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆಗೆ ರಚಿಸಲಾಗಿರುವ ಸಂವಿಧಾನ ಪೀಠದಲ್ಲಿ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಚಲಮೇಶ್ವರ್‌, ಗೊಗೊಯ್‌, ಲೋಕೂರ್‌, ಕುರಿಯನ್‌ ಜೋಸೆಫ್‌ ಅವರನ್ನು ಸೇರಿಸಲಾಗಿಲ್ಲ. ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವಣ ಸಂಘರ್ಷದ ಪ್ರಕರಣದ ವಿಚಾರಣೆಯ ಪೀಠದಲ್ಲಿಯೂ ಈ ನಾಲ್ವರಿಗೆ ಅವಕಾಶ ನೀಡಲಾಗಿಲ್ಲ. ಬಾಬರಿ ಮಸೀದಿ–ರಾಮಜನ್ಮಭೂಮಿ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ಸಿಜೆಐ ನಿರ್ಧರಿಸಿದ್ದಾರೆ. ಈ ವಿಚಾರದ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry