ಕರುಣ್‌ ಕಲಾತ್ಮಕ ಶತಕ

7
ಸೈಯದ್‌ ಮುಷ್ತಾಕ್‌ ಅಲಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ; ಪ್ರವೀಣ್‌ ದುಬೆಗೆ ನಾಲ್ಕು ವಿಕೆಟ್‌

ಕರುಣ್‌ ಕಲಾತ್ಮಕ ಶತಕ

Published:
Updated:
ಕರುಣ್‌ ಕಲಾತ್ಮಕ ಶತಕ

ವಿಜಯನಗರ, ಆಂಧ್ರಪ್ರದೇಶ : ಆರಂಭಿಕ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ (111; 52ಎ, 8ಬೌಂ,8ಸಿ) ಅವರ ಅಬ್ಬರದ ಶತಕ ಮತ್ತು ಪ್ರವೀಣ್‌ ದುಬೆ (19ಕ್ಕೆ4) ಅವರ ಸ್ಪಿನ್‌ ದಾಳಿಗೆ ತಮಿಳುನಾಡು ತಂಡ ಬೆಚ್ಚಿತು.

ಇವರ ಮನಮೋಹಕ ಆಟದ ಬಲದಿಂದ ಕರ್ನಾಟಕ ತಂಡ ಸೈಯದ್‌ ಮುಷ್ತಾಕ್‌ ಅಲಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 78ರನ್‌ಗಳ ಜಯಭೇರಿ ಮೊಳಗಿಸಿತು.

ಪಿ.ವಿ.ಜಿ.ರಾಜು ಎಸಿಎ ಕ್ರೀಡಾ ಸಂಕೀರ್ಣದ ಮೈದಾನದಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಆರ್‌.ವಿನಯ್‌ ಕುಮಾರ್‌ ಪಡೆ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 179ರನ್ ಗಳಿಸಿತು.

ಕಠಿಣ ಗುರಿ ಬೆನ್ನಟ್ಟಿದ ತಮಿಳುನಾಡು ತಂಡ 16.3 ಓವರ್‌ಗಳಲ್ಲಿ 101ರನ್‌ಗಳಿಗೆ ಆಲೌಟ್‌ ಆಯಿತು.

ಮಂಕಾದ ಮಯಂಕ್‌: ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡ ಆರಂಭಿಕ ಸಂಕಷ್ಟಕ್ಕೆ ಸಿಲುಕಿತು.  ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಮಯಂಕ್‌ ಅಗರವಾಲ್‌ (13;10ಎ,3ಬೌಂ) ಮಂಕಾದರು. ಸಾಯಿ ಕಿಶೋರ್‌ ಬೌಲ್‌ ಮಾಡಿದ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಯಂಕ್‌, ವಿಜಯ್‌ ಶಂಕರ್‌ಗೆ ಕ್ಯಾಚ್‌ ನೀಡಿದರು. ಕೆ.ಗೌತಮ್‌ ಶೂನ್ಯಕ್ಕೆ ಔಟಾದಾಗ ತಂಡದ ಖಾತೆಯಲ್ಲಿ ಇದ್ದದ್ದು 14ರನ್‌.

ಈ ಹಂತದಲ್ಲಿ ಆರ್‌.ಸಮರ್ಥ್‌ (19;20ಎ,2ಬೌಂ) ಜೊತೆಯಾದ ಕರುಣ್‌ ಇನಿಂಗ್ಸ್‌ ಬೆಳೆಸಿದರು. ಈ ಜೋಡಿ 10 ಓವರ್‌ಗಳಲ್ಲಿ ತಂಡದ ಮೊತ್ತವನ್ನು 97ರನ್‌ಗಳಿಗೆ ಕೊಂಡೊಯ್ಯಿತು. ಮುರುಗನ್‌ ಅಶ್ವಿನ್‌, 10ನೇ ಓವರ್‌ನ ಕೊನೆಯ ಎಸೆತದಲ್ಲಿ ಸಮರ್ಥ್‌ ವಿಕೆಟ್‌ ಉರುಳಿಸಿ ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೋಡಿಯನ್ನು ಮುರಿದರು.

ಮನೀಷ್‌ ಪಾಂಡೆ (7), ಸ್ಟುವರ್ಟ್‌ ಬಿನ್ನಿ (5) ಮತ್ತು ಸಿ.ಎಂ.ಗೌತಮ್ (3) ವಿಕೆಟ್‌ ನೀಡಲು ಅವಸರಿಸಿದರು! ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕರುಣ್‌ ಅಂಜಲಿಲ್ಲ. ತಮಿಳುನಾಡು ಬೌಲರ್‌ಗಳಿಗೆ ಕಿಂಚಿತ್ತೂ ‘ಕರುಣೆ’ ತೋರದ ಅವರು ಕಲಾತ್ಮಕ ಹೊಡೆತಗಳ ಮೂಲಕ ಅಂಗಳದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು. ಬೌಂಡರಿ (8) ಮತ್ತು ಸಿಕ್ಸರ್‌ (8) ಮೂಲಕವೇ 80ರನ್‌ ಸಿಡಿಸಿದ್ದು ಅವರ ಅಬ್ಬರಕ್ಕೆ ಸಾಕ್ಷಿಯಾಗಿತ್ತು.

ಆರಂಭಿಕಸಂಕಷ್ಟ: ಗುರಿ ಬೆನ್ನಟ್ಟಿದ ವಿಜಯ್‌ ಶಂಕರ್‌ ಪಡೆ ಕೂಡ ಆರಂಭಿಕ ಆಘಾತಕ್ಕೊಳಗಾಯಿತು. ಎರಡನೇ ಓವರ್‌ ಬೌಲ್‌ ಮಾಡಿದ ಎಸ್‌.ಅರವಿಂದ್‌ ಎರಡನೇ ಎಸೆತದಲ್ಲಿ ಅಭಿನವ್‌ ಮುಕುಂದ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಮರು ಎಸೆತದಲ್ಲಿ ಪ್ರವೀಣ್‌ ದುಬೆ, ದಿನೇಶ್‌ ಕಾರ್ತಿಕ್‌ ಅವರನ್ನು ರನ್‌ಔಟ್‌ ಮಾಡಿದರು.

ವಾಷಿಂಗ್ಟನ್‌ ಸುಂದರ್‌ (34; 26ಎ, 3ಬೌಂ,1ಸಿ) ಮತ್ತು ನಾಯಕ ವಿಜಯ್‌ (20; 25ಎ, 1ಸಿ) ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ಮಾಡಿದರು. ಒಂಬತ್ತನೇ ಓವರ್‌ನಲ್ಲಿ ದುಬೆ, ವಾಷಿಂಗ್ಟನ್‌ ವಿಕೆಟ್‌ ಕಬಳಿಸಿ ಕರ್ನಾಟಕದ ಗೆಲುವಿನ ಕನಸಿಗೆ ಬಲ ತುಂಬಿದರು. ಆ ನಂತರವೂ ತಮಿಳುನಾಡು ಬ್ಯಾಟ್ಸ್‌ಮನ್‌ಗಳನ್ನು ಸ್ಪಿನ್ ಖೆಡ್ಡಾಕ್ಕೆ ಕೆಡವಿದ ಅವರು ವಿನಯ್‌ ಪಡೆ ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 179 (ಮಯಂಕ್‌ ಅಗರವಾಲ್‌ 13, ಕರುಣ್‌ ನಾಯರ್‌ 111, ಆರ್‌.ಸಮರ್ಥ್‌ 19, ಮನೀಷ್‌ ಪಾಂಡೆ 7, ಸ್ಟುವರ್ಟ್‌ ಬಿನ್ನಿ 5, ಸಿ.ಎಂ.ಗೌತಮ್‌ 3, ಪ್ರವೀಣ್‌ ದುಬೆ 4, ಆರ್‌.ವಿನಯ್‌ ಕುಮಾರ್‌ ಔಟಾಗದೆ 7; ಕೆ.ವಿಘ್ನೇಶ್‌ 30ಕ್ಕೆ1, ಆರ್‌.ಸಾಯಿ ಕಿಶೋರ್‌ 25ಕ್ಕೆ1, ಮುರುಗನ್‌ ಅಶ್ವಿನ್‌ 33ಕ್ಕೆ2, ಅತಿಶಯರಾಜ್‌ ಡೇವಿಡ್‌ಸನ್‌ 30ಕ್ಕೆ5).

ತಮಿಳುನಾಡು: 16.3 ಓವರ್‌ಗಳಲ್ಲಿ 101 (ವಾಷಿಂಗ್ಟನ್‌ ಸುಂದರ್‌ 34, ವಿಜಯ್‌ ಶಂಕರ್‌ 20, ಸಂಜಯ್‌ ಯಾದವ್‌ 19, ಎನ್‌.ಜಗದೀಶನ್‌ 16; ಎಸ್‌.ಅರವಿಂದ್‌ 4ಕ್ಕೆ1, ಕೆ.ಗೌತಮ್‌ 14ಕ್ಕೆ2, ಸ್ಟುವರ್ಟ್‌ ಬಿನ್ನಿ 18ಕ್ಕೆ1, ಪ್ರವೀಣ್‌ ದುಬೆ 19ಕ್ಕೆ4).

ಫಲಿತಾಂಶ: ಕರ್ನಾಟಕಕ್ಕೆ 78ರನ್‌ ಗೆಲುವು ಹಾಗೂ 4 ಪಾಯಿಂಟ್ಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry