ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯಾಧೀಶ ಲೋಯ ಸಾವು ಗಂಭೀರವಾದ ವಿಚಾರ’

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್‌.ಲೋಯ ಅವರ ಸಾವು ‘ಅತ್ಯಂತ ಗಂಭೀರವಾದ ವಿಚಾರ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಲೋಯ ಅವರ ಸಾವಿನ ಬಗ್ಗೆ ಜನವರಿ 15ರಂದು ವರದಿ ನೀಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

‘ಸೊಹ್ರಾಬುದ್ದೀನ್ ಶೇಖ್‌ ನಕಲಿ ಎನ್‌ಕೌಂಟರ್‌ ಆರೋಪದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ನ್ಯಾಯಾಧೀಶ ಲೋಯ ಅವರ ಸಾವು ಅನುಮಾನಾಸ್ಪದವಾಗಿದೆ. ಅವರ ಸಾವಿನ ಪ್ರಕರಣವನ್ನು ಸ್ವತಂತ್ರ ತನಿಖೆಗೆ ಒಳಪಡಿಸಬೇಕು’ ಎಂದು ಮಹಾರಾಷ್ಟ್ರದ ಪತ್ರಕರ್ತ ಬಿ.ಆರ್.ಲೋನೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ತೆಹ್ಸೀನ್ ಪೂನಾವಾಲಾ ಸಹ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ.ಎಂ.ಶಾಂತನಗೌಡರ್ ಅವರಿದ್ದ ದ್ವಿಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವುದರಿಂದ ಸುಪ್ರೀಂ ಕೋರ್ಟ್‌ ಈ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು ಎಂದು ಹಿರಿಯ ವಕೀಲ ದುಶ್ಯಂತ್ ದವೆ ಹೇಳಿದರು. ‘ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಬಾರದು ಎಂದು ಬಾಂಬೆ ಹೈಕೋರ್ಟ್‌ ವಕೀಲರ ಸಂಘಟನೆ ಸಹ ನನಗೆ ಸೂಚಿಸಿತ್ತು’ ಎಂದು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿದರು.

‘ಈ ವಿಚಾರ ಅತ್ಯಂತ ಗಂಭಿರವಾದದ್ದು. ಹೀಗಾಗಿ ಅರ್ಜಿಯನ್ನು ಪರಿಶೀಲಿಸುತ್ತೇವೆ. ಅಲ್ಲದೆ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಬಾರದು ಎಂಬ ಆಕ್ಷೇಪಗಳನ್ನು ಪರಿಗಣಿಸುತ್ತೇವೆ’ ಎಂದು ಪೀಠ ಹೇಳಿತು.

‘ಲೋಯ ಅವರ ಮರಣೋತ್ತರ ಪರೀಕ್ಷೆ ವರದಿ, ಸಂಬಂಧಿತ ಇತರ ದಾಖಲೆಗಳನ್ನೂ ಸಲ್ಲಿಸಿ’ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು.

ಸಂಚಲನ ಮೂಡಿಸಿದ್ದ ಲೋಯ ಸೋದರಿಯ ಆರೋಪ

‘2010ರ ಜೂನ್‌ನಿಂದ 2015ರ ಸೆಪ್ಟೆಂಬರ್‌ವರೆಗೆ ಮೋಹಿತ್ ಷಾ ಅವರು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಆರೋಪ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆಗಿದ್ದ ನನ್ನ ಸೋದರ ಲೋಯಗೆ ಮೋಹಿತ್ ಷಾ ₹100 ಕೋಟಿ ಹಣದ ಆಮಿಷ ಒಡ್ಡಿದ್ದರು.

ಲೋಯಗೆ ತಡರಾತ್ರಿ ಕರೆ ಮಾಡಿದ್ದ ಮೋಹಿತ್ ಷಾ,  ತಮ್ಮನ್ನು ಭೇಟಿ ಮಾಡುವಂತೆ ತಿಳಿಸಿದ್ದರು. ಅಮಿತ್‌ ಷಾ ಪರವಾಗಿ ಆದಷ್ಟು ಬೇಗ ತೀರ್ಪು ನೀಡುವಂತೆ ಲೋಯ ಮೇಲೆ ಮೋಹಿತ್ ಷಾ ಒತ್ತಡ ತಂದಿದ್ದರು. ಈ ಎಲ್ಲಾ ವಿಷಯವನ್ನು ಲೋಯ ನನಗೆ ತಿಳಿಸಿದ್ದ’ ಎಂದು ಲೋಯ ಅವರ ಸೋದರಿ ಅನುರಾಧಾ ಬಿಯಾನಿ ಹೇಳಿದ್ದಾರೆ ಎಂದು ದಿ ಕ್ಯಾರವಾನ್‌ ಪತ್ರಿಕೆ ವರದಿ ಪ್ರಕಟಿಸಿತ್ತು.

ಲೋಯ ಅವರ ತಂದೆ ಸಹ ಇದೇ ಆರೋಪ ಮಾಡಿದ್ದಾರೆ ಎಂದು ಕ್ಯಾರವಾನ್ ಹೇಳಿತ್ತು. ಲೋಯ ಸಾವಿನ ಬಗ್ಗೆ ಅವರ ಕುಟುಂಬದ ಸದಸ್ಯರು ಎತ್ತಿರುವ ಪ್ರಶ್ನೆಗಳ ಬಗ್ಗೆಯೂ ವರದಿ ಪ್ರಕಟವಾಗಿತ್ತು.

‘ಹೃದಯಾಘಾತವಾದಾಗ ಲೋಯ ಅವರನ್ನು ಆಸ್ಪತ್ರೆಗೆ ಆಟೊದಲ್ಲಿ ಕರೆದೊಯ್ಯಲಾಗಿತ್ತು. ಅವರು ಮೃತಪಟ್ಟಿದ್ದು ಡಿಸೆಂಬರ್ 1ರ ಬೆಳಿಗ್ಗೆ 6 ಗಂಟೆಗೆ ಎಂದು ಆಸ್ಪತ್ರೆಯ ದಾಖಲೆಗಳಲ್ಲಿ ಇದೆ. ಆದರೆ ಅವರು ಮೃತಪಟ್ಟಿದ್ದಾರೆ ಎಂದು ಬೆಳಿಗ್ಗೆ 5 ಗಂಟೆಗೇ ಕರೆ ಬಂದಿತ್ತು. ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ಸಾವಿನ ವಿಚಾರವನ್ನು ನಮಗೆ ಕರೆ ಮಾಡಿ ತಿಳಿಸಿದ್ದರು. ನಮಗೆ ತಿಳಿಸದಯೇ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ನಮ್ಮ ಸಂಬಂಧಿಕರೇ ಅಲ್ಲದವರು ‘ಲೋಯ ಅವರ ಸಂಬಂಧಿ’ ಎಂದು ಹೇಳಿಕೊಂಡು ಸಹಿ ಮಾಡಿ ಶವ ಪಡೆದುಕೊಂಡಿದ್ದರು. ಶವದ ಜತೆ ಕವರ್‌ ಒಂದರಲ್ಲಿ ನೀಡಿದ್ದ ಲೋಯ ಅವರ ಬಟ್ಟೆಗಳ ಮೇಲೆ ರಕ್ತದ ಕಲೆಗಳಿದ್ದವು. ಇವೆಲ್ಲವೂ ಅನುಮಾನಾಸ್ಪದವಾಗಿವೆ’ ಎಂದು ಲೋಯ ಅವರ ಕುಟುಂಬ ಹೇಳಿದ್ದಾಗಿ ಕ್ಯಾರವಾನ್ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT