ಪರಿಶೀಲನೆಗೆ ಗೋವಾ ತಂಡ

7
ಮಹದಾಯಿ ನದಿ ನೀರು ತಿರುಗಿಸುತ್ತಿದೆ – ಮಾಧ್ಯಮ ವರದಿ

ಪರಿಶೀಲನೆಗೆ ಗೋವಾ ತಂಡ

Published:
Updated:
ಪರಿಶೀಲನೆಗೆ ಗೋವಾ ತಂಡ

ಪಣಜಿ: ಕರ್ನಾಟಕ ಸರ್ಕಾರವು  ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳುತ್ತಿದೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ಅಧಿಕಾರಿಗಳ ತಂಡವೊಂದನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದೆ.

‘ಕಣಕುಂಬಿಯಲ್ಲಿ ನಿರ್ಮಿಸುತ್ತಿರುವ ಅಣೆಕಟ್ಟು ನಿರ್ಮಾಣದ ಕೆಲಸವನ್ನು ಕರ್ನಾಟಕ ಮತ್ತೆ ಆರಂಭಿಸಿದೆ ಎಂಬ ಮಾಧ್ಯಮಗಳ ವರದಿ ಬಳಿಕ ಸ್ಥಳ ಪರಿಶೀಲನೆ ನಡೆಸಲು ಎಂಜಿನಿಯರ್‌ಗಳ ತಂಡವನ್ನು ಕಳುಹಿಸುವಂತೆ ಮುಖ್ಯ ಎಂಜಿನಿಯರ್‌ಗೆ ಸೂಚಿಸಿದ್ದೇನೆ’ ಎಂದು ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌ ತಿಳಿಸಿದರು.

ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿ ಹರಿಯುವ ಮಹದಾಯಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಮೂರು ರಾಜ್ಯಗಳ ನಡುವೆವಿವಾದವಿದೆ. ಗೋವಾ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರವು ನ್ಯಾಯಮಂಡಳಿಯನ್ನು ರಚಿಸಿತ್ತು.

‘ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಮಂಡಳಿಯಲ್ಲೇ ಬಗೆಹರಿಸಿಕೊಳ್ಳುತ್ತೇವೆ’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್‍ರೀಕರ್‌ ಅವರು ಬುಧವಾರ ಹೇಳಿಕೆ ನೀಡಿದ್ದರು.

ಮಹದಾಯಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರು ಬಿಡುವ ಸಂಬಂಧ ದ್ವಿಪಕ್ಷೀಯ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಪರ್‍ರೀಕರ್‌ ಅವರು ಕಳೆದ ತಿಂಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದರು.

ಪರ್‍ರೀಕರ್‌ ಬರೆದ ಈ ಪತ್ರವೂ ಕರ್ನಾಟಕ ಹಾಗೂ ಗೋವಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅದರಲ್ಲೂ ರಾಜ್ಯವನ್ನು ಪ್ರತಿನಿಧಿಸುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಪತ್ರ ಬರೆಯುವ ಬದಲಾಗಿ ಬಿಜೆಪಿ ನಾಯಕರಿಗೆ ಪತ್ರಬರೆದ ವಿಚಾರವೂ ವಿವಾದ ಸೃಷ್ಟಿಸಿತ್ತು.

ಕರ್ನಾಟಕದಲ್ಲಿ ಹುಟ್ಟುವ ಮಹದಾಯಿ ನದಿಯು (ಗೋವಾದಲ್ಲಿ ಮಾಂಡೋವಿ) ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಹರಿಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry