100ನೇ ಉಪಹಗ್ರಹ ಉಡಾವಣೆ

7
ಭಾರತ ಮತ್ತು ಇತರ ಆರು ದೇಶಗಳ ಒಟ್ಟು 31 ಉಪಗ್ರಹಗಳು ನಭಕ್ಕೆ..

100ನೇ ಉಪಹಗ್ರಹ ಉಡಾವಣೆ

Published:
Updated:
100ನೇ ಉಪಹಗ್ರಹ ಉಡಾವಣೆ

ಶ್ರೀಹರಿಕೋಟ (ಎಪಿ/ಪಿಟಿಐ/ರಾಯಿಟರ್ಸ್): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಿರ್ಮಿಸಿದ 100ನೇ ಉಪಗ್ರಹವನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

‘ಕಾರ್ಟೊಸ್ಯಾಟ್–2’ ಸರಣಿಯ ಹವಾಮಾನ ನಿಗಾ ಉಪಗ್ರಹ ಹಾಗೂ ಇತರೆ 30 ಉಪಹಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ40 ರಾಕೆಟ್‌ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.29ಕ್ಕೆ ನಭಕ್ಕೆ ಚಿಮ್ಮಿತು.

ಕಳೆದ ಆಗಸ್ಟ್‌ನಲ್ಲಿ ಭಾರತೀಯ ಪ್ರಾದೇಶಿಕ ಪಥ ದರ್ಶಕ ಉಪಗ್ರಹ ವ್ಯವಸ್ಥೆಯ 1ಎಚ್ (ಐಆರ್‌ಎನ್‌ಎಸ್‌ಎಸ್‌–1ಎಚ್) ಉಪಗ್ರಹವನ್ನು ಹೊತ್ತಿದ್ದ ಪಿಎಸ್‌ಎಲ್‌ವಿ–ಸಿ39 ಕಾರ್ಯಾಚರಣೆ ವಿಫಲವಾಗಿತ್ತು. ಅದರ ವೈಫಲ್ಯದಿಂದ ಹೊರಬಂದಿರುವ ಇಸ್ರೊ, ವಿವಿಧ ದೇಶಗಳಿಗೆ ಸೇರಿದ ಸೂಕ್ಷ್ಮ ಹಾಗೂ ನ್ಯಾನೊ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಇಸ್ರೊ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ‘ಈ ಯಶಸ್ಸು  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಭವ್ಯ ಸಾಧನೆ ಹಾಗೂ ಉಜ್ವಲ ಭವಿಷ್ಯವನ್ನು ಸೂಚಿಸುತ್ತದೆ’ ಎಂದಿದ್ದಾರೆ.

ಬಾಹ್ಯಾಕಾಶ ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯ ಲಾಭವು ದೇಶದ ಜನರು, ರೈತರು ಹಾಗೂ ಮೀನುಗಾರರಿಗೆ ಲಭಿಸಲಿದೆ ಎಂದೂ ಆಶಯ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಸ್ರೊವನ್ನು ಅಭಿನಂದಿಸಿದ್ದಾರೆ. ‘ಮತ್ತೆ ಇತಿಹಾಸ ನಿರ್ಮಿಸಿದ ಇಸ್ರೊಗೆ ಅಭಿನಂದನೆಗಳು. ನಿಮ್ಮ ಕಠಿಣ ಪರಿಶ್ರಮ ಹಾಗೂ ನಿಷ್ಠೆಯಿಂದಾಗಿ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾರತ ಮುಂಚೂಣಿಯಲ್ಲಿರಲು ಸಾಧ್ಯವಾಗಿದೆ’ ಎಂದಿದ್ದಾರೆ.

***

ಕಿರಣ್ ಕುಮಾರ್ ಅವರಿಗೆ ಕೊನೆಯ ಕಾರ್ಯಾಚರಣೆ

ಯಶಸ್ವಿ ಉಡಾವಣೆ ಬಳಿಕ ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇಸ್ರೊ ಮುಖ್ಯಸ್ಥರಾಗಿ ಅವರಿಗೆ ಇದು ಕೊನೆಯ ಉಡಾವಣೆ. ಇದೇ ತಿಂಗಳಾಂತ್ಯದಲ್ಲಿ ಇವರು ನಿವೃತ್ತರಾಗಲಿದ್ದಾರೆ.

‘ದೇಶಕ್ಕೆ ಹೊಸ ವರ್ಷದ ಉಡುಗೊರೆಯಾಗಿ ‘ಕಾರ್ಟೊಸ್ಯಾಟ್–2’ ಅರ್ಪಿಸಲು ಸಂತೋಷವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಯಶಸ್ವಿ ಕಾರ್ಯಾಚರಣೆ ಮೂಲಕ 2018ನೇ ವರ್ಷವನ್ನು ಇಸ್ರೊ ಆರಂಭಿಸಿದೆ. ಎಲ್ಲ ಉಪಗ್ರಹಗಳು ಕಕ್ಷೆಯನ್ನು ಸೇರಿದ್ದು, ಕಾರ್ಟೊಸ್ಯಾಟ್ ಉಪಗ್ರಹದ ಈವರೆಗಿನ ಕಾರ್ಯ ನಿರ್ವಹಣೆ ತೃಪ್ತಿಕರವಾಗಿದೆ’ ಎಂದಿದ್ದಾರೆ. 

ವಿಶ್ವಾಸ ವೃದ್ಧಿಸಿದೆ: ಕೆ. ಶಿವನ್

ಇಸ್ರೊದ ನಿಯೋಜಿತ ಅಧ್ಯಕ್ಷ ಕೆ. ಶಿವನ್ ಅವರು ಉಪಗ್ರಹ ಉಡಾವಣೆಯ ಯಶಸ್ಸನ್ನು ಇಸ್ರೊದ ಇಡೀ ತಂಡಕ್ಕೆ ನೀಡಿದ್ದಾರೆ.

‘ಪಿಎಸ್‌ಎಲ್‌ವಿ–ಸಿ39 ವಿಫಲವಾದ ಬಳಿಕ ಸಾಕಷ್ಟು ವಿದೇಶಿ ಗ್ರಾಹಕರು ಆದಷ್ಟು ಶೀಘ್ರದಲ್ಲಿ ಮತ್ತೊಂದು ಉಡಾವಣೆ ಮಾಡುವಂತೆ ಕೇಳಿಕೊಂಡಿದ್ದರು. ಇದು ಸಂಸ್ಥೆಯ ಮೇಲೆ ಅವರು ಇಟ್ಟಿದ್ದ ವಿಶ್ವಾಸಕ್ಕೆ ಸಾಕ್ಷಿ’ ಎಂದು ಶಿವನ್ ಹೇಳಿದ್ದಾರೆ.

‘ಮುಂಬರುವ ದಿನಗಳಲ್ಲಿಯೂ ಅವರ ಬೇಡಿಕೆಗಳನ್ನು ನೂರರಷ್ಟು ಈಡೇರಿಸುತ್ತೇವೆ. 2018ರಲ್ಲಿ ನಡೆಯಲಿರುವ ಚಂದ್ರಯಾನ–2, ಜಿಎಸ್‌ಎಲ್‌ವಿ ಎಂಕೆ–3, ಜಿಸ್ಯಾಟ್–11 ಯೋಜನೆಗಳಿಗೆ ಈ ಉಡ್ಡಯನ ಹಸಿರು ನಿಶಾನೆ ತೋರಿಸಿದೆ’ ಎಂದಿದ್ದಾರೆ.

***

ನೆರೆದೇಶಗಳ ಚಲನವಲನಗಳ ಮೇಲೆ ನಿಗಾ

ಕಾರ್ಟೊಸ್ಯಾಟ್–2 ಅತ್ಯಾಧುನಿಕ ದೂರ ಸಂವೇದಿ ಉಪಗ್ರಹವಾಗಿದ್ದು, ಇದೇ ಸರಣಿಯ ಈ ಹಿಂದಿನ ಆರು ಉಪಗ್ರಹಗಳ ಸಂರಚನೆಯನ್ನು ಇದು ಹೊಂದಿದೆ. ನಿಗದಿತ ಸ್ಥಳವೊಂದರ ಸ್ಪಷ್ಟ ಹಾಗೂ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸುವುದು ಇದರ ಮೊದಲ ಆದ್ಯತೆ.

ಉಪಗ್ರಹಗಳು ನೀಡಿದ ಚಿತ್ರಗಳನ್ನು ಆಧರಿಸಿ, ಭಾರತದ ಭದ್ರತಾ ಪಡೆಗಳು ನೆರೆಯ ಬಾಂಗ್ಲಾದೇಶ, ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾದ ಸೇನಾ ಚಟುವಟಿಕೆಗಳ ಮೇಲೆ ನಿಗಾ ವಹಿಸಬಹುದು.

ಉಪಗ್ರಹಗಳು ಒದಗಿಸುವ ಉತ್ತಮ ಗುಣಮಟ್ಟದ ಚಿತ್ರಗಳಿಂದ ಗಡಿಯಲ್ಲಿ ಅತ್ಯುತ್ತಮ ನಿಗಾ ವ್ಯವಸ್ಥೆ ರೂಪಿಸಲು ಭಾರತಕ್ಕೆ ನೆರವಾಗಲಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದ್ದಾರೆ.

***

ದೀರ್ಘ ಅವಧಿಯ ಪ್ರಕ್ರಿಯೆ:

ಇದೊಂದು ಸುದೀರ್ಘ ಅವಧಿಯ ಉಡ್ಡಯನವಾಗಿತ್ತು. ಉಡಾವಣೆಗೊಂಡ 17 ನಿಮಿಷಕ್ಕೆ 710 ಕೆ.ಜಿ. ತೂಕದ ಕಾರ್ಟೊಸ್ಯಾಟ್ 505 ಕಿ.ಮೀ ದೂರದ ಧ್ರುವೀಯ ಸೂರ್ಯ ಸಮನ್ವಯ ಕಕ್ಷೆಯನ್ನು ಸೇರಿತು. ನ್ಯಾನೊ ಮತ್ತು ಮೈಕ್ರೊ (ಸೂಕ್ಷ್ಮ) ಉಪಗ್ರಹಗಳು ಏಳು ನಿಮಿಷದ ಅಂತರದಲ್ಲಿ ಒಂದೊಂದಾಗಿ ಕಕ್ಷೆಯನ್ನು ಸೇರಿಕೊಂಡವು.

ಉಡಾವಣೆಗೊಂಡ 2 ಗಂಟೆ 21 ನಿಮಿಷದ ಬಳಿಕ ನಾಲ್ಕನೇ ಹಂತ ಪೂರ್ಣಗೊಂಡು ಕಾರ್ಯಾಚರಣೆ ಮುಗಿಯಿತು. ಇದು ಇಸ್ರೊ ಈವರೆಗೆ ಮಾಡಿದ ದೀರ್ಘ ಅವಧಿಯ ಉಡಾವಣ ಪ್ರಕ್ರಿಯೆ ಎನಿಸಿದೆ. 2016ರ ಸೆಪ್ಟೆಂಬರ್‌ನಲ್ಲಿ ಪಿಎಸ್‌ಎಲ್‌ವಿ ಸಿ–35 ರಾಕೆಟ್, ಸ್ಕಾಟ್‌ಸ್ಯಾಟ್–1 ಉಪಗ್ರಹವನ್ನು 2 ಗಂಟೆ 15 ನಿಮಿಷ ಅವಧಿ ತೆಗೆದುಕೊಂಡು ಕಾರ್ಯಾಚರಣೆ ಪೂರ್ಣಗೊಳಿಸಿತ್ತು.

***

ಮಾರ್ಚ್‌ನಲ್ಲಿ ಚಂದ್ರಯಾನ–2?

ಚಂದ್ರಯಾನ–2 ಉಡಾವಣೆ ನಿಗದಿಯಂತೆ ಆಗಲಿದೆ. ಚಂದ್ರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತದ ಈ ಎರಡನೇ ಯೋಜನೆಗೆ ಸಂಬಂಧಿಸಿದ ಮಾದರಿಗಳನ್ನು ವಿವಿಧ  ಹಂತದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ತಿಳಿಸಿದರು. ಮಾರ್ಚ್‌ನಲ್ಲಿ ಉಡಾವಣೆ ನಡೆಸಬಹುದೇ ಎಂದು ಸಮಾಲೋಚನೆ ನಡೆಸಬೇಕಿದೆ ಎಂದಿದ್ದಾರೆ.

ಒಂದು ಬಾಹ್ಯಾಕಾಶ ನೌಕೆ, ಲ್ಯಾಂಡರ್ ಮತ್ತು ಆರು ಚಕ್ರಗಳ ರೋವರ್‌ಗಳನ್ನು ಅಲ್ಲಿಗೆ ಕಳುಹಿಸಲಾಗುತ್ತದೆ.

***

ಉಡ್ಡಯನದ ವಿವರಗಳು

* ಒಟ್ಟು ಉಪಗ್ರಹಗಳ ಸಂಖ್ಯೆ 31

*ಪಿಎಸ್‌ಎಲ್‌ವಿ ಸಿ–40 ರಾಕೆಟ್ ಬಳಕೆ

*ಅಮೆರಿಕ, ಇಂಗ್ಲೆಂಡ್, ಕೆನಡಾ, ಫಿನ್ಲೆಂಡ್, ಫ್ರಾನ್ಸ್, ದಕ್ಷಿಣ ಕೊರಿಯಾದ ಉಪಗ್ರಹಗಳ ಉಡಾವಣೆ

*ಈ ಪೈಕಿ 25 ನ್ಯಾನೊ ಮತ್ತು 3 ಮೈಕ್ರೊ ಉಪಗ್ರಹಗಳ ಒಟ್ಟು ತೂಕ 613 ಕೆ.ಜಿ.

*ಕಾರ್ಟೊಸ್ಯಾಟ್–2 ಉಪಗ್ರಹದ ತೂಕ 710 ಕೆ.ಜಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry