‘ದೇಶದ ಪ್ರಜಾತಂತ್ರ ಅಪಾಯದಲ್ಲಿದೆ’

7
ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಂದ ಮುಖ್ಯ ನ್ಯಾಯಮೂರ್ತಿ ಮಿಶ್ರಾ ವಿರುದ್ಧ ಆರೋಪ

‘ದೇಶದ ಪ್ರಜಾತಂತ್ರ ಅಪಾಯದಲ್ಲಿದೆ’

Published:
Updated:
‘ದೇಶದ ಪ್ರಜಾತಂತ್ರ ಅಪಾಯದಲ್ಲಿದೆ’

ನವದೆಹಲಿ: ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧ ಪ್ರತಿಭಟನೆ ದಾಖಲಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇಂತಹ ಪ್ರತಿರೋಧ ದಾಖಲಾಗಿರುವುದು ಇದೇ ಮೊದಲು.

ಸುಪ್ರೀಂ ಕೋರ್ಟ್‌ನೊಳಗೆ ಹಲವು ಸಮಸ್ಯೆಗಳಿದ್ದು ಇದು ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯನ್ನು ಬಾಧಿಸುವುದರ ಜತೆಗೆ ದೇಶದ ಪ್ರಜಾತಂತ್ರವನ್ನೇ ಅಪಾಯಕ್ಕೆ ಒಡ್ಡಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ನಿವಾಸದಲ್ಲಿ, ಅವರು ಮತ್ತು ನ್ಯಾಯಮೂರ್ತಿಗಳಾದ ರಂಜನ್‌ ಗೊಗೋಯ್‌, ಮದನ್‌ ಬಿ.ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಸುಪ್ರೀಂ ಕೋರ್ಟ್‌ನ ಅವ್ಯವಸ್ಥೆ ಬಗ್ಗೆ ಈ ನ್ಯಾಯಮೂರ್ತಿಗಳು ಬಹಿರಂಗಪಡಿಸಿದ ವಿಚಾರಗಳು ನ್ಯಾಯಾಂಗ ಕ್ಷೇತ್ರದಲ್ಲಿ ಆಘಾತಕ್ಕೆ ಕಾರಣವಾಗಿದೆ. ಹಿರಿಯ ನ್ಯಾಯಮೂರ್ತಿಗಳ ಈ ಬಹಿರಂಗ ಪ್ರತಿಭಟನೆ ನ್ಯಾಯಾಂಗದ ಕಾರ್ಯನಿರ್ವಹಣೆಯ ಮೇಲೆ ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಬಹುದು ಎಂಬ ಆತಂಕವೂ ಎದುರಾಗಿದೆ.

ಇದೊಂದು ‘ಅಸಾಧಾರಣ ಘಟನೆ’ ಎಂದು ಮಾಧ್ಯಮಗೋಷ್ಠಿಯ ಆರಂಭದಲ್ಲಿಯೇ ಚಲಮೇಶ್ವರ್‌ ಹೇಳಿದರು. ‘ಸುಪ್ರೀಂ ಕೋರ್ಟ್‌ನ ಆಡಳಿತ ಕೆಲವೊಮ್ಮೆ ಅವ್ಯವಸ್ಥೆಯಿಂದ ಕೂಡಿರುತ್ತದೆ. ಕಳೆದ ಕೆಲವು ತಿಂಗಳಲ್ಲಿ ಅಪೇಕ್ಷಣೀಯ ಅಲ್ಲದ ಹಲವು ಘಟನೆಗಳು ನಡೆದಿವೆ. ಈ ಸಂಸ್ಥೆಯನ್ನು ರಕ್ಷಿಸಿಕೊಳ್ಳದೇ ಇದ್ದರೆ ಈ ದೇಶದಲ್ಲಿ ಪ್ರಜಾತಂತ್ರ ಉಳಿಯದು’ ಅವರು ಎಚ್ಚರಿಸಿದ್ದಾರೆ. ಈ ಮಾಧ್ಯಮಗೋಷ್ಠಿ ಪೂರ್ವನಿಗದಿತ ಆಗಿರಲಿಲ್ಲ.

ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಶುಕ್ರವಾರ ಬೆಳಿಗ್ಗೆ ಭೇಟಿಯಾಗಿ ಸುಪ್ರೀಂ ಕೋರ್ಟನ್ನು ಬಾಧಿಸುತ್ತಿರುವ ವಿಚಾರಗಳ ಬಗ್ಗೆ ಅವರ ಗಮನ ಸೆಳೆದಿದ್ದೇವೆ ಎಂದು ನಾಲ್ವರೂ ನ್ಯಾಯಮೂರ್ತಿಗಳು ತಿಳಿಸಿದರು.

‘ನೀವು ಪ್ರಸ್ತಾಪಿಸುತ್ತಿರುವ ವಿಚಾರಗಳು ಏನು’ ಎಂಬ ಪ್ರಶ್ನೆಗೆ, ‘ಮುಖ್ಯ ನ್ಯಾಯಮೂರ್ತಿಯವರು ಪ್ರಕರಣಗಳನ್ನು ವಿಚಾರಣೆಗೆ ಹಂಚಿಕೆ ಮಾಡುವುದು’ ಎಂದು ಚಲಮೇಶ್ವರ್‌ ಉತ್ತರಿಸಿದರು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್‌. ಲೋಯ ಪ್ರಕರಣದ ವಿಚಾರಣೆಯನ್ನು ಸರಿಯಾದ ಪೀಠಕ್ಕೆ ಹಂಚಿಕೆ ಮಾಡಲಾಗಿಲ್ಲ ಎಂಬ ಆರೋಪ ಹಿಂದೆಯೇ ಕೇಳಿ ಬಂದಿತ್ತು. (ಲೋಯ ಅವರು ರಾಜಕೀಯ ಮಹತ್ವದ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಈ ಪ್ರಕರಣದ ಆರೋಪಿ). ಹಾಗಾಗಿ ಚಲಮೇಶ್ವರ್‌ ಹೇಳಿಕೆ ವಿಶೇಷ ಮಹತ್ವ ಪಡೆದುಕೊಂಡಿದೆ.

‘ಇದು ಯಾವುದೇ ದೇಶದ ಇತಿಹಾಸದಲ್ಲಿ ಅಸಾಧಾರಣವಾದ ಘಟನೆ. ನ್ಯಾಯಾಂಗದ ಇತಿಹಾಸದಲ್ಲಿಯೂ ಅಸಾಧಾರಣವಾದ ಘಟನೆ... ಅತ್ಯಂತ ವಿಷಾದದಿಂದಲೇ ಈ ಮಾಧ್ಯಮಗೋಷ್ಠಿಯನ್ನು ನಡೆಸುತ್ತಿದ್ದೇವೆ’ ಎಂದರು. ಸಿಜೆಐಗೆ ಬರೆದ ಪತ್ರವನ್ನು ನಾಲ್ವರು ನ್ಯಾಯಮೂರ್ತಿಗಳು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ. ‘ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯು ಸಮಾನರಲ್ಲಿ ಮೊದಲಿಗರು ಮಾತ್ರ– ಅವರು ಇತರರಿಗಿಂತ ಹೆಚ್ಚು ಅಲ್ಲ, ಕಮ್ಮಿಯೂ ಅಲ್ಲ’ ಎಂದು ಈ ಪತ್ರದಲ್ಲಿ ಹೇಳಲಾಗಿದೆ.

‘ನ್ಯಾಯಾಂಗ ವ್ಯವಸ್ಥೆಯಿಂದ ನೀವು ಹೊರಗೆ ಬಂದಿದ್ದೀರಾ’ ಎಂಬ ಪ್ರಶ್ನೆಗೆ ಉತ್ತರಿಸಿದ ನ್ಯಾಯಮೂರ್ತಿ ಗೊಗೋಯ್‌,‘ಹಿಂದೆ ಮಾಡುತ್ತಿದ್ದ ಅದೇ ಕೆಲಸವನ್ನು ಮುಂದುವರಿಸಲಿದ್ದೇವೆ, ಯಾರೂ ವ್ಯವಸ್ಥೆಯಿಂದ ಹೊರಗೆ ಬರುತ್ತಿಲ್ಲ. ನಮಗೆ ದೇಶದ ಮೇಲೆ ಇರುವ ಋಣ ತೀರಿಸಿದ್ದೇವೆ’ ಎಂದು ಹೇಳಿದರು. 

ವಾಗ್ದಂಡನೆ– ದೇಶ ನಿರ್ಧರಿಸಲಿ: ಮುಖ್ಯ ನ್ಯಾಯಮೂರ್ತಿ ಮಿಶ್ರಾ ಅವರನ್ನು ವಾಗ್ದಂಡನೆಗೆ ಒಳಪಡಿಸಬೇಕೇ ಎಂಬ ಪ್ರಶ್ನೆಗೆ ‘ಅದನ್ನು ದೇಶ ನಿರ್ಧರಿಸಲಿ’ ಎಂದು ನಾಲ್ವರು ನ್ಯಾಯಮೂರ್ತಿಗಳು ಹೇಳಿದರು.

ಸಿಜೆಐ–ಅಟಾರ್ಜಿ ಜನರಲ್‌ ಸಭೆ: ಮಾಧ್ಯಮಗೋಷ್ಠಿ ನಡೆದ ತಕ್ಷಣವೇ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

***

ಸರ್ಕಾರದ ಮಧ್ಯಪ್ರವೇಶ ಇಲ್ಲ

ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಖ್ಯ ನ್ಯಾಯಮೂರ್ತಿ ಮತ್ತು ಅವರ ವಿರುದ್ಧ ಆರೋಪ ಮಾಡಿರುವ ನಾಲ್ವರು ನ್ಯಾಯಮೂರ್ತಿಗಳೇ ಈ ವಿಚಾರವನ್ನು ಬಗೆಹರಿಸಿಕೊಳ್ಳಬೇಕು ಎಂಬುದು ಸರ್ಕಾರದ ನಿಲುವು ಎಂದು ಉನ್ನತ ಮೂಲಗಳು ಹೇಳಿವೆ.

ಶುಕ್ರವಾರದ ಬೆಳವಣಿಗೆಗಳ ಬಗ್ಗೆ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.

***

ಇತ್ತೀಚಿನ ದಿನಗಳಲ್ಲಿ ನಡೆದಿರುವ ಕೆಲವು ಘಟನೆಗಳು ಪ್ರಜಾತಂತ್ರವನ್ನು ಅಪಾಯಕ್ಕೆ ಒಡ್ಡಿದೆ ಎಂಬುದು ನಮಗೆ ಮನವರಿಕೆ ಆಗಿದೆ. ನಮಗೆ ನ್ಯಾಯ ವ್ಯವಸ್ಥೆ ಮತ್ತು ದೇಶದ ಬಗ್ಗೆ ಬದ್ಧತೆ ಇದೆ. ಸುಪ್ರೀಂ ಕೋರ್ಟನ್ನು ರಕ್ಷಿಸುವ ಕ್ರಮಗಳ ಕುರಿತು ಸಿಜೆಐಯವರಿಗೆ ಮನವರಿಕೆ ಮಾಡುವ ನಮ್ಮ ಪ್ರಯತ್ನಗಳು ವಿಫಲವಾಗಿವೆ. 

– ಕುರಿಯನ್‌ ಜೋಸೆಫ್‌, ಚಲಮೇಶ್ವರ್‌, ರಂಜನ್‌ ಗೊಗೋಯ್‌, ಮದನ್‌ ಲೋಕೂರ್‌, ನ್ಯಾಯಮೂರ್ತಿಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry