ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರ್‌ಎಸ್‌ಎಸ್‌ ನಿಷೇಧ, ಹುಚ್ಚುತನದ ಹೇಳಿಕೆ’

ಮೋದಿ ಸೋದರ ಪ್ರಹ್ಲಾದ ದಾಮೋದರದಾಸ ಮೋದಿ ತಿರುಗೇಟು
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ ದೇಶದ ಆಂತರಿಕ ಸುರಕ್ಷತೆಗಾಗಿ ದುಡಿದ ಸಂಘಟನೆ ಆರ್‌ಎಸ್‌ಎಸ್‌. ಇಂತಹ ಸಂಘಟನೆಯ ಸ್ವಯಂಸೇವಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಗ್ರಗಾಮಿಗಳು ಎಂದು ಕರೆದಿರುವುದು ಸರಿಯಲ್ಲ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೋದರ ಪ್ರಹ್ಲಾದ ದಾಮೋದರದಾಸ ಮೋದಿ ಹೇಳಿದರು.

ನಗರದ ಶ್ರೀಕೃಷ್ಣ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾತೃಭೂಮಿಯ ರಕ್ಷಣೆಗಾಗಿ ಹೋರಾಟ ಮಾಡಿದ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಬೇಕು ಎಂಬುದು ಹುಚ್ಚುತನದ ಹೇಳಿಕೆ’ ಎಂದರು.

‘ಕೌರವರು ರಾಜಕೀಯಕ್ಕೆ ದ್ರೌಪದಿಯನ್ನು ಎಳೆದುತರುತ್ತಿದ್ದ ಹಾಗೆ, ಕಾಂಗ್ರೆಸ್‌ನವರು ನನ್ನ ಅತ್ತಿಗೆಯನ್ನು (ನರೇಂದ್ರ ಮೋದಿ ಪತ್ನಿ ಜಶೋದಾ ಬೆನ್) ಎಳೆದುತರುತ್ತಾರೆ. ಅವರಿಗೆ ಮಾತನಾಡಲು ಬೇರೆ ವಿಷಯಗಳೇ ಇಲ್ಲ. ಜನರ ದಿಕ್ಕು ತಪ್ಪಿಸುವುದೇ ಕಾಂಗ್ರೆಸ್‌ನ ಕೆಲಸ’ ಎಂದು ಹೇಳಿದರು.

‘ಮೋದಿ ಅವರಿಗೂ ವಿವೇಕಾನಂದರಿಗೂ ಸಾಮ್ಯತೆ ಇದೆ. ವಿವೇಕಾನಂದರ ಬಾಲ್ಯದ ಹೆಸರೂ ನರೇಂದ್ರ. ಇಬ್ಬರೂ ಹಿಂದೂಸ್ತಾನದ ಹೆಮ್ಮೆಯ ಪುತ್ರರು’ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಕಾಲ ಯೋಜನೆಯ ಆಡಳಿತಾಧಿಕಾರಿ ಕೆ. ಮಥಾಯ್, ‘ಆಡಳಿತ ಯಂತ್ರದ ಭ್ರಷ್ಟಾಚಾರ ಕಿತ್ತು ಹಾಕುವ ಉದ್ದೇಶದಿಂದ ಸಕಾಲ ಯೋಜನೆ ಜಾರಿಗೆ ತರಲಾಗಿದೆ. ಯೋಜನೆಯ ಆಶಯ ಸಾಕಾರವಾಗಬೇಕಾದರೆ ಜನರು ಸಕಾಲ ಕೌಂಟರ್‌ಗಳ ಮೂಲಕವೇ ಅರ್ಜಿ ಸಲ್ಲಿಸಬೇಕು’ ಎಂದರು.

‘ನಾನು ಸಣ್ಣ ವ್ಯಾಪಾರಿ’
‘ನಾನು ಮೋದಿ ಅವರ ತಮ್ಮ ಎಂಬ ಹಮ್ಮು ನನಗಿಲ್ಲ. ನಾನು ಒಂದು ಸಣ್ಣ ಅಂಗಡಿ ಇಟ್ಟುಕೊಂಡಿದ್ದೇನೆ. ನನ್ನ ಬದುಕು ನಡೆಸಲು ಅಷ್ಟು ಸಾಕು. ಅಧಿಕಾರದ ಲಾಭ ಪಡೆಯುವ ಬುದ್ಧಿ ನಮ್ಮ ಕುಟುಂಬದಲ್ಲಿ ಯಾರಿಗೂ ಇಲ್ಲ. ನನಗೆ ರಾಜಕೀಯಕ್ಕೆ ಬರುವ ಆಲೋಚನೆಯೂ ಇಲ್ಲ’ ಎಂದು ಪ್ರಹ್ಲಾದ ಮೋದಿ ತಿಳಿಸಿದರು.

***

ವಿವೇಕಾನಂದರ ವಿಚಾರ, ಚಾಣಕ್ಯನ ನೀತಿ ಎರಡನ್ನೂ ಒಂದುಗೂಡಿಸಿಕೊಂಡಿರುವ ನರೇಂದ್ರ ಮೋದಿ ವಿಶ್ವಗುರುವಾಗುವ ಹಾದಿಯಲ್ಲಿದ್ದಾರೆ
– ಪ್ರಹ್ಲಾದ ದಾಮೋದರದಾಸ ಮೋದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT