ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್‌ಪೋರ್ಟ್‌ನಲ್ಲಿ ಇನ್ನು ವೈಯಕ್ತಿಕ ಮಾಹಿತಿ ಇಲ್ಲ

Last Updated 12 ಜನವರಿ 2018, 19:03 IST
ಅಕ್ಷರ ಗಾತ್ರ

ನವದೆಹಲಿ: ಇನ್ನು ಮುಂದೆ ಪಾಸ್‌ಪೋರ್ಟ್‌ಗಳಲ್ಲಿ ಪೋಷಕರ ಹೆಸರು, ವಿಳಾಸ ಇರುವುದಿಲ್ಲ. ಆದ್ದರಿಂದ ಹೊಸ ಬಗೆಯ ಪಾಸ್‌ಪೋರ್ಟ್‌ ಪಡೆಯುವವರಿಗೆ ಅದನ್ನು ಗುರುತಿನ ಚೀಟಿಯಾಗಿ ಬಳಸಲು ಅವಕಾಶವಿಲ್ಲ.

ಈವರೆಗೆ ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ಪೋಷಕರ ಹೆಸರು, ವಿಳಾಸ ಹಾಗೂ ಇತರ ಮಾಹಿತಿಗಳನ್ನು ಮುದ್ರಿಸಲಾಗುತ್ತಿತ್ತು.

ನಾಗರಿಕರ ಖಾಸಗಿ ಮಾಹಿತಿಯ ಗೋಪ್ಯತೆ ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಇಂತಹ ತೀರ್ಮಾನ ಕೈಗೊಂಡಿದೆ.

ವಿದೇಶಾಂಗಸಚಿವಾಲಯದ ಮೂವರು ಸದಸ್ಯರ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪಾಸ್‌ಪೋರ್ಟ್‌ನಲ್ಲಿ ತಂದೆಯ ಹೆಸರನ್ನು ನಮೂದಿಸುವ ಅಗತ್ಯವಿಲ್ಲ ಎಂದು ನೀಡಿರುವ ವರದಿಯನ್ನು ಆಧರಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ತಾಯಿ ಅಥವಾ ಮಗು ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಲ್ಲಿ ನಮೂದಿಸಲು ಬಯಸದಿದ್ದರೆ ಅದಕ್ಕೆ ಅವಕಾಶ ನೀಡಬೇಕೆಂದು ಸಮಿತಿ ವರದಿಯಲ್ಲಿ ಹೇಳಿತ್ತು. ಏಕ ಪಾಲಕರು (ಸಿಂಗಲ್‌ ಪೇರೆಂಟ್‌) ಮತ್ತು ದತ್ತು ಮಕ್ಕಳ  ಸಮಸ್ಯೆಯನ್ನು ಪರಿಶೀಲಿಸಿ ಸಮಿತಿಯು ವರದಿ ನೀಡಿತ್ತು. ವರದಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒಪ್ಪಿಕೊಂಡಿತ್ತು.

‘ಹೊಸ ಮಾದರಿಯ ಪಾಸ್‌ಪೋರ್ಟ್‌ಗಳ ಕೊನೆಯ ಪುಟ ಖಾಲಿಯಾಗಿರಲಿದೆ. ಇತರ ಮಾಹಿತಿಯನ್ನು ವಿದೇಶಾಂಗ ಸಚಿವಾಲಯದಲ್ಲಿ ಸಂಗ್ರಹಿಸಿಡಲಾಗುವುದು’ ಎಂದು ಸಚಿವಾಲಯದ ವಕ್ತಾರರು ಹೇಳಿದ್ದಾರೆ.

’ಪಾಸ್‌ಪೋರ್ಟ್‌ನ ಕೊನೆಯ ಪುಟವನ್ನು ಮುದ್ರಿಸದ ಕಾರಣ ವಲಸೆ ಪರಿಶೀಲನೆ ಅಗತ್ಯವಿರುವವರಿಗೆ (ಇಸಿಆರ್) ಕಿತ್ತಳೆ ಬಣ್ಣದ ಪಾಸ್‌ಪೋರ್ಟ್‌ ಹಾಗೂ ಇತರರಿಗೆ ನೀಲಿ ಬಣ್ಣದ ಪಾಸ್‌ಪೋರ್ಟ್‌ಗಳನ್ನು ನೀಡಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT